​ಹೆಣ್ಣುಮಗುವಿಗೆ ಜನ್ಮ ನೀಡಿದ 75ರ ತಾಯಿ !

Update: 2019-10-14 06:07 GMT

ಜೈಪುರ: ಐವಿಎಫ್ ವಿಧಾನದ ಮೂಲಕ 75 ವರ್ಷ ವಯಸ್ಸಿನ ಮಹಿಳೆಯೊಬ್ಬರು ಶನಿವಾರ ರಾತ್ರಿ ಹೆಣ್ಣುಮಗುವಿಗೆ ಜನ್ಮ ನೀಡಿರುವ ಘಟನೆ ರಾಜಸ್ಥಾನದ ಕೋಟಾದಿಂದ ವರದಿಯಾಗಿದೆ.

ಕೇವಲ 600 ಗ್ರಾಂ ತೂಕವಿದ್ದ ಮಗುವನ್ನು ಬೇರೆ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸಲಾಗಿದ್ದು, ಮಹಿಳೆ ಕೊಟಾದ ಕಿಂಕರ ಆಸ್ಪತ್ರೆಯಲ್ಲಿದ್ದಾರೆ. ಮಕ್ಕಳ ತಜ್ಞರ ತಂಡ ಮಗುವಿಗೆ ಚಿಕಿತ್ಸೆ ನೀಡುತ್ತಿದೆ.

ಮಹಿಳೆ ಈ ಮೊದಲು ಮಗುವೊಂದನ್ನು ದತ್ತು ಪಡೆದಿದ್ದರು. ಅದರೆ ಸ್ವಂತ ಮಗು ಬೇಕು ಎಂಬ ಬಯಕೆಯಿಂದ ತಾಯಿಯಾಗುವ ಸಾಧ್ಯತೆ ಬಗ್ಗೆ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದರು. ಐವಿಎಫ್ ವಿಧಾನದ ಮೂಲಕ ಮಗು ಪಡೆಯುವ ಪ್ರಯತ್ನಕ್ಕೆ ಮುಂದಾದರು ಎಂದು ಖಾಸಗಿ ಆಸ್ಪತ್ರೆಯ ವೈದ್ಯ ಅಭಿಲಾಷಾ ಕಿಂಕರ್ ಹೇಳಿದ್ದಾರೆ.

ತಾಯಿಯ ವಯಸ್ಸಿನ ಹಿನ್ನೆಲೆಯಲ್ಲಿ ಹಾಗೂ ವೈದ್ಯಕೀಯ ಹಾಗೂ ದೈಹಿಕವಾಗಿ ಆಶಕ್ತರಾಗಿದ್ದ ಹಿನ್ನೆಲೆಯಲ್ಲಿ ಆರೂವರೆ ತಿಂಗಳ ಬಳಿಕ ಸಿಸೇರಿಯನ್ ಮೂಲಕ ಅವಧಿಪೂರ್ವ ಪ್ರಸವಕ್ಕೆ ವ್ಯವಸ್ಥೆ ಮಾಡಲಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ಮಹಿಳೆಗೆ ಒಂದು ಶ್ವಾಸಕೋಶ ಮಾತ್ರ ಸುಸ್ಥಿತಿಯಲ್ಲಿದ್ದುದು ವೈದ್ಯರ ತಂಡಕ್ಕೆ ಸವಾಲಾಗಿತ್ತು ಎಂದು ವಿವರಿಸಿದರು.

ಮಹಿಳೆ ಗ್ರಾಮೀಣ ಹಿನ್ನೆಲೆಯಿಂದ ಬಂದವರಾಗಿದ್ದು, ಕೃಷಿ ಕುಟುಂಬಕ್ಕೆ ಸೇರಿದವರು. ಹಾಗಿದ್ದರೂ 75ರ ಹರೆಯದಲ್ಲಿ ಸ್ವಂತ ಮಗು ಬೇಕು ಎಂದು ಪಟ್ಟು ಹಿಡಿದದ್ದು ವೈದ್ಯರಲ್ಲಿ ಅಚ್ಚರಿ ಮೂಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News