ಪೋತೆಯವರ ಕಥೆಯಲ್ಲಿದೆ ದಲಿತ ಸಂವೇದನೆಯ ಬೇರು

Update: 2019-10-13 11:36 GMT

‘ನಾನು ಯಾರ ಕಥೆಯ ಡುಪ್ಲಿಕೇಟು ಮಾಡಲ್ಲ’ ಈ ಮಾತು ಸ್ವತಃ ಎಚ್.ಟಿ.ಪೋತೆಯವರೆ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಕನ್ನಡ ನಾಡಿನ ಸಾಹಿತ್ಯ ಪರಂಪರೆಯನ್ನೊಮ್ಮೆ ತಿರುಗಿ ನೋಡಿದರೆ, ಕಥಾ ಜಗತ್ತಿನ ವಿಸ್ಮಯ ಲೋಕವೇ ಕಾಣುತ್ತದೆ. ಹಳೆಗನ್ನಡದಿಂದ ನವ್ಯ ನವ್ಯೋತ್ತರ ದಲಿತ ಬಂಡಾಯ ಕಾಲದಲ್ಲಿ ಅನೇಕ ಕಥೆಗಳು ಬರೆಯಲ್ಪಟ್ಟಿವೆ. ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿವೆ. ದಲಿತ ಬಂಡಾಯದ ಕಾಲದಲ್ಲಿಯಂತೂ ಕರುಳು ಹಿಚುಕುವಷ್ಟು ಹೃದಯ ಸೆಳೆಯುವಷ್ಟು ಮಾಸದ ಕಥೆಗಳು ಈ ನಾಡಿನ ಕಥಾ ಜಗತ್ತನ್ನು ಬೆರಗುಗೊಳಿಸಿವೆ.

ಇಂತಹ ಕಥಾ ಸಾಹಿತ್ಯವನ್ನು ನಾನು ಯಾರ ಡುಪ್ಲಿಕೇಟು ಮಾಡುವುದಿಲ್ಲ ಎನ್ನುವ ಮೂಲಕ ಪೋತೆಯವರು ಕನ್ನಡ ಕಥಾ ಜಗತ್ತಿಗೆ ಅವಮಾನ ಮಾಡಿದ್ದಾರೆ ಎನ್ನುವ ಸಣ್ಣ ಅನುಮಾನ ಮೂಡತೊಡಗಿದೆ. ಅವರು ಬೇರೆಯವರ ಕಥೆಗಳನ್ನು ಡುಪ್ಲಿಕೇಟ್ ಮಾಡುವುದಿಲ್ಲ ಎನ್ನುವುದು ಒಳ್ಳೆಯದೇ. ಆದರೆ ನಾವು ಬರೆಯುವ ಕಥೆಗಳು ನಮ್ಮ ಕನ್ನಡ ಸಾಹಿತ್ಯದ ಛಾಯೆ ಇಲ್ಲದೇ ಬರೆಯಬಹುದೇ? ಇವರ ಕಥೆಗಳಲ್ಲಿ ದಲಿತ ಸಂವೇದನೆಯಿವೆ. ಇಂತಹ ಸಂವೇದನೆ ದಲಿತ ಕಥಾಜಗತ್ತಿಗೆ ಈಗಾಗಲೇ ಅನೇಕ ದಲಿತ ಹಿರಿಯ ಸಾಹಿತಿಗಳು ಬರೆದಿಲ್ಲವೆ ಎನ್ನುವ ಸಹಜ ಪ್ರಶ್ನೆಗಳು ಹುಟ್ಟುತ್ತವೆ.

ಇತ್ತೀಚೆಗೆ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಮೂಲಕ ಪ್ರೊ.ಎಚ್.ಟಿ. ಪೋತೆಯವರ ಕಥಾ ಸಾಹಿತ್ಯದ ಕುರಿತು ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಿತು. ಕಲಬುರಗಿ ಅಲ್ಲದೇ ನಾಡಿನಾದ್ಯಂತದಿಂದ ಸಾಹಿತ್ಯ ಆಸಕ್ತರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಇಡೀ ದಿನ ಕುಳಿತು ಶ್ರದ್ಧೆಯಿಂದ ಆಲಿಸಿ ಗೃಹಿಸಿಕೊಂಡ ನನಗೆ ಕಾಡಿರುವ ವಿಷಯ ವಿವರವನ್ನು ನಿಮ್ಮ ಮುಂದಿಡುವ ಪ್ರಯತ್ನವಿದು.

