ನಿರೀಕ್ಷೆ ಹುಟ್ಟಿಸುವ ‘ಮೈಲಿಗಲ್ಲು’

Update: 2024-07-05 08:54 GMT

2016ರಲ್ಲಿ ಪೊಲೀಸ್ ಇಲಾಖೆಗೆ ನೇಮಕಾತಿಗೊಂಡು ಇದೀಗ ಮಂಗಳೂರು ನಗರ ಪೊಲೀಸ್‌ನಲ್ಲಿ ಸಶಸ್ತ್ರ ಪಡೆಯಲ್ಲಿ

ಹೆಡ್ ಕಾನ್‌ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಮೋಹಿತ್ ಮೋನಪ್ಪ ಅವರು ತನ್ನೂರ ಸೊಗಡಿಗೆ ಬೆರಗಾಗಿ ಬರಹದ ಮೊರೆ ಹೋದದ್ದು ಆಶ್ಚರ್ಯವೇನಲ್ಲ, ವೃತ್ತಿ ಮತ್ತು ಪ್ರವೃತ್ತಿಯ ಹಿಂದೆ ಬೆಳೆದ ಪರಿಸರದ ಕೈವಾಡವೂ ಇರಬಹುದೆಂಬಂತೆ ವೃತ್ತಿಯಲ್ಲಿ ಆರಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಬರಹಗಾರರಾಗಿದ್ದಾರೆ.

ಹಿರೇಬೈಲ್‌ನಲ್ಲಿ 68ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಮೋನಪ್ಪ ಅವರ ‘ಮೈಲಿಗಲ್ಲು’ ಕವಿತೆಗಳ ಸಂಕಲನವು ಬಿಡುಗಡೆಗೊಂಡು ಸಾಹಿತ್ಯ ಪ್ರಿಯರ ಮೆಚ್ಚುಗೆ ಪಡೆದಿದೆ.

ಕಾಡಿದೊಳಗೆ ಕಾಡುವ ಊರು, ನನ್ನಮ್ಮ, ಅಪ್ಪ ನೀನೆಂದರೆ..., ನನ್ನ ಮನೆ, ಕನಸು ನನಸೇ?, ನಾವು ಪೊಲೀಸರು, ಯುದ್ಧ, ಮೂಡುಗೆರೆಯೊಳಗೆ ನನ್ನ ತೇಜಸ್ವಿ, ನೀನು ನಾನು, ಅಮಲಿನ ಪಯಣ, ಸೆಲ್ಫಿ, ಪರಿಸರದ ಕಾಳಜಿ, ನಮ್ಮೂರು ಹಿರೇಬೈಲು, ನನ್ನೂರ ನೆನಪು, ಜುಗಾರಿ ಕ್ರಾಸ್, ನನ್ನ ಕವಲು ದಾರಿ ಪಯಣ, ಹುಚ್ಚು ಪ್ರೀತಿ, ನನ್ನ ಕನಸಿವರು, ಒಂದು ಪ್ರೇಮಕಥೆ ಮುಂತಾದ ಕವನಗಳು ಸಂಕಲನದಲ್ಲಿ ಗಮನ ಸೆಳೆಯುವ ಪ್ರಮುಖ ಕವನಗಳಾಗಿವೆ.

ಇಲ್ಲಿ ಕವಿ ತನ್ನ ಕವನಗಳ ಮೂಲಕ ಸಮಾಜದಲ್ಲಿ ಎದುರಾಗುವ ಆಗು ಹೋಗುಗಳ ಸುತ್ತಮುತ್ತ ಬಿಡುವಿದ್ದಾಗ ಗಸ್ತು ಹೊರಟಂತಿದೆ. ಇನ್ನೊಂದೆಡೆ ನೊಂದವರ ಹಿತಕ್ಕಾಗಿ ಪಹರೆ ನಿಂತವನಂತೆ, ಸುತ್ತಮುತ್ತಲಿನ ಘಟನೆಗಳ ಮಹಜರು ನಡೆಸುವವನಂತೆ ಹಾಗೂ ಸಾಮಾಜಿಕ ಶಾಂತಿ ಕದಡಿಸುವ ದುಷ್ಟ ಮನಸ್ಸುಗಳ ಚಲನವಲನ ಗಮನಿಸಿ ಕವನದ ಮೂಲಕ ತಪಾಸಣೆ, ವಿಚಾರಣೆ ನಡೆಸುತ್ತಾ ಸಮಾಜದ ದುರಂತ ಸನ್ನಿವೇಶಗಳ ಮೇಲೆ ‘ಕಾರ್ಯಾಚರಣೆ’ ನಡೆಸುತ್ತಾ ಮನವೊಲಿಸಲು ಪ್ರಯತ್ನಿಸುವ ಏಕಾಂಗಿ ಆಶಾವಾದಿಯಂತೆ ಕಾಣುತ್ತಾರೆ.

