ಮಾನಸಿಕ ಆರೋಗ್ಯ ಮತ್ತು ಆತ್ಮಹತ್ಯೆ ತಡೆಯುವಿಕೆ

Update: 2019-10-09 18:31 GMT

ಪ್ರತಿ ವರ್ಷ ಅಕ್ಟೋಬರ್ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನ ಎಂದು ವಿಶ್ವದಾದ್ಯಂತ ಆಚರಿಸಿ ಜನರಲ್ಲಿ ಮಾನಸಿಕ ಆರೋಗ್ಯದ ಅನಿವಾರ್ಯತೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ವಿಶ್ವ ಮಾನಸಿಕ ಸಂಸ್ಥೆ ಮಾಡುತ್ತದೆ. 2018 ರಲ್ಲಿ ‘ಯುವ ಜನರು ಮತ್ತು ಬದಲಾಗುತ್ತಿರುವ ಜಗತ್ತಿನಲ್ಲಿ ಮಾನಸಿಕ ಆರೋಗ್ಯ’ ಎಂಬ ತಿರುಳನ್ನು ಇಟ್ಟುಕೊಂಡು ಆಚರಣೆ ಮಾಡಲಾಗಿದೆ. 2019ರಲ್ಲಿ ‘ಮಾನಸಿಕ ಆರೋಗ್ಯ ಮತ್ತು ಆತ್ಮಹತ್ಯೆ ತಡೆಯುವಿಕೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಣೆ ಮಾಡಲಾಗುತ್ತಿದೆ. ಈ ಆಚರಣೆಯನ್ನು ಮೊದಲ ಬಾರಿಗೆ 1992 ಅಕ್ಟೋಬರ್ 10ರಂದು ಆರಂಭಿಸಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನ ಶೈಲಿ, ಕೆಲಸದ ವಾತಾವರಣ, ವಿಪರೀತ ಸ್ಪರ್ಧಾತ್ಮಕವಾದ ಜಗತ್ತು ಮತ್ತು ವೇಗದ ಧಾವಂತದ ಬದುಕಿನಿಂದಾಗಿ ಯುವ ಜನರು ಬಹಳ ಬೇಗ ಉದ್ವೇಗಕ್ಕೆ, ಖಿನ್ನತೆಗೆ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಉಸಿರುಗಟ್ಟಿಸುವ ಪೈಪೋಟಿ, ಸದಾ ಕಾಳೆಲೆಯುವ ಪ್ರವೃತ್ತಿಯ ಜನರ ಧೋರಣೆ ಮತ್ತು ನಿಗದಿತ ಫಲಿತಾಂಶ ನೀಡಬೇಕಾದ ಒತ್ತಡಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೆ ಯುವ ಜನರು ದಾರಿ ತಪ್ಪುವ ಸಾಧ್ಯತೆ ಹೆಚ್ಚಾಗುತ್ತಿದೆ. ಧೂಮಪಾನ, ಮದ್ಯಪಾನ ಮಾಧಕ ವಸ್ತು ಸೇವನೆ ಮುಂತಾದವುಗಳಿಗೆ ದಾಸರಾಗಿ ಅದೇ ವಿಷವರ್ತುಲದಲ್ಲಿ ಸಿಕ್ಕಿಕೊಂಡು ಹೊರಬರಲಾರದೆ ಶಾಶ್ವತವಾಗಿ ಮನೋರೋಗಿಗಳಾಗಿ ಬದಲಾಗುತ್ತಿರುವುದು ಬಹಳ ವಿಷಾದನೀಯ ಸಂಗತಿ.

