ಮಹಾತ್ಮಾ ಗಾಂಧೀಜಿ ಮತ್ತು ಸಿನೆಮಾ

Update: 2019-09-29 11:11 GMT

ಸಿನೆಮಾ ಮತ್ತು ಚಲನಚಿತ್ರರಂಗದ ಬಗ್ಗೆ ಗಾಂಧೀಜಿಯವರಿಗೆ ಒಳ್ಳೆಯ ಭಾವನೆ ಇರಲಿಲ್ಲ. ಅವು ಯುವಜನತೆಯ ಮನಸ್ಸನ್ನು ಕೆಡಿಸಿ ದಿಕ್ಕುತಪ್ಪಿಸುವ ಸಾಧನಗಳೆಂದು ನಂಬಿದ್ದರು. ಸಿನೆಮಾಗಳ ಬಗ್ಗೆ ಗಾಂಧೀಜಿ ಅವರಿಗೆ ಪ್ರೀತಿಯಿಲ್ಲದಿದ್ದರೂ, ಸಿನೆಮಾರಂಗ ಗಾಂಧೀಜಿಯನ್ನು ಪ್ರೀತಿಯಿಂದ ಕಂಡು ತನ್ನ ಅನೇಕ ಅಭಿವ್ಯಕ್ತಿ ಕ್ರಮಗಳಲ್ಲಿ ಗಾಂಧೀಜಿಯನ್ನು ಬಳಸಿಕೊಂಡಿದೆ. ಹೊಸ ತಲೆಮಾರಿಗೆ ಗಾಂಧೀಜಿಯನ್ನು ಮತ್ತೊಂದು ನೆಲೆಯಲ್ಲಿ ತೆರೆದು ತೋರಿಸಿದೆ. ಚಿರಕಾಲ ಉಳಿಯುವಂತೆ ನೋಡಿಕೊಂಡಿದೆ.

ದೇಶ ಈಗ ಮಹಾತ್ಮಾ ಗಾಂಧೀಜಿಯವರ ನೂರೈವತ್ತನೇ ಜನ್ಮದಿನಾಚರಣೆಯನ್ನು ಆಚರಿಸಲು ಸಿದ್ಧತೆ ನಡೆಸಿದೆ. ತಮ್ಮ ಬದುಕು ಮತ್ತು ಹೋರಾಟಗಳಿಂದ ಇಪ್ಪತ್ತನೇ ಶತಮಾನದಲ್ಲಿ ಜಗತ್ತಿನ ಗಮನ ಸೆಳೆದ ಅವರ ಬದುಕಿದ್ದಾಗಲೇ ‘‘ಮಹಾತ್ಮಾ’’ ಎಂದು ಕರೆಸಿಕೊಂಡವರು. ಅವರು ಬದುಕು ಮತ್ತು ಸಾಧನೆಯು ಯಾವುದೇ ಚಲನಚಿತ್ರಗಳಿಗೆ ವಸ್ತುವಾಗುವಷ್ಟು ಪ್ರಭಾವಶಾಲಿಯಾಗಿತ್ತು. ಅನೇಕ ಚಿತ್ರಗಳು ಅವರ ಬದುಕು ಅಥವಾ ಬದುಕಿನ ಪ್ರಮುಖ ಘಟನೆಗಳನ್ನು ಆಧರಿಸಿ ಚಲನಚಿತ್ರಗಳಾಗಿ ತೆರೆಕಂಡವು. ಬಹುತೇಕ ಚಿತ್ರಗಳ ಶೀರ್ಷಿಕೆಯಲ್ಲಿ ಮಹಾತ್ಮಾ ಎನ್ನುವ ಪದ ಅಂಟಿದ್ದು ವಿಶೇಷವಾಗಿತ್ತು. ಆದರೆ ಯಾವ ವಿಶೇಷಣವೂ ಇಲ್ಲದೆ ರಿಚರ್ಡ್ ಅಟೆನ್‌ಬರೋ ನಿರೂಪಿಸಿದ ‘ಗಾಂಧಿ’ ಚಲನಚಿತ್ರ ಮಾತ್ರ ಗಾಂಧಿಯನ್ನು ರಕ್ತ ಮಾಂಸ ಮೂಳೆಯ ವ್ಯಕ್ತಿಯಾಗಿ ಚಿತ್ರಿಸಿ ಜಗತ್ತಿಗೆ ಶಾಂತಿದೂತನ ಜೀವನಕಥೆಯನ್ನು ಮುಟ್ಟಿಸುವಲ್ಲಿ ಯಸ್ಸು ಕಂಡಿತು.

