ಕರ್ನಾಟಕದ ಬಹುಭಾಷಿಕತೆ ಮತ್ತು ಪ್ರಾದೇಶಿಕತೆಯನ್ನು ಚರ್ಚಿಸುವ ಕೃತಿ

ಕೃತಿ: ಬದುಕು ಕಟ್ಟಿದ ಬಗೆಗಳು ಲೇಖಕರು: ಬಿ.ಎ. ವಿವೇಕ ರೈ ಪ್ರಕಾಶನ: ಅಂಕಿತ ಪ್ರಕಾಶನ, ಬೆಂಗಳೂರು ಬೆಲೆ: ರೂ. 350

Update: 2024-05-04 10:14 GMT

ಕನ್ನಡದ ಹಿರಿಯ ವಿದ್ವಾಂಸ ಡಾ. ಬಿ.ಎ. ವಿವೇಕ ರೈಯವರ ಪ್ರಸ್ತುತ ಪುಸ್ತಕದಲ್ಲಿ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಅಗಲಿದ ಮಹನೀಯರ ಕುರಿತಾದ 39 ಆಪ್ತ ಲೇಖನಗಳಿವೆ. ಕರ್ನಾಟಕದ ಬಹುಭಾಷಿಕತೆ ಮತ್ತು ಪ್ರಾದೇಶಿಕತೆಯು ಇಲ್ಲಿನ ಬಹುತೇಕ ಲೇಖನಗಳಲ್ಲಿ ಚರ್ಚಿತವಾದ ಮುಖ್ಯ ವಿಚಾರವಾಗಿದೆ. ಪುಸ್ತಕದ ಮೊದಲ ಲೇಖನದಲ್ಲಿ ಅವರು ‘ಬಹುಭಾಷೆಗಳು ಬಹು ಸಂಸ್ಕೃತಿಗಳ ಸೂಕ್ಷ್ಮತೆಗಳನ್ನು ಗ್ರಹಿಸಿಕೊಂಡು ಕನ್ನಡದಲ್ಲಿ ಕೃತಿ ರಚಿಸಿದಾಗ ಮಾತ್ರ ‘ಬಹುತ್ವ’ ಎನ್ನುವ ಪರಿಕಲ್ಪನೆಗೆ ನಿಜವಾದ ಅರ್ಥ ಪ್ರಾಪ್ತಿಸುತ್ತದೆ. ಆದರೆ ನಮ್ಮಲ್ಲಿ ಸಾಮಾನ್ಯವಾಗಿ ನಡೆಯುವ ಚರ್ಚೆಗಳು ಮೇಲ್ಮೈ ರೂಪದಲ್ಲಿ ‘ಏಕಾಕೃತಿ ವರ್ಸಸ್ ಬಹುತ್ವ’ ಎನ್ನುವ ಸರಳ ಸಮೀಕರಣದಲ್ಲಿ ಸ್ಲೋಗನ್ ರೂಪದಲ್ಲಿ ಮುಕ್ತಾಯವಾಗುತ್ತದೆ’ ಎನ್ನುವ ಮಹತ್ವದ ಮಾತೊಂದನ್ನು ಹೇಳಿದ್ದಾರೆ. ಈ ಮಾತನ್ನು ಸಮರ್ಥಿಸಿಕೊಳ್ಳಲು ಅವರು ಕನ್ನಡದ ಮೂವರು ಹಿರಿಯ ಲೇಖಕರಾದ ಗುಲ್ವಾಡಿ ವೆಂಕಟರಾವ್, ಸಾರಾ ಅಬೂಬಕರ್ ಮತ್ತು ಮಂಜೇಶ್ವರ ಗೋವಿಂದ ಪೈಗಳ ಬಹುಭಾಷಾ ತಿಳಿವಳಿಕೆಗಳ ಸಾಧನೆಗಳನ್ನು ವಿಶ್ಲೇಷಿಸಿದ್ದಾರೆ. ಇದಕ್ಕೆ ಪೂರಕವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಭಾಷಾ ಬಾಂಧವ್ಯದ ಕುರಿತೂ ಲೇಖಕರು ಉಪಯುಕ್ತ ಮಾಹಿತಿಗಳನ್ನು ನೀಡಿದ್ದಾರೆ.