ಪ್ರೊ. ಎಚ್.ಟಿ.ಪೋತೆಯವರು ಹಿರಿಯರು. ನಾಡಿನ ಜಾನಪದ ವಿದ್ವಾಂಸರು. ಅನೇಕ ಪ್ರಶಸ್ತಿಗಳು ಪಡೆದವರು. ಈ ನಾಡಿನ ದಲಿತರ ಪರವಾದ ಧ್ವನಿಯಾಗಿದ್ದವರು. ಅಕಾಡಮಿಕ್ ವ್ಯಕ್ತಿ. ಅವರ ಅನೇಕ ಭಾಷಣಗಳಿಂದ ನಾನು ಎಷ್ಟೊಬಾರಿ ಪ್ರಭಾವಿತನಾಗಿದ್ದೇನೆ. ಇವೆಲ್ಲವನ್ನು ಬಹಳ ಪ್ರಜ್ಞಾ ಪೂರ್ವಕವಾಗಿ ಗ್ರಹಿಸಿಕೊಳ್ಳುತ್ತಾ, ಪೋತೆಯವರ ಕಥೆಗಳನ್ನು ಅಧ್ಯಯನಕ್ಕೊಳಪಡಿಸಿ ಓದುಗನಾಗಿ, ಈ ಕಾರ್ಯಕ್ರಮದಲ್ಲಿ ಇದ್ದು ಆಲಿಸಿದ ಅನುಭವ ಈ ಲೇಖನದ ಸಾರ. ವೈಯಕ್ತಿಕವಾಗಿ ಅವರ ಮೇಲೆ ನನಗೆ ಅಪಾರವಾದ ಪ್ರೀತಿ, ಗೌರವವಿದೆ. ಇಲ್ಲಿ ಅವರ ಕಥೆಗಳನ್ನು ಮಾತ್ರ ವಿಮರ್ಶೆೊಳಪಡಿಸುವ ಪ್ರಯತ್ನ ನನ್ನದು.

ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ನಾಲ್ಕು ಜನ ಪ್ರಮುಖ ವಿದ್ವಾಂಸರು ಪೋತೆಯವರ ಕಥೆಗಳನ್ನು ವಿಮರ್ಶೆೆ ಮಾಡಿದರು. ಕಥೆಗಳನ್ನು ವಿಮರ್ಶೆ ಮಾಡು ವವರು ಪೋತೆಯವರ ಒಡನಾಡಿಗಳಾಗಿದ್ದು, ಒಳ್ಳೆಯ ಅಕಾಡಮಿಕ್ ಅನುಭವಿಗಳಾಗಿದ್ದರು. ಪೋತೆ ಯವರ ಒಟ್ಟಾರೆ ಕಥೆಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾ ಕೆಲವು ಪ್ರಮುಖ ವಿಚಾಗಳ ಮೇಲೆ ಬೆಳಕು ಚೆಲ್ಲಿದರು.

ಪೋತೆಯವರ ಕಥೆಗಳು ಸ್ವಂತ ಅನುಭವಗಳಾಗಿದ್ದು, ಭೂತಕಾಲದ ಘಟನೆಗಳನ್ನು ಮೆಲುಕು ಹಾಕುವ ಪ್ರಯತ್ನ ಮಾಡಲಾಗಿದೆ. ತಮ್ಮ ಜೀವನದಲ್ಲಿ ಕಾಡಿದ ಅನೇಕ ಪ್ರಶ್ನೆ ಗಳಿಗೆ ಕಥೆಗಾರ ಉತ್ತರ ಹುಡುಕುವ ಪ್ರಯತ್ನ ಮಾಡಿ ದ್ದಾನೆ. ತನ್ನ ಸುತ್ತಮುತ್ತಲಿನ ಘಟನೆ, ವಸ್ತು, ವಿಚಾರ, ವ್ಯಕ್ತಿಗಳನು್ನ ಬಳಸಿಕೊಂಡು ಕಥೆ ರಚನೆಯಾಗಿವೆ.