ಮಾನಸಿಕ ಒತ್ತಡದ ಲಕ್ಷಣಗಳು

ಮಾನಸಿಕ ಒತ್ತಡ ಎನ್ನುವುದು ಬಹಳ ಅಪಾಯಕಾರಿ ಮನೋಸ್ಥಿತಿಯಾಗಿದ್ದು, ದೇಹದಲ್ಲಿ ರಸದೂತಗಳ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ರಸದೂತಗಳ ಏರಿಳಿತದಿಂದಾಗಿ ದೇಹದ ಹೆಚ್ಚಿನ ಅಂಗಾಂಗಗಳ ಮೇಲೆ ಋಣಾತ್ಮಕ ಪರಿಣಾಮ ಉಂಟಾಗುತ್ತದೆ. ಇದನ್ನು ಅಷ್ಟು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಹೆಚ್ಚಿನವರಿಗೆ ತಾವು ಒತ್ತಡದಲ್ಲಿ ಇದ್ದೇವೆ ಎಂಬುದರ ಬಗ್ಗೆ ಅರಿವೂ ಇರುವುದಿಲ್ಲ.

ಒತ್ತಡದಿಂದ ಉಂಟಾಗುವ ಅಡ್ಡ ಪರಿಣಾಮಗಳನ್ನು ಈ ಕೆಳಗಿನಂತೆ ಗುರುತಿಸಲಾಗಿದೆ.

♦ ಕೂದಲು ಉದುರುವಿಕೆ: ದಿನವೊಂದಕ್ಕೆ ಏನಿಲ್ಲಾವೆಂದರೂ ನೂರಕ್ಕಿಂತಲೂ ಹೆಚ್ಚು ಕೂದಲು ಉದುರುತ್ತದೆ ಮತ್ತು ಯಾಕಾಗಿ ಕೂದಲು ಉದುರುತ್ತದೆ ಎಂಬುದರ ಅರಿವು ವ್ಯಕ್ತಿಗೆ ಇರುವುದಿಲ್ಲ. ಅತಿಯಾದ ಒತ್ತಡದಿಂದ ದೇಹದ ದೈನಂದಿನ ಕಾರ್ಯಗಳಿಗೆ ಅಡ್ಡಿಯಾಗಿ ಕೂದಲು ಬೆಳೆಯುವಿಕೆಗೂ ಋಣಾತ್ಮಕ ಪರಿಣಾಮ ಬೀರುತ್ತದೆ.

♦ದೇಹದ ತೂಕದಲ್ಲಿ ವ್ಯತ್ಯಾಸವಾಗುವುದು: ಅತಿಯಾದ ಮಾನಸಿಕ ಒತ್ತಡದಿಂದಾಗಿ ಹಸಿವಿಲ್ಲದಿರುವುದು ಕಂಡುಬರುತ್ತದೆ. ಇದರಿಂದಾಗಿ ದೇಹದ ತೂಕ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ದೇಹದ ಜೈವಿಕ ಕ್ರಿಯೆಗಳು ನಿಧಾನವಾಗಿ ದೇಹದ ತೂಕ ಹೆಚ್ಚಾಗುವ ಸಾಧ್ಯತೆಯೂ ಇರುತ್ತದೆ. ಒಟ್ಟಿನಲ್ಲಿ ದೇಹದ ತೂಕ ವಿಪರೀತವಾಗಿ ವ್ಯತ್ಯಾಸವಾದಲ್ಲಿ ದೇಹದಲ್ಲಿ ಏನೋ ತೊಂದರೆ ಇದೆ ಎಂದರ್ಥ.

♦ ಮಾನಸಿಕ ನೆಮ್ಮದಿ ಇಲ್ಲದಿರುವುದು: ದೇಹದಲ್ಲಿ ಒತ್ತಡ ಜಾಸ್ತಿಯಾದಾಗ ರಸದೂತಗಳ ಸ್ರವಿಸುವಿಕೆ ಜಾಸ್ತಿಯಾಗಿ ಮನಸ್ಸು ಬಹಳ ಚಂಚಲವಾಗುತ್ತದೆ. ಎದೆಬಡಿತ ಜೋರಾಗುತ್ತದೆ. ಏನೋ ಒಂದು ರೀತಿಯ ಮಾನಸಿಕ ತುಮುಲ ಮತ್ತು ಅಶಾಂತಿ ಉಂಟಾಗುತ್ತದೆ. ನಿಂತಲ್ಲಿ ನಿಲ್ಲಲಾಗದೆ, ಕುಳಿತಲ್ಲಿ ಕುಳಿತುಕೊಳ್ಳಲಾಗದೆ ಸದಾ ಚಡಪಡಿಕೆಯಿಂದ ವ್ಯಕ್ತಿ ಓಡಾಡುತ್ತಿರುತ್ತಾನೆ.