ಪ್ರಾದೇಶಿಕತೆಯ ಬಗ್ಗೆ ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಹಲವರು ಮಾತಾಡುತ್ತಿರುವುದು ಹೌದಾದರೂ ಬಹಳ ಜನರಿಗೆ ಅದರ ಅರ್ಥವ್ಯಾಪ್ತಿ ತಿಳಿದಿಲ್ಲ. ಡಾ. ರೈಯವರು ಈ ಪುಸ್ತಕದ ‘ಪ್ರಾದೇಶಿಕ ಸಂಸ್ಕೃತಿಯ ಪರಿಕಲ್ಪನೆಯಲ್ಲಿ ತುಳುನಾಡು’ ಎಂಬ ಲೇಖನದಲ್ಲಿ ಪ್ರಾದೇಶಿಕತೆಯ ಕೆಲವು ಗುಣಗಳನ್ನು ಗುರುತಿಸಲು ಪ್ರಯತ್ನಿಸಿದ್ದಾರೆ. ‘ಪ್ರದೇಶಗಳು ಯಾವುದೋ ಒಂದು ಮಾದರಿಗೆ ಅನುಗುಣವಾಗಿ ರಚಿತವಾಗಿರುವುದಿಲ್ಲ, ಅಲ್ಲಿ ಅನೇಕ ಮಾದರಿಗಳಿರುತ್ತವೆ’ ಎಂದು ಹೇಳುವ ಅವರು ಮುಂದೆ ಪರಿಸರ, ಸಾಮಾಜಿಕ ರಚನೆ, ಭೂಗೋಳದ ಪಾವಿತ್ರ್ಯ, ರಾಜಕೀಯ ಜಾಲಗಳು, ಆರ್ಥಿಕ ಸಂಸ್ಥೆ ಮತ್ತು ಪ್ರಾದೇಶಿಕ ಆಡಳಿತ ಬಗೆಗಳು’ ಎಂಬ ಆರು ಸಂಗತಿಗಳ ಮೂಲಕ ತುಳುನಾಡಿನ ಪ್ರಾದೇಶಿಕತೆಯನ್ನು ಗುರುತಿಸಲು ಪ್ರಯತ್ನಿಸಿದ್ದಾರೆ. ಈ ಲೇಖನದೊಂದಿಗೇ ಸೇರಿಕೊಳ್ಳಬೇಕಾದ ತುಳು ಭಾಷೆಯ ಅನನ್ಯತೆಯನ್ನು ಬೇರೊಂದು ಲೇಖನದಲ್ಲಿ ಚರ್ಚಿಸಲಾಗಿದೆ.