ಪ್ರತಿಯೊಂದು ಕಥೆಯಲ್ಲಿಯೂ ದಲಿತ ಸಂವೇದನೆ, ಪುರೋಹಿತಶಾಹಿಗಳ ವಿರುದ್ಧ ಧ್ವನಿ, ಅಸಮಾನತೆಯ ವಿರುದ್ಧದ ಧ್ವನಿ, ಸಾಂಸ್ಕೃತಿಕ ಹೇರಿಕೆ ಸಲ್ಲದು, ತಾರತಮ್ಯದ ವಿರುದ್ಧದ ಧ್ವನಿ, ವಕೀಲಿ ಮಾಡುವಿಕೆ, ದಲಿತ ಕೇರಿಯಿಂದ ಭೀಮನಗರವಾಗಿಸುವ ಪರಿಗಳು, ಬುದ್ಧ, ಬಸವ, ಅಂಬೇಡ್ಕರ್ ತತ್ವಗಳ ಪರಿಪಾಲನೆ, ಗ್ರಾಮಗಳಲ್ಲಿನ ಗೌಡಿಕಿ ವಿರುದ್ಧದ ಯುದ್ಧ, ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಹಾದಿ ಇವು ಅವರ ಕಥೆಗಳ ಜೀವಾಳ.

ನೈಜ ಘಟನೆಗಳನ್ನೇ ಎತ್ತಿಕೊಂಡು ಅವುಗಳನ್ನು ಯಥಾವತ್ತಾಗಿ ಚಿತ್ರಿಸುವ ಪ್ರಯತ್ನ ಮಾಡಿದ್ದಾರೆ. ಕಾಡಿರುವ ಪಾತ್ರಗಳನ್ನು ಮಾತನಾಡಿಸುತ್ತಾ ಮುಂದುವರಿಯುತ್ತಾರೆ. ಸಾಮಾಜಿಕ ಸಮಸ್ಯೆಗಳನ್ನು ಎತ್ತಿಕೊಂಡು ಅದಕ್ಕೊಂದು ಶೈಕ್ಷಣಿಕ ಪರಿಹಾರ ಕಂಡುಹಿಡಿಯುತ್ತಾ ಸಾಗುತ್ತಾರೆ. ಸೋಲು, ಅವಮಾನ, ಹಸಿವು ಅವರನ್ನು ಕಾಡಿದ ಪರಿಯನ್ನು ಕಥೆಗಳ ಮೂಲಕ ಹೊರಹಾಕುತ್ತಾರೆ.

ವೈಚಾರಿಕತೆ ಅವರ ಕಥೆಗಳ ಮೂಲಕ ಜೀವಾಳವಾಗಿದೆ. ನೆನಪುಗಳನ್ನು ಬರೆದಿದ್ದಾರೆ. ವಾಸ್ತವದ ನೆಲೆಯಲ್ಲಿ ಕಥೆಗಳಿವೆ. ವೈಚಾರಿಕತೆಯ ಮುಖವನ್ನು ಅಂಬೇಡ್ಕರ್ ತತ್ವದ ಮೇಲೆ ಕಟ್ಟಿದ್ದಾರೆ. ಬದಲಾವಣೆ ಗಾಗಿ ಎಲ್ಲಾ ಕಥೆಗಳು ಬಡಿದಾಡುತ್ತವೆ. ಸಮಾನತೆ, ಶಿಕ್ಷಣ ಎನ್ನುವ ವಿಚಾರಗಳತ್ತ ಹೊರಳಾಡುತ್ತವೆ. ವ್ಯಕ್ತಿಶೋಧಕ್ಕಿಂತ ಸಾಮಾಜಿಕ ಶೋಧ ಮಾಡುತ್ತಾರೆ. ವ್ಯಕ್ತಿ ಕ್ಲಿಷ್ಟತೆಗಿಂತ ಸಾಮಾಜಿಕ ಕ್ಲಿಷ್ಟತೆಯನ್ನು ಪ್ರತಿಬಿಂಬಿಸುತ್ತಾರೆ. ಸಾಮಾಜಿಕ ವ್ಯಕ್ತಿಗಳ ವೇದನೆ, ಎಡಬಲಗಳ ನಿರ್ವಹಣೆ, ಾಜಕೀಯ, ಕಥೆಗಳ ವಿಸ್ತಾರ ಕ್ರಮ, ಕಥೆಯೊಳಗಿನ ಸಾಮಾಜಿಕ ಕಳಕಳಿ, ಸಮುದಾಯದ ತುಡಿತ, ರೂಢಗತ ಆಂತರ್ಯ, ಒಂದೇ ಇಝಂನ ಪ್ರತಿಪಾದನೆ, ಒಂದೇ ಮಾನದಂಡದ ಮೇಲೆ ರಚಿತ ಕತೆಗಳು, ನೈಜವಾದ ಸಂಗತಿಗಳ ಹರಿವು, ಹೀಗೆ ಈ ವಿಷಯಗಳತ್ತ ಬೆಳಕು ಚೆಲ್ಲುವ ಪೋತೆಯವರ ಕಥೆಗಳು ಹಲವು ಕಾರಣಗಳಲ್ಲಿ ಬದಲಾಗಬೇಕಾಗ ಅಗತ್ಯವೆನಿಸುತ್ತವೆ.