ಕಾರ್ಮಿಕರು, ರೈತರು, ಶ್ರಮಿಕ ವರ್ಗ, ಬುದ್ಧ, ಬಾಹುಬಲಿ, ಬಸವ, ಕನಕ, ಅಂಬೇಡ್ಕರ್-ಸಂವಿಧಾನ, ನಾರಾಯಣ ಗುರು, ಜೆಗುವರಾ, ಹಕ್ಕುಪತ್ರ, ಸೂರಿಲ್ಲದ ಜನ, ನನ್ನವರು ಅವಸಾನದಲ್ಲಿ... ಪ್ರಜಾಪ್ರಭುತ್ವವೆಂದರೆ, ನನ್ನ ದೇಶ.. ಮುಂತಾದ ಕವಿತೆಗಳು ‘ದೈಹಿಕ’ವಾಗಿ ಸಡಿಲವಾಗಿ ಕಂಡರೂ ಓದಿಸಿಕೊಳ್ಳುತ್ತವೆ.

ಇವರ ಕವನಗಳ ಸಾಲುಗಳಲ್ಲಿ ಕವಿ ಡಾ. ಸಿದ್ಧಲಿಂಗಯ್ಯನವರ ‘ಹೊಲೆಮಾದಿಗರ ಹಾಡು’ಗಳಲ್ಲಿ ಬರುವ ಕವಿತೆಗಳ ರೊಚ್ಚಿನ ಕಿಡಿಗಳನ್ನು ಗುರುತಿಸಬಹುದು. ಉಳಿದಂತೆ ಬಹುತೇಕ ಕವನಗಳಲ್ಲಿ ನಮ್ಮ ಸುತ್ತಮುತ್ತ ಸಹಜವಾಗಿ ಕಾಡುವ ಘಟನೆಗಳು, ಸನ್ನಿವೇಶಗಳು, ಸಂದಿಗ್ಧತೆ, ವ್ಯವಸ್ಥೆಯ ಬಗೆಗಿನ ಪ್ರಶ್ನೆಗಳು ಕವನಗಳಾಗಿ ಸಿಡಿದೆದ್ದು ನಿಂತು ಸಹಜ ಸಿಟ್ಟಿನಲ್ಲಿ ಕಾರಣೀಭೂತರ ಕಾಲರ್ ಹಿಡಿದಂತೆ ಭಾಸವಾಗುತ್ತದೆ.

ಬದುಕಿನ ದಾರಿಯುದ್ದಕ್ಕೂ ಪ್ರಯಾಣಕ್ಕೆ ಸಾಕ್ಷಿಯಾಗಿ ಒಂದೊಂದು ಮೈಲಿಗಲ್ಲುಗಳ ಬುಡದಲ್ಲಿ ಕಾಡುವ ಎಷ್ಟೊಂದು ನೆನಪಿನ ಬೀಜಗಳನ್ನು ಬಿತ್ತಿ ಬರುತ್ತೇವಲ್ಲ! ಇದೇ ಸೆಳೆತದ ಪ್ರಭಾವದಿಂದಲೇ ಇರಬೇಕು ಇಲ್ಲಿ ಯುವ ಕವಿ ಮೋಹಿತ್ ಮೋನಪ್ಪರವರು ತನ್ನ ಚೊಚ್ಚಲ ಕವನ ಸಂಕಲನಕ್ಕೆ ‘ಮೈಲಿಗಲ್ಲು’ ಎಂದು ಹೆಸರಿಟ್ಟುಕೊಂಡಿರುವುದು. ಚುಮುಚುಮು ಚಳಿಯ ಮಲೆನಾಡಿನ ‘ಮೈಲಿಗಲ್ಲು’ ಕವನ ಸಂಕಲನವು ಈ ಯುವ ಬರಹಗಾರನ ಸಾಹಿತ್ಯಿಕ ಪಯಣಕ್ಕೆ ಮಹತ್ವದ ಮೈಲಿಗಲ್ಲಾಗಲಿ ಎಂಬುದೊಂದು ಆಶಯ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಅಚುಶ್ರೀ ಬಾಂಗೇರು

contributor

Similar News