ತಂತಿಯ ಮೇಲೆ ನಡೆಯಬೇಡಿ, ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಿ: ಸಿದ್ದರಾಮಯ್ಯ

Update: 2019-09-30 13:03 GMT

ರಾಯಚೂರು, ಸೆ. 30: ‘ತಂತಿಯ ಮೇಲೆ ನಡೆಯುವ ಅನಿವಾರ್ಯತೆ ಇದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪನವರು ರಾಜೀನಾಮೆ ನೀಡುವುದು ಸೂಕ್ತ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಸೋಮವಾರ ಜಿಲ್ಲೆಯ ನೆರೆ ಪೀಡಿತ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದ ಬಳಿಕ ಮಾತನಾಡಿದ ಅವರು, ‘ಬಿಎಸ್‌ವೈ ರೆಕ್ಕೆ-ಪುಕ್ಕವನ್ನು ಬಿಜೆಪಿ ಹೈಕಮಾಂಡ್ ಕತ್ತರಿಸಿ ಬಿಟ್ಟಿದೆ. ಪ್ರತಿದಿನವೂ ಅವರಿಗೆ ಸ್ವಪಕ್ಷದವರೇ ಕಿರುಕುಳ ನೀಡುತ್ತಿದ್ದಾರೆ. ರಾಜ್ಯದ ಸಮಸ್ಯೆ ಬಗ್ಗೆ ಮಾತನಾಡಲು ಅವರಿಗೆ ಅವಕಾಶವನ್ನೂ ನೀಡುತ್ತಿಲ್ಲ. ಪಾಪ, ಯಡಿಯೂರಪ್ಪ ಅವರನ್ನು ನೋಡಿದರೆ ನನಗೆ ಅಯ್ಯೋ ಅನಿಸುತ್ತದೆ. ತಂತಿಯ ಮೇಲೆ ನಡೆಯುವಂತಹ ಸಂಕಷ್ಟ ಏಕೆ? ರಾಜೀನಾಮೆ ಕೊಟ್ಟು ಹೋಗಿ’ ಎಂದು ಒತ್ತಾಯಿಸಿದರು.

ಬಿಎಸ್‌ವೈಗೆ ಧೈರ್ಯ ಇಲ್ಲ: ‘ಚಂದ್ರಯಾನ-2 ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ದಿನ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ಮೋದಿಯವರನ್ನು ಭೇಟಿಯಾಗಲು ಅವಕಾಶ ನೀಡುವಂತೆ ಕಾಂಗ್ರೆಸ್ ಪಕ್ಷದಿಂದ ಪತ್ರ ಬರೆದಿದ್ದೆವು, ಆದರೆ, ಮೋದಿ ಭೇಟಿಗೆ ಅವಕಾಶ ನೀಡಲಿಲ್ಲ. ಸಿಎಂ ಯಡಿಯೂರಪ್ಪನವರಿಗೂ ಮೋದಿ ಬಳಿ ಮಾತನಾಡುವ ಧೈರ್ಯವಿಲ್ಲ. ರಾಜ್ಯದ ಸಮಸ್ಯೆ ಬಗೆಹರಿಯುವುದು ಹೇಗೆ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ಆದರೆ, ನಯಾಪೈಸೆ ಅನುದಾನ ಬಂದಿಲ್ಲ. ನೆರೆ ಸಂತ್ರಸ್ತರ ಪರಿಹಾರ ಕಾರ್ಯಗಳಿಗೆ ರಾಜ್ಯ ಸರಕಾರವೂ ಸ್ಪಂದಿಸುತ್ತಿಲ್ಲ. ಯಾವೊಬ್ಬ ಸಚಿವರೂ ನೆರೆ ಪೀಡಿತ ಪ್ರದೇಶಗಳಲ್ಲಿ ಕಾಣಿಸುತ್ತಿಲ್ಲ. ಒಬ್ಬರಂತೂ ಮೈಸೂರು ದಸರಾ ಮಾಡಲು ಅಲ್ಲೇ ಠಿಕಾಣಿ ಹೂಡಿದ್ದಾರೆ. ನಾವೂ ದಸರಾ ಮಾಡಿದ್ದೇವೆ. ಆದರೆ, ಅಲ್ಲೇ ಠಿಕಾಣಿ ಹೂಡಿರಲಿಲ್ಲ ಎಂದು ಟೀಕಿಸಿದರು.

