ತನ್ನ ಜನರನ್ನು ರಕ್ಷಿಸಲು ಮುಖ್ಯಮಂತ್ರಿಯವರಿಗೆ ಬಲಿಪಶುವೊಂದರ ಅಗತ್ಯವಿತ್ತು -ಡಾ. ಕಫೀಲ್ ಖಾನ್

Update: 2019-09-30 18:30 GMT

ತನ್ನ ಜನರನ್ನು ರಕ್ಷಿಸಲು ಮುಖ್ಯಮಂತ್ರಿಯವರಿಗೆ ಬಲಿಪಶುವೊಂದರ ಅಗತ್ಯವಿತ್ತು. ನನ್ನ ಹೆಸರನ್ನು ಎಳೆದುತಂದಲ್ಲಿ ಆ ಕೆಲಸ ಸುಲಭವಾಗುತ್ತಿತ್ತು. (ಕಳೆದ ವರ್ಷ) ಆಗಸ್ಟ್ 11 ಹಾಗೂ 12ರಂದು ಪ್ರತಿಯೊಬ್ಬರೂ 70 ಮಂದಿ ಮಕ್ಕಳ ಸಾವಿನ ಬಗ್ಗೆ ಮಾತನಾಡುತ್ತಿದ್ದರು ಹಾಗೂ ನನ್ನನ್ನು ಹೀರೋ ಆಗಿ ಬಿಂಬಿಸಿದ್ದರು. ಪ್ರತಿಯೊಬ್ಬರೂ ಮುಖ್ಯಮಂತ್ರಿಯವರ ರಾಜೀನಾಮೆಯನ್ನು ಆಗ್ರಹಿಸುತ್ತಿದ್ದರು. ಆದರೆ ಆಗಸ್ಟ್ 13ರಂದು ಪ್ರತಿಯೊಬ್ಬರೂ ನನ್ನ ಬಗ್ಗೆ ಮಾತನಾಡುತ್ತಿದ್ದರು ಹಾಗೂ ಮೃತಪಟ್ಟ ಮಕ್ಕಳ ಬಗ್ಗೆ ಮಾತನಾಡುವುದನ್ನು ಅವರು ಮರೆತಿದ್ದರು.

 ಆಮ್ಲಜನಕದ ಕೊರತೆಯಿಂದಾಗಿ 60ಕ್ಕೂ ಅಧಿಕ ಮಕ್ಕಳು ಮೃತಪಟ್ಟ ಘಟನೆಗೆ ಸಂಬಂಧಿಸಿ ಡಾ. ಕಫೀಲ್ ಖಾನ್ ಅಮಾನತುಗೊಂಡ ಎರಡು ವರ್ಷಗಳ ಬಳಿಕ, ಉತ್ತರಪ್ರದೇಶ ಸರಕಾರದ ಇಲಾಖಾ ಮಟ್ಟದ ತನಿಖೆಯು ಅವರನ್ನು ಶುಕ್ರವಾರ ಎಲ್ಲಾ ಆರೋಪಗಳಿಂದ ದೋಷಮುಕ್ತಗೊಳಿಸಿತು. ಡಾ. ಖಾನ್ ಅವರು 63 ಮಂದಿ ಆಮ್ಲಜನಕದ ಕೊರತೆಯಿಂದಾಗಿ ಸಾವಿಗೀಡಾದ ಗೋರಖ್‌ಪುರದ ಬಿಆರ್‌ಡಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಶಿಶುರೋಗ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದರು. ಔಟ್‌ಲುಕ್ ಪತ್ರಿಕೆಗೆ ದೂರವಾಣಿ ಮೂಲಕ ಸಂದರ್ಶನ ನೀಡಿದ ಅವರು, ಸರಕಾರವು ಇನ್ನೂ ಕೂಡಾ ತನ್ನನ್ನು ಕಾಡಲಿದೆಯೆಂಬ ಭೀತಿ ತನಗಿರುವುದಾಗಿ ಡಾ.ಖಾನ್ ತಿಳಿಸಿದ್ದಾರೆ.

