ಝಾನ್ಸಿ ಎನ್‌ಕೌಂಟರ್: ಬಿಜೆಪಿ ವಿರುದ್ಧ ಪ್ರತಿಪಕ್ಷ ದಾಳಿಯ ಮಧ್ಯೆಯೇ ಪೊಲೀಸರಿಂದ ಎಫ್‌ಐಆರ್ ದಾಖಲು

Update: 2019-10-10 15:40 GMT

ಲಕ್ನೋ,ಅ.10: ಝಾನ್ಸಿ ಜಿಲ್ಲೆಯ ಕರ್ಗುವಾನ್ ಗ್ರಾಮದ 28ರ ಹರೆಯದ ಯುವಕನೋರ್ವನನ್ನು ನಕಲಿ ಎನ್‌ಕೌಂಟರ್ ನಡೆಸಿ ಕೊಲ್ಲಲಾಗಿದೆ ಎಂದು ಆರೋಪಿಸಿ ಸಮಾಜವಾದಿ ಪಕ್ಷವು ರಾಜ್ಯದ ಬಿಜೆಪಿ ಸರಕಾರದ ವಿರುದ್ಧ ನಡೆಸುತ್ತಿರುವ ದಾಳಿಯ ನಡುವೆಯೇ ಉತ್ತರ ಪ್ರದೇಶ ಪೊಲೀಸರು ಎನ್‌ಕೌಂಟರ್ ಕುರಿತು ಎಫ್‌ಐಆರ್‌ನ್ನು ದಾಖಲಿಸಿದ್ದಾರೆ.

  ಪುಷ್ಪೇಂದ್ರ ಯಾದವ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿಕೊಂಡಿದ್ದು,ಒಂದು ವಾರದ ಹಿಂದೆ ಮೋಥ್ ಪೊಲೀಸ್ ಠಾಣಾಧಿಕಾರಿ ಧರ್ಮೇಂದ್ರ ಚೌಹಾಣ್ ಆತನ ಲಾರಿಯನ್ನು ವಶಪಡಿಸಿಕೊಂಡಿದ್ದರು. ಅ.6ರಂದು ಪುಷ್ಪೇಂದ್ರ,ಆತನ ಸೋದರ ರವೀಂದರ್ ಯಾದವ ಮತ್ತು ಸೋದರ ಸಂಬಂಧಿ ವಿಪಿನ್ ಯಾದವ್‌ಅವರು ಚೌಹಾಣ್ ಮೇಲೆ ಗುಂಡು ಹಾರಿಸಿದ್ದರು. ಪ್ರತಿದಾಳಿಯಲ್ಲಿ ಪುಷ್ಪೇಂದ್ರ ಕೊಲ್ಲಲ್ಪಟ್ಟಿದ್ದು,ರವೀಂದರ್ ಮತ್ತು ವಿಪಿನ್ ಪರಾರಿಯಾಗಿದ್ದರು ಎನ್ನುವುದು ಪೊಲೀಸರ ಹೇಳಿಕೆಯಾಗಿದೆ.

 ಪುಷ್ಪೇಂದ್ರ ಹತ್ಯೆ ಬೆನ್ನಲ್ಲೇ ಇದು ಪೂರ್ವಯೋಜಿತ ಎನ್‌ಕೌಂಟರ್ ಆಗಿದೆ ಎಂದು ಆರೋಪಿಸಿದ್ದ ಎಸ್‌ಪಿ ರಾಜ್ಯಸಭಾ ಸಂಸದ ಚಂದ್ರಪಾಲ ಸಿಂಗ್ ಯಾದವ ಅವರು,ಕೊಲೆ ಪ್ರಕರಣವನ್ನು ದಾಖಲಿಸುವಂತೆ ಮತ್ತು ಸಿಬಿಐ ವಿಚಾರಣೆ ನಡೆಸುವಂತೆ ಆಗ್ರಹಿಸಿದ್ದರು.

ಬುಧವಾರ ಪುಷ್ಪೇಂದ್ರನ ನಿವಾಸಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಎಸ್‌ಪಿ ಅಧ್ಯಕ್ಷ ಅಖಿಲೇಶ ಯಾದವ ಅವರು,ಪೊಲೀಸರ ಹೇಳಿಕೆಯನ್ನು ನಂಬಲು ಸಾಧ್ಯವಿಲ್ಲ. ಇದು ಎನ್‌ಕೌಂಟರ್ ಅಲ್ಲ,ಕೊಲೆ. ಮುಖ್ಯಮಂತ್ರಿಗಳೇ ಎನ್‌ಕೌಂಟರ್‌ಗಳನ್ನು ಬಹಿರಂಗವಾಗಿ ಉತ್ತೇಜಿಸುತ್ತಿದ್ದಾರೆ,ಉ.ಪ್ರದೇಶದಲ್ಲಿ ಯಾರೂ ಸುರಕ್ಷಿತರಲ್ಲ ಎಂದು ಹೇಳಿದ್ದರು.

ಎನ್‌ಕೌಂಟರ್‌ನಲ್ಲಿ ಭಾಗಿಯಾಗಿದ್ದ ಪೊಲೀಸರ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸುವಂತೆ ಆಗ್ರಹಿಸಿ ಪುಷ್ಪೇಂದ್ರನ ಅಂತ್ಯಸಂಸ್ಕಾರ ನಡೆಸಲು ಕುಟುಂಬದವರು ನಿರಾಕರಿಸಿದ್ದರಿಂದ ಪೊಲಿಸರೇ ಸೋಮವಾರ ಅಂತ್ಯಸಂಸ್ಕಾರ ನೆರವೇರಿಸಿದ್ದರು.

 ಪೊಲೀಸರು ಮಗನ ಶವವನ್ನು ಬಲವಂತದಿಂದ ತೆಗೆದುಕೊಂಡು ಹೋಗಿದ್ದರು ಎಂದು ಪುಷ್ಪೇಂದ್ರನ ತಂದೆ,ಮಾಜಿ ಸಿಐಎಸ್‌ಎಫ್ ಕಾನ್‌ಸ್ಟೇಬಲ್ ಹರಿಶ್ಚಂದ್ರ ಯಾದವ ಆರೋಪಿಸಿದ್ದಾರೆ.

ಘಟನೆ ನಡೆದ ಸಂದರ್ಭದಲ್ಲಿ ತಾನು ಕರ್ತವ್ಯದಲ್ಲಿದ್ದೆ ಎಂದು ಸಿಐಎಸ್‌ಎಫ್ ಕಾನ್‌ಸ್ಟೇಬಲ್ ಆಗಿರುವ ರವೀಂದರ್ ಯಾದವ ಹೇಳಿದ್ದಾರೆ.

  ರವೀಂದರ್ ಘಟನೆಯ ಸಂದರ್ಭ ಸ್ಥಳದಲ್ಲಿ ಇರಲಿಲ್ಲ ಎಂದಾದರೆ ಎಫ್‌ಐಆರ್‌ನಿಂದ ಅವರ ಹೆಸರನ್ನು ತೆಗೆೆಯಲಾಗುವುದು. ಪೊಲೀಸರು ತಪ್ಪಿತಸ್ಥರು ಎಂದು ಕಂಡು ಬಂದರೆ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಝಾನ್ಸಿಯ ಎಎಸ್‌ಪಿ ರಾಹುಲ್ ಮಿಥಾಸ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News