ಕುಟುಂಬದಲ್ಲಿ ಸಂಬಂಧಗಳನ್ನು ಗಟ್ಟಿಗೊಳಿಸುವ ‘ಆಸರೆ’

Update: 2024-05-09 11:22 GMT

ಇತ್ತೀಚೆಗೆ ಬಿಡುಗಡೆಯಾದ ಲೇಖಕ ಗಣಪತಿ ಕೆ. ಹೆಗಡೆ ಬರೆದಿರುವ ‘ಆಸರೆ’ ಸಾಮಾಜಿಕ ಕಾದಂಬರಿಯ ಚಿತ್ರಣ ಭ್ರೂಣಹತ್ಯೆಯ ಕಾಲಕ್ಕೆ ಮುಂಚಿತವಾಗಿ ಮೂಡಿದ ಕಥಾಹಂದರ ಎಂದರೆ ತಪ್ಪಾಗಲಾರದು. ತಿಮ್ಮರಾಯನ ಕುಟುಂಬದಲ್ಲಿ ಮಗ ಸುಬ್ಬರಾಯ, ಹೆಣ್ಣು ಮಕ್ಕಳಾದ ಕವಿತಾ, ಮೀನಾಕ್ಷಿ, ಶಕುಂತಲಾ, ಸುಮತಿ ಹೀಗೆ ಆರು ಹೆಣ್ಣು ಮಕ್ಕಳು. ತಿಮ್ಮರಾಯ ಮತ್ತು ಆತನ ಹೆಂಡತಿ ಶ್ರೀಮತಿ ಒಬ್ಬರಿಗೊಬ್ಬರು ಆಸರೆಯಾಗಿ ಬದುಕು ಸಾಗಿಸಿದವರು. ಹಿಂದಿನ ದಿನಗಳಲ್ಲಿ ನಂಬಿಕೆ ಮೌಖಿಕವಾಗಿ ಹೆಚ್ಚು ಪ್ರಾಧಾನ್ಯವಾಗಿತ್ತು. ಇಂದು ಲಿಖಿತ ರೂಪದಲ್ಲಿದ್ದರೂ ಮೋಸವೇ ಗೆಲುವು ಸಾಧಿಸಿ ಬಿಡುತ್ತದೆ ಹೆಚ್ಚಿನ ಸಮಯದಲ್ಲಿ. ಅಂದಿನ ದಿನಮಾನಗಳಲ್ಲಿ ಬದುಕಿನಲ್ಲಿ ಧಾವಂತವಿರಲಿಲ್ಲ, ಸಾವಧಾನದ ಬೆನ್ನೇರಿ ಬದುಕು ಸಾಗುತ್ತಿತ್ತು.

ಅಂದು ಸ್ನೇಹ ಕಲುಷಿತವಾಗಿರಲಿಲ್ಲ, ಸಂಬಂಧಗಳು ಹಾಳಾಗಿರಲಿಲ್ಲ, ಸಹಕಾರ, ಸಹಾಯ, ಕರುಣೆ, ಪ್ರಾಮಾಣಿಕತೆಗಳು ಉಸಿರಾಡುತ್ತಿದ್ದವು. ಇವುಗಳಿಗೆ ಯಾವುದೇ ರೋಗಗಳು ಉಂಟಾಗಿರಲಿಲ್ಲ. ಹಾಗಾಗಿ ತಿಮ್ಮರಾಯ ಮತ್ತು ಶ್ರೀಮತಿಯ ಕಾಲದಲ್ಲಿ ಯಜಮಾನಿಕೆಯ ಮೂಲಕ ಎಲ್ಲವೂ ನಡೆಯುತ್ತಿತ್ತು. ಹಾಗೆಯೇ ಯಜಮಾನಿಕೆಯೂ ಕಲುಷಿತವಾಗಿರಲಿಲ್ಲ. ಬದುಕು ಆಧುನಿಕತೆ ಮತ್ತು ಪಾಶ್ಚಾತ್ಯ ಪ್ರಭಾವಗಳಿಗೆ ಒಳಗಾದ ಮೇಲೆ ಬದುಕಿನ ಬಂಡಿಯ ಹಳಿ ತಪ್ಪಿತು. ಇದಕ್ಕೆ ಕಾರಣ ಆಧುನಿಕತೆಯಾಗಲಿ, ಅಧಿಕಾರ, ಹಣವಾಗಲಿ ಅಲ್ಲ ಅದನ್ನು ಬಳಸಿಕೊಳ್ಳುವ, ರೂಢಿಸಿಕೊಳ್ಳುವ ಮೂಲಕ ಮನೋ ನಿಯಂತ್ರಣ ಮಾಡಿಕೊಳ್ಳುವಲ್ಲಿ ಮನುಷ್ಯನ ಅರಿವು ವಿಸ್ತಾರವಾಗದೆ ಇರುವುದು. ಶ್ರೀಮಂತಿಕೆಯ ಬೆನ್ನೇರಿ ಓಡುತ್ತಿರುವ ಮೂರನೇ ತಲೆಮಾರಿನ ಯುವ ಜನತೆ ಅಷ್ಟೇ ವೇಗದಲ್ಲಿ ಅನನುಕೂಲಗಳಿಗೆ, ಅನಾಹುತಗಳಿಗೆ ಸಿಲುಕಿ ಒದ್ದಾಡುವುದನ್ನು ನಾವು ಕಾಣಬಹುದಾಗಿದೆ.