ಪ್ರಶ್ನೆ: 2017ರ ಆಗಸ್ಟ್‌ನಲ್ಲಿ ಸಂಭವಿಸಿದ ಮಕ್ಕಳ ಸಾವುಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ನಿಮಗೆ ಕ್ಲೀನ್‌ಚಿಟ್ ನೀಡಲಾಗಿದೆ. ನಿಮಗೆ ಈಗ ನ್ಯಾಯ ದೊರೆತ ಭಾವನೆ ಉಂಟಾಗಿದೆಯೇ?

ಡಾ. ಕಫೀಲ್: ನಾನು ನಿರಾಳಗೊಂಡಿದ್ದೇನೆ ಹಾಗೂ ಇಡೀ ಕುಟುಂಬಕ್ಕೆ ಸಂತಸವಾಗಿದೆ. ಇದೊಂದು ಸುದೀರ್ಘವಾದ ಗೆಲುವಾಗಿದೆ. ಇದು ನನಗೆ ಹೋರಾಡುವುದಕ್ಕೆ ಹೆಚ್ಚಿನ ಶಕ್ತಿಯನ್ನು ನೀಡಿದೆ. ಕನಿಷ್ಠ ಪಕ್ಷ, ನನಗೆ ‘ಕೊಲೆಗಡುಕ’ ಹಾಗೂ ‘ಕುಖ್ಯಾತ ಡಾ.ಕಫೀಲ್’ ಎಂಬ ಹಣೆಪಟ್ಟಿ ಕಟ್ಟಿದ್ದ ಜನರಿಗೆ ಈಗ ಉತ್ತರ ದೊರೆತಿದೆ.

ಪ್ರಶ್ನೆ: ರಾಜ್ಯ ಸರಕಾರವು ನಡೆಸಿದ ಇಲಾಖಾಮಟ್ಟದ ತನಿಖೆಯು ನಿಮಗೆ ಕರ್ತವ್ಯಕ್ಕೆ ಮರಳಲು ನೆರವಾಯಿತೇ?

ಡಾ. ಕಫೀಲ್: ಇತ್ತೀಚೆಗೆ ಸರಕಾರವು ಹೇಳಿಕೆಯೊಂದನ್ನು ಹೊರಡಿಸಿ, ತಾವು ಸಮಗ್ರ ವರದಿಯನ್ನು ಪುರಸ್ಕರಿಸುವುದಿಲ್ಲ ಹಾಗೂ ನಾನು ಅಮಾನತಿನಲ್ಲೇ ಉಳಿಯುತ್ತೇನೆ ಎಂದು ಹೇಳಿದೆ. ಅದು ಯೋಗಿ ಸರಕಾರಕ್ಕೆ ಬಿಟ್ಟದ್ದು. ಒಂದು ವೇಳೆ ಮುಖ್ಯಮಂತ್ರಿಯವರು ವರದಿಯನ್ನು ಸ್ವೀಕರಿಸುವುದಾದರೆ ನನಗೆ ಉದ್ಯೋಗವನ್ನು ಮರಳಿ ನೀಡುವರೆಂದು ನಾನು ಆಶಿಸುತ್ತೇನೆ.

ಪ್ರಶ್ನೆ: ಅಂದರೆ ನಿಮ್ಮ ಅಗ್ನಿಪರೀಕ್ಷೆ ಇನ್ನೂ ಮುಗಿದಿಲ್ಲ ಎಂದಾಯಿತು?

ಡಾ. ಕಫೀಲ್: ಅವರು ನನ್ನನ್ನು ಇನ್ನೂ ಹೆಚ್ಚು ಕಾಡಲಿದ್ದಾರೆಂಬುದು ನನಗೆ ತಿಳಿದಿದೆ. ಸರಕಾರವು ನನ್ನ ವಿರುದ್ಧ ಕೆಲವು ಆರೋಪಗಳನ್ನು ಹೊರಿಸಲಿದೆ ಹಾಗೂ 2022ರ ವಿಧಾನಸಭಾ ಚುನಾವಣೆಯವರೆಗೂ ಹೋರಾಟವು ಮುಂದುವರಿಯಲಿದೆ. ನನಗೆ ಈಗಲೂ ಕೊಲೆ ಬೆದರಿಕೆಗಳು ಬರುತ್ತಿವೆ. ನಿನ್ನ ಸಹೋದರನ ಬಳಿಕ, ಈಗ ನಿನ್ನ ಸರದಿ ಎಂದು ಅವರು ಹೇಳುತ್ತಿದ್ದಾರೆ.