♦ ಲೈಂಗಿಕ ನಿರಾಸಕ್ತಿ: ಅತಿಯಾದ ಒತ್ತಡದಿಂದಾಗಿ ದೇಹದಲ್ಲಿನ ಲೈಂಗಿಕಾಸಕ್ತಿ ಕುದುರಿಸುವ ರಸದೂತಗಳ ಸ್ರವಿಸುವಿಕೆ ಕಡಿಮೆಯಾಗಿ ಲೈಂಗಿಕಾಸಕ್ತಿ ಕಡಿಮೆಯಾಗುತ್ತದೆ. ಅದೇ ರೀತಿ ನಿಶ್ಯಕ್ತಿ ಮತ್ತು ಸಂತಾನ ಹೀನತೆಗೂ ಕಾರಣವಾಗುತ್ತದೆ.

♦ ನಿದ್ರಾಹೀನತೆ: ಅತಿಯಾದ ಒತ್ತಡದಿಂದ ಮೆದುಳಿನ ಜೀವಕೋಶಗಳ ಮೇಲೆ ಬಹಳಷ್ಟು ಋಣಾತ್ಮಕ ಪರಿಣಾಮ ಉಂಟಾಗುತ್ತದೆ. ದಿನವೊಂದಕ್ಕೆ ಆರೋಗ್ಯವಂತ ವ್ಯಕ್ತಿಗೆ 6 ರಿಂದ 8 ಗಂಟೆಗಳ ನಿದ್ರೆ ಅವಶ್ಯವಿರುತ್ತದೆ. ಆದರೆ ಮಾನಸಿಕ ಒತ್ತಡ ಇರುವವರಿಗೆ ನಿದ್ರೆ ಬರುವುದಿಲ್ಲ. ನಿದ್ರೆ ಬಂದರೂ ಗಂಟೆ ಗಂಟೆಗೆ ನಿದ್ರೆಯಿಂದ ಗಾಬರಿಗೊಂಡು ಎಚ್ಚರವಾಗುತ್ತದೆ. ಅದೇ ರೀತಿ ನಿದ್ದೆಯ ಸಮಯದ ಪರಿವೆಯೂ ಇರುವುದಿಲ್ಲ.

♦ ಮೂಡ್ ಬದಲಾವಣೆ: ಮಾನಸಿಕ ಒತ್ತಡದಿಂದ ಬಳಲುತ್ತಿರುವವರು ಬಹಳ ಕೋಪಿಷ್ಟರಾಗಿರುತ್ತಾರೆ. ಕಾರಣವಿಲ್ಲದೆ ಸಿಡುಕುವುದು, ಅಳುವುದು ಅಥವಾ ರೇಗಾಡುತ್ತಿರುತ್ತಾರೆ. ಕೆಲಸದಲ್ಲಿ ಯಾವುದೇ ರೀತಿಯ ಏಕಾಗ್ರತೆ ಇರುವುದಿಲ್ಲ. ಸದಾ ಮಾನಸಿಕ ಉದ್ವೇಗ, ದುಗುಡತೆ ಮತ್ತು ಮಾನಸಿಕ ಕಿರಿಕಿರಿಯಿಂದ ಬಳಲುತ್ತಿರುತ್ತಾರೆ. ಯಾರ ಬಳಿಯೂ ನೇರವಾಗಿ ವ್ಯವಹರಿಸುವ ವ್ಯವಧಾನ ಅವರಿಗೆ ಇರುವುದಿಲ್ಲ.

