ಹರ್ಯಾಣ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಅಶೋಕ್ ತನ್ವಾರ್ ರಾಜೀನಾಮೆ

Update: 2019-10-05 18:05 GMT

ಹೊಸದಿಲ್ಲಿ, ಅ.5: ವಿಧಾನಸಭೆ ಚುನಾವಣೆಯ ಟಿಕೆಟ್ ಹಂಚಿಕೆ ಬಗ್ಗೆ ತೀವ್ರ ಅಸಮಾಧಾನದ ಹಿನ್ನೆಲೆಯಲ್ಲಿ ಹರ್ಯಾಣ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಅಶೋಕ್ ತನ್ವಾರ್ ಕಾಂಗ್ರೆಸ್ ಪಕ್ಷ ತೊರೆದಿದ್ದಾರೆ.

ಪಕ್ಷದಲ್ಲಿರುವ ಕೆಲವು ರಾಜಕೀಯ ವಿರೋಧಿಗಳು ಪಕ್ಷದ ಟಿಕೆಟನ್ನು ಮಾರಾಟಕ್ಕಿಟ್ಟಿದ್ದಾರೆ ಎಂದು ತನ್ವಾರ್ ದೂರಿದ್ದಾರೆ. ‘ಕಾಂಗ್ರೆಸ್ ಎದುರಿಸುತ್ತಿರುವ ತೀವ್ರ ಬಿಕ್ಕಟ್ಟಿನ ಪರಿಸ್ಥಿತಿಗೆ ರಾಜಕೀಯ ವಿರೋಧಿಗಳು ಕಾರಣರಲ್ಲ, ಆಂತರಿಕ ವಿರೋಧಾಭಾಸ ಕಾರಣ. ಪಕ್ಷಕ್ಕಾಗಿ ಬೆವರು ಮತ್ತು ರಕ್ತ ಸುರಿಸಿರುವ ತನ್ನನ್ನು ಇತ್ತೀಚಿನ ದಿನಗಳಲ್ಲಿ ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗುತ್ತಿದೆ. ತಾನು ನಡೆಸಿದ ಹೋರಾಟ ವೈಯಕ್ತಿಕ ಉದ್ದೇಶದ್ದಲ್ಲ, ದೇಶದ ಅತ್ಯಂತ ಹಿರಿಯ ಪಕ್ಷವನ್ನು ನಾಶಗೊಳಿಸಲು ಯತ್ನಿಸುತ್ತಿರುವ ಪಕ್ಷದ ಕೆಲವರ ವಿರುದ್ಧ ನಡೆಸಿದ ಹೋರಾಟವಾಗಿದೆ. ಬೆಂಬಲಿಗರೊಂದಿಗೆ ಸುದೀರ್ಘ ಸಮಾಲೋಚನೆಯ ಬಳಿಕ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದೇನೆ’ ಎಂದು ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಬರೆದಿರುವ ನಾಲ್ಕು ಪುಟಗಳ ರಾಜೀನಾಮೆ ಪತ್ರದಲ್ಲಿ ತನ್ವಾರ್ ಹೇಳಿದ್ದಾರೆ.

ಹರ್ಯಾನ ಕಾಂಗ್ರೆಸ್‌ನ ಅಧ್ಯಕ್ಷ ಹುದ್ದೆಯಿಂದ ಕಳೆದ ತಿಂಗಳು ತನ್ವಾರ್‌ರನ್ನು ಪದಚ್ಯುತಗೊಳಿಸಿ ಮಾಜಿ ಕೇಂದ್ರ ಸಚಿವೆ ಕುಮಾರಿ ಸೆಲ್ಜಾರನ್ನು ನೇಮಿಸಲಾಗಿತ್ತು. ಹರ್ಯಾನದ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ಮುಖಂಡ ಭೂಪಿಂದರ್ ಹೂಡಾ ನಡೆಸಿದ ಷಡ್ಯಂತ್ರ ತನ್ನ ಪದಚ್ಯುತಿಗೆ ಕಾರಣ ಎಂದು ತನ್ವಾರ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಹೂಡಾರನ್ನು ಚುನಾವಣಾ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಿರುವುದನ್ನು ವಿರೋಧಿಸಿ ತನ್ವಾರ್ ಚುನಾವಣಾ ಸಮಿತಿಗೆ ರಾಜೀನಾಮೆ ನೀಡಿದ್ದರು.

ಹರ್ಯಾನ ವಿಧಾನಸಭೆ ಚುನಾವಣೆ ಅಕ್ಟೋಬರ್ 21ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News