ಪ್ರಶ್ನೆ: ಕಳೆದ ಎರಡು ವರ್ಷಗಳು ನಿಮಗೆ ಯಾತನಾಮಯವಾಗಿತ್ತೇ?

ಡಾ. ಕಫೀಲ್: ನನ್ನ ಮಗಳೊಂದಿಗೆ ಸಮಯವನ್ನು ಕಳೆಯಲು ಸಾಧ್ಯವಾಗದಿದ್ದುದೇ ನನ್ನ ಪಾಲಿಗೆ ಅತ್ಯಂತ ಯಾತನಾಕಾರಿಯಾಗಿತ್ತು. ಅವರು ನನ್ನನ್ನು ಕೊಂಡೊಯ್ದಗ ನನ್ನ ಮಗಳಿಗೆ ಕೇವಲ 10 ತಿಂಗಳ ಪ್ರಾಯ. ನೀನು ತಂದೆಯಾದಾಗ ಜೀವನದ ಮೈಲುಗಲ್ಲಿನ ಬಗ್ಗೆ ಅರಿತುಕೊಳ್ಳುವಿ ಎಂದು ನನ್ನ ಪ್ರಾಧ್ಯಾಪಕರು ನನಗೆ ಹೇಳುತ್ತಿದ್ದರು. ಒಂದು ವರ್ಷದ ಬಳಿಕ ನಾನು ಜೈಲಿನಿಂದ ಹೊರಬಂದಾಗ, ಆಕೆ ನನ್ನನ್ನು ‘ಪಾಪಾ’ ಎಂದು ಕರೆಯತೊಡಗಿದಳು. ಆದರೆ ‘ಪಾಪಾ’ ಅಂದರೆ ಏನೆಂದು ಆಕೆಗೆ ತಿಳಿದಿಲ್ಲ.

ಪ್ರಶ್ನೆ: ನೀವು ಮುಸ್ಲಿಮರೆಂಬ ಕಾರಣಕ್ಕಾಗಿ ನಿಮ್ಮನ್ನು ಗುರಿಯಿರಿಸಲಾಗಿದೆಯೇ?

ಡಾ.ಕಫೀಲ್: ಇದು ಧರ್ಮಕ್ಕೆ ಸಂಬಂಧಿಸಿದ್ದಲ್ಲ. ಮುಖ್ಯಮಂತ್ರಿಯವರಿಗೆ ನಿಜವಾದ ಅಪರಾಧಿಗಳಾಗಿರುವ ತನ್ನ ಆರೋಗ್ಯ ಸಚಿವ ಹಾಗೂ ಇತರರನ್ನು ರಕ್ಷಿಸಬೇಕಾಗಿದೆ. (ಆಮ್ಲಜನಕದ ಸಿಲಿಂಡರ್‌ಗಳ) ಮಾರಾಟಗಾರರು ಅವರಿಗೆ 40 ಪತ್ರಗಳನ್ನು ಬರೆದ ಹೊರತಾಗಿಯೂ ಅವರು ಹಣವನ್ನು ಪಾವತಿಸಿರಲಿಲ್ಲ. ತನ್ನ ಜನರನ್ನು ರಕ್ಷಿಸಲು ಮುಖ್ಯಮಂತ್ರಿಯವರಿಗೆ ಬಲಿಪಶುವೊಂದರ ಅಗತ್ಯವಿತ್ತು. ನನ್ನ ಹೆಸರನ್ನು ಎಳೆದುತಂದಲ್ಲಿ ಆ ಕೆಲಸ ಸುಲಭವಾಗುತ್ತಿತ್ತು. (ಕಳೆದ ವರ್ಷ) ಆಗಸ್ಟ್ 11 ಹಾಗೂ 12ರಂದು ಪ್ರತಿಯೊಬ್ಬರೂ 70 ಮಂದಿ ಮಕ್ಕಳ ಸಾವಿನ ಬಗ್ಗೆ ಮಾತನಾಡುತ್ತಿದ್ದರು ಹಾಗೂ ನನ್ನನ್ನು ಹೀರೋ ಆಗಿ ಬಿಂಬಿಸಿದ್ದರು. ಪ್ರತಿಯೊಬ್ಬರೂ ಮುಖ್ಯಮಂತ್ರಿಯವರ ರಾಜೀನಾಮೆಯನ್ನು ಆಗ್ರಹಿಸುತ್ತಿದ್ದರು. ಆದರೆ ಆಗಸ್ಟ್ 13ರಂದು ಪ್ರತಿಯೊಬ್ಬರೂ ನನ್ನ ಬಗ್ಗೆ ಮಾತನಾಡುತ್ತಿದ್ದರು ಹಾಗೂ ಮೃತಪಟ್ಟ ಮಕ್ಕಳ ಬಗ್ಗೆ ಮಾತನಾಡುವುದನ್ನು ಅವರು ಮರೆತಿದ್ದರು.