♦ ದೇಹದಲ್ಲಿ ನೋವು: ಅತಿಯಾದ ಒತ್ತಡವಿರುವವರಿಗೆ ದೇಹದ ಎಲ್ಲಾದರೊಂದು ಜಾಗದಲ್ಲಿ ನೋವು ಕಂಡುಬರುತ್ತದೆ. ಸ್ನಾಯುಗಳಲ್ಲಿ ಸೆಳೆತ, ಹೊಟ್ಟೆನೋವು, ತಲೆ ನೋವು, ಎದೆ ನೋವು. ಗ್ಯಾಸ್ಟ್ರಿಕ್ ಸಮಸ್ಯೆ ಹೀಗೆ ಏನಾದರೊಂದು ತೊಂದರೆ ಇದ್ದೇ ಇರುತ್ತದೆ. ದೇಹದಲ್ಲಿನ ರಸದೂತಗಳ ಅತಿಯಾದ ಏರಿಳಿತದಿಂದಾಗಿ ದೇಹದ ಯಾವುದಾದರೊಂದು ಅಂಗಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ನೋವಿನಲ್ಲಿ ಪರ್ಯಾವಸಾನವಾಗುತ್ತದೆ. * ತಾಳ್ಮೆ ಕಳೆದುಕೊಳ್ಳುವುದು: ದೈನಂದಿನ ವ್ಯವಹಾರದಲ್ಲಿ ಚಟುವಟಿಕೆಗಳ ಬಗ್ಗೆ ವಿಪರೀತವಾದ ನಿರಾಸಕ್ತಿ ಉಂಟಾಗುತ್ತದೆ. ಅತೀ ಹತ್ತಿರದ ಸಂಬಂಧಿಕರಲ್ಲಿ, ಆಪ್ತರಲ್ಲಿ ಕೂಡಾ ರೇಗಾಡುತ್ತಾರೆ, ಏನಾದರೊಂದು ಸಣ್ಣ ವಿಷಯಗಳಿಗೂ ಸ್ನೇಹಿತರಲ್ಲಿ ಜಗಳವಾಡುತ್ತಾರೆ, ರೇಗಾಡುತ್ತಾರೆ. ಕೆಲವೊಮ್ಮೆ ಯಾವುದೇ ನಿರ್ದಿಷ್ಟ ಕಾರಣವಿಲ್ಲದೆಯೂ ರೇಗಾಡುತ್ತಾರೆ. ಸದಾ ಸೂಜಿಗಲ್ಲಿನ ಮೇಲೆ ಕುಳಿತಿರುವವರ ರೀತಿಯಲ್ಲಿ ಚಡಪಡಿಕೆ ಇವರಲ್ಲಿ ಕಂಡುಬರುತ್ತದೆ.

♦ಸದಾಕಾಲ ಕೆಲಸದ ಬಗ್ಗೆಯೇ ಚಿಂತೆ:   ದಿನದ ಎಲ್ಲಾ ಗಂಟೆಯೂ ಇವರು ಕೆಲಸದ ಬಗ್ಗೆಯೇ ಚಿಂತಿಸುತ್ತಿರುತ್ತಾರೆ. ಕುಳಿತಲ್ಲಿ ನಿಂತಲ್ಲಿ, ಮಲಗಿದಾಗಲೂ ಇವರಿಗೆ ಕೆಲಸದ್ದೇ ಚಿಂತೆ. ಕುಟುಂಬದವರ ಜೊತೆ ಪ್ರವಾಸಕ್ಕೆ ಹೋದಾಗಲೂ ಆಫೀಸಿನ ವ್ಯವಹಾರದ ಬಗ್ಗೆ ಚಿಂತಿಸಿರುತ್ತಾರೆ. ಆಫೀಸು, ಹಣದ ವ್ಯವಹಾರ, ಆಫೀಸಿನ ಸಹದ್ಯೋಗಿ ಹಾಗೂ ಅವರ ಆಲೋಚನೆಗಳೆಲ್ಲವೂ ಆಫೀಸಿನ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತದೆ.

