ದುಃಸ್ಥಿತಿಯಲ್ಲಿರುವ ಸಿಎಂ ತವರೂರು ಶಿವಮೊಗ್ಗ ಸಬ್ ರಿಜಿಸ್ಟಾರ್ ಕಚೇರಿ ಕಟ್ಟಡ!

Update: 2019-10-08 18:35 GMT

ಶಿವಮೊಗ್ಗ, ಅ. 8: ಕಚೇರಿಗಳ ನವೀಕರಣಕ್ಕೆಂದೇ, ಕೆಲ ಇಲಾಖೆಗಳು ಪ್ರತಿವರ್ಷ ಲಕ್ಷಾಂತರ ರೂ. ವ್ಯಯಿಸುತ್ತವೆ. ನೌಕರರು ಹಾಗೂ ಕಚೇರಿಗೆ ಆಗಮಿಸುವ ನಾಗರೀಕರಿಗೆ ಹಲವು ಸೌಲಭ್ಯ ಕಲ್ಪಿಸುತ್ತವೆ. ನಿಯಮಿತವಾಗಿ ಕಚೇರಿ ಗೋಡೆಗಳಿಗೆ ಸುಣ್ಣಬಣ್ಣ ಬಳಿದು ಸ್ವಚ್ಚತೆಗೆ ಒತ್ತು ನೀಡುತ್ತವೆ. ಕೆಲ ಸರ್ಕಾರಿ ಕಚೇರಿಗಳಂತೂ 'ಕಾರ್ಪೋರೇಟ್' ಆಫೀಸ್ ರೀತಿ ನಳನಳಿಸುತ್ತಿರುತ್ತವೆ.

ಆದರೆ, ಶಿವಮೊಗ್ಗದ ವಿನೋಬನಗರದಲ್ಲಿರುವ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ (ಸೂಡಾ) ದ ಕಟ್ಟಡದಲ್ಲಿರುವ ಉಪ ನೊಂದಣಿ (ಸಬ್ ರಿಜಿಸ್ಟಾರ್) ಕಚೇರಿಯು ಅವ್ಯವಸ್ಥೆಯ ಆಗರವಾಗಿದೆ. ದುಃಸ್ಥಿತಿಯಲ್ಲಿದೆ. ನಾಗರೀಕರು ಮಾತ್ರವಲ್ಲದೆ, ಕಚೇರಿ ನೌಕರರು ಕೂಡ ತೊಂದರೆ ಎದುರಿಸುವಂತಾಗಿದೆ.

ಸುಣ್ಣಬಣ್ಣವಿಲ್ಲ: ಗೋಡೆಗಳು ಸುಣ್ಣಬಣ್ಣ ಕಂಡು ಅದೆಷ್ಟೊ ವರ್ಷಗಳೇ ಕಳೆದಿವೆ. ಗೋಡೆಗಳ ಮೇಲಿನ ಬಣ್ಣ ಚಕ್ಕಳ ಏಳುತ್ತಿದೆ. ದಶಕದ ಹಿಂದೆ ಮಾಡಲಾಗಿದ್ದ ಅಲ್ಯುಮಿನಿಯಂ ಪಾರ್ಟಿಷಿಯನ್ ವ್ಯವಸ್ಥೆ ಕಿತ್ತು ಹೋಗಲಾರಂಭಿಸಿದೆ. ಮಳೆ ಬಂದರೆ ಕಟ್ಟಡದ ಒಳಗಡೆ ನೀರು ತೊಟ್ಟಿಕ್ಕಲಾರಂಭಿಸುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ಕಡತಗಳ ಸಂಗ್ರಹಕ್ಕೆ ಸೂಕ್ತ ವ್ಯವಸ್ಥೆಯೇ ಇಲ್ಲವಾಗಿದೆ. 

ಕೆಲ ಕಡತಗಳನ್ನು ಕಚೇರಿ ಪ್ರವೇಶ ದ್ವಾರದ ಬಳಿಯೇ ಶೇಖರಿಸಿಡಲಾಗಿದೆ. ಕೆಲ ವಿಭಾಗಗಳಲ್ಲಿ, ಸಿಬ್ಬಂದಿಗಳು ಕುಳಿತುಕೊಳ್ಳಲು ಸೂಕ್ತ ಜಾಗದ ವ್ಯವಸ್ಥೆಯಿಲ್ಲವಾಗಿದೆ. ಕಚೇರಿಯೊಳಗೆ ಕಾಲಿಟ್ಟರೆ, ಯಾವುದೋ ಪಾಳು ಕೊಂಪೆಗೆ ಕಾಲಿಟ್ಟ ಅನುಭವ ಉಂಟಾಗುತ್ತದೆ. 

