ಮೋದಿ ತಮಿಳುನಾಡು ಭೇಟಿ: ಬೆಂಬಲಿಗರು, ಟೀಕಾಕಾರರು ಹರಡಿದ ಫೋಟೊ, ವೀಡಿಯೊಗಳ ಅಸಲಿಯತ್ತು ಇಲ್ಲಿದೆ

Update: 2019-10-15 18:33 GMT

ಪ್ರಧಾನಿ ನರೇಂದ್ರ ಮೋದಿಯವರು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜತೆಗಿನ ಎರಡನೇ ಅನೌಪಚಾರಿಕ ಸಭೆಗಾಗಿ ತಮಿಳುನಾಡಿನ ಮಾಮಲ್ಲಾಪುರಂಗೆ ಆಗಮಿಸಿದ ಸಂದರ್ಭ ಅವರ ಅಭಿಮಾನಿಗಳು ಹಾಗೂ ಟೀಕಾಕಾರರು ಸಾಮಾಜಿಕ ಜಾಲತಾಣಗಳಲ್ಲಿ ಹಲವು ಹುಸಿ ಸಂದೇಶಗಳನ್ನು ಹರಿಯಬಿಟ್ಟಿದ್ದಾರೆ.

ಮೊದಲನೇ ಇಂತಹ ಹುಸಿ ಸಂದೇಶವೆಂದರೆ ತಮಿಳುನಾಡಿನಲ್ಲಿ ಮೋದಿಗೆ ಭವ್ಯ ಸ್ವಾಗತ ದೊರಕಿತು ಎಂದು ಪ್ರತಿಪಾದಿಸುವ ವೀಡಿಯೊ ತುಣುಕು. ಎರಡನೆಯದು ಎರಡು ಚಿತ್ರಗಳನ್ನೊಳಗೊಂಡ ಮತ್ತೊಂದು ಪೋಸ್ಟ್. ಮಾಮಲ್ಲಾಪುರಂನಲ್ಲಿ ಮೋದಿ ಕಡಲ ಕಿನಾರೆ ಸ್ವಚ್ಛಗೊಳಿಸುವ ಸಂದರ್ಭ ವಿದೇಶಿ ಫೋಟೊಗ್ರಾಫರ್‌ಗಳು ಫೋಟೊ ಸೆರೆಹಿಡಿದರು. ಪ್ರಧಾನಿ ಸ್ವಚ್ಛತಾ ಕಾರ್ಯಕ್ರಮವನ್ನು ಸ್ಕ್ರಿಪ್ಟೆಡ್ ಆಗಿ ಮಾಡಲಾಗಿತ್ತು ಎಂದು ಬಿಂಬಿಸುವಂತಹ ಚಿತ್ರ. ಎರಡೂ ಚಿತ್ರಗಳನ್ನು ಸಾವಿರಾರು ಮಂದಿ ಮರು ಶೇರ್ ಮಾಡಿದ್ದು, ವಾಸ್ತವವಾಗಿ ಇವೆರಡೂ ಚಿತ್ರಗಳು ಸುಳ್ಳು ಎನ್ನುವುದು ಸಾಬೀತಾಗಿದೆ.

ಭವ್ಯ ಸ್ವಾಗತ ಇಲ್ಲ

ಮೋದಿಯವರಿಗೆ ಭವ್ಯ ಸ್ವಾಗತ ದೊರಕಿತು ಎಂದು ಬಿಂಬಿಸುವ ವೀಡಿಯೊದಲ್ಲಿ ಮೋದಿಯವರು ರಸ್ತೆಯಲ್ಲಿ ನಿಂತಿದ್ದು ಅವರತ್ತ ಕೈಬೀಸುವ ಅಭಿಮಾನಿಗಳ ಎದುರು ನಡೆಯುತ್ತಿರುವ ದೃಶ್ಯವಿದೆ. ಈ ವೀಡಿಯೊ ಟ್ವಿಟರ್‌ನಲ್ಲಿ ವೈರಲ್ ಆಗಿದ್ದು, ವೀಡೆ ವೀಡೆ ಎಂಬ ತೆಲುಗು ಹಾಡಿನ ಹಿನ್ನೆಲೆ ಸಂಗೀತವನ್ನು ಹೊಂದಿದೆ.