ವಿಚಿತ್ರವೆಂದರೆ ಸಿನೆಮಾ ಮತ್ತು ಚಲನಚಿತ್ರರಂಗದ ಬಗ್ಗೆ ಗಾಂಧೀಜಿಯವರಿಗೆ ಒಳ್ಳೆಯ ಭಾವನೆ ಇರಲಿಲ್ಲ. ಅವು ಯುವಜನತೆಯ ಮನಸ್ಸನ್ನು ಕೆಡಿಸಿ ದಿಕ್ಕುತಪ್ಪಿಸುವ ಸಾಧನಗಳೆಂದು ನಂಬಿದ್ದರು. 1922ರಲ್ಲಿ ಬ್ರಿಟಿಷ್ ಸಿನೆಮಾಟೋಗ್ರಫಿ ಅಕಾಡಮಿಯು ಚಲನಚಿತ್ರಗಳು ಸಮಾಜದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಗಾಂಧೀಜಿಯ ಅಭಿಪ್ರಾಯ ಸಂಗ್ರಹಿಸಲು ಪ್ರಶ್ನಾವಳಿಯೊಂದನ್ನು ಕಳಿಸಿಕೊಟ್ಟಿತು. ಅದಕ್ಕೆ ಉತ್ತರವಾಗಿ ಗಾಂಧೀಜಿ ‘‘ಸಿನೆಮಾಗಳು ಜನರಿಗೆ ಶಿಕ್ಷಣ ಒದಗಿಸುತ್ತವೆಂದು ಹೇಳುವುದನ್ನು ಒಪ್ಪಲಾಗದು. ಅವು ಅನಿಷ್ಟಗಳು (Evils)’’ ಎಂಬ ಅರ್ಥದಲ್ಲಿ ತಮ್ಮ ಅಭಿಪ್ರಾಯ ದಾಖಲಿಸಿದರು. ಮತ್ತೆ ರಂಗೂನ್‌ನಲ್ಲಿ ಕಾರ್ಮಿಕರನ್ನು ಉದ್ದೇಶಿಸಿ (1928 ಸೆಪ್ಟಂಬರ್ 18) ಮಾತನಾಡುತ್ತಿದ್ದ ಗಾಂಧಿಯವರು ‘‘ಕುದುರೆ ಜೂಜಿನ ಅಡ್ಡೆ, ಮದ್ಯಪಾನ ಗೃಹ, ಜೂಜುಕಟ್ಟೆ, ವೇಶ್ಯಾಗೃಹಗಳಂತೆ ಚಿತ್ರಮಂದಿರಗಳೂ ಸಮಾಜವನ್ನು ಹಾಳು ಮಾಡುತ್ತವೆ’’ ಎಂದು ಹೇಳಿದ್ದರು. ಅಹಮದಾಬಾದ್‌ನಲ್ಲಿ ಯುವಕರು ತಲೆಶೂಲೆಯಿಂದ ನರಳುತ್ತಿರುವುದಕ್ಕೆ ಅವರ ಸಿನೆಮಾ ಗೀಳು ಕಾರಣವೆಂದು ತರ್ಕಿಸಿ 1932ರಲ್ಲಿ ‘ಹರಿಜನ’ ಪತ್ರಿಕೆಯಲ್ಲಿ ಬರೆದಿದ್ದರು.

ಸಿನೆಮಾ ಬಗೆಗಿನ ಗಾಂಧೀಜಿಯವರ ಈ ಅಭಿಪ್ರಾಯ ಅನೇಕ ಸೃಜನಶೀಲ ವ್ಯಕ್ತಿಗಳಿಗೆ ಸಹನೆಯಾಗಲಿಲ್ಲ. ತಿಲಕ್, ರವೀಂದ್ರನಾಥ ಟಾಗೋರ್ ಮತ್ತು ಸರ್ದಾರ್ ಪಟೇಲ್ ಅವರು ಸಮಾಜಕ್ಕೆ ಶಿಕ್ಷಣ ನೀಡುವಲ್ಲಿ ಸಿನೆಮಾಗಳು ಮಹತ್ವ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದ ಕಾಲದಲ್ಲಿಯೇ ಗಾಂಧೀಜಿ ಅವರ ಅಭಿಪ್ರಾಯಗಳಿಗೆ ತದ್ವಿರುದ್ಧ ನಿಲುವನ್ನು ತಳೆದಿದ್ದರು. ಸಿನೆಮಾ ಬಗೆಗಿನ ಗಾಂಧಿಯವರ ಈ ಬಗೆಯ ಅವಹೇಳನದಿಂದ ನೊಂದ ಪತ್ರಕರ್ತ ಮತ್ತು ಚಿತ್ರಕತೆಗಾರ ಕೆ.ಎ. ಅಬ್ಬಾಸ್ ಅವರು ತಮ್ಮ ‘ಫಿಲ್ಮ್ ಇಂಡಿಯಾ’ ಪತ್ರಿಕೆಯಲ್ಲಿ ಅವರಿಗೊಂದು ಬಹಿರಂಗ ಪತ್ರವನ್ನು 1934ರಲ್ಲಿ ಬರೆದರು. ಅದರಲ್ಲಿ ಅಬ್ಬಾಸ್ ಅವರು ಗಾಂಧೀಜಿಯನ್ನು ಕುರಿತು ‘‘ಸಿನೆಮಾ ಬಗೆಗಿನ ಇಂತಹ (ಋಣಾತ್ಮಕ) ಅಭಿಪ್ರಾಯ ನಿಮ್ಮಲ್ಲಿ ಹೇಗೆ ಹುಟ್ಟಿತೋ ಗೊತ್ತಿಲ್ಲ. ಬೇರೆ ಯಾರಾದರೂ ಆಗಿದ್ದರೆ ಅಂಥದ್ದನ್ನು ಉಪೇಕ್ಷಿಸಬಹುದಿತ್ತು. ಆದರೆ ನಿಮ್ಮ ಹೇಳಿಕೆ ಆಘಾತ ತಂದಿದೆ. ದಯಮಾಡಿ ಸಿನೆಮಾದಂತಹ ಕಲೆ ಉಳಿಯಲು, ಬೆಳೆಯಲು, ಸಮಾಜದ ಮೇಲೆ ಸತ್ಪರಿಣಾಮ ಬೀರಲು ಅವಕಾಶ ನೀಡಿ. ಬೇಕೆಂದರೆ, ಲೂಯಿ ಪಾಶ್ಚರ್, ಸಂತ ತುಕಾರಾಂ ಮೊದಲಾದ ಚಿತ್ರಗಳನ್ನು ನೋಡಿ. ನಿಮಗೆ ಸಿನೆಮಾ ಸಾಧ್ಯತೆಗಳು ತಿಳಿಯುತ್ತದೆ’’ ಎಂದು ಕೋರಿಕೊಂಡಿದ್ದರು. ಆದರೂ ಸಿನೆಮಾ ಬಗ್ಗೆ ಗಾಂಧೀಜಿ ಅವರಿಗೆ ಇದ್ದ ಅಭಿಪ್ರಾಯ ಕೊನೆಯವರೆಗೂ ಬದಲಾಗಲಿಲ್ಲ. ಅವರು ಬದುಕಿನಲ್ಲಿ ಎಂದೂ ಒಂದು ಸಾರ್ವಜನಿಕ ಪ್ರದರ್ಶನದಲ್ಲಿ ಸಿನೆಮಾ ವೀಕ್ಷಿಸಲಿಲ್ಲ. ನೋಡುವ ಬಯಕೆಯನ್ನೂ ವ್ಯಕ್ತಪಡಿಸಲಿಲ್ಲ. ಆದರೆ 1944ರಲ್ಲಿ ಮಲೇರಿಯಾದಿಂದ ಗುಣಮುಖರಾಗುತ್ತಿದ್ದ ಕಾಲದಲ್ಲಿ ಸಂತರ ಜೀವನ ಕುರಿತ ಎರಡು ಚಿತ್ರಗಳನ್ನು ಅವರಿಗಾಗಿ ಪ್ರದರ್ಶಿಸಲಾಯಿತು. ಆದರೆ ಅವೆರಡೂ ಗಾಂಧೀಜಿಯವರಿಗೆ ರುಚಿಸಿದಂತೆ ಕಾಣಲಿಲ್ಲ.

