ಹೋರಾಟದ ಬದುಕು ನೂರರ ನೋಟ....
‘ಹೋರಾಟ ನಿರಂತರ, ಅದು ಮುಗಿಯುವಂತಹದಲ್ಲ’ ಎನ್ನುವುದನ್ನು ಬದುಕಿನಲ್ಲಿ ಅಕ್ಷರಶಃ ಪಾಲಿಸಿಕೊಂಡು ಬಂದವರು ಎಚ್. ಎಸ್. ದೊರೆಸ್ವಾಮಿ. ಸ್ವಾತಂತ್ರ ಚಳವಳಿಯ ಕಾಲದಲ್ಲಿ ಬ್ರಿಟಿಷರ ವಿರುದ್ಧ ಧ್ವನಿಯೆತ್ತಿದ್ದ ಇವರು, ಇಂದಿಗೂ ತಮ್ಮ ಹೋರಾಟವನ್ನು ನಿಲ್ಲಿಸಿಲ್ಲ. ಸ್ವಾತಂತ್ರೋತ್ತರದಲ್ಲಿ ಭ್ರಷ್ಟ ರಾಜಕಾರಣಿಗಳ ವಿರುದ್ಧ, ಬಡತನದ ವಿರುದ್ಧ, ಹಿಂಸೆಯ ವಿರುದ್ಧ, ಮತಾಂಧತೆಯ ವಿರುದ್ಧ ತಮ್ಮ ಹೋರಾಟಗಳನ್ನು ಮುಂದುವರಿಸಿಕೊಂಡು ಬಂದವರು. ನೂರರ ಸಮೃದ್ಧ ಬದುಕನ್ನು ಕಂಡ ದೊರೆಸ್ವಾಮಿ ಕನ್ನಡ ನಾಡಿನ ಹಿರಿಯಜ್ಜ. ಅವರ ಬರಹಗಳ ಸಂಗ್ರಹವೇ ‘ನೂರರ ನೋಟ’.
ಇಲ್ಲಿ ಒಟ್ಟು 40 ಲೇಖನಗಳಿವೆ. ಕೆಲವು ಪತ್ರರೂಪದಲ್ಲಿವೆ. ಕಾಂಗ್ರೆಸ್ ಕುರಿತಂತೆ ಗಾಂಧೀಜಿಯ ನಿಲುವು, ಸಾಮಾಜಿಕ ನ್ಯಾಯ ಸಾಕಾರವಾಗುವ ದಾರಿ, ವಿವಿಧತೆಯ ನಡುವೆ ಹೊಂದಾಣಿಕೆಯ ಧರ್ಮ, ಮೋದಿಯವರ ಸುಳ್ಳುಗಳು, ಭಾರತ್ ಸೇವಕ್ ಸಮಾಜ, ಯುವಜನರ ಶಕ್ತಿಯ ಮೂರು ನಿದರ್ಶನಗಳು ಮತ್ತು ಕಾಲ ಬೇಡುವ ತುರ್ತು, ಸ್ವಾತಂತ್ರ ನಂತರದಲ್ಲಿ ರಾಷ್ಟ್ರ ಸಾಗಿದ ದೂರ, ಸಂಸದರನ್ನು ಸರಿದಾರಿಗೆ ತರುವ ಒಂದು ಮಸೂದೆಯ ಸುತ್ತ, ಸರ್ವಾಧಿಕಾರಿಗಳಿಗೆ ಇತಿಹಾಸ ಕೊಟ್ಟ ಉತ್ತರ, ಆರೆಸ್ಸೆಸ್‌ನ ಕಪಟ ರಾಷ್ಟ್ರಭಕ್ತಿ.....ಹೀಗೆ ವರ್ತಮಾನವನ್ನು ಕಾಡುವ ರಾಜಕೀಯಗಳನ್ನು ಟೀಕಿಸುತ್ತಾ, ಅದಕ್ಕೆ ಪರ್ಯಾಯವನ್ನೂ ಅವರು ಸೂಚಿಸುತ್ತಾರೆ. ಬೆನ್ನುಡಿಯಲ್ಲಿ ಲೇಖಕ ವಿಕಾಸ್ ಆರ್. ವೌರ್ಯ ಹೀಗೆ ಬರೆಯುತ್ತಾರೆ ‘‘...ಈ ಸಂಕಲನದ ಉದ್ದಕ್ಕೂ ನಮಗೆ ಹಿರಿಯಜ್ಜ ಅವರ ಅನುಭವದ ಮತ್ತು ಓದಿನ ಆಳವನ್ನು ಪರಿಚಯಿಸುತ್ತಾರೆ. ಸ್ವತಂತ್ರ ಭಾರತದ ಆರಂಭದ ದಿನಗಳಿಗೆ ಇಂದಿನ ಭಾರತವನ್ನು ಹೋಲಿಸುತ್ತಾ ಬಡವ ಬಲ್ಲಿದರ ಪ್ರಗತಿಯಲ್ಲಿ ಎಳ್ಳಷ್ಟೂ ಬದಲಾಗಿಲ್ಲ ಎಂದು ಅಂಕಿಅಂಶಗಳ ಸಮೇತ ಚರ್ಚಿಸುತ್ತಾರೆ. ಹೀಗೆ ಚರ್ಚಿಸುವಾಗ ಮಾನವ ಅಭಿವೃದ್ಧಿ ಮತ್ತು ಬೌತಿಕ ಸಂಪನ್ಮೂಲಗಳ ಅಭಿವೃದ್ಧಿಯನ್ನು ಬಹಳ ಎಚ್ಚರದಿಂದಲೇ ಪ್ರತ್ಯೇಕಿಸುತ್ತಾರೆ. ನಮ್ಮ ಭಾರತ ಸಮಾಜದ ಸುಸ್ಥಿರತೆ ನಿಂತಿರುವುದು ಕೇವಲ ತಲಾದಾಯದ ಮೇಲಲ್ಲ, ನಮ್ಮ ಇಡೀ ವ್ಯವಸ್ಥೆಯ ಸಂಕೀರ್ಣತೆಗಳಾದ ಜಾತೀಯತೆ, ಕೋಮುವಾದ, ಅಸ್ಪಶ್ಯತೆಗಳನ್ನು ನಾವು ಎಷ್ಟು ಪ್ರಬುದ್ಧರಾಗಿ ನಿಭಾಯಿಸುತ್ತೇವೆ ಎನ್ನುವುದರ ಮೇಲೆ ಎಂಬುದು ಅವರ ಖಡಾಖಂಡಿತ ಗ್ರಹಿಕೆ....’’
ಗೌರಿ ಮೀಡಿಯಾ ಟ್ರಸ್ಟ್ ಈ ಕೃತಿಯನ್ನು ಹೊರತಂದಿದೆ. 134 ಪುಟಗಳ ಈ ಕೃತಿಯ ಮುಖಬೆಲೆ 110 ರೂಪಾಯಿ. ಆಸಕ್ತರು 98440 75016 ದೂರವಾಣಿಯನ್ನು ಸಂಪರ್ಕಿಸಬಹುದು.