‘ಶಾದಿಭಾಗ್ಯ’ಕ್ಕೆ ಅನುದಾನದ ಕೊರತೆ: ತಪ್ಪದ ಬಡ ಅಲ್ಪಸಂಖ್ಯಾತರ ಕಚೇರಿ ಅಲೆದಾಟ

Update: 2019-10-13 18:23 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಅ. 13: ಅಲ್ಪಸಂಖ್ಯಾತ ಸಮುದಾಯದ ಬಡ ಕುಟುಂಬಕ್ಕೆ ಸೇರಿದ ಹೆಣ್ಣು ಮಕ್ಕಳ ವಿವಾಹಕ್ಕೆ ನೆರವಾಗುವ ಉದ್ದೇಶದಿಂದ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಜಾರಿಗೊಳಿಸಿದ್ದ ’ಶಾದಿಭಾಗ್ಯ’ ಯೋಜನೆಗೆ ಅನುದಾನದ ಕೊರತೆ ಎದುರಾಗಿದ್ದು, ಸದ್ಯಕ್ಕೆ ಪರಿಹಾರವಾಗುವ ಲಕ್ಷಣಗಳು ಗೋಚರವಾಗುತ್ತಿಲ್ಲ.

ಯೋಜನೆಯಡಿ ವಿವಾಹಕ್ಕೂ ಮೊದಲೇ, ಅಂದರೆ, ಮದುವೆ ನಿಗದಿಯಾದ ದಿನಾಂಕಕ್ಕಿಂತ 1 ತಿಂಗಳು ಮೊದಲು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಅನುದಾನ ಜಮೆಯಾಗಬೇಕು. ಆದರೆ, ಮದುವೆಯಾಗಿ ವರ್ಷಗಳು ಉರುಳಿದರೂ ಹಣ ಕೈಸೇರುತ್ತಿಲ್ಲ. ಇದರಿಂದ ಫಲಾನುಭವಿಗಳು ನಿರಂತರವಾಗಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಕಚೇರಿಗೆ ಅಲೆದಾಡುತ್ತಿದ್ದು, ಬಂದ ದಾರಿಗೆ ಸುಂಕವಿಲ್ಲದಂತೆ ವಾಪಾಸಾಗುವಂತಾಗಿದೆ.

ಮತ್ತೊಂದೆಡೆ ಫಲಾನುಭವಿಗಳು ನಿರಂತರ ವಾಗಿ ಕಚೇರಿಗೆ ಎಡತಾಕುತ್ತಿರುವುದು ಇಲಾಖೆ ಅಧಿಕಾರಿ- ಸಿಬ್ಬಂದಿಗೂ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಕೆಲ ಅರ್ಜಿದಾರರು ವಿಳಂಬದಿಂದ ಬೇಸತ್ತು ಹಾಗೂ ವಾಸ್ತವಾಂಶದ ಕೊರತೆಯಿಂದ, ಅಧಿಕಾರಿ-ಸಿಬ್ಬಂದಿಗಳ ಜೊತೆಯೇ ಜಗಳಕ್ಕಿಳಿಯುತ್ತಿದ್ದಾರೆ.

ಲಭ್ಯ ಮಾಹಿತಿಯ ಪ್ರಕಾರ, ಕಲಬುರಗಿ ಜಿಲ್ಲೆಯೊಂದರಲ್ಲಿಯೇ ಸಾವಿರಾರು ಅರ್ಜಿಗಳ ವಿಲೇ ಬಾಕಿಯಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತವರೂರು, ಶಿವಮೊಗ್ಗ ಜಿಲ್ಲೆಯಲ್ಲಿಯೂ 500ಕ್ಕೂ ಅಧಿಕ ಫಲಾನುಭವಿಗಳಿಗೆ ಅನುದಾನ ಬಿಡುಗಡೆಯಾಗಬೇಕಾಗಿದೆ. ಪ್ರಸ್ತುತ ಸ್ಥಿತಿ ಗಮನಿಸಿದರೆ, ಫಲಾನುಭವಿಗಳ ಕಚೇರಿ ಓಡಾಟಕ್ಕೆ ಸದ್ಯಕ್ಕೆ ಬ್ರೇಕ್ ಬೀಳುವ ಲಕ್ಷಣಗಳಿಲ್ಲ.

ಏನಿದು ಯೋಜನೆ?: ಅಲ್ಪಸಂಖ್ಯಾತ ವರ್ಗದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಮತ್ತು ಪಾರ್ಸಿ ವರ್ಗಕ್ಕೆ ಸೇರಿದ ಆರ್ಥಿಕವಾಗಿ ಹಿಂದುಳಿದ ಹೆಣ್ಣು ಮಕ್ಕಳ ವಿವಾಹಕ್ಕೆ ನೆರವಾಗುವ ಉದ್ದೇಶದಿಂದ ರಾಜ್ಯ ಸರಕಾರ 2013-14 ನೇ ಸಾಲಿನಲ್ಲಿ ‘ಶಾದಿಭಾಗ್ಯ’ ಯೋಜನೆಯನ್ನು ಅಂದಿನ ಕಾಂಗ್ರೆಸ್ ಸರಕಾರ ಜಾರಿಗೊಳಿಸಿತ್ತು.