ಗಾಂಧೀಜಿಯವರು ಸಿನೆಮಾಗಳನ್ನು ಎಷ್ಟೇ ವಿರೋಧಿಸಿದರೂ, ಚಲನಚಿತ್ರರಂಗ ಅವರ ಪರವಾಗಿ ಸ್ಪಂದಿಸಿದ್ದು ವಿಶೇಷವೆನಿಸುತ್ತದೆ. ವಿಚಿತ್ರವೆಂದರೆ ಭಾರತದ ಮೊದಲ ಮೂಕಿ ಕಥಾ ಚಿತ್ರ ‘ರಾಜಾ ಹರಿಶ್ಚಂದ್ರ’ದ ಕಥಾವಸ್ತು ಗಾಂಧೀಜಿಯವರನ್ನು ಪ್ರಭಾವಿಸಿದ ಸತ್ಯ ಹರಿಶ್ಚಂದ್ರನ ಕತೆಯನ್ನು ಆಧರಿಸಿತ್ತು. ತಮ್ಮ ಪ್ರಾರ್ಥನೆಯ ಸಭೆಗಳಲ್ಲಿ ಭಕ್ತಿ ಪಂಥದ ಸಂತರ ಭಜನೆಗಳನ್ನು ಹಾಡುವುದನ್ನು ಗಾಂಧೀಜಿ ಕಡ್ಡಾಯಗೊಳಿಸಿದ್ದರು. ಸಂತರ ಬದುಕು ಮತ್ತು ಭಜನ್‌ಗಳು ಸಮಾಜದ ತರತಮವನ್ನು ಧಿಕ್ಕರಿಸಿ ಸಮಾನತೆಗಾಗಿ ಹಂಬಲಿಸಿದ ಆಶಯಗಳನ್ನೊಳಗೊಂಡ ಕಾರಣ ಶ್ರೇಣೀಕೃತ ಭಾರತೀಯ ಸಮಾಜದಲ್ಲಿ ಸಮಾನತೆ ಸಾಧನೆಗೆ ಸಂತರ ಕೃತಿಗಳು ಅಗತ್ಯವೆಂದು ಅವರು ಮನಗಂಡಿದ್ದರು. 1932ರಿಂದ ಭಾರತೀಯ ಭಾಷೆಗಳಲ್ಲಿ ಮಾತಿನ ಚಿತ್ರಗಳು ಆರಂಭವಾದವು. ವಿಚಿತ್ರವೆಂದರೆ 1932ರಿಂದ 1950ರವರೆಗೆ ತಯಾರಾದ ಭಾರತೀಯ ಚಲನಚಿತ್ರಗಳಲ್ಲಿ ಭಕ್ತಿ ಪ್ರಧಾನ ಚಿತ್ರಗಳದ್ದೇ ಸಿಂಹಪಾಲು. ಕನ್ನಡದಲ್ಲಿಯೂ ‘ಪುರಂದರ ದಾಸ’, ‘ಭಕ್ತ ಕಬೀರ್’, ‘ಹೇಮರೆಡ್ಡಿ ಮಲ್ಲಮ್ಮ’, ‘ಶಿವಶರಣೆ ನಂಬೆಯಕ್ಕ’, ‘ಭಕ್ತ ಕುಂಬಾರ’, ‘ನಂಬೆಕ್ಕ’ ಮೊದಲಾದ ಸಂತರ ಕತೆಯನ್ನಾಧರಿಸಿದ ಚಿತ್ರಗಳು ತೆರೆಕಂಡವು. ಭಕ್ತಿ ಚಿತ್ರಗಳು ಈ ಪ್ರಮಾಣದಲ್ಲಿ ತಯಾರಾಗಲು ಗಾಂಧೀಜಿಯ ನೇರ ಪರಿಣಾಮವೇ ಕಾರಣ ಎಂಬುದು ಅನೇಕ ಚಿತ್ರ ವಿಶ್ಲೇಷಣೆಕಾರರ ಅಭಿಪ್ರಾಯ.

ಆದರೆ ಗಾಂಧೀಜಿಯವರು ಚಲನಚಿತ್ರಗಳ ಬಗ್ಗೆ ವಿರೋಧವಿದ್ದರೂ, ಚಲನಚಿತ್ರರಂಗ ಅವರ ಬಗ್ಗೆ ಕುತೂಹಲ ತಳೆದದ್ದು ವಿಶಿಷ್ಟವಾದ ಸಂಗತಿ. 1922ರಲ್ಲಿ ಗಾಂಧೀಜಿಯವರನ್ನು ಬಂಧಿಸಿ ಜೈಲಿಗೆ ಕಳುಹಿಸುತ್ತಿದ್ದ ತುಣುಕೊಂದನ್ನು ಬ್ರಿಟಿಷ್ ಸರಕಾರದ ಸುದ್ದಿ ವಿಭಾಗವು ಚಿತ್ರಿಸಿ ಲಂಡನ್‌ನಲ್ಲಿ ಪ್ರದರ್ಶಿಸಿತ್ತು. ಮೂಕಿ ಚಿತ್ರವಾದ ಕಾರಣ ಆ ದೃಶ್ಯಕ್ಕೆ ‘‘ಬ್ರಿಟಿಷ್ ಸರಕಾರದ ಎದುರಾಳಿಯನ್ನು ಜೈಲಿಗೆ ಹಾಕಲಾಯಿತು’’ ಎಂದು ಶೀರ್ಷಿಕೆ ನೀಡಿದ್ದರು.