♦ ಪದೇ ಪದೇ ದೇಹಕ್ಕೆ ಸೋಂಕು ತಗಲುವುದು:       

ವಿಪರೀತ ಮಾನಸಿಕ ಒತ್ತಡವಿರುವಾಗ ರಸದೂತಗಳ ವೈಪರೀತ್ಯದಿಂದಾಗಿ ದೇಹದ ರಕ್ಷಣಾ ಪ್ರಕಿಯೆಯ ಮೇಲೆ ಋಣಾತ್ಮಕ ಪರಿಣಾಮ ಉಂಟಾಗುತ್ತದೆ. ವ್ಯಕ್ತಿಯ ಬಿಳಿ ರಕ್ತಕಣಗಳು ಮತ್ತು ಇತರ ರಕ್ಷಣಾ ವ್ಯವಸ್ಥೆ ಕುಸಿದು ಹೋಗಿ ರೋಗಿ ಬೇಗನೆ ನೆಗಡಿ, ಕೆಮ್ಮು ಅಥವಾ ಇನ್ನಾವುದೋ ಸೋಂಕು ರೋಗಗಳಿಗೆ ಪದೇ ಪದೇ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ರಕ್ತ ಹೀನತೆ ಉಂಟಾಗುವ ಸಾಧ್ಯತೆಯೂ ಇದೆ. ದೇಹದ ಜೀರ್ಣಾಂಗ ವ್ಯವಸ್ಥೆ ಹದಗೆಟ್ಟು ಪದೇ ಪದೇ ಮಲಬದ್ಧತೆ ಮತ್ತು ಭೇದಿ ಉಂಟಾಗುವ ಸಾಧ್ಯತೆಯೂ ಇರುತ್ತದೆ. ತಲೆ ಸುತ್ತುವುದು, ವಾಕರಿಕೆ, ವಾಂತಿ ಮತ್ತು ಹಸಿವಿಲ್ಲದಿರುವುದು ಇವೆಲ್ಲವೂ ಒಟ್ಟು ಸೇರಿ ದೇಹದ ರಕ್ಷಣಾ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗುತ್ತದೆ.ಯಾರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ?

1. ಮನೋರೋಗ ಹೊಂದಿದವರು ಉದಾಹರಣೆಗೆ ಖಿನ್ನತೆ, ಸ್ಕೀರೆಫ್ರೀನಿಯಾ ಇತ್ಯಾದಿ ಮಾನಸಿಕ ರೋಗದಿಂದ ಬಳಲುತ್ತಿರುವವರು.

2. ಮದ್ಯಪಾನ ಮತ್ತು ಮಾದಕ ದ್ರವ್ಯ ವ್ಯಸನಿಗಳು ಆತ್ಮಹತ್ಯೆ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.

3. ಈ ಹಿಂದೆ ಆತ್ಮಹತ್ಯೆಗೆ ಪ್ರಯತ್ನಿಸಿದವರು, ಮಗದೊಮ್ಮೆ ಆತ್ಮಹತ್ಯೆಗೆ ಪ್ರಯತ್ನ ಮಾಡುವ ಸಾಧ್ಯತೆ ಹೆಚ್ಚು.

4. ಜೀವನದಲ್ಲಿ ಅತೀ ಹೆಚ್ಚು ಒತ್ತಡದ ಸನ್ನಿವೇಶಗಳನ್ನು ಎದುರಿಸುತ್ತಿರುವವರು. ಉದಾಹರಣೆಗೆ ವ್ಯಾಪಾರದಲ್ಲಿ ನಷ್ಟ, ಉದ್ಯೋಗ ಸಿಗದಿರುವುದು, ಆಟದಲ್ಲಿ ಸೋಲು, ವಿದ್ಯಾಭ್ಯಾಸ ಹಿನ್ನೆಲೆ, ಮಾನಹಾನಿಯಾದ ಸಂದರ್ಭಗಳು ಇತ್ಯಾದಿ ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತದೆ.