ಪ್ರಶ್ನೆ: ಅಮಾನತುಗೊಂಡ ಬಳಿಕವೂ ನೀವು ಆರೋಗ್ಯ ಶಿಬಿರಗಳನ್ನು ಹಾಗೂ ಇತರ ವೈದ್ಯಕೀಯ ಸೇವೆಗಳನ್ನು ನಡೆಸುತ್ತಾ ಬಂದಿರುವಿರಿ...

ಡಾ.ಕಫೀಲ್:  ಕಳೆದ ಒಂದು ವರ್ಷದಲ್ಲಿ ನಾನು 70 ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿದ್ದೇನೆ. ನಾನು ಕೇರಳ, ಅಸ್ಸಾಂ, ಬಿಹಾರ ರಾಜ್ಯಗಳಿಗೆ ಹೋಗಿದ್ದೆ ಹಾಗೂ ಉತ್ತರಪ್ರದೇಶದಲ್ಲಿ ಹಲವಾರು ಶಿಬಿರಗಳನ್ನು ಆಯೋಜಿಸಿದ್ದೆ. ನಾನು ಈಗಲೂ ಸರಕಾರಿ ಉದ್ಯೋಗಿಯಾಗಿದ್ದೇನೆ ಹಾಗೂ ನಾನು ಹೀಗೆಯೂ ಜನರಿಗೆ ಸೇವೆ ಸಲ್ಲಿಸಬಹುದಾಗಿದೆ. ಇತರ 25 ಆರೋಗ್ಯ ಕಾರ್ಯಕರ್ತರೊಂದಿಗೆ ನಾನು ‘ಎಲ್ಲರಿಗೂ ಆರೋಗ್ಯ’ ಎಂಬ ಅಭಿಯಾನವನ್ನು ಕೂಡಾ ನಡೆಸಿದ್ದೇನೆ. ಜಾತಿ, ಧರ್ಮ ಹಾಗೂ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸದೆ ಪ್ರತಿಯೊಬ್ಬ ನಾಗರಿಕನಿಗೂ ಮನೆಬಾಗಿಲಲ್ಲೇ ಆರೋಗ್ಯಪಾಲನಾ ಸೌಲಭ್ಯ ದೊರೆಯಬೇಕೆಂದು ಆಗ್ರಹಿಸುವ ಶಾಸನವೊಂದನ್ನು ಸಂಸತ್‌ನಲ್ಲಿ ಅಂಗೀಕರಿಸಬೇಕೆಂದು ನಾವು ಬಯಸುತ್ತೇವೆ. ಈ ನಿಟ್ಟಿನಲ್ಲಿ ನಾನು ಶ್ರಮಿಸುತ್ತಿದ್ದೇನೆ.

