ದಿಲ್ಲಿ ನಾಯಕರಿಗೆ ಇಷ್ಟವಿಲ್ಲದ ಕಾರಣ ಕೇಂದ್ರದ ನೆರವು ಸಿಗುತ್ತಿಲ್ಲ: ಪ್ರಿಯಾಂಕ್ ಖರ್ಗೆ

Update: 2019-09-30 15:26 GMT

ಕಲಬುರಗಿ, ಸೆ. 30: ರಾಜ್ಯದಲ್ಲಿ ಬಿಎಸ್‌ವೈ ನೇತೃತ್ವದ ಸರಕಾರ ರಚನೆಗೆ ದಿಲ್ಲಿ ಬಿಜೆಪಿ ನಾಯಕರಿಗೆ ಇಷ್ಟವಿರಲಿಲ್ಲ. ಹೀಗಾಗಿಯೇ ಕರ್ನಾಟಕ ರಾಜ್ಯಕ್ಕೆ ಕೇಂದ್ರದಿಂದ ಯಾವುದೇ ನೆರವು ಸಿಗುತ್ತಿಲ್ಲ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬಿಜೆಪಿ ಸರಕಾರ ರಚನೆಯಾದ ಬಳಿಕ ಬಿಜೆಪಿ ಹೈಕಮಾಂಡ್ ಬಿಎಸ್‌ವೈ ಅವರಿಗೆ ಯಾವುದೇ ಸ್ವಾತಂತ್ರ ನೀಡಿಲ್ಲ. ಸಚಿವ ಸಂಪುಟ ರಚನೆಗೂ ಅವರಿಗೆ ಮುಕ್ತ ಅವಕಾಶ ನೀಡಲಿಲ್ಲ. ಮೂವರು ಉಪಮುಖ್ಯಮಂತ್ರಿಗಳನ್ನು ಮಾಡಿ ಬಿಎಸ್‌ವೈ ತಲೆ ಮೇಲೆ ಕೂರಿಸಿದ್ದು ಸಿಎಂ ಅನ್ನು ನಿಯಂತ್ರಣ ಮಾಡಲಾಗುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಮಾಜಿ ಶಾಸಕರಿಗೆ ಡಿಸಿಎಂ ಸ್ಥಾನ ನೀಡಿರುವುದು ಸಂಶಯ ಸೃಷ್ಟಿಸಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

ಅನರ್ಹ ಶಾಸಕರು ಒಂದು ವಾರದಲ್ಲೆ ಗೆದ್ದು ಬರುವ ಉಮೇದಿನಲ್ಲಿದ್ದರು. ಆದರೆ, ಇದೀಗ ಅವರಿಗೆ ಸತ್ಯದ ಅರಿವಾಗಿದೆ. ಬಿಜೆಪಿ ನಾಯಕರು ಅವರಿಗೆ ನೀಡಿದ್ದ ಯಾವ ಭರವಸೆಗಳನ್ನೂ ಈಡೇರಿಸಿದಂತೆ ಕಾಣುತ್ತಿಲ್ಲ. ಹೀಗಾಗಿ ಅನರ್ಹರು ತ್ರಿಶಂಕು ಸ್ಥಿತಿಗೆ ತಲುಪಿದ್ದಾರೆಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.

ಕೇಂದ್ರ ಸರಕಾರ ರಾಜ್ಯದ ನೆರೆಗೆ ಯಾವುದೇ ನೆರವು ನೀಡಿಲ್ಲ. 35 ಸಾವಿರ ಕೋಟಿ ರೂ.ಗಳಿಗೂ ಅಧಿಕ ನಷ್ಟವಾಗಿದ್ದರೂ, ರಾಜ್ಯ ಸರಕಾರ ಸಮರ್ಪಕ ನೆರವು ಕೋರಿಲ್ಲ. 25 ಮಂದಿ ಸಂಸದರಿದ್ದರೂ, ಯಾರೊಬ್ಬರೂ ಮಾತನಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕ ರಾಜ್ಯದ ಆಡಳಿತ ದಿಲ್ಲಿ ನಾಯಕರ ಕೈಯಲ್ಲಿದೆ. ಹೀಗಾಗಿ ರಾಜ್ಯದ ಜನರ ಸಂಕಷ್ಟಗಳು ಅವರಿಗೆ ಅರ್ಥವೆ ಆಗುತ್ತಿಲ್ಲ. ಕೇವಲ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದ ಪ್ರಿಯಾಂಕ್ ಖರ್ಗೆ, ಎಲ್ಲ ವಿಷಯಗಳಲ್ಲಿಯೂ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News