ಆದರೆ ವಾಸ್ತವವಾಗಿ ಈ ತುಣುಕು ತಮಿಳುನಾಡಿಗೆ ಸಂಬಂಧಿಸಿದ್ದಲ್ಲ; ಅದು ಮೋದಿಯವರ ತವರು ಗುಜರಾತ್‌ನದ್ದು ಹಾಗೂ 2017ರ ಡಿಸೆಂಬರ್‌ನಲ್ಲಿ ಗುಜರಾತ್ ವಿಧಾನಸಭಾ ಚುನಾವಣೆ ವೇಳೆ ಚಿತ್ರೀಕರಿಸಿದ ವೀಡಿಯೊ. ಅಹ್ಮದಾಬಾದ್‌ನಲ್ಲಿ ಮೋದಿ ಮತ ಚಲಾಯಿಸಲು ಬಂದಾಗ ನಡೆಸಿದ ಮೆರವಣಿಗೆಯ ದೃಶ್ಯವಿದು.

ಇದೇ ವೀಡಿಯೊವನ್ನು ಫೇಸ್ ಬುಕ್‌ನಲ್ಲಿ, ಮೋದಿಯವರಿಗೆ ತಮಿಳುನಾಡು ಪ್ರೀತಿ ತೋರಿಸಿದೆ ಎಂಬ ಶೀರ್ಷಿಕೆಯೊಂದಿಗೆ ಬಿಜೆಪಿ ನಿರ್ವಹಿಸುವ ‘ಮೈ ಫಸ್ಟ್ ವೋಟ್ ಫಾರ್ ಮೋದಿ’ ಎಂಬ ಖಾತೆಯಿಂದ ಶೇರ್ ಮಾಡಲಾಗಿದೆ. ಆದರೆ ಬಳಿಕ ಇದನ್ನು ತೆಗೆದುಹಾಕಲಾಗಿದೆ.

ಸ್ವಚ್ಛತಾ ಅಭಿಯಾನ

ಮಾಮಲ್ಲಾಪುರಂ ಕಡಲ ಕಿನಾರೆಯಲ್ಲಿ ಜಾಗಿಂಗ್ ವೇಳೆ ಪ್ರಧಾನಿ ನರೇಂದ್ರ ಮೋದಿ ಕಸ ಹೆಕ್ಕುತ್ತಿರುವ ವೀಡಿಯೊ ತುಣುಕಿಗೆ ಮಿಶ್ರ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ. ಸ್ವಚ್ಛ ಭಾರತ ಅಭಿಯಾನದ ಪ್ರಚಾರಕ್ಕಾಗಿ ಮೋದಿ ಕಸ ಹೆಕ್ಕಿದ್ದಾರೆ ಎಂದು ಕೆಲವರು ಶ್ಲಾಘಿಸಿದರೆ, ಮತ್ತೆ ಕೆಲವರು ಇದು ಪೂರ್ವಯೋಜಿತ ಫೋಟೊಶೂಟ್ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಇದಕ್ಕೆ ಸಂಬಂಧಿಸಿ ಮೂರು ಚಿತ್ರಗಳನ್ನು ಟ್ವೀಟ್ ಮಾಡಿದ್ದು, ಒಂದು ಚಿತ್ರದಲ್ಲಿ ಕ್ಯಾಮರಾ ಮತ್ತು ಲೈಟಿಂಗ್ ಸಾಧನ ಹೊಂದಿರುವ ವಿದೇಶಿ ತಂತ್ರಜ್ಞರ ತಂಡವೊಂದು ಕಾಣಿಸುತ್ತದೆ. ಉಳಿದ ಎರಡು ಚಿತ್ರಗಳಲ್ಲಿ ಮೋದಿ ಕಸ ಹೆಕ್ಕುತ್ತಿರುವ ದೃಶ್ಯವಿದೆ.