5. ಅತೀ ಹತ್ತಿರದ ಸಂಬಂಧಿಗಳ ಸಾವು, ಪ್ರೇಮದಲ್ಲಿ ವೈಫಲ್ಯ ಮುಂತಾದವುಗಳಿಂದ ಭಾವನಾತ್ಮಕವಾಗಿ ವೇದನೆ ಹೆಚ್ಚಾದಾಗ ಆತ್ಮಹತ್ಯೆಯಲ್ಲಿ ಪರ್ಯಾವಸಾನವಾಗುತ್ತದೆ.

6. ಕ್ಯಾನ್ಸರ್ ಮುಂತಾದ ಗುಣಪಡಿಲಾಗದ ಮಾರಣಾಂತಿಕ ಕಾಯಿಲೆ, ಏಡ್ಸ್ ಕಾಯಿಲೆ ಅಥವಾ ತಡೆದುಕೊಳ್ಳಲಾರದ ನೋವುಗಳು ಕೂಡ ಆತ್ಮಹತ್ಯೆಗೆ ಕಾರಣವಾಗುತ್ತದೆ.

7. ಕೆಲಸದ ವಾತಾವರಣದಲ್ಲಿನ ವಿಪರೀತವಾದ ಒತ್ತಡ ಕೂಡ ಆತ್ಮಹತ್ಯೆಗೆ ಕಾರಣವಾಗುತ್ತದೆ. ಉದಾಹರಣೆಗೆ ಟೆಕ್ಕಿಗಳು (ಕಂಪ್ಯೂಟರ್ ಇಂಜಿನಿಯರ್‌ಗಳು) ಬಹಳಷ್ಟು ಕೆಲಸದ ಒತ್ತಡ ಮತ್ತು ಖಿನ್ನತೆಯಿಂದ ಪಾರಾಗಲು ಆತ್ಮಹತ್ಯೆಯ ದಾರಿ ಕಂಡುಕೊಳ್ಳುತ್ತಾರೆ.

8. ಕ್ಷುಲ್ಲಕ ಕಾರಣಗಳು ಮತ್ತು ಮಕ್ಕಳಾಟಿಕೆ ಕೂಡ ಆತ್ಮಹತ್ಯೆಯಲ್ಲಿ ಅಂತ್ಯ ಕಾಣಬಹುದು. ಟಿವಿ ನೋಡಲು ಜಗಳ, ರಿಮೋಟ್ ಕೊಡಲಿಲ್ಲ ಎಂಬ ಜಗಳ ಇತ್ಯಾದಿ.

ನಾವೇನು ಮಾಡಬೇಕು?

1. ಋಣಾತ್ಮಕ ಚಿಂತನೆ ಇರುವ ವ್ಯಕ್ತಿಗಳ ಬಗ್ಗೆ ಅಸಡ್ಡೆ ಬೇಡ. ಅವರ ಬಗ್ಗೆ ಕನಿಕರ ಸಹಾನೂಭೂತಿ ತೋರಿಸಬೇಕು. ಒಂದು ಒಳ್ಳೆಯ ಮಾತು ಅಥವಾ ಸಾಂತ್ವನದಿಂದ ಒಂದು ಜೀವ ಉಳಿಯಲೂ ಬಹುದು.

2. ನಿಮ್ಮ ಮನೆಯಲ್ಲಿ ಈ ರೀತಿಯ ಖಿನ್ನತೆ ಇರುವ ವ್ಯಕ್ತಿ ಇದ್ದಲ್ಲಿ, ಯಾವುದೇ ಕಾರಣಕ್ಕೂ ಒಬ್ಬಂಟಿಯಾಗಿ ಇರಲು ಬಿಡಬೇಡಿ. ಯಾವತ್ತೂ ಅಂತಹ ವ್ಯಕ್ತಿಗಳ ಮೇಲೆ ಒಂದು ಕಣ್ಣು ಇಡಬೇಕು. ಅಂತಹ ವ್ಯಕ್ತಿಗಳಿಗೆ ಸುಲಭವಾಗಿ ಹರಿತ ಆಯುಧ, ಹಗ್ಗ ಅಥವಾ ವಿಷಕಾರಿ ಔಷಧಿ ಸುಲಭವಾಗಿ ಸಿಗದಂತೆ ನೋಡಿಕೊಳ್ಳಿ.