ಅಧಿವೇಶನ ನಡೆಸಬೇಕಿತ್ತು: ಬೆಳಗಾವಿಯ ಸುವರ್ಣಸೌಧದಲ್ಲೇ ಚಳಿಗಾಲದ ಅಧಿವೇಶನ ನಡೆಸಬೇಕಿತ್ತು. ನಾನೂ ಈ ಬಗ್ಗೆ ಪತ್ರ ಬರೆದಿದ್ದೆ. ಆದರೆ, ರಾಜ್ಯ ಸರಕಾರ ಅಲ್ಲಿ ಅಧಿವೇಶನ ನಡೆಸಲು ಹಿಂದೇಟು ಹಾಕಿದೆ. ಬೆಳಗಾವಿ, ರಾಯಚೂರು ಸೇರಿ ಉತ್ತರ ಕರ್ನಾಟಕ, ಕರಾವಳಿ ಭಾಗದಲ್ಲಿ ನೆರೆಯಿಂದ ಬಹಳಷ್ಟು ಹಾನಿಯಾಗಿದೆ.

‘ಪ್ರವಾಹದಿಂದ ಅತಿಹೆಚ್ಚು ಹಾನಿಗೀಡಾಗಿರುವುದು ಬೆಳಗಾವಿ ಜಿಲ್ಲೆ, ನಂತರ ಬಾಗಲಕೋಟೆ, ರಾಯಚೂರು, ಗದಗ ಹೀಗೆ ಸಾಕಷ್ಟು ನಷ್ಟಕ್ಕೆ ಈಡಾಗಿವೆ. ಪ್ರತಿ ತಿಂಗಳು ಸಂತ್ರಸ್ತರಿಗೆ ಮನೆ ಬಾಡಿಗೆ ರೂಪದಲ್ಲಿ 5 ಸಾವಿರ ರೂ.ಕೊಡಲಾಗುತ್ತಿದೆ. ಹಳ್ಳಿಗಳಲ್ಲಿ ಮನೆ ಬಾಡಿಗೆಗೆ ಸಿಗುತ್ತದೆಯೇ? ಮನೆ ಕಳೆದುಕೊಂಡವರು ಮುಂದಿನ ಹತ್ತು ತಿಂಗಳು ಎಲ್ಲಿ ವಾಸಿಸಬೇಕು?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

‘ಅನರ್ಹ ಶಾಸಕ ಆನಂದ್ ಸಿಂಗ್ ಅವರಿಗೆ ಅನುಕೂಲವಾಗಲಿ ಎಂದು ಬಳ್ಳಾರಿ ಜಿಲ್ಲೆಯನ್ನು ವಿಭಜಿಸಲು ಹೊರಟಿದ್ದಾರೆ, ಇದು ಸರಿಯಲ್ಲ. ಬಳ್ಳಾರಿ ಜಿಲ್ಲೆಗೆ ಹೋಲಿಸಿದರೆ ಬೆಳಗಾವಿ ಜಿಲ್ಲೆ ತೀರಾ ದೊಡ್ಡದು. ಬೆಳಗಾವಿಯಲ್ಲಿ 18 ವಿಧಾನಸಭಾ ಕ್ಷೇತ್ರಗಳಿವೆ. ಅಷ್ಟು ದೊಡ್ಡ ಜಿಲ್ಲೆಯನ್ನೇ ವಿಭಜಿಸದೆ ಇರುವಾಗ ಬರೀ 10 ವಿಧಾನಸಭಾ ಕ್ಷೇತ್ರವಿರುವ ಬಳ್ಳಾರಿಯ ವಿಭಜನೆಯ ಅಗತ್ಯವಿದೆಯೇ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ಸರಕಾರ ಪತನ: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 15 ಕ್ಷೇತ್ರಗಳನ್ನು ಗೆದ್ದರೆ ಬಿಜೆಪಿ ಸರಕಾರ ಪತನವಾಗುವುದು ಖಚಿತ. 105 ಮಂದಿ ಶಾಸಕರನ್ನು ಇಟ್ಟುಕೊಂಡು ಬಿಜೆಪಿ ಸರಕಾರ ರಚನೆ ಮಾಡಿದೆ. ಅವರ ಬಳಿ ಅಗತ್ಯ ಸಂಖ್ಯಾಬಲವೇ ಇಲ್ಲ. ಇದು ಅನೈತಿಕ ಸರಕಾರ. ಜೆಡಿಎಸ್-ಕಾಂಗ್ರೆಸ್ ಶಾಸಕರಿಗೆ ಹಣ, ಅಧಿಕಾರ ಆಸೆ ತೋರಿಸಿ ಹಿಂಬಾಗಿಲ ಮೂಲಕ ಸರಕಾರ ರಚನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಎಲ್ಲ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ. ಆ ಮೇಲೆ ಸರಕಾರ ಉಳಿಯಲಿದೆಯೇ? ಎಂದು ಕೇಳಿದರು.