ಯೋಜನೆಯಡಿ ಆಯ್ಕೆಯಾದ ಫಲಾನುಭವಿ ವಿಗಳಿಗೆ, ವಿವಾಹಕ್ಕೂ ಮೊದಲೇ ಅಗತ್ಯ ವಸ್ತುಗಳ ಖರೀದಿಗಾಗಿ 50 ಸಾವಿರ ರೂ. ಪ್ರೋತ್ಸಾಹ ಧನ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿತ್ತು. ಭಾರೀ ಪ್ರಚಾರದೊಂದಿಗೆ ಈ ಯೋಜನೆ ಕಾರ್ಯಗತಗೊಂಡಿತ್ತು. 2016-17ನೇ ಸಾಲಿನ ಬಜೆಟ್‌ನಲ್ಲಿ 88.81 ಕೋಟಿ ರೂ. ಅನುದಾನ ಮೀಸಲಿರಿಸಲಾಗಿತ್ತು. 2017-18ನೇ ಸಾಲಿನಲ್ಲಿ 135 ಕೋ. ರೂ. ಹಾಗೂ 2018-19ನೇ ಸಾಲಿನಲ್ಲಿ 55 ಕೋ. ರೂ. ಅನುದಾನ ಕೊಡಲಾಗಿತ್ತು. ಒಂದೆಡೆ ವರ್ಷದಿಂದ ವರ್ಷಕ್ಕೆ ಅರ್ಜಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದು, ಮತ್ತೊಂದೆಡೆ ಸರಕಾರದಿಂದ ಬಿಡುಗಡೆಯಾಗುತ್ತಿರುವ ಅನುದಾನ ಕಡಿಮೆಯಾಗುತ್ತಿರುವುದು ಅರ್ಜಿಗಳ ವಿಲೇಯಲ್ಲಿನ ವಿಳಂಬಕ್ಕೆ ಮುಖ್ಯ ಕಾರಣ ಎಂದು ಇಲಾಖೆಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಸೀನಿಯಾರಿಟಿ: ಬಾಕಿ ಅರ್ಜಿಗಳನ್ನು ಸೀನಿಯಾರಿಟಿ (ಹಿರಿತನದ) ಆಧಾರದ ಮೇಲೆ ವಿಲೇವಾರಿ ಮಾಡಲಾಗುತ್ತಿದೆ. ಬಹುತೇಕ ಅರ್ಜಿಗಳನ್ನು ಒಂದು ವರ್ಷ ಮೇಲ್ಪಟ್ಟೇ ವಿಲೇ ಮಾಡಲಾಗುತ್ತಿದೆ ಎಂದು ಅಲ್ಪಸಂಖ್ಯಾತ ಇಲಾಖೆಯ ಮೂಲಗಳು ಮಾಹಿತಿ ನೀಡುತ್ತವೆ.

ಒಟ್ಟಾರೆ ಶಾದಿಭಾಗ್ಯ ಯೋಜನೆಯು ಅನುದಾನದ ಕೊರತೆಯಿಂದ ಬಳಲುವಂತಾಗಿದ್ದು, ಫಲಾನುಭವಿಗಳು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಇನ್ನಾದರೂ ರಾಜ್ಯ ಸರಕಾರ ಸೂಕ್ತ ಅನುದಾನ ಬಿಡುಗಡೆಗೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಸರಕಾರವನ್ನು ಆಗ್ರಹಿಸಿದ್ದಾರೆ.

ಶಾದಿಭಾಗ್ಯ ಯೋಜನೆಯ ಪ್ರೋತ್ಸಾಹ ಧನಕ್ಕಾಗಿ ಅಲ್ಪಸಂಖ್ಯಾತರು ಕಚೇರಿಗೆ ಅಲೆದಾಡುತ್ತಿರುವ ವಿಚಾರವಾಗಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಪ್ರಭು ಚೌವ್ಹಾಣ್‌ರವರನ್ನು ಭೇಟಿಯಾಗಿ ಗಮನ ಸೆಳೆಯುವ ಕಾರ್ಯ ನಡೆಸಲಾಗಿದೆ. ಅರ್ಜಿಗಳ ವಿಲೇವಾರಿಯಲ್ಲಿನ ವಿಳಂಬದಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಸಚಿವರು ಕಾಲಮಿತಿಯಲ್ಲಿ ಸಮಸ್ಯೆ ಪರಿಹರಿಸುವ ವಿಶ್ವಾಸವಿದೆ.
-ವಿನ್ಸೆಂಟ್ ರೊಡ್ರಿಗಸ್, ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ಪರಿಷತ್‌ನ ಮಾಜಿ ಸದಸ್ಯ.

‘ಸಕಾಲದಲ್ಲಿ ಹಣ ಬಿಡುಗಡೆಗೊಳಿಸಿ’
ಅರ್ಜಿದಾರರಿಗೆ ಸಕಾಲದಲ್ಲಿ ಅನುದಾನ ಲಭ್ಯವಾಗದೇ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ದಿನನಿತ್ಯ ಅಲೆಯುವಂತಾಗಿದೆ. ಸರಕಾರದಿಂದ ಅನುದಾನ ಬಂದ ಕೂಡಲೇ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಅನುದಾನ ಹಾಕಲಾಗುವುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಕೂಡಲೇ ರಾಜ್ಯ ಸರಕಾರ ಸಕಾಲದಲ್ಲಿ ಪ್ರೋತ್ಸಾಹ ಧನ ಬಿಡುಗಡೆಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಶಿವಮೊಗ್ಗದ ಎ.ಬಿ. ಇಬಾಹೀಂ ಒತ್ತಾಯಿಸಿದ್ದಾರೆ.

Writer - ಬಿ. ರೇಣುಕೇಶ್

contributor

Editor - ಬಿ. ರೇಣುಕೇಶ್

contributor

Similar News