ದಿಲ್ಲಿಯಿಂದ ಹಳ್ಳಿಯೆಡೆಗೆ ಮಿಡಿಯುವ ಬರಹಗಳು..
‘‘ಜವಾಬ್ದಾರಿ ಪತ್ರಿಕೋದ್ಯಮವನ್ನು ದುರ್ಬೀನು ಹಾಕಿ ಹುಡುಕಬೇಕಾದ ಈ ದುರ್ಭರ ದಿನಗಳಲ್ಲಿ ಅಂತಃಕರಣ ಮತ್ತು ಸಾಕ್ಷಿಪ್ರಜ್ಞೆ ಇಟ್ಟುಕೊಂಡು ಕೆಲಸ ಮಾಡುತ್ತಿರುವ ಉಮಾಪತಿಯವರು ನಮ್ಮ ನಡುವಿನ ಅಪರೂಪದ ಪತ್ರಕರ್ತರು. ವೃತ್ತಿ ಜೀವನದ ಉದ್ದಕ್ಕೂ ನೊಂದವರ, ದಮನಿತರ ದನಿಯಾಗಿ ಪತ್ರಕರ್ತನೊಬ್ಬ ಹೇಗೆ ಕೆಲಸ ಮಾಡಬಹುದು ಎಂಬುದಕ್ಕೆ ಅವರೇ ಉದಾಹರಣೆ. ದೇಶದ ಜನಪದರ ಜೀವನಾಡಿಯೊಂದಿಗೆ ಬೆರೆತು ಹೋಗಿರುವ ಉಮಾಪತಿಯವರ ಬರವಣಿಗೆಗಳಲ್ಲಿ ಎಚ್ಚರ ಮತ್ತು ಉತ್ತರ ದಾಯಿತ್ವ ಎರಡೂ ಹದವಾಗಿ ಮಿಳಿತವಾಗಿರುತ್ತದೆ....’’
ಹಿರಿಯ ಪತ್ರಕರ್ತ ಡಿ. ಉಮಾಪತಿಯವರ ‘ದೆಹಲಿ ನೋಟ’ ಕೃತಿಯ ಬೆನ್ನುಡಿಯಲ್ಲಿ ಇನ್ನೋರ್ವ ಹಿರಿಯ ಪತ್ರಕರ್ತ ಇಂಧೂದರ ಹೊನ್ನಾಪುರ ಮೇಲಿನಂತೆ ಅಭಿಪ್ರಾಯ ಪಡುತ್ತಾರೆ. ಕನ್ನಡದ ದಿನಪತ್ರಿಕೆ ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಅಂಕಣ ಬರಹಗಳ ಸಂಗ್ರಹ ಇದು. ವರದಿಗಾರನಾಗಿದ್ದ ಸಂದರ್ಭದಲ್ಲೇ ಅದರ ಭಾಗವಾಗಿ ಅಂಕಣಗಳನ್ನು ಬರೆಯುತ್ತಿದ್ದ ಉಮಾಪತಿ ಬರಹಗಳಿಗೆ ವೃತ್ತಿ ಕೆಲವೊಂದು ಮಿತಿಯನ್ನು ಹಾಕಿದಂತೆಯೇ ಕೆಲವೊಂದು ಅವಕಾಶಗಳನ್ನೂ ತೆರೆದುಕೊಟ್ಟಿದೆ. ಆ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ದಿಲ್ಲಿಯ ಮೂಲಕ ದೇಶವನ್ನು ನೋಡುತ್ತಾರೆ. ದಿಲ್ಲಿ ರಾಜಕಾರಣಗಳಿಗಷ್ಟೇ ಸೀಮಿತವಾಗದೆ, ದಿಲ್ಲಿಯಿಂದ ಹಳ್ಳಿಯೆಡೆಗೆ ಧಾವಿಸುವ ಹಪಹಪಿಕೆ ಪ್ರತಿ ಬರಹಗಳಲ್ಲೂ ಎದ್ದು ಕಾಣುತ್ತದೆ.