ಕಥೆಗಳಲ್ಲಿ ಸಂಕೀರ್ಣತೆಯಿಲ್ಲ. ಕಥೆಗಳ ಹಿನ್ನೋಟ ಮತ್ತು ಮುನ್ನೋಟಗಳ ಕೊರತೆ, ಓದುಗನಿಗೆ ಮತ್ತು ವಿಮರ್ಶಕನಿಗೆ ಸವಾಲೊಡ್ಡುವ ಯಾವ ಕಥಾ ವಸ್ತುವೂ ಉಳಿಸಿಕೊಂಡಿಲ್ಲ. ಇದೊಂದು ಆತ್ಮಕಥೆಯ ಅನೇಕ ಭಾಗಗಳಾಗಿ ವಿಂಗಡಿಸಿಕೊಂಡಿದ್ದಾರೆ ಎನಿಸುತ್ತವೆ. ಕಥೆಯೊಳಗೆ ಸ್ಥಾಯಿಭಾವ ತಾಳುತ್ತಾ ತಾನೇ ಕಥೆಗಾರನಾಗಿ ಘಟನೆಗಳನ್ನು ಯಥಾವತ್ತಾಗಿ ಚಿತ್ರಿಸುತ್ತಾ ಹೋಗುತ್ತಾರೆ. ತಮ್ಮ ಆತ್ಮಾವಲೋಕನಕ್ಕಾಗಿ ಈ ಕಥೆಗಳನ್ನು ಬಳಸಿಕೊಂಡರೇ ಎನ್ನುವ ಪ್ರಶ್ನೆ ಕಾಡುತ್ತದೆ. ಎಲ್ಲಾ ಕಥೆಗಳಲ್ಲಿ ಒಂದೇ ವಿಷಯವನ್ನು ಪುನಾವರ್ತನೆ ಮಾಡಿ ಓದುಗನಿಗೆ ಪೂರ್ವಾಗೃಹವಾಗಿಸುತ್ತಾರೆ. ಓದುಗ ಎರಡು ಕಥೆ ಓದಿದ ಬಳಿಕ ಮೂರನೇಯ ಕಥೆಯ ಅಂತ್ಯವನು್ನ ಉಹಿಸಬಲ್ಲಷ್ಟು ಬಿಟ್ಟು ಕೊಡುತ್ತಾರೆ.