1934ರಲ್ಲಿ ಅಮೆರಿಕದ ಸುದ್ದಿ ಸಂಸ್ಥೆಯ ಚಿತ್ರೀಕರಣ ತಂಡವೊಂದು ಬೋರ್ಸಾಡ್ ಗ್ರಾಮದಲ್ಲಿ ತಂಗಿದ್ದ ಗಾಂಧೀಜಿಯವರ ಸಂದರ್ಶನವನ್ನು ಚಿತ್ರೀಕರಿಸಿತು. ಅದಾಗಲೇ ಚಲನಚಿತ್ರಗಳಿಗೆ ಮಾತು ಬಂದಿತ್ತು. ಅದು ಗಾಂಧೀಜಿ ಮಾತನಾಡಿದ್ದನ್ನು ಸೆರೆ ಹಿಡಿದ ಮೊದಲ ಚಿತ್ರವಾಗಿತ್ತು. ಮುಂಡು ಉಟ್ಟು, ನಗ್ನ ಎದೆಯನ್ನು ತೋರಿಸುತ್ತಾ ಮೆಲುದನಿಯಲ್ಲಿ ಗಾಂಧೀಜಿ ಬಾಲ್ಯವಿವಾಹ, ಅಸ್ಪಶ್ಯತೆ, ಸಮಾಜಸೇವೆಯ ಬಗ್ಗೆ ಮಾತನಾಡಿ, ಕೊನೆಗೆ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆಗೂ ಸಿದ್ಧವಾಗಿರುವುದನ್ನು ದೃಢಪಡಿಸಿದರು.

ಜಗತ್ತಿನ ಚಲನಚಿತ್ರರಂಗದ ಅನೇಕ ಪ್ರಸಿದ್ಧ ವ್ಯಕ್ತಿಗಳು ಗಾಂಧೀಜಿಯ ಬಗ್ಗೆ ಕುತೂಹಲ ತಾಳಿದ್ದರು. ಅಂಥವರಲ್ಲಿ ತೆರೆಯ ಮೇಲಿನ ಕವಿ ಎಂದು ಜಗತ್ ಪ್ರಸಿದ್ಧನಾದ ಚಾರ್ಲಿ ಚಾಪ್ಲಿನ್ ಕೂಡ ಒಬ್ಬರು. 1931ರಲ್ಲಿ ಗಾಂಧೀಜಿ ದುಂಡುಮೇಜು ಪರಿಷತ್ತಿನಲ್ಲಿ ಭಾಗವಹಿಸಲು ಲಂಡನ್‌ಗೆ ತೆರಳಿದ್ದರು. ಅದೇ ವೇಳೆ ಅಮೆರಿಕದಿಂದ ಚಾರ್ಲಿ ಚಾಪ್ಲಿನ್ ತವರಿಗೆ ಮರಳಿದ್ದರು. ಲಂಡನ್‌ನ ಕಾರ್ಮಿಕರ ಬಡಾವಣೆಯೊಂದರಲ್ಲಿ ಗಾಂಧೀಜಿ ತಂಗಿರುವುದನ್ನು ತಿಳಿದು ಅವರನ್ನು ಭೇಟಿ ಮಾಡಲು ಚಾಪ್ಲಿನ್ ಗಾಂಧೀಜಿಯವರ ಆಪ್ತ ಸಹಾಯಕರನ್ನು ಕೋರಿದರು. ವಿಷಯ ತಿಳಿದ ನಂತರ ‘‘ಚಾಪ್ಲಿನ್ ಎಂದರೆ ಯಾರು?’’ ಎಂದು ಗಾಂಧೀಜಿ ಕೇಳಿದ ಪ್ರಶ್ನೆಗೆ ಸಹಾಯಕರು ವಿವರಣೆ ನೀಡಿದರು. ಗಾಂಧೀಜಿಯ ನಿಲುವುಗಳ ವಿಚಾರ ತಿಳಿದಿದ್ದ ಚಾಪ್ಲಿನ್ ಭೇಟಿಯಾದ ಕೂಡಲೇ ಪ್ರಶ್ನಿಸಿದ್ದು ‘‘ನೀವು ಯಾಕೆ ಯಂತ್ರಗಳನ್ನು ನಿರಾಕರಿಸುತ್ತೀರಿ’’ ಎಂದು. ಗಾಂಧೀಜಿ ಅದಕ್ಕೆ ಸುದೀರ್ಘ ವಿವರಣೆ ನೀಡಿದರು. ಜನಸಂಖ್ಯೆ ಹೆಚ್ಚು ಇರುವ ಭಾರತದಲ್ಲಿ ಎಲ್ಲರೂ ಆಹಾರ ಮತ್ತು ಉಡುಪನ್ನು ತಾವೇ ಸಂಪಾದಿಸಿಕೊಳ್ಳಬೇಕು. ಆದರೆ ಇಂಗ್ಲೆಂಡಿನ ಜವಳಿ ಕಾರ್ಖಾನೆಗಳು ಅಗತ್ಯಕ್ಕಿಂತಲೂ ಹೆಚ್ಚು ಬಟ್ಟೆಯನ್ನು ಉತ್ಪಾದಿಸಿ ಭಾರತದ ಜನರ ಮೇಲೆ ಹೇರುತ್ತಿರುವುದು ಒಂದು ಬಗೆಯ ಹಿಂಸೆ. ಜನರು ನಿರುದ್ಯೋಗಿಗಳಾಗುತ್ತಿದ್ದಾರೆ. ಬೃಹತ್ ಕೈಗಾರಿಕೆಗಳು ಹಿಂಸಾಕೂಪಗಳಾಗುತ್ತಿರುವುದನ್ನು ಚಾಪ್ಲಿನ್‌ಗೆ ಮನಗಾಣಿಸಿದರು. ಒಂದು ವೇಳೆ ಭಾರತ ಸ್ವತಂತ್ರವಾದರೂ, ಬೃಹತ್ ಕೈಗಾರಿಕೆಗಳನ್ನು ತಾವು ವಿರೋಧಿಸುವುದಾಗಿ ಸ್ಪಷ್ಟಪಡಿಸಿದರು.