‘ಮೈಸೂರು ದಸರಾ ಉತ್ಸವಕ್ಕೆ ನನಗೆ ಆಹ್ವಾನ ಇರಲಿಲ್ಲ. ಹೀಗಾಗಿ ನಾನು ಭಾಗವಹಿಸಲಿಲ್ಲ. ಕರೆಯದೇ ಹೋಗುವವರನ್ನು ಅದೇನೋ ಮಾಡಬೇಕೆಂದು ಹೇಳಿದ್ದಾರೆ. ನಾನು ಈ ಮೊದಲು ಸಚಿವನಾಗಿ, ಮುಖ್ಯಮಂತ್ರಿಯಾಗಿ ದಸರಾ ಉತ್ಸವದಲ್ಲಿ ಪಾಲ್ಗೊಂಡಿದ್ದೇನೆ. ಈಗ ಅವರ ಅಧಿಕಾರವಿದೆ. ಉತ್ಸವ ಮಾಡಿಕೊಳ್ಳಲಿ’ ಎಂದು ಸಿದ್ದರಾಮಯ್ಯ ಹೇಳಿದರು.

ನಾನೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ. ಮುನಿಯಪ್ಪ ಸೇರಿದಂತೆ ಅನೇಕರು ಪಕ್ಷದಲ್ಲಿ ನನ್ನ ವಿರುದ್ಧ ಇದ್ದಾರೆಂಬುದು ಕೇವಲ ಮಾಧ್ಯಮಗಳ ಊಹೆ ಅಷ್ಟೆ. ಸುದ್ಧಿ ವಾಹಿನಿಗಳಲ್ಲಿ ಬರುವುದೆಲ್ಲವೂ ಸತ್ಯವಲ್ಲ. ಪಕ್ಷದ ವರಿಷ್ಠರು ವಿಪಕ್ಷ ನಾಯಕನನ್ನಾಗಿ ನನ್ನನ್ನೆ ನೇಮಕ ಮಾಡಲಿದ್ದಾರೆ ಎಂದು ಸಿದ್ದರಾಮಯ್ಯ ನುಡಿದರು.

‘ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ನೀಡಿದ್ದ ಅನುದಾನವನ್ನು ಯಡಿಯೂರಪ್ಪ ಕಡಿತ ಮಾಡಿದ್ದಾರೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ನಿಗದಿ ಮಾಡಿದ್ದ ಅನುದಾನವನ್ನೂ ಹಿಂಪಡೆದಿದ್ದಾರೆ. ಅಭಿವೃದ್ಧಿ ಕಾಮಗಾರಿಗಳ ವಿಚಾರದಲ್ಲಿ ಇಂತಹ ದ್ವೇಷದ ರಾಜಕೀಯ ಸರಿಯಲ್ಲ’

-ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ

‘ಅತೃಪ್ತ ಶಾಸಕರನ್ನು ಅಡ್ಡ ದಾರಿಯಲ್ಲಿ ತೃಪ್ತಿಪಡಿಸಿ ಮುಖ್ಯಮಂತ್ರಿ ಪದವಿಗೆ ಏರಿದ ಯಡಿಯೂರಪ್ಪನವರೇ ತಂತಿ ಮೇಲಿಂದನೇ ಪ್ರವಾಹ ಪೀಡಿತ ಪ್ರದೇಶದಲ್ಲಿರುವ ಜನರ ಕಡೆಗೂ ನೋಡಿ. ಮನೆ-ಮಠ ಕಳೆದುಕೊಂಡು ಬೀದಿಗೆ ಬಿದ್ದಿರುವ ಅವರ ಬದುಕನ್ನು ನಿಮ್ಮ ಸರಕಾರಕ್ಕೆ ಕಟ್ಟಿ ಕೊಡೋಕೆ ಸಾಧ್ಯವಾಗದಿದ್ದರೆ, ಜನರೇ ನಿಮ್ಮನ್ನು ‘ತಂತಿ’ ಮೇಲಿಂದ ಇಳಿಸುತ್ತಾರೆ’

-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News