ಸ್ತ್ರೀ ಸಮಾಜದೊಳಗೆ ಪುರುಷನ ದಬ್ಬಾಳಿಕೆಗೆ ಪೆಟ್ಟು ಬೀಳುವ ಕಾಲ ಇದಾಗಿದ್ದು, ಬದಲಾವಣೆಗಳು ಕಂಡು ಬರುತ್ತಿರುವುದನ್ನು ಕಾದಂಬರಿಯಲ್ಲಿ ಶಕುಂತಲೆ ಮತ್ತು ಯತೀಶ್ ಸಂಸಾರದಲ್ಲಿ ಲೇಖಕರು ಚಿತ್ರಿಸಿರುವುದನ್ನು ನೋಡಬಹುದು. ಯಾವುದೇ ಅಹಿತಕರ ಘಟನೆಗಳಿಗೆ, ಆಘಾತಗಳಿಗೆ ಹೆದರದೆ ಸೆಡ್ಡು ಹೊಡೆದು ತನ್ನ ದುಡಿಮೆಯ ಮೂಲಕ ಎದ್ದು ನಿಲ್ಲುವ ಕೆಲಸವನ್ನು ಇಲ್ಲಿ ಶಕುಂತಲೆ ಪಾತ್ರ ಚೆನ್ನಾಗಿ ನಿರ್ವಹಿಸಿದೆ. ಇದರಿಂದ ಬೇರೆ ಹೆಣ್ಣು ಮಕ್ಕಳಿಗೂ ಇದು ಒಂದು ಮಾರ್ಗದರ್ಶನವಾಗಿದೆ. ಇದ್ದಲ್ಲೇ ಬದುಕನ್ನು ಹಸನುಗೊಳಿಸಿಕೊಳ್ಳುವುದು ಹೋರಾಟದ ಬದುಕು ಎಂಬುದನ್ನು ನಾವು ಮನಗಾಣಬಹುದು. ತಾಳ್ಮೆ ಸಹನೆ ಮನುಷ್ಯನಿಗೆ ಮುಖ್ಯವಾಗಿ ಇರಬೇಕಾದದ್ದು. ತಿಮ್ಮರಾಯ, ಸುಬ್ಬರಾಯ, ಶಾಂತಪ್ಪ, ಶ್ರೀಮತಿ, ಶಾಂತಮ್ಮ ಇವರುಗಳಲ್ಲಿ ನಾವು ನೋಡಬಹುದು. ಜೀವನದಲ್ಲಿ ಉಂಟಾಗುವ ಕ್ಷೋಭೆಗಳನ್ನು ಎದುರಿಸಲು ತಾಳ್ಮೆಯ ಅವಶ್ಯಕತೆ ಇದೆ.