3. ಯಾವ ಕಾರಣಕ್ಕಾಗಿ ವ್ಯಕ್ತಿ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದು ಅದಕ್ಕೆ ಪೂರಕವಾದ ಚಿಕಿತ್ಸೆ ನೀಡಬೇಕು. ಮನೋವೈದ್ಯರ ಬಳಿ ತೋರಿಸಿ ಆಪ್ತ ಸಮಾಲೋಚನೆ ಮಾಡಿಸಿಕೊಳ್ಳಿ. ಸಾಕಷ್ಟು ಪ್ರೀತಿ, ಆದರ, ಧೈರ್ಯ ಮತ್ತು ಸಾಂತ್ವನದ ನುಡಿ ಹೇಳಿ ಅವರನ್ನು ಉಲ್ಲಸಿತರಾಗಿರುವಂತೆ ನೋಡಿಕೊಳ್ಳಬೇಕು.

ಆತ್ಮಹತ್ಯೆ ಪ್ರಯತ್ನವನ್ನು ಹೇಗೆ ಗುರುತಿಸಬಹುದು?

♦ ಋಣಾತ್ಮಕವಾಗಿ ಮಾತನಾಡುವುದು. ನಾನು ಬದುಕಲೇ ಬಾರದು, ನಾನು ಹುಟ್ಟಬಾರದಿತ್ತು ಎಂದು ಪದೇ ಪದೇ ಪರಿತಪಿಸುವುದು.

♦ ಸಾವಿನ ಬಗ್ಗೆ ಹೆಚ್ಚು ಆಸಕ್ತಿ. ಮಾತುಕತೆ ಬರವಣಿಗೆ ಎಲ್ಲವೂ ಸಾವಿನ ಸುತ್ತವೇ ಗಿರಕಿ ಹೊಡೆಯುತ್ತಿರುತ್ತದೆ.

♦ ಒಮ್ಮಿಂದೊಮ್ಮೆಲೇ ವಿಲ್ ಬರೆಯುವುದು, ಸಾಲ ತೀರಿಸುವುದು ಮತ್ತು ದಾನ ಮಾಡುವುದು ಇತ್ಯಾದಿ ವಿಲಕ್ಷಣ ಚಟುವಟಿಕೆಗಳು ಕೂಡ ಆತ್ಮಹತ್ಯೆಯ ಮುನ್ಸೂಚನೆಯಾಗಿರುತ್ತದೆ.

♦ ಯಾರೊಂದಿಗೂ ಬೆರೆಯದೆ ಒಂಟಿಯಾಗಿ ಇರುವುದು, ಅತಿಯಾದ ಮದ್ಯಪಾನ, ಧೂಮಪಾನ ಎಲ್ಲವೂ ಹೆಚ್ಚಿನ ಮಾನಸಿಕ ಒತ್ತಡದ ಸಂದರ್ಭದಲ್ಲಿ ಕಂಡುಬರುವ ಸೂಚನೆಗಳು.

♦ ಭವಿಷ್ಯದ ಬಗ್ಗೆ ವಿಪರೀತವಾಗಿ ಅನಗತ್ಯವಾಗಿ ಚಿಂತಿಸುವುದು. ತನ್ನ ಸಮಸ್ಯೆಗೆ ಪರಿಹಾರವೇ ಇಲ್ಲ ಎಂದು ಆಕಾಶವೇ ಕಳಚಿಬಿದ್ದಂತೆ ವರ್ತಿಸುವುದು ಕೂಡ ಅತ್ಮಹತ್ಯೆಯ ಮೂನ್ಸೂಚನೆಯಾಗಿರುತ್ತದೆ.

Writer - ಡಾ. ಮುರಲೀ ಮೋಹನ್ ಚೂಂತಾರು

contributor

Editor - ಡಾ. ಮುರಲೀ ಮೋಹನ್ ಚೂಂತಾರು

contributor

Similar News

ಜಗದಗಲ
ಜಗ ದಗಲ