1946ರಲ್ಲಿ ಜನಿಸಿದ ಡಾ. ವಿವೇಕ ರೈ ಅವರಿಗೆ ಕನ್ನಡ ನವೋದಯ ಕಾಲದ ಅನೇಕ ಲೇಖಕರ ನೇರ ಪರಿಚಯವಿತ್ತು. ಮಂಗಳೂರು, ಹಂಪಿ ಮತ್ತು ಮೈಸೂರುಗಳಲ್ಲಿ ಕೆಲಸ ಮಾಡಿದ್ದ ಅವರಿಗೆ ಹೊಸ ತಲೆಮಾರಿನ ಬರಹಗಾರರೂ ಗೊತ್ತಿದ್ದರು. ವಿವಿಧ ಸಮಿತಿಗಳಲ್ಲಿ ದುಡಿದಿದ್ದರಿಂದ ಕರ್ನಾಟಕದ ಹಲವು ಪ್ರತಿಭಾವಂತರ ನೇರ ಸಂಪರ್ಕವಿತ್ತು. ಹೀಗೆ ಭೇಟಿಯಾದ ಸುಮಾರು 20 ಜನ ಮಹನೀಯರ ಕುರಿತು ಡಾ. ರೈ ಅವರು ಇಲ್ಲಿ ಮೋಹಕವಾಗಿ ಬರೆದಿದ್ದಾರೆ. ಡಾ. ಶಿವರಾಮ ಕಾರಂತ, ಕು.ಶಿ. ಹರಿದಾಸ ಭಟ್ಟ, ದೇರಾಜೆ ಸೀತಾರಾಮಯ್ಯ, ಹೊಸ್ತೋಟ ಮಂಜುನಾಥ ಭಾಗವತರು, ಎಸ್. ಅನಂತನಾರಾಯಣ, ಯು.ಪಿ. ಉಪಾಧ್ಯಾಯ, ಶೇಕ್ ಅಲಿ, ತಿಪ್ಪೇರುದ್ರಸ್ವಾಮಿ, ಲಕ್ಕಪ್ಪ ಗೌಡ, ಸಿದ್ದಲಿಂಗಯ್ಯ, ಅಮೃತ ಸೋಮೇಶ್ವರ ಮೊದಲಾದವರ ಬಗ್ಗೆ ಇಲ್ಲಿ ಅತ್ಯಂತ ಆತ್ಮೀಯವಾದ ಮಾತುಗಳಿವೆ. ಸ್ವಲ್ಪ ಭಾವುಕ ಶೈಲಿಯಲ್ಲಿ ಬರೆಯಲಾದ ಈ ಲೇಖನಗಳ ಅಗತ್ಯದ ಬಗ್ಗೆ ರೈಯವರು ಬೇರೊಂದೆಡೆ ಹೀಗೆ ಹೇಳಿಕೊಂಡಿದ್ದಾರೆ- ‘ನಮ್ಮ ಹಿರಿಯರ ಹೆದ್ದಾರಿಯ ಹೆಜ್ಜೆಗಳನ್ನು ಉಳಿಸಿಕೊಳ್ಳುವುದು ನಮಗೆ ಸವಲತ್ತುಗಳನ್ನು ಕೊಡದಿರಬಹುದು, ಹುಸಿ ಪ್ರಚಾರವನ್ನು ಕೊಡದಿರಬಹುದು, ಆದರೆ ನಮ್ಮ ಮನಸ್ಸಿಗೆ ಸಾಂತ್ವನವನ್ನೂ, ನೆಮ್ಮದಿಯನ್ನೂ ಖಂಡಿತಾ ಕೊಡಬಲ್ಲುದು’. ಇವತ್ತಿನ ಅನೇಕ ಲೇಖಕರಲ್ಲಿ ಈ ಭಾವ ಇಲ್ಲದಿರುವುದು ವಿಷಾದನೀಯ.

ವಿವೇಕ ರೈ ಅವರು ಕನ್ನಡ ಮತ್ತು ತುಳು ಭಾಷೆಯ ಅನೇಕ ಯೋಜನೆಗಳಿಗಾಗಿ ಅಂತರ್‌ರಾಷ್ಟ್ರೀಯ ಖ್ಯಾತಿಯ ಅನೇಕ ವಿಶ್ವವಿದ್ಯಾನಿಲಯಗಳೊಡನೆ ಕೆಲಸ ಮಾಡಿದ್ದಾರೆ. ಅದರ ಕೆಲವು ಅನುಭವಗಳೂ ಈ ಪುಸ್ತಕದಲ್ಲಿದೆ. ಪೋಲ್ಯಾಂಡ್‌ನಲ್ಲಿ ಪಂಪನ ಧ್ಯಾನ, ಕತ್ರಿನಾ ಬಿಂದರ್ ಜೊತೆ ಸೇರಿ ತೇಜಸ್ವಿಯವರ ಕರ್ವಾಲೋ ಕಾದಂಬರಿಯನ್ನು ಜರ್ಮನಿ ಭಾಷೆಗೆ ಅನುವಾದ ಮಾಡಿದ್ದು ಇತ್ಯಾದಿ ಲೇಖನಗಳು ಜಾಗತೀಕರಣದ ಇವತ್ತಿನ ಸಂದರ್ಭದಲ್ಲಿ ಕನ್ನಡ ಹಾಕಬೇಕಾದ ಹೆಜ್ಜೆಗಳ ಕುರಿತು ಸೂಚನೆ ನೀಡುತ್ತವೆ.

ಈ ಪುಸ್ತಕವನ್ನು ಓದಿನ ವಿಸ್ತಾರ ಮತ್ತು ಅನುಭವದ ಬಲದಿಂದ ಬರೆಯಲಾಗಿದೆ. ಇದೇ ಈ ಪುಸ್ತಕದ ವೈಶಿಷ್ಟ್ಯ.

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಪುರುಷೋತ್ತಮ ಬಿಳಿಮಲೆ

contributor

Similar News