ಪೋತೆಯವರ ಕಥೆಗಳು ಸರಳೀಕರಣದ ಮಿತಿ ಮೀರಬೇಕಿದೆ. ಇಝಂನಾಚೆಗೆ ಬೆಳೆಯಬೇಕಿದೆ. ಹೆಚ್ಚು ಕಥಾ ಕಲಾತ್ಮಕತೆಯನ್ನು ಬಳಸಿಕೊಳ್ಳುವ ಮೂಲಕ ಇನ್ನಷ್ಟು ಆಯಾಮಗಳನ್ನು ಕಥೆಗಳು ನೀಡುವ ಅತೀ ಅಗತ್ಯವಿದೆ. ಹೆಚ್ಚು ಕಲಾತ್ಮಕವಾದಷ್ಟು ಕಥೆಗಳಲ್ಲಿ ಬಿಗಿತನ ಹೆಚ್ಚಾಗಿ, ಲೇಖಕನ ಚೌಕಟ್ಟು ಮೀರಿ ಕಥಾಜಗತ್ತಿನ ವಿಸ್ತಾರತೆ ಮೆರೆಯಲು ಸಾಧ್ಯತೆಯಿದೆ. ನವ್ಯ ಸಾಹಿತ್ಯದಲ್ಲಿ ಮೂಡಿದ ಅನೇಕ ಕಲಾಕೃತಿಗಳನ್ನು ಮೂಡಿಸಬಹುದಾಗಿದೆ. ಕಥನ ಕ್ರಮ ದೂರ ಹರೆಯುವ ನದಿಯಾಗುವ ಜೊತೆಗೆ ಆಳಕ್ಕಿಲಿಯಬಲ್ಲ ಶಕ್ತಿ ಪಡೆದುಕೊಳ್ಳಬೇಕು. ಅವರ ಕೋಪ, ಆಕ್ರಮಣಕಾರಿ ನಿಲುವುಗಳನ್ನು ನಿಭಾಯಿಸುವ ರೀತಿ ಬದಲಾಗಬೇಕಿದೆ. ಪಾತ್ರಗಳಲ್ಲಿನ ವೈರುಧ್ಯದ ಕೊರತೆ ಎದ್ದು ಕಾಣುತ್ತದೆ. ತಮ್ಮನ್ನು ತಾವು ಸೀಮಿತಗೊಳಿಸಿಕೊಂಡು ಒಂದೇ ವಿಷಯ ವಸ್ತುವಿನ ಸುತ್ತಲು ಗಿರಕಿ ಹೊಡೆಯುವ ಬದಲು ಕಥಾಜಗತ್ತಿನ ಪ್ರವೇಶ ಪಡೆದರೆ ಇನ್ನೂ ಹೆಚ್ಚು ಆಳವಾದ ಕತೆಗಳ್ನು ಕೊಡಬಹುದು ಎನ್ನುವ ಆಶಯವಿದೆ.

ಅವರ ಕಥೆಗಳಾದ ಪರಿ, ಕಾಗಿಶಕುನ, ಬೆಂಕಿ ಬೆಳಕು, ಬೆತ್ತಲಾದ ಚಂದ್ರ, ಅಲ್ಲಾಪುರದ ಗುಮ್ಮಟ, ಸೂರ್ಯಚಂದ್ರರಿಲ್ಲದ ನಾಡಿನಲ್ಲಿ, ನಾಯಿ ನೆರಳು, ಧರೆಗೆ ದೊಡ್ಡವರು, ಗಾಂಧಿ ಕ್ಲಾಸು, ಇದು ಬರಿ ಬಹಿಷ್ಕೃತ ಅಲ್ಲೋ ಅಣ್ಣಾ, ಮಾದನ ಕರೆಂಟ್ ತಂತ್ರ, ಮೆಲುಕು, ಪ್ರಾತಃಸ್ಮಾರಾಮಿ, ನಾನಾರೆಂಬುದು ನಾನಲ್ಲ ಹೀಗೆ ಪ್ರತಿಯೊಂದು ಕಥೆಗಳು ದಲಿತರ ಕೇರಿಯ ಘಟನೆಗಳನ್ನು, ಅವರು ಅನುಭವಿಸಿದ ಅನುಭವಗಳನ್ನು ಬರೆದಿದ್ದಾರೆ. ಇದೇ ರೀತಿಯ ಪ್ರಯತ್ನಗಳು ಬಂಡಾಯ ಸಾಹಿತ್ಯದ ಕಾಲಘಟ್ಟದಲ್ಲಿ ನಡೆದಿವೆ. ಆದರೆ ಆ ಕಾಲಮಾನದಲ್ಲಿ ಈ ರೀತಿಯ ಕಥೆಗಳನ್ನು ಕಟ್ಟಿಕೊಟ್ಟ ಪರಿಯನ್ನೊಮ್ಮೆ ಗಮನಿಸಿದರೆ ಅತ್ಯಂತ ದೊಡ್ಡ ಭಿನ್ನತೆಯನ್ನು ಕಾಣಬಹುದಾಗಿದೆ. ದಲಿತ ಸಂಘರ್ಷ ಸಮಿತಿಗಳು ಹುಟ್ಟಿಕೊಂಡ ಕಾಲದಲ್ಲಿ ಅವುಗಳನ್ನು ಬೆಳೆಸಿದ, ಅವುಗಳು ಬಿಟ್ಟು ಹೋದ ವಿಚಾರಗಳನ್ನು ಕಥೆಗಾರರು ಬಳಸಿಕೊಳ್ಳುವಲ್ಲಿ ಸ್ವಲ್ಪ ಎಡವಿದಂತೆ ಕಾಣುತ್ತೆ.