ಅವಸರದಿಂದ ದುಡುಕಿ ಮೀನಾಕ್ಷಿ ಮಾಡಿಕೊಂಡ ಅವಾಂತರದಿಂದ ಹಿರಿಯರಿಗೆ ಮತ್ತು ಮನೆಯವರಿಗೆ ನೋವಾಗಿದ್ದು ಮೀನಾಕ್ಷಿಗೆ ತಡವಾಗಿ ಅರಿವಿಗೆ ಬರುತ್ತದೆ. ಆಕರ್ಷಣೆಯ ಬದುಕಿಗೆ ಒಳಗಾಗಿ ಅಲ್ಲಿ ಪ್ರೀತಿ ನಿಲ್ಲದೆ ಹೋದದ್ದು ನಿಜಕ್ಕೂ ಬೇಸರವೇ, ಹಿರಿಯರ ಮಾತುಗಳಿಗೆ ಗೌರವ ಮನ್ನಣೆಯನ್ನು ನೀಡಬೇಕಾದದ್ದು ಕಿರಿಯರ ಮುಖ್ಯ ಕರ್ತವ್ಯ ಕೂಡ ಎಂಬುದನ್ನು ಕಾದಂಬರಿಯಲ್ಲಿ ಲೇಖಕರು ತಿಳಿಸಿಕೊಡುತ್ತಾರೆ. ಬಡತನದ ಬದುಕಿನಲ್ಲೂ ಸಂಸಾರವನ್ನು ನಿಭಾಯಿಸುತ್ತಾ ಹೋಗುತ್ತಿದ್ದ ಕವಿತಾ ಮತ್ತು ರಂಗನಾಥರ ಬದುಕಿನಲ್ಲಿ ಕವಿತಾಳ ಸಾವು ದೊಡ್ಡ ಆಘಾತವನ್ನೇ ತರುತ್ತದೆ. ಅದೇ ರೀತಿ ಸುಬ್ಬರಾಯ ಮತ್ತು ಭ್ರಮರಾಂಬಳ ಚಂದದ ಬದುಕಿನಲ್ಲಿ ಭ್ರಮರಾಂಬಳ ಸಾವು ಕೂಡ ಸುಬ್ಬರಾಯರಿಗೆ ಒಂಟಿತನವನ್ನು ತಂದುಕೊಡುತ್ತದೆ.

ಕೊನೆಗೆ ಸುಬ್ಬರಾಯನ ಮಗ ತ್ರಿಶೂಲ ಮತ್ತು ಆತನ ಹೆಂಡತಿ ಡಾಲಿ ಇಬ್ಬರು ಮಕ್ಕಳೊಂದಿಗೆ ಸ್ವದೇಶಕ್ಕೆ ಬಂದು ಸೇರುವುದರಿಂದ ಕಾದಂಬರಿ ಕೊನೆಗೊಳ್ಳುತ್ತದೆ. ಈ ತಲೆಮಾರಿನ ಜೀವನ ಶೈಲಿ, ನಡವಳಿಕೆ ಭಿನ್ನವಾಗಿರುವುದನ್ನು ನಾವು ನೋಡುತ್ತೇವೆ. ಈ ದಿಸೆಯಲ್ಲಿ ನೋಡಿದಾಗ ಯುವ ಪೀಳಿಗೆಯಲ್ಲಿನ ಬದಲಾವಣೆ ಸರ್ವೇಸಾಮಾನ್ಯವಾದರೂ ಒಬ್ಬರಿಗೊಬ್ಬರು ಆಸರೆಯಿಂದ ಬದುಕು ಕಳೆದುಕೊಂಡರೆ ಸಂಬಂಧಗಳಲ್ಲಿ ಬಿರುಕು ಉಂಟಾಗುತ್ತದೆ. ಗಂಡ ಹೆಂಡತಿಗೆ ಆಸರೆಯಾಗಿ, ಹೆಂಡತಿ ಗಂಡನಿಗೆ ಆಸರೆಯಾಗಿ, ತಂದೆ ತಾಯಿಗೆ ಮಕ್ಕಳು ಆಸರೆಯಾಗಿ ಒಬ್ಬರಿಗೊಬ್ಬರು ಮುಂದೆ ಸಾಗಿದಾಗಲೇ ಕುಟುಂಬಗಳಲ್ಲಿ ಸಂಬಂಧಗಳಲ್ಲಿ ನಂಬಿಕೆ ಗಟ್ಟಿಗೊಳ್ಳುತ್ತದೆ. ಪ್ರೀತಿ ವಿಶ್ವಾಸ ಹೆಚ್ಚಾಗುತ್ತದೆ. ಜೀವನದಲ್ಲಿ ನೆಮ್ಮದಿಯ ವಾತಾವರಣ ಉಂಟಾಗುತ್ತದೆ ಎಂಬುದನ್ನು ಕಾದಂಬರಿಯಲ್ಲಿ ಲೇಖಕರು ಬಹಳ ಚೆನ್ನಾಗಿ ತೋರಿಸಿಕೊಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - Thouheed

contributor

Byline - ಉದಂತ ಶಿವಕುಮಾರ್, ಬೆಂಗಳೂರು

contributor

Similar News