ಗಾಂಧೀಜಿ ಮತ್ತು ಚಲನಚಿತ್ರಗಳ ನಂಟನ್ನು ವಿಶ್ಲೇಷಿಸಿದಾಗ, ಮೂರು ವರ್ಗದ ಚಿತ್ರಗಳನ್ನು ಗುರುತಿಸಬಹುದು. ಒಂದು ಗಾಂಧೀಜಿಯವರ ಬದುಕನ್ನು ಆಧರಿಸಿದ ಸಾಕ್ಷ್ಯಚಿತ್ರಗಳು. ಎರಡು ಗಾಂಧೀಜಿಯವರ ಬದುಕನ್ನು ಅಥವಾ ಬದುಕಿನ ಭಾಗವನ್ನು ಆಧರಿಸಿದ ಕಥಾಚಿತ್ರಗಳು. ಮೂರು ಗಾಂಧೀಜಿಯವರ ತತ್ವ, ಆದರ್ಶಗಳು ಮತ್ತು ನೀತಿಗಳನ್ನು ಬಿಂಬಿಸುವ ವಸ್ತುವುಳ್ಳ ಕಥಾಚಿತ್ರಗಳು.

ಗಾಂಧೀಜಿಯವರ ನಿಧನಾನಂತರ ಅವರ ಬದುಕನ್ನು ಬಿಂಬಿಸುವ ಚಲನಚಿತ್ರ ತಯಾರಿಸಬೇಕೆಂಬ ಒತ್ತಡ ಕೇಂದ್ರ ಸರಕಾರದ ಮೇಲಿತ್ತು. ಆದರೆ, 1962ರಲ್ಲಿ ರಾಜ್ಯ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ಪಂಡಿತ್ ಜವಾಹರಲಾಲ್‌ರವರು ಈ ಬಗ್ಗೆ ಸರಕಾರದ ನಿಲುವು ಪ್ರಕಟಿಸಿದರು. ‘‘ಗಾಂಧೀಜಿಯವರ ಬದುಕು ಮತ್ತು ಆದರ್ಶಗಳನ್ನು ಚಲನಚಿತ್ರ ಮಾಧ್ಯಮದಲ್ಲಿ ಕಟ್ಟಿಕೊಡುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಅವರ ಬದುಕಿಗೆ ನ್ಯಾಯ ಒದಗಿಸುವ ಚಿತ್ರವೊಂದನ್ನು ರೂಪಿಸುವ ಸಾಮರ್ಥ್ಯ, ಪ್ರತಿಭೆ ಸರಕಾರದಲ್ಲಿಲ್ಲ’’ ಎಂದು ಹೇಳಿದರು.

1969ರಲ್ಲಿ ಗಾಂಧಿ ಪ್ರತಿಷ್ಠಾನ, ಕೇಂದ್ರ ಸರಕಾರದ ಚಲನಚಿತ್ರ ವಿಭಾಗ (ಫಿಲಂ ಡಿವಿಜನ್) ಮೊದಲಾದ ಸಂಸ್ಥೆಗಳು ಗಾಂಧೀಜಿಯವರ ಜನ್ಮ ಶತಮಾನೋತ್ಸವದ ಅಂಗವಾಗಿ ಚಲನಚಿತ್ರ ನಿರ್ಮಿಸುವ ಕಾರ್ಯಕ್ಕೆ ಇಳಿದವು. ಅವುಗಳ ಯತ್ನದ ಫಲವಾಗಿ, ಗಾಂಧೀಜಿಯವರಿದ್ದ ಚಲನಚಿತ್ರದ ತುಣುಕುಗಳನ್ನು ಸಂಗ್ರಹಿಸಿ ಅದರ ಆಧಾರದ ಮೇಲೆ ಚಿತ್ರಕತೆ ಬರೆದು ‘ಮಹಾತ್ಮರ ಜೀವನ; 1869-1948’ ಎಂಬ ಬಹುಭಾಷೆಯ ಸಾಕ್ಷ್ಯಚಿತ್ರವೊಂದನ್ನು ತಯಾರಿಸಲಾಯಿತು. ಅಲ್ಲದೆ ವಿವಿಧ ಅವಧಿಯ ಆವೃತ್ತಿಗಳೂ ಬಿಡುಗಡೆಯಾದವು. ಅತ್ಯಂತ ದೀರ್ಘವಾದ ಚಿತ್ರ ಆರು ಗಂಟೆಯಷ್ಟು ದೀರ್ಘವಾಗಿತ್ತು. ಆದರೆ, ಈ ಚಿತ್ರದ ಬಗ್ಗೆ ಒಳ್ಳೆಯ ವಿಮರ್ಶೆಯಾಗಲೀ, ಜನರ ಮೆಚ್ಚುಗೆಯಾಗಲೀ ದೊರೆಯಲಿಲ್ಲ.