Rofl Republic ಎಂಬ ಹ್ಯಾಂಡಲ್ ಈ ಕುರಿತ ನಾಲ್ಕು ಚಿತ್ರಗಳನ್ನು ಟ್ವೀಟ್ ಮಾಡಿದ್ದು, ಮೋದಿಯವರ ಪ್ಲಾಗಿಂಗ್ ದೃಶ್ಯವನ್ನು ಹೇಗೆ ಸೆರೆಹಿಡಿಯಲಾಗಿದೆ ಎಂಬ ಶೀರ್ಷಿಕೆಯೊಂದಿಗೆ ಟ್ವೀಟ್ ಮಾಡಲಾಗಿದೆ.

ಈ ನಾಲ್ಕು ಚಿತ್ರಗಳ ಪೈಕಿ ಒಂದು ಚಿತ್ರದಲ್ಲಿ, ಭದ್ರತಾ ಸಿಬ್ಬಂದಿ ಕಡಲ ಕಿನಾರೆಯಲ್ಲಿ ಬಾಂಬ್ ಶೋಧಕ ಸಾಧನದ ಮೂಲಕ ತಪಾಸಣೆ ಮಾಡುತ್ತಿರುವ ಚಿತ್ರವಿದೆ. ಈ ಚಿತ್ರ ವಾಸ್ತವವಾಗಿ 2019ರ ಎಪ್ರಿಲ್ 11ರದ್ದು, ಇದು ಪ್ರಚಾರ ರ್ಯಾಲಿಗೆ ಮೋದಿ ಕೇರಳದ ಕೋಯಿಕ್ಕೋಡ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಕ್ಲಿಕ್ಕಿಸಿದ ಚಿತ್ರ.

ಮತ್ತೊಂದು ಚಿತ್ರ ಕಾರ್ತಿ ಶೇರ್ ಮಾಡಿದ ವಿದೇಶಿ ತಂತ್ರಜ್ಞರನ್ನು ಒಳಗೊಂಡ ಚಿತ್ರ. ಇದು ವಾಸ್ತವವಾಗಿ ಸ್ಕಾಟ್ಲೆಂಡ್‌ನ ಸೈಂಟ್ ಆ್ಯಂಡ್ರೂಸ್ ದ್ವೀಪದ್ದು. Tayscreen.com ಎಂಬ ವೆಬ್ ಸೈಟ್‌ನಿಂದ ಪಡೆದದ್ದು. ಈ ಫೋಟೊದಲ್ಲಿರುವ ದೃಶ್ಯಾವಳಿಯನ್ನು ನೋಡಿದರೆ, ಇದು ಮಾಮಲ್ಲಾಪುರಂನಲ್ಲಿ ಕ್ಲಿಕ್ಕಿಸಿದ್ದಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಈ ತಪ್ಪುದಾರಿಗೆ ಎಳೆಯುವಂತಹ ಚಿತ್ರವನ್ನು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮಾಧ್ಯಮ ಸಂಯೋಜಕ ಅವಿನಾಶ್ ಕಬಾಡೆ ಮತ್ತು ಕಾಂಗ್ರೆಸ್ ವಕ್ತಾರ ಬೃಜೇಶ್ ಕಾಳಪ್ಪಟ್ವೀಟ್ ಮಾಡಿದ್ದಾರೆ.

ಕೃಪೆ: Theprint.in

Writer - ಅನನ್ಯ ಭಾರದ್ವಾಜ್

contributor

Editor - ಅನನ್ಯ ಭಾರದ್ವಾಜ್

contributor

Similar News

ಜಗದಗಲ
ಜಗ ದಗಲ