ಈ ಕೃತಿಯಲ್ಲಿ ಒಟ್ಟು 41 ಲೇಖನಗಳಿವೆ. ‘ಜನರೇ ಜನತಂತ್ರದ ನಿಜ ಕಾವಲುಗಾರರು’ ಅಂಕಣದಲ್ಲಿ, ಕಿಂದರಿ ಜೋಗಿಯ ಬೆಂಬತ್ತಿ ಮೂಷಿಕ ಜನತಂತ್ರದ ಬಗ್ಗೆ ಬರೆಯುತ್ತಾರೆ. ‘‘ನಿರಂತರ ಎಚ್ಚರವೇ ಸ್ವತಂತ್ರವಾಗಿ ಬದುಕಲು ನಾವು ತೆರಬೇಕಾದ ಬೆಲೆ...’’ ಎನ್ನುವ ಉಲ್ಲೇಖದೊಂದಿಗೆ ತಮ್ಮ ಬರಹವನ್ನು ಅವರು ಮುಗಿಸುತ್ತಾರೆ. ಕರ್ಮಚಾರಿಗಳ ಪಾದ ತೊಳೆಯುವ ಪ್ರಧಾನಿಯ ಪ್ರಹಸನದ ಕುರಿತು ಬರೆಯುತ್ತಾ, ತೊಳೆಯಬೇಕಾದುದು ತಮ್ಮ ಮೆದುಳನ್ನೇ ಹೊರತು, ಕಾರ್ಮಿಕರ ಪಾದಗಳನ್ನಲ್ಲ ಎಂದು ಈ ಬರಹ ವ್ಯಂಗ್ಯವಾಡುತ್ತದೆ. ಕಸ ಮತ್ತು ಮಲ ಬಳಿಯುವ ಉದ್ಯೋಗಕ್ಕೆ ಯಾಕೆ ಶೇ. ನೂರರಷ್ಟು ಮೀಸಲಾತಿಯಿದೆ? ಎನ್ನುವ ಪ್ರಶ್ನೆಯನ್ನು ಮುಂದಿಟ್ಟು, ವೃತ್ತಿ ಮತ್ತು ಜಾತಿಯ ಬೆಸುಗೆಯ ಹಿಂದಿರುವ ವಾಸ್ತವಕ್ಕೆ ಕನ್ನಡಿ ಹಿಡಿಯುತ್ತಾರೆ. ತ್ರಿಪುರಾದಲ್ಲಿ ಎಡಪಂಥೀಯರ ವೈಫಲ್ಯ, ಪಟೇಲರ ಇತಿಹಾಸದ ಕುರಿತಂತೆ ಕಾಂಗ್ರೆಸ್‌ನ ದೌರ್ಬಲ್ಯ, ನರ್ಮದೆಯ ಜನರಿಗಾಗಿ ಹೋರಾಟ ನಡೆಸುತ್ತಿರುವ ಮೇಧಾ ಅವರ ತ್ಯಾಗ, ಬಲಿದಾನ, ಕೃಷಿ ಸಂಕಟಗಳಿಗೆ ಸ್ಪಂದಿಸದ ಸಂಸತ್, ಅಡ್ವಾಣಿ ಎಂಬ ದುರಂತ ಮಹಾರಥಿಯ ಕುರಿತಂತೆ ಮಂಜುಗಣ್ಣಿನ ಹಿನ್ನೋಟ, ಚಂದ್ರಚೂಡ ಎಂಬ ನ್ಯಾಯದ ನಿಗಿ ಕೆಂಡ, ಅಟಲ್ ಬಿಹಾರಿ-ಮುಖ ಮತ್ತು ಮುಖವಾಡಗಳ ಅಸಲಿಯತ್ತು...ಹೀಗೆ...ದೇಶದ ಇಂದಿನ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಬಿಕ್ಕ ಟ್ಟುಗಳ ಕುರಿತಂತೆ ಇಲ್ಲಿರುವ ಬರಹಗಳು ಸ್ಪಷ್ಟವಾಗಿ ಮಾತನಾಡುತ್ತದೆ. ಪುರುಷೋತ್ತಮ ಬಿಳಿಮಲೆ ಅವರು ಈ ಕೃತಿಗೆ ಮುನ್ನುಡಿ ಬರೆಯುತ್ತಾ ‘‘ವೈಯಕ್ತಿಕವಾಗಿ ಅವರು ಮಿತಭಾಷಿ, ಉದ್ದುದ್ದ ಭಾಷಣ ಅಂದರೆ ಅವರಿಗೆ ಇಷ್ಟವಿಲ್ಲ. ಆದರೆ ಬರೆಯಲು ಕುಳಿತಾಗ ಅವರು ಬೇರೆಯೇ ವ್ಯಕ್ತಿ. ಅವರ ಬರವಣಿಗೆಯ ಭಾಷೆಯು ಬೇಕಾದಷ್ಟು ಕಟುವೂ ಆಗಬಲ್ಲುದು. ಅಗತ್ಯ ಬಿದ್ದಾಗ ಕಾವ್ಯವೂ ಆಗಬಹುದು. ವಾಜಪೇಯಿ ಅವರ ಬಗ್ಗೆ ಬರೆಯುವಾಗ ಉಮಾಪತಿಯವರ ಭಾಷೆ ಕಾವ್ಯವಾಗುತ್ತದೆ, ಬಿಹಾರ ಬಾಲಿಕಾಗೃಹದ ಬೀಭತ್ಸಗಳ ಬಗ್ಗೆ ಬರೆಯುವಾಗ ಕಟುವಾಗುತ್ತದೆ ಮತ್ತು ರಾಹುಲ್ ಗಾಂಧಿಯವರು ಪ್ರಧಾನಿಯನ್ನು ಅಪ್ಪಿಕೊಂಡ ಕುರಿತು ಬರೆಯುವಾಗ ಸಂತನ ಭಾಷೆಯ ರೂಪವನ್ನು ತಾಳುತ್ತದೆ....’’
ರಾಜಕೀಯವನ್ನು ಚರ್ಚಿಸುವಾಗಲೂ ಉಮಾಪತಿ ಭಾಷೆಯನ್ನು ಅತ್ಯಂತ ಸಮೃದ್ಧವಾಗಿ ಬಳಸುವುದನ್ನು ಈ ಕೃತಿಯಲ್ಲಿ ಕಾಣಬಹುದು. ಗೌರಿ ಮೀಡಿಯಾ ಟ್ರಸ್ಟ್ ಈ ಕೃತಿಯನ್ನು ಹೊರತಂದಿದೆ. 213 ಪುಟಗಳ ಈ ಕೃತಿಯ ಮುಖಬೆಲೆ 200 ರೂಪಾಯಿ. ಆಸಕ್ತರು 080-26622817 ದೂರವಾಣಿಯನ್ನು ಸಂಪರ್ಕಿಸಬಹುದು..