ಆದರೆ ಗಾಂಧೀಜಿಯವರು ಬದುಕಿದ್ದಾಗಲೇ ಅವರ ತತ್ವಾದರ್ಶಗಳನ್ನು ಪ್ರಚುರಪಡಿಸುವ ಚಿತ್ರಗಳು ಬೇರೆ ಬೇರೆ ಭಾಷೆಗಳಲ್ಲಿ ತಯಾರಾಗಿ ಯಶಸ್ವೀ ಪ್ರದರ್ಶನ ಕಾಣುತ್ತಿದ್ದವು. ಗಾಂಧೀಜಿಯ ಆದರ್ಶಗಳನ್ನು ತೆರೆಯ ಮೇಲೆ ಬದ್ಧತೆಯಿಂದ ತಂದ ಚಿತ್ರ ನಿರ್ಮಾಪಕರಲ್ಲಿ ತಮಿಳಿನ ಕೆ. ಸುಬ್ರಮಣ್ಯಂ ಅಗ್ರಗಣ್ಯರು. ಸ್ವತಃ ಗಾಂಧೀವಾದಿಯಾಗಿ, ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದ ಸುಬ್ರಮಣ್ಯಂ ಅವರು ಬ್ರಾಹ್ಮಣ ಜಾತಿಯ ವ್ಯಕ್ತಿಯೊಬ್ಬ ದಲಿತ ಹುಡುಗಿಯನ್ನು ಪೋಷಿಸುವ ಕಥಾ ಹಂದರದ ‘ಸೇವಾ ಸದನಂ’ (1938) ಚಿತ್ರವನ್ನು ಗಾಂಧೀಜಿಯವರಿಗೆ ಪ್ರಿಯವಾಗಿದ್ದ ವಿಧವಾ ವಿವಾಹ, ಬಾಲ್ಯ ವಿವಾಹದ ಅನಿಷ್ಟಗಳ ವಿರುದ್ಧದ ‘ಬಾಲಯೋಗಿನಿ’, ‘ತ್ಯಾಗಭೂಮಿ’ ಚಿತ್ರಗಳನ್ನು ನಿರ್ಮಿಸಿದರು. ಚಪ್ಪಲಿ ಹೊಲಿಯುವ ಚೇತ ಹರಿಭಕ್ತನಾಗಿ ಮೇಲ್ಪಂಕ್ತಿ ಹಾಕುವ ಕಥಾಹಂದರವಿದ್ದ ‘ಭಕ್ತ ಚೇತ’ (1939) ನಿರ್ಮಿಸಿ ಸಂಪ್ರದಾಯಸ್ಥರನ್ನು ಎದುರು ಹಾಕಿಕೊಂಡಿದ್ದರು. ಇಲ್ಲಿಂದ ಆರಂಭವಾದ ಗಾಂಧೀಜಿಯ ತತ್ವಗಳ ಪ್ರಭಾವ ಭಾರತದ ಎಲ್ಲ ಭಾಷೆಗಳಲ್ಲೂ ಅನೇಕ ಚಿತ್ರಗಳನ್ನು ಪ್ರಭಾವಿಸಿರುವುದಕ್ಕೆ ಹೇರಳ ಉದಾಹರಣೆಗಳು ದೊರೆಯುತ್ತವೆ.

ಗಾಂಧೀಜಿಯವರ ಬದುಕಿನ ಒಂದು ಭಾಗವನ್ನು ಆಧರಿಸಿದ ಇಂಗ್ಲಿಷ್ ಚಲನಚಿತ್ರವೊಂದು 1963ರಲ್ಲಿ ತಯಾರಾಗಿ ಬಿಡುಗಡೆಯಾಯಿತು. ಅದುವೆ ‘ನೈನ್ ಅವರ್ಸ್ ಟು ರಾಮಾ’. ಈ ಚಿತ್ರವು ಗಾಂಧೀಜಿಯ ಬದುಕಿನ ಕೊನೆಯ ನಿಮಿಷದ ಹಿಂದಿನ 9 ಗಂಟೆಗಳು, ಅವರ ಹಂತಕ ನಾಥೂರಾಂ ಗೋಡ್ಸೆಯ ಬದುಕಿನಲ್ಲಿ ನಡೆದ ಘಟನೆಗಳನ್ನು ಆಧರಿಸಿತ್ತು. ತನ್ನದೇ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿ ನಿರ್ದೇಶಕ ಸ್ಟಾನ್ಲಿ ವೊಲ್ವರ್ಟ್ ನಿರ್ಮಿಸಿದ ಈ ಚಿತ್ರದಲ್ಲಿ ಗಾಂಧೀಜಿಯ ಪಾತ್ರ(ಜೆ.ಜೆ. ಕಶ್ಯಪ್)ದ ಅವಧಿ ಕೆಲವೇ ನಿಮಿಷಗಳು. ಗೋಡ್ಸೆಯ ಹಿಂದಿನ ಬದುಕಿನ ವಿವರಗಳನ್ನೊಳಗೊಂಡ ಈ ಚಿತ್ರದಲ್ಲಿ ಗಾಂಧೀಜಿಯ ಪಾತ್ರವನ್ನು ಹೊರತುಪಡಿಸಿದರೆ, ಉಳಿದ ಪಾತ್ರಗಳನ್ನು ನಿರ್ವಹಿಸಿರುವವರೆಲ್ಲರೂ ವಿದೇಶಿ ಕಲಾವಿದರು. ವಿಚಿತ್ರ ಧ್ವನಿಯಲ್ಲಿ ಮಾತನಾಡುವ ಕಲಾವಿದರು; ಪತ್ತೇದಾರಿ ಸಿನೆಮಾದ ತಂತ್ರ: ಹಾಗಾಗಿ ವಿಮರ್ಶಕರು ಈ ಚಿತ್ರವನ್ನು ಕಟುವಾಗಿ ಟೀಕಿಸಿದರು.