ಪ್ರಶ್ನೆ: ದುರಂತದ ಬಳಿಕ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯದಲ್ಲಿ ಸುಧಾರಣೆಯಾಗಿದೆಯೆಂದು ಉತ್ತರಪ್ರದೇಶ ಸರಕಾರ ಹೇಳಿಕೊಳ್ಳುತ್ತಿದೆ.

ಡಾ.ಕಫೀಲ್:  ಹೌದು. ಮೂಲಸೌಕರ್ಯದಲ್ಲಿ ಬಹಳಷ್ಟು ಸುಧಾರಣೆಯಾಗಿದೆಯೆಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ.ಶಿಶುರೋಗ ಚಿಕಿತ್ಸಾ ವಾರ್ಡ್‌ನಲ್ಲಿ ಹಾಸಿಗೆಗಳ ಸಂಖ್ಯೆಯನ್ನು 200 ರಿಂದ 400ಕ್ಕೆ ಏರಿಕೆ ಮಾಡಲಾಗಿದೆ. ಆದರೆ ವೈದ್ಯರು ಹಾಗೂ ಸಿಬ್ಬಂದಿಯ ಕೊರತೆ ಈಗಲೂ ಇದೆ. ಎಲ್ಲಕ್ಕಿಂತಲೂ ಮುಖ್ಯವಾದುದೆಂದರೆ ಅವರು ಈಗಲೂ ಮೆದುಳಿನ ಉರಿಯೂತ (ಎನ್‌ಸೆಫಲೈಟಿಸ್) ಪೀಡಿತ ರೋಗಿಗಳ ದತ್ತಾಂಶಗಳನ್ನು ನೀಡುತ್ತಿಲ್ಲ. ದುರಂತಕ್ಕೆ ಮೊದಲು ಅವರು ದಿನಂಪ್ರತಿ ಆಧಾರದಲ್ಲಿ ಆಸ್ಪತ್ರೆಗೆ ದಾಖಲಾಗುವ ಮಕ್ಕಳ ಸಂಖ್ಯೆಯ ಕುರಿತು ಬುಲೆಟಿನ್ ಒಂದನ್ನು ಹೊರಡಿಸುತ್ತಿದ್ದರು. ಈಗ ಅವರು ದತ್ತಾಂಶಗಳನ್ನು ಒದಗಿಸುತ್ತಿಲ್ಲ. ರೋಗ ನಿಯಂತ್ರಣ ಹಾಗೂ ಸಾವಿನ ಪ್ರಮಾಣದ ವಿಷಯದಲ್ಲಿ ಉಂಟಾಗಿರುವ ನೈಜ ಪರಿಣಾಮದ ಬಗ್ಗೆ ನಮ್ಮನ್ನು ಕತ್ತಲೆಯಲ್ಲಿರಿಸಲಾಗಿದೆ.

 ಪ್ರಶ್ನೆ: ನ್ಯಾಯಕ್ಕಾಗಿ ನಿಮ್ಮ ಹೋರಾಟವನ್ನು ಮುಂದುವರಿಸುತ್ತೀರಾ?

ಡಾ.ಕಫೀಲ್:   ನನ್ನ ಹೋರಾಟ ಮುಗಿಯಲು ಇನ್ನೂ ಬಹಳ ಸಮಯವಿದೆ. ನಿಜವಾದ ಅಪರಾಧಿಯನ್ನು ಕಾನೂನಿನ ಕಟಕಟೆಗೆ ಎಳೆದುತರುವ ತನಕ ನಾನು ಈ ಹೋರಾಟವನ್ನು ಮುಂದಕ್ಕೊಯ್ಯುವೆ. ನನಗೆ ನ್ಯಾಯಾಂಗದಲ್ಲಿ ನಂಬಿಕೆಯಿದೆ. ಈಗ ಪ್ರಕರಣವು ಸುಪ್ರೀಂಕೋರ್ಟನ್ನು ತಲುಪಿದೆ. ನನಗೆ ಎಲ್ಲರ ಬೆಂಬಲ ಬೇಕಾಗಿದೆ.

ಕೃಪೆ: ಔಟ್‌ಲುಕ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