ಗ್ರಾಹಕರಿಗೆ ಶಾಕಿಂಗ್ ಸುದ್ದಿ: ಇನ್ನು ಮುಂದೆ ಜಿಯೋ ಕರೆ ಉಚಿತವಲ್ಲ!
ಹೊಸದಿಲ್ಲಿ, ಅ.9: ಇತರ ಫೋನ್ ನೆಟ್ ವರ್ಕ್ ಗಳಿಗೆ ಮಾಡುವ ಕರೆಗಳಿಗೆ ಇನ್ನು ಮುಂದೆ ನಿಮಿಷವೊಂದಕ್ಕೆ 6 ಪೈಸೆ ಪಾವತಿಸಬೇಕು ಎಂದು ದೇಶದ ಅತಿ ದೊಡ್ಡ ಟೆಲಿಕಾಂ ಆಪರೇಟರ್ ಆದ ರಿಲಯನ್ಸ್ ಜಿಯೋ ಹೇಳಿದೆ. ಗ್ರಾಹಕರು ಪಾವತಿಸುವ ಮೊತ್ತಕ್ಕೆ ಸಮನಾದ ಉಚಿತ ಡೇಟಾವನ್ನು ನೀಡಲಾಗುವುದು ಎಂದೂ ಅದು ಹೇಳಿದೆ.
ಇತರ ಮೊಬೈಲ್ ಆಪರೇಟರ್ ಗಳಿಗೆ ಕರೆ ಮಾಡುವುದಕ್ಕಾಗಿ ಜಿಯೋ ಗ್ರಾಹಕರು ನಾಳೆಯಿಂದ ಐಯುಸಿ ಟಾಪ್ ಅಪ್ ಪಡೆಯಬೇಕು. ಪ್ರಿ ಪೇಯ್ಡ್ ಗ್ರಾಹಕರೂ ಸಹ ಇತರ ನೆಟ್ ವರ್ಕ್ ಗಳಿಗೆ ಕರೆ ಮಾಡುವುದಾದರೆ ನಿಮಿಷವೊಂದಕ್ಕೆ 6 ಪೈಸೆ ಪಾವತಿಸಬೇಕು. ಪ್ರಿ ಪೇಯ್ಡ್ ಗ್ರಾಹಕರಿಗೂ ಈ ಮೊತ್ತಕ್ಕೆ ಸಮನಾದ ಉಚಿತ ಡೇಟಾ ನೀಡಲಾಗುವುದು ಎಂದು ಜಿಯೋ ತಿಳಿಸಿದೆ. ವಾಯ್ಸ್ ಕರೆಗಳಿಗಾಗಿ ಜಿಯೋ ಗ್ರಾಹಕರು ಹಣ ಪಾವತಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
ಜಿಯೋ ಗ್ರಾಹಕರು ಇತರ ಜಿಯೋ ಗ್ರಾಹಕರಿಗೆ ಕರೆ ಮಾಡಿದರೆ, ಲ್ಯಾಂಡ್ ಲೈನ್ ಫೋನ್ ಗಳಿಗೆ ಕರೆ ಮಾಡಿದರೆ, ವಾಟ್ಸ್ಯಾಪ್ ಕರೆ ಮಾಡಿದರೆ, ಫೇಸ್ ಟೈಮ್ ಮತ್ತು ಇತರ ಪ್ಲ್ಯಾಟ್ ಫಾರ್ಮ್ ಗಳ ಮೂಲಕ ಕರೆ ಮಾಡಿದರೆ ಹಣ ಪಾವತಿಸಬೇಕಿಲ್ಲ. ಭಾರ್ತಿ ಏರ್ ಟೆಲ್ ಮತ್ತು ವೊಡಾಫೋನ್ ಐಡಿಯಾಗೆ ಐಯುಸಿ ಚಾರ್ಜ್ ಆಗಿ ಸಂಸ್ಥೆಯು 13,500 ಕೋಟಿ ರೂ,ಗಳನ್ನು ಪಾವತಿಸಿದೆ ಎಂದು ಹೇಳುವ ಮೂಲಕ ಜಿಯೋ ತನ್ನ ನಡೆಯನ್ನು ಸಮರ್ಥಿಸಿದೆ.