ಗಾಂಧೀಜಿಯವರ ಬದುಕನ್ನು ಸಮಗ್ರವಾಗಿ ಅಲ್ಲದಿದ್ದರೂ, ಸಾರಸಂಗ್ರಹವಾಗಿ ಕಟ್ಟಿಕೊಟ್ಟು ಯಶಸ್ವಿಯಾದ ಚಿತ್ರಗಳಲ್ಲಿ ಅಗ್ರಗಣ್ಯವೆನಿಸಿದ ಚಿತ್ರವೆಂದರೆ 1982ರಲ್ಲಿ ಬಿಡುಗಡೆಯಾದ ಸರ್ ರಿಚರ್ಡ್ ಅಟೆನ್‌ಬರೋ ಅವರ ‘ಗಾಂಧಿ’. ನೆಹರೂ ಅವರ ಜೀವಿತ ಕಾಲದಲ್ಲಿಯೇ ಗಾಂಧೀಜಿ ಬಗ್ಗೆ ಚಿತ್ರ ನಿರ್ಮಿಸುವ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದ ಅಟೆನ್‌ಬರೋ ಅವರು ದಶಕಗಳ ಕಾಲ ಗಾಂಧೀಜಿಯ ಜೀವನಕತೆಯನ್ನು ಅಧ್ಯಯನ ಮಾಡಿ ಚಿತ್ರಕತೆ ರೂಪಿಸಿಕೊಂಡರು. ಗಾಂಧೀಜಿಯ ಬಗ್ಗೆ ಗಾಢವಾದ ಅನುರಕ್ತಿಯನ್ನು ತಾಳಿದ್ದರೂ, ಎಲ್ಲಿಯೂ ಗಾಂಧೀಜಿಯನ್ನು ಅನಗತ್ಯವಾಗಿ ವೈಭವೀಕರಿಸದೆ ರಕ್ತ ಮಾಂಸಗಳಿಂದ ಈ ಭೂಮಿಯ ಮೇಲೆ ನಡೆದಾಡಿದ ಸಹಜ ವ್ಯಕ್ತಿಯೊಬ್ಬನ ಕತೆಯನ್ನು ಆಪ್ತವಾಗಿ ನಿರೂಪಿಸಿ ಯಶಸ್ವಿಯಾದರು. ಗಾಂಧೀಜಿಯ ಬದುಕನ್ನು ಹೇಳುತ್ತಲೇ, ಭಾರತದ ಸ್ವಾತಂತ್ರ್ಯ ಸಂಗ್ರಾಮ, ದೇಶ ವಿಭಜನೆಯ ಪಾಶವೀಯತೆ, ಆಕ್ರಂದನದ ದನಿಗಳನ್ನು ಹೆಣೆದ ಚಿತ್ರವಾಗಿ ಇದು ಗಮನ ಸೆಳೆಯಿತು. ಲಂಡನ್‌ನಲ್ಲಿ ಬ್ಯಾರಿಸ್ಟರ್ ಪದವಿ ಪಡೆದು, ಭಾರತದಲ್ಲಿ ಯಶಸ್ಸು ಕಾಣದೆ, ಕಕ್ಷಿದಾರನೊಬ್ಬನಿಗೆ ನೆರವಾಗಲು ದಕ್ಷಿಣ ಆಫ್ರಿಕಾಗೆ ತೆರಳುವ ಗಾಂಧಿ; ಆರಂಭದಲ್ಲಿಯೇ ವರ್ಣದ್ವೇಷಕ್ಕೆ ತುತ್ತಾಗಿ, ಅಸಮಾನತೆ ವಿರುದ್ಧ ಹೋರಾಡಲು ಸಂಕಲ್ಪಿಸುವ ದೃಶ್ಯದಿಂದ ಆರಂಭವಾಗಿ, ಅವರ ಹತ್ಯೆಯವರೆಗಿನ ಅವಧಿಯವರೆಗೆ ಗಾಂಧೀಜಿಯ ಬದುಕಿನ ಬಹುಮುಖ್ಯ ಘಟ್ಟಗಳನ್ನು ಚಿತ್ರ ನಿರೂಪಿಸುತ್ತದೆ. ಭಾರತ ಸರಕಾರದ ಸಹಯೋಗದಲ್ಲಿ ನಿರ್ಮಾಣವಾದ ಈ ಚಿತ್ರ ವಿಶಾಲ ಭಿತ್ತಿಯಲ್ಲಿ, ಅಪಾರ ವೆಚ್ಚದಲ್ಲಿ ತಯಾರಾಯಿತು. ಗಾಂಧೀಜಿಯ ಬದುಕಿನ ಕಾಲದ ಪರಿಸರವನ್ನು ನಿರ್ಮಿಸಲು, ಬಳಸಿದ ಸ್ಥಳಗಳು, ವಾಹನಗಳು, ಉಡುಪು ಮತ್ತು ಇತರ ಪರಿಕರಗಳು ಚಿತ್ರಕ್ಕೆ ಸಹಜತೆಯನ್ನು ತಂದುಕೊಟ್ಟವು. ಗಾಂಧೀಜಿಯ ಪಾತ್ರಧಾರಿ ಇಂಗ್ಲೆಂಡ್‌ನ ನಟ ಬೆನ್‌ಕಿಂಗ್ಸ್‌ಲೇ ಅವರು ತಮ್ಮ ಪ್ರತಿಭೆಯಿಂದ ಗಾಂಧೀಜಿಯ ಪಾತ್ರಕ್ಕೆ ಜೀವ ತುಂಬಿದರು. ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರು ಭಾರತೀಯ ಕೂಲಿ ಕಾರ್ಮಿಕರ ಹಕ್ಕುಗಳಿಗಾಗಿ ನಡೆಸಿದ ಹೋರಾಟ ಗೋಖಲೆಯವರ ಸಲಹೆಯಂತೆ ಭಾರತವನ್ನು ಪರಿಚಯಿಸಿಕೊಳ್ಳಲು ಅವರು ಮಾಡುವ ಭಾರತಯಾತ್ರೆ, ಕಾಂಗ್ರೆಸ್ ಸಂಸ್ಥೆಯನ್ನು ಸೇರಿ ಸಾರ್ವಜನಿಕ ಬದುಕಿಗೆ ಸೇರುವುದು, ಖಿಲಾಫತ್ ಚಳವಳಿ, ಚಂಪಾರಣ್ ಸತ್ಯಾಗ್ರಹ, ಜಲಿಯನ್ ವಾಲಾ ಬಾಗ್ ದುರಂತ, ದುಂಡು ಮೇಜು ಪರಿಷತ್ತು, ದಂಡಿ ಯಾತ್ರೆ, ಚೋರಿ ಚೋರ ದುರಂತ, ಚಲೇಜಾವ್ ಚಳವಳಿ, ಆಶ್ರಮಗಳ ಸ್ಥಾಪನೆ, ದೇಶ ವಿಭಜನೆ, ಭಾರತದ ಸ್ವಾತಂತ್ರ್ಯ, ಕೋಲ್ಕತಾ ನಗರದಲ್ಲಿ ಗಾಂಧೀಜಿಯ ಉಪವಾಸ, ಗಾಂಧಿಯ ಹತ್ಯೆ ಮತ್ತು ಅಸ್ಥಿ ವಿಸರ್ಜನೆವರೆಗೆ ವ್ಯಾಪಿಸಿರುವ ಕಥಾಹಂದರದಲ್ಲಿ ನಿರ್ದೇಶಕರು ನಗೆಗಾರ ಗಾಂಧಿಗೂ, ಸಂಸಾರಿ ಗಾಂಧಿಗೂ ಎಡೆ (Space) ಕಲ್ಪಿಸಿದ್ದಾರೆ. ಆದುದರಿಂದ ಈ ಚಿತ್ರ ಗಾಂಧೀಜಿಯವರ ವ್ಯಕ್ತಿತ್ವವನ್ನು ಸಾರಸಂಗ್ರಹವಾಗಿ ಹಿಡಿದಿರುವ ಅಪರೂಪದ ಚಿತ್ರವೆನಿಸಿಕೊಂಡಿದೆ.

ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಹೋರಾಟಗಳ ಮೂಲಕ ತಮ್ಮ ವ್ಯಕ್ತಿತ್ವದಲ್ಲಿ ಪರಿವರ್ತನೆಯನ್ನು ಕಂಡುಕೊಂಡ ಗಾಂಧೀಜಿಯ ಬದುಕಿನ ಭಾಗವನ್ನು ನಿರೂಪಿಸಿರುವ ನಿರ್ದೇಶಕ ಶ್ಯಾಂ ಬೆನೆಗಲ್ ಅವರು ‘ದಿ ಮೇಕಿಂಗ್ ಆಫ್ ಮಹಾತ್ಮಾ’ (1996) ಗಾಂಧೀಜಿಯ ಬದುಕನ್ನು ಆಧರಿಸಿದ ಮತ್ತೊಂದು ಗಮನಾರ್ಹ ಚಿತ್ರ. ಗಾಂಧೀಜಿಯನ್ನು ಜಗತ್ತು ಈಗ ‘‘ಮಹಾತ್ಮಾ’’ ಎಂದು ಗುರುತಿಸುತ್ತದೆ. ಆದರೆ ಆ ಮಹಾತ್ಮನನ್ನು ರೂಪಿಸಿದ್ದು ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ ಕಳೆದ 21 ವರ್ಷಗಳ ಅವಧಿಯಲ್ಲಿ ನಡೆಸಿದ ಹೋರಾಟಗಳು ಎನ್ನುವುದನ್ನು ಈ ಚಿತ್ರ ಮನಗಾಣಿಸುತ್ತದೆ. ಗಾಂಧೀಜಿ ತಮ್ಮ ಅಹಿಂಸಾ ಚಳವಳಿ, ಅಸಹಕಾರ, ಸರಳ ಬದುಕು ಮತ್ತು ಅವರು ಮುಂದೆ ಪಾಲಿಸಿದ ಅನೇಕ ತಾತ್ವಿಕತೆಗಳನ್ನು ಪ್ರಯೋಗಿಸಿದ್ದು ಇಲ್ಲಿಯೇ. ಗಾಂಧೀಜಿಯವರ ವ್ಯಕ್ತಿತ್ವದ ಶಕ್ತಿ ಮತ್ತು ದೌರ್ಬಲ್ಯಗಳನ್ನು ಚಿತ್ರಿಸುತ್ತಲೇ, ದೌರ್ಬಲ್ಯಗಳನ್ನು ಮೀರುವ ವ್ಯಕ್ತಿಯಾಗಿ, ಹಿಂಸೆಯಿಲ್ಲದೆ ಸಂಗ್ರಾಮವನ್ನು ನಡೆಸುವ ನಾಯಕನಾಗಿ ರೂಪುಗೊಳ್ಳುವ ಮತ್ತು ವ್ಯಕ್ತಿಯೊಬ್ಬ ಹಾದುಹೋಗುವ ಪರಿವರ್ತನೆಯ ಹಂತಗಳನ್ನು ಈ ಚಿತ್ರವು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ.

‘ಗಾಂಧಿ’ ಮತ್ತು ‘ಮೇಕಿಂಗ್ ಆಫ್ ಮಹಾತ್ಮಾ’ ಚಿತ್ರಗಳನ್ನು ಹೊರತುಪಡಿಸಿದರೆ, ಗಾಂಧೀಜಿಯು ಬೇರೆ ಸಮಕಾಲೀನ ವ್ಯಕ್ತಿಗಳ ಬದುಕಿನಲ್ಲಿ ವಹಿಸುವ ಪಾತ್ರಗಳಿರುವ ಅನೇಕ ಚಿತ್ರಗಳಿವೆ. ನಿರ್ದೇಶಕ ಕೇತನ್ ಮೆಹ್ತಾ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜೀವನ ಚರಿತ್ರೆಯನ್ನು ತೆರೆಗೆ ತಂದ ‘ಸರ್ದಾರ್’ (1993) ಚಿತ್ರದಲ್ಲಿ ಪಟೇಲ್ ಮತ್ತು ಗಾಂಧೀಜಿಯ ನಡುವಣ ರಾಜಕೀಯ ಮತ್ತು ವೈಯಕ್ತಿಕ ಸಂಬಂಧಗಳ ಚಿತ್ರಣವಿದೆ. ಇದು ಸರ್ದಾರರ ಜೀವನದ ಚಿತ್ರವಾದರೂ ಪ್ರಧಾನವಾಗಿ ಪಟೇಲ್ ಮತ್ತು ಗಾಂಧೀಜಿ ಇಬ್ಬರೂ ಭಾರತದ ಸ್ವಾತಂತ್ರ್ಯಕ್ಕಾಗಿ ಒಟ್ಟಾಗಿ ದುಡಿದ ಬಗ್ಗೆ ವಿವರಗಳಿವೆ. ಆರಂಭದಲ್ಲಿ ಗಾಂಧೀಜಿಯವರ ಅಹಿಂಸಾತ್ಮಕ ಮಾರ್ಗಗಳನ್ನು ಅಲ್ಲಗಳೆಯುವ ಪಟೇಲ್ ಕೊನೆಗೆ ಗಾಂಧೀಜಿಯ ಉಪನ್ಯಾಸವೊಂದನ್ನು ಕೇಳಿ ಅದರಿಂದ ಪ್ರಭಾವಿತರಾಗುತ್ತಾರೆ. ಭಾರತದ ಇಬ್ಬರು ಪುರುಷ ಶ್ರೇಷ್ಠರ ಸೈದ್ಧಾಂತಿಕ ನೆಲೆಗಳನ್ನು ಅರ್ಥಮಾಡಿಕೊಳ್ಳಲು ಈ ಚಿತ್ರ ನೆರವಾಗುತ್ತದೆ. ಸರ್�

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News