ನೀರಿಲ್ಲ: ನೊಂದಣಿ ಮತ್ತಿತರ ಕೆಲಸ ಕಾರ್ಯಗಳಿಗೆಂದು, ಪ್ರತಿನಿತ್ಯ ಕಚೇರಿಗೆ ನೂರಾರು ನಾಗರೀಕರು ಆಗಮಿಸುತ್ತಾರೆ. ಸದಾ ಕಚೇರಿ ಜನಜಂಗುಳಿಯಿಂದ ತುಂಬಿ ತುಳುಕುತ್ತಿರುತ್ತದೆ. ಆದರೆ ಕಚೇರಿಗೆ ಆಗಮಿಸುವ ನಾಗರೀಕರಿಗೆ ಕುಡಿಯಲು ನೀರು ಕೂಡ ಸಿಗದಂತ ಸ್ಥಿತಿಯಿದೆ.

ಕೆಲವು ವೇಳೆ ತಮ್ಮ ಕೆಲಸಕಾರ್ಯ ಮಾಡಿಸಿಕೊಳ್ಳಲು, ನಾಗರಿಕರು ಗಂಟೆಗಟ್ಟಲೆ ಕಚೇರಿಯಲ್ಲಿ ಕಾದು ಕುಳಿತುಕೊಳ್ಳಬೇಕಾಗುತ್ತದೆ. ಆದರೆ ಕುರ್ಚಿಗಳ ಸಂಖ್ಯೆ ಕಡಿಮೆಯಿರುವುದರಿಂದ, ನಾಗರಿಕರು ಎಲ್ಲೆಂದರಲ್ಲಿ ಕುಳಿತುಕೊಳ್ಳುವಂತಾಗಿದೆ. ಜನಜಂಗುಳಿ ಹೆಚ್ಚಿದ್ದ ವೇಳೆಯಲ್ಲಂತೂ ಮಹಿಳೆ, ವಯೋವೃದ್ದರ ಪಾಡಂತೂ ಹೇಳತೀರದಾಗಿದೆ. 

'ಕಚೇರಿಯ ಶೌಚಾಲಯ ವ್ಯವಸ್ಥೆಯು ಅವ್ಯವಸ್ಥೆಯ ಆಗರವಾಗಿತ್ತು. ನೀರಿನ ಪೂರೈಕೆಯೂ ಇಲ್ಲವಾಗಿತ್ತು. ಸಾರ್ವಜನಿಕರಿರಲಿ, ಅಧಿಕಾರಿ-ಸಿಬ್ಬಂದಿಗಳು ಶೌಚಾಲಯಕ್ಕೆ ಕಚೇರಿಯಿಂದ ಹೊರ ಹೋಗಬೇಕಾದ ದುಃಸ್ಥಿತಿಯಿತ್ತು. ಎಷ್ಟೆ ಮನವಿ ಮಾಡಿದರೂ, ಪ್ರಾಧಿಕಾರ ಆಡಳಿತ ಶೌಚಾಲಯ ದುರಸ್ತಿಗೆ ಮುಂದಾಗಿರಲಿಲ್ಲ. ಇತ್ತೀಚೆಗಷ್ಟೆ ಪ್ರಾಧಿಕಾರವು ಶೌಚಾಲಯ ದುರಸ್ತಿಗೊಳಿಸಿ, ನೀರು ಪೂರೈಸಲು ಕ್ರಮಕೈಗೊಂಡಿದೆ' ಎಂದು ಪತ್ರ ಬರಹಗಾರರೋರ್ವರು ಹೇಳುತ್ತಾರೆ. 

ಒಟ್ಟಾರೆ ರಾಜ್ಯದ ಬೊಕ್ಕಸಕ್ಕೆ ಅತೀ ಹೆಚ್ಚು ಆದಾಯ ತಂದುಕೊಡುವ ಹೆಗ್ಗಳಿಕೆ ನೊಂದಣಿ ಇಲಾಖೆಯದ್ದಾಗಿದೆ. ಅದರಡಿ ಕಾರ್ಯನಿರ್ವಹಿಸುವ ಸಬ್ ರಿಜಿಸ್ಟಾರ್ ಕಚೇರಿಗಳ ವ್ಯವಸ್ಥೆ ಕೂಡ ಕಾಲಕ್ಕೆ ಅನುಗುಣವಾಗಿ ಬದಲಾಗಬೇಕಾಗಿದೆ. 

ಪ್ರಸ್ತುತ ಶಿವಮೊಗ್ಗ ಸಬ್ ರಿಜಿಸ್ಟಾರ್ ಕಚೇರಿಯ ಅವ್ಯವಸ್ಥೆ ಸರಿಪಡಿಸಲು ಇನ್ನಾದರೂ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳು ಗಮನಹರಿಸಬೇಕಾಗಿದೆ. ಅಗತ್ಯ ಮೂಲಸೌಕರ್ಯ ಕಲ್ಪಿಸಲು ಮುಂದಾಗಲಿದೆವೆಯೇ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ. 

Writer - ವರದಿ : ಬಿ. ರೇಣುಕೇಶ್

contributor

Editor - ವರದಿ : ಬಿ. ರೇಣುಕೇಶ್

contributor

Similar News