ಅಸ್ಪೃಶ್ಯ ಸಮಾಜಕ್ಕೆ ಶಿಕ್ಷಣ ಅನಿವಾರ್ಯ
ಮುಂಬೈನ ಪರೇಲ್‌ನಲ್ಲಿರುವ ದಾಮೋದರ್ ಹಾಲ್‌ನಲ್ಲಿ ಶನಿವಾರ ಸೆಪ್ಟಂಬರ್ 10, 1932ರಂದು ರಾತ್ರಿ ಮಹಾರ್ ಬಾಲವೀರ ಸಂಸ್ಥೆಯ ವತಿಯಿಂದ ಜರುಗಿದ ಸಭೆಯಲ್ಲಿ ಡಾ. ಅಂಬೇಡ್ಕರ್ ಅವರು ಭಾಷಣವನ್ನು ಮಾಡಿದರು.
ದಾಮೋದರ್ ಹಾಲ್ ಪುರುಷರು-ಮಹಿಳೆಯರು, ಅಬಾಲ ವೃದ್ಧರಿಂದ ತುಂಬಿ ತುಳುಕುತ್ತಿತ್ತು. ಒಳಗೆ ಪ್ರವೇಶಿಸುವುದಕ್ಕೆ ಸಾಧ್ಯವಿಲ್ಲದೇ ನೂರಾರು ಜನರು ಡಾ. ಅಂಬೇಡ್ಕರ್ ಅವರನ್ನು ನೋಡಲಿಕ್ಕೆ ಆಗದಿದ್ದರೂ ಕನಿಷ್ಠ ಅವರ ಮಾತುಗಳನ್ನಾದರೂ ಕೇಳೋಣ ಎಂದು ಹೊರಗೆ ಜಮಾಯಿಸಿದ್ದರು. ಸಭೆಯ ವರದಿ ಮಾಡುವುದಕ್ಕೆ ಆಗಮಿಸಿದ್ದ ಪತ್ರಕರ್ತರೂ ಅತಿ ಕಷ್ಟದಿಂದ ಒಳಗೆ ಹೋಗಬೇಕಾಯಿತು.
ಪ್ರಚಂಡ ಕರತಾಡನದೊಂದಿಗೆ ಡಾ. ಅಂಬೇಡ್ಕರ್ ಮಾತಿಗೆ ನಿಂತರು. ಡಾ. ಅಂಬೇಡ್ಕರ್ ಅವರ ಮಾತು ಆರಂಭವಾಗುತ್ತಿದ್ದಂತೆಯೇ ಕರತಾಡನ ನಿಶ್ಯಬ್ದವಾಗಿ ಎಲ್ಲೆಡೆ ವೌನದ ಸಾಮ್ರಾಜ್ಯ ಹರಡಿಕೊಳ್ಳಲಾರಂಭಿಸಿತು. ಸಭೆಯು ಡಾ. ಅಂಬೇಡ್ಕರ್ ಅವರ ಮಾತುಗಳನ್ನು ನಿಶ್ಯಬ್ದವಾಗಿ ಕೇಳಲಾರಂಭಿಸಿತು.