ಕಥೆಗಾರ ತನ್ನೆಲ್ಲ ಕಥೆಗಳನ್ನು ಒಂದೇ ಬಗೆಯ ವೈಚಾರಿಕ ವಿಚಾರದತ್ತ ಕೇಂದ್ರೀಕರಿಸಿದ್ದು, ಅದರಿಂದ ಕೊನೆಯವರೆಗೂ ಹೊರಬರದೇ ಒದ್ದಾಡುತ್ತಾನೆ. ತನ್ನ ಸಾಮುದಾಯಿಕ ಜವಾಬ್ದಾರಿಯನ್ನು ಮರೆಯುವಲ್ಲಿ ಯಶಸ್ವಿಯಾದರೆ, ಕಥಾಹಂದರವನ್ನು ಕಟ್ಟಿಕೊಡುವ ಓದುಗನ ಗ್ರಹಿಕೆಯನ್ನು ಮಿತಿಗೊಳಿಸಿ ನಿರಾಸೆ ಮೂಡಿಸುತ್ತಾರೆ. ಈ ಕಥೆಗಳನ್ನು ಒಂದೇ ಸಮುದಾಯ ಮಾತ್ರ ಓದಿಕೊಂಡು ಗ್ರಹಿಸಿಕೊಂಡು ಆಸ್ವಾದಿಸುವರೇ ಹೊರತು ಉಳಿದ ಓದುಗರ ಪಾಲಿಗೆ ಇವು ಕಹಿ ಯಾಗಿಯೇ ಕಾಣುತ್ತವೆ ಎಂದರೆ ತಪ್ಪಾಗದು. ಅವರ ಕಥೆಯಲ್ಲಿಯೇ ಬರುವ ಹಾಗೆ ಕಿರಿಮಾದನ ಭಾಷಣ ಮತ್ತು ಬಹುಮಾನವನ್ನು ಸಹಿಸದ ಊರಿನ ಗೌಡರು ಮುನಿಸಿಕೊಂಡು ಸಭೆಯಿಂದ ಹೊರನಡೆದು ಊರಿನ ರಾಧಾಕೃಷ್ಣ ಮುಖ್ಯ ಗುರುಗಳನ್ನು ವರ್ಗಾವಣೆ ಮಾಡಿಸಿದಂತೆ ಈ ಕಥೆಗಳನ್ನು ಮೇಲ್ವರ್ದವರು ಖಂಡಿತಾ ನಿರಾಕರಿಸುತ್ತಾರೆ.

ಪೋತೆಯವರ ಒಟ್ಟಾರೆ ಕಥೆಗಳು ಸೃಜನಶೀಲಗೊಳಿಸಿದರೆ ಇನ್ನಷ್ಟು ಜನರಿಗೆ ತಲುಪುತ್ತವೆ. ಪ್ರೊ. ಎಚ್.ಟಿ. ಪೋತೆಯವರ ಕಥೆಗಳು ಸಿಮೀತ, ಸಂಕೀರ್ಣತೆ ಮತ್ತು ಸವಾಲುಗಳಲ್ಲ ಎನ್ನುವುದು ನನ್ನ ಅಭಿಪ್ರಾಯ.

Writer - ಕೆ.ಎಂ.ವಿಶ್ವನಾಥ ಮರತೂರ

contributor

Editor - ಕೆ.ಎಂ.ವಿಶ್ವನಾಥ ಮರತೂರ

contributor

Similar News