ಮೊದಲಿಗೆ ಸಂಘದ ಪದಾಧಿಕಾರಿಗಳಿಗೆ ಮತ್ತು ಸಂಘದ ಮುಖಾಂತರ ನಡೆಯುತ್ತಿರುವ ಶೈಕ್ಷಣಿಕ ಪ್ರಸಾರ ಕಾರ್ಯಕ್ಕೆ ಡಾ. ಅಂಬೇಡ್ಕರ್ ಅವರ ಶ್ಲಾಘನೆಯ ಮಾತುಗಳು ಅವರ ಮುಂದಿನ ಮಾತುಗಳಿಗೆ ಮುನ್ನುಡಿ ಬರೆದವು. ಶೈಕ್ಷಣಿಕ ಪ್ರಸಾರಕ್ಕೆ ಸಂಬಂಧಿಸಿದಂತೆ ಸಂಸ್ಥೆ ಸಲ್ಲಿಸಿದ ಖರ್ಚು ವೆಚ್ಚದ ವಿವರವನ್ನು ತಮ್ಮ ಮಾತಿನಲ್ಲಿ ಉಲ್ಲೇಖಿಸುತ್ತ ಅವರು, ನನ್ನ ಸನ್ಮಾನಕ್ಕಾಗಿ ಹೂವಿನ ಹಾರ, ಹೂಗುಚ್ಛ ತಂದಿದ್ದು ಸರಿಯಲ್ಲ. ಇದೇ ಹಣವನ್ನು ಸಂಸ್ಥೆ ತನ್ನ ಶೈಕ್ಷಣಿಕ ಉದ್ದೇಶಕ್ಕೆ ಬಳಸಿಕೊಂಡಿದ್ದರೆ ಅದು ಇನ್ನಷ್ಟು ಉತ್ತಮ ಆಗುತ್ತಿತ್ತೆಂದು ಹೇಳಿದರು. ಸನ್ಮಾನ ಖರ್ಚು ಸಂಸ್ಥೆಗೆ ಹೊರೆಯಾಗಬಾರದು ಎಂದು 25 ರೂಪಾಯಿಗಳ ದೇಣಿಗೆ ನೀಡುತ್ತೇನೆ ಎಂದೂ ಹೇಳಿದರು.
ಇಂದು ಅಸ್ಪಶ್ಯ ಸಮಾಜಕ್ಕೆ ಅತ್ಯಗತ್ಯ ಮತ್ತು ಅನಿವಾರ್ಯವಾಗಿರುವ ಸಂಗತಿಯೆಂದರೆ ಅದು ಶಿಕ್ಷಣ ಪ್ರಸಾರ. ಸಮಾಜದ ಪ್ರತಿಯೊಬ್ಬ ವ್ಯಕ್ತಿ, ಪ್ರತಿಯೊಂದು ಸಂಸ್ಥೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ನಮ್ಮ ಯುವ ಜನಾಂಗದ ಮುಂದಿನ ಹೆಜ್ಜೆ ಮತ್ತು ಇಂದಿನ ಅವರ ಮನಸ್ಥಿತಿ ಏನು ಎನ್ನುವ ಪ್ರಶ್ನೆಯತ್ತ ನಾವು ಚಿಂತನೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕೆಲಸ ಆರಂಭಿಸಿದ್ದು, ಇದಕ್ಕೆ ಪೂರಕವಾಗಿ ಈಗಾಗಲೇ 3 ಬೋರ್ಡಿಂಗ್‌ಗಳು ಅಸ್ತಿತ್ವಕ್ಕೆ ಬಂದಿವೆ. ಮಹಾರಾಷ್ಟ್ರದ ಮಕ್ಕಳಿಗಾಗಿ ಥಾಣೆಯಲ್ಲಿ ಬೋರ್ಡಿಂಗ್, ಕರ್ನಾಟಕದ ಮಕ್ಕಳಿಗಾಗಿ ಧಾರವಾಡದಲ್ಲಿ ಮತ್ತು ಗುಜರಾತ್‌ನ ಮಕ್ಕಳಿಗಾಗಿ ಅಹ್ಮದಾಬಾದ್‌ನಲ್ಲಿ ಸ್ಥಾಪಿಸಿರುವ ಹಾಸ್ಟೆಲ್, ಈ ಮೂರು ಬೋರ್ಡಿಂಗ್‌ಗಳಲ್ಲಿ ಇಂದು ಏನಿಲ್ಲವೆಂದರೂ 100 ಮಕ್ಕಳಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸಭಿಕರಿಗೆ ಮತ್ತಷ್ಟು ಸ್ಪಷ್ಟ ಅರಿವು ನೀಡುವುದಕ್ಕೆ ಡಾ. ಅಂಬೇಡ್ಕರ್ ಹೇಳಿದ ವಿಚಾರವಿಷ್ಟು:
ಈ ದೇಶದಲ್ಲಿ ಶತಶತಮಾನಗಳಿಂದ ಅನೂಚಾನವಾಗಿ ಬೆಳೆದು ಬಂದಿರುವ ಉಚ್ಚ-ನೀಚ ಭೇದ ನೀತಿ ಗಟ್ಟಿಯಾಗಲು ಜಾತಿ ವ್ಯವಸ್ಥೆಯು ಕಾರಣವಾಗಿದ್ದರೂ ಅದು ಚಿರಸ್ಥಾಯಿಯಾಗಿ ನಿಲ್ಲಲು ಜಾತಿ ಜಾತಿಗಳ ಗುಣವೈಶಿಷ್ಟಗಳು ಕಾರಣವಾಗಿವೆ. ಕೆಲವೇ ನಿರ್ಧಾರಿತ ಜಾತಿಗಳ ಶ್ರೇಷ್ಠತೆ ಇನ್ನಿತರ ಜಾತಿಯೊಳಗಿನ ಜ್ಞಾನದ ಅಭಾವದಿಂದಾಗಿ ಈ ಭೇದಭಾವ ಸ್ಥಿರವಾಗುವಂತಹ ಸ್ಥಿತಿ ನಿರ್ಮಿಸಿತು. ಸರಕಾರಿ ದರ್ಬಾರದಲ್ಲಿನ ಉನ್ನತ ಹುದ್ದೆಗಳು ವಿಶೇಷತಃ ಜನರ ಮೇಲೆ ಅಧಿಕಾರ ಚಲಾಯಿಸುವಂತಹ ಮಾಮಲ್ದಾರಿ ಇಲ್ಲವೇ ಪೊಲೀಸ್ ಅಧಿಕಾರಿ ಹುದ್ದೆಗಳು ಇಲ್ಲಿಯವರಗೆ ಅಸ್ಪಶ್ಯ ಸಮಾಜದಿಂದ ದೂರ ಉಳಿದಿವೆ. ಇಂತಹ ಕಾರಣಗಳಿಂದಾಗಿ ಈ ಸಮಾಜಕ್ಕೆ ಅವಮಾನ ಆಗುತ್ತಿರುವುದರ ಜೊತೆಗೆ ಈ ಸಮಾಜವನ್ನು ನೋಡುವ ಇತರ ಜಾತಿಯವರ ದೃಷ್ಟಿಕೋನ ಕೂಡ ಭಿನ್ನವಾಗಿರುತ್ತದೆ. ಈ ಸಂಕುಚಿತ ದೃಷ್ಟಿಕೋನ ಬದಲಿಸಿ ನಮ್ಮ ಸಮಾಜದ ಬಗ್ಗೆ ಬೇರೆಯವರ ಮನದಲ್ಲಿ ತುಂಬಿರುವ ಅಸಮಾನತೆಯ ಮನೋಭಾವ ಅಳಿಸುವುದಕ್ಕೆ ಇರುವ ರಾಮಬಾಣ ಎಂದರೆ ಅಧಿಕಾರದ ಹುದ್ದೆಗಳನ್ನು ಅಲಂಕರಿಸುವುದು. ಪ್ರತ್ಯಕ್ಷ ಉದಾಹರಣೆ ಎಂದರೆ, ಡೆಪ್ಯುಟಿ ಕಲೆಕ್ಟರ್ ಆಗಿರುವ ಅಸ್ಪಶ್ಯ ಯುವಕನೊಬ್ಬ ಯಾವ ಜಿಲ್ಲೆಗೆ ಹೋಗುತ್ತಾನೋ ಅಲ್ಲಿಯ ಅಸ್ಪಶ್ಯ ಸಮಾಜವು ತಮ್ಮ ತಲೆಯ ಮೇಲೆ ಅಭಯ ಹಸ್ತ ಇದೆ ಎಂದು ಭಾವಿಸುತ್ತದೆ. ಅಸ್ಪಶ್ಯ ಸಮಾಜವನ್ನು ಕೀಳಾಗಿ ನೋಡುವ ಇತರ ಸಮಾಜದ ಮನೋಭಾವ ಕೂಡ ಕಡಿಮೆಯಾಗುತ್ತದೆ. ಈ ರೀತಿ ಅನೇಕ ಅಸ್ಪಶ್ಯ ಯುವಕರು ಅಧಿಕಾರ ಕೇಂದ್ರಗಳಲ್ಲಿ ಸ್ಥಾಪಿತರಾದರೆ ಇಂದಿನ ಪರಿಸ್ಥಿತಿ ಬದಲಿಸದೇ ಇರಲಾರರು.
ಒಂದು ವೇಳೆ ಈಗ ಯುವಕ, ಉನ್ನತ ಶಿಕ್ಷಣ ಪಡೆದು ತನ್ನ ಸಾಮರ್ಥ್ಯ ಸಾಬೀತುಪಡಿಸದೇ ಇದ್ದಲ್ಲಿ ಸಮಾಜಕ್ಕೆ ಲಾಭವಾಗುತ್ತಿರಲಿಲ್ಲ. ಪರಿಶ್ರಮದಿಂದ ಉನ್ನತ ಶಿಕ್ಷಣ ಪಡೆಯದಿದ್ದರೆ ಇಂದು ಲಭಿಸಿರುವ ಸೌಲಭ್ಯಗಳು ಲಭಿಸುತ್ತಿದ್ದವೇ? ತನ್ನ ವೈಯಕ್ತಿಕ ಸಾಮರ್ಥ್ಯ ವೃದ್ಧಿಗಾಗಿ ಮತ್ತು ತನ್ನ ಸಮಾಜದ ಯೋಗ್ಯತೆಯನ್ನು ಎತ್ತರಕ್ಕೇರಿಸುವ ಮಾರ್ಗ ಕೇವಲ ಶಿಕ್ಷಣವನ್ನು ಅವಲಂಬಿಸಿದೆ. ಇಂದು ಕಾನೂನಿನ ಮುಖಾಂತರ ನಮ್ಮ ಸಮಾಜಕ್ಕೆ ಮೀಸಲಾತಿ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಆದರೆ ನಾವು ಆಯಾ ಹುದ್ದೆಗಳಿಗೆ ಸೂಕ್ತವಾಗಿರುವ ಶಿಕ್ಷಣ ಪಡೆಯದೇ ಇದ್ದಲ್ಲಿ ನಮ್ಮ ಬೇಡಿಕೆ ನಿಷ್ಫಲವಾಗುತ್ತದೆ. ನಮ್ಮ ದೌರ್ಬಲ್ಯದ ಕಾರಣ ನಮಗೆ ಲಭಿಸಿರುವ ಸ್ಥಾನಗಳು ಬೇರೆಯವರ ಪಾಲಾಗಬಹುದು. ದುಂಡು ಮೇಜಿನ ಪರಿಷತ್ತೇಇರಲಿ ಅಥವಾ ಕಾನೂನು ಮಂಡಳಿಯೇ ಇರಲಿ ಅಸ್ಪಶ್ಯ ಸಮಾಜಕ್ಕಾಗಿ ನಾನು ಮೀಸಲಾತಿ ಬೇಡಿಕೆ ಮಂಡಿಸುವ ಸಂದರ್ಭದಲ್ಲಿ ಈ ಪ್ರಶ್ನೆ ಕಾಡುತ್ತಲೇ ಇತ್ತು. ಅಸ್ಪಶ್ಯರಲ್ಲಿ ಹೆಚ್ಚುತ್ತಿರುವ ಮಹತ್ವಾಕಾಂಕ್ಷೆ ಮತ್ತು ಮಂಡಿಸುವ ಸಂದರ್ಭದಲ್ಲಿ ಈ ಪ್ರಶ್ನೆ ಕಾಡುತ್ತಲೇ ಇತ್ತು. ಅಸ್ಪಶ್ಯರಲ್ಲಿ ಹೆಚ್ಚುತ್ತಿರುವ ಮಹತ್ವಾಕಾಂಕ್ಷೆ ಮತ್ತು ಜ್ಞಾನ ಲಾಲಸೆಯಿಂದಾಗಿ ನನಗೆ ಧೈರ್ಯ ಬಂದಿತು. ಹಿಂದಿನ ದಿನಗಳಿಗೆ ಹೋಲಿಸಿದರೆ ಇಂದು ಅಸ್ಪಶ್ಯರಿಗೆ ಲಭಿಸಿರುವ ಶಿಕ್ಷಣ ಸೌಲಭ್ಯ ಮತ್ತು ಪರಿಸ್ಥಿತಿಯಲ್ಲಿ ಆಗಿರುವ ಬದಲಾವಣೆ ಒಂದು ರೀತಿಯ ಉತ್ತೇಜನ ನೀಡುತ್ತದೆ.
ಇದೇ ಸಂದರ್ಭದಲ್ಲಿ ಅವರು ತಮ್ಮ ಜೀವನದಲ್ಲಿ ನಡೆದ ಒಂದು ಘಟನೆಯನ್ನು ವಿವರಿಸಿದರು. ಇಂಗ್ಲಿಷ್ ಅಧ್ಯಯನಕ್ಕಾಗಿ ಅವರು ಮುಂಬೈಗೆ ಬಂದಿಳಿದ ಸಂದರ್ಭದಲ್ಲಿ ನಡೆದ ಘಟನೆ ಇದು. 8 ಅಡಿ ಅಗಲ 10 ಅಡಿ ಉದ್ದದ ಮುಂಬೈನ ಗಲ್ಲಿಯೊಂದರ ಮನೆಯಲ್ಲಿ 8-10 ಜನರೊಂದಿಗೆ ವಾಸ್ತವ್ಯ ಮಾಡಬೇಕಾದ ಪರಿಸ್ಥಿತಿ. ಕೊಠಡಿಯ ಒಂದು ಪಕ್ಕ ಗಟಾರು, ಅದರ ಪಕ್ಕದಲ್ಲಿ ಒಲೆ, ತಲೆಗೆ ಬಡಿಯುವ ಕಟ್ಟಿಗೆ ಛಾವಣಿ, ಸದಾಕಾಲ ಹೊಗೆ ತುಂಬಿರುತ್ತಿದ್ದ ಕೊಠಡಿಯಲ್ಲಿ ಅಷ್ಟೊಂದು ಜನರು, ನಾನಾ ರೀತಿಯ ಉದ್ಯೋಗ-ದಂಧೆ ಮಾಡುವವರು. ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಅನುಕೂಲಕರ ವಾತಾವರಣ ಇಲ್ಲದಂತಹ ಕೆಟ್ಟ ಪರಿಸ್ಥಿತಿಯಲ್ಲಿ ವಿವಿಧ ರೀತಿಯ ಪರೀಕ್ಷೆಗಳಿಗೆ ವಿದ್ಯಾರ್ಥಿಯೊಬ್ಬ ಹೇಗೆ ಸಿದ್ಧನಾಗಲು ಸಾಧ್ಯ? ಇಂತಹ ಮನಕುಲಕುವ ನೆನಪನ್ನು ಮೆಲುಕು ಹಾಕಿದ ಅವರು, ಇಂದಿನ ವಿದ್ಯಾರ್ಥಿಗಳಿಗೆ ಅಂತಹ ಪರಿಸ್ಥಿತಿ ಇಲ್ಲ. ವಿವಿಧ ಶಿಷ್ಯವೇತನಗಳಿವೆ. ವಸತಿ ಸೌಲಭ್ಯ ಇದೆ. ಶೈಕ್ಷಣಿಕ ಸಹವಾಸ ಇರುವ ಕಾರಣ ವ್ಯಾಸಂಗ ಮತ್ತಷ್ಟು ಅನುಕೂಲಕರವಾಗಿದೆ. ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಸುಸಂದರ್ಭಗಳ ಉಪಯೋಗವನ್ನು ಪಡೆದುಕೊಂಡು ಸಮಾಜದ ಸಾಮರ್ಥ್ಯವನ್ನು ಹೆಚ್ಚಿಸುವ ಕರ್ತವ್ಯದಲ್ಲಿ ನಿರತರಾಗಬೇಕು. ವಿದ್ಯಾರ್ಥಿದೆಸೆಯಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಜ್ಞಾನಾರ್ಜನೆಯೊಂದೇ ಅವರ ಧ್ಯೇಯವಾಗಬೇಕು. ವಿದ್ಯಾರ್ಥಿ ದೆಸೆ ಮರಳಿ ಬರಲಾರದು. ಈ ಅವಧಿಯಲ್ಲಿ ಜ್ಞಾನ ಸಂಪಾದನೆಗಾಗಿ ಅವರ ಪ್ರಯತ್ನಶೀಲತೆ ಪರಮಾವಧಿ ತಲುಪಬೇಕು.
ಸಮಾಜಸೇವೆಗಾಗಿ ಮುಂದಿನ ಜೀವನದಲ್ಲಿ ಸಾಕಷ್ಟು ಅವಕಾಶ ಇದ್ದೇ ಇದೆ. ಪರಿಪೂರ್ಣ ಜ್ಞಾನ ಪಡೆದು ನಾನಾ ರೀತಿಯ ಅಧಿಕಾರ ಸಂಪಾದನೆಯ ನಂತರ ಸಮಾಜದ ಹಿತರಕ್ಷಣೆ ಮಾಡುವುದಕ್ಕೆ ಸಾಧ್ಯವಾಗಬಹುದು. ಈ ಅಂಶವನ್ನು ಗಮನದಲ್ಲಿರಿಸಿಕೊಂಡರೆ ಶಿಕ್ಷಣ ಪಡೆಯುವುದೇ ನಿಮ್ಮ ಇಂದಿನ ಉದ್ದೇಶವಾಗಬೇಕು ಎಂದು ಕಳಕಳಿಯಿಂದ ಹೇಳಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವುದಕ್ಕೆ ತಮಗೆ ಅವಕಾಶ ನೀಡಿದ ಸಂಸ್ಥೆಗೆ ಡಾ. ಅಂಬೇಡ್ಕರ್ ಕೃತಜ್ಞತೆ ಸಲ್ಲಿಸಿ ಸಂಸ್ಥೆ ತನ್ನ ಶಿಕ್ಷಣ ಪ್ರಸಾರ ಕಾರ್ಯದಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು. ಇದಾದ ಬಳಿಕ ಶ್ರೀ ಡಿ.ವಿ. ಪ್ರಧಾನ್ ಅವರು ತಮ್ಮ ಭಾಷಣದಲ್ಲಿ ಸಂಸ್ಥೆಯ ಸದಸ್ಯರು ಶಿಕ್ಷಣ ಪ್ರಸಾರದಲ್ಲಿ ತೋರುತ್ತಿರುವ ಆಸಕ್ತಿಗೆ ಅಭಿನಂದನೆ ಸಲ್ಲಿಸುವುದರ ಜೊತೆಗೆ ವರ್ತಮಾನ ಪತ್ರಿಕೆಗಳು ಯಾವ ರೀತಿ ಜನರಿಗೆ ಶಿಕ್ಷಣ ಒದಗಿಸುವ ಕೆಲಸ ಮಾಡುತ್ತಿವೆ ಎನ್ನುವುದನ್ನು ವಿವರಿಸಿದರು. ಅಸ್ಪಶ್ಯ ಸಮಾಜದ ಮುಖಪತ್ರಿಕೆಯಾಗಿ ಕೆಲಸ ಮಾಡುತ್ತಿರುವ ‘ಜನತಾಪತ್ರ’ವನ್ನು ಅಸ್ಪಶ್ಯರು ಯಾವ ರೀತಿ ಓದಿ ಅರ್ಥೈಸಿಕೊಳ್ಳಬೇಕೆನ್ನುವುದನ್ನು ವಿವರಿಸಿ ಆ ಪತ್ರಿಕೆಯ ಪ್ರಸಾರ ಎಂದರೆ ಲೋಕ ಶಿಕ್ಷಣದ ಪ್ರಾಸಾರವಿದ್ದಂತೆ. ಇದಕ್ಕಾಗಿ ಜನತಾ ಪತ್ರದ ಪ್ರಸಾರ ಸಂಖ್ಯೆ ಹೆಚ್ಚಿಸಬೇಕಿದೆ ಎಂದರು. ಡಾ. ಅಂಬೇಡ್ಕರ್ ಮತ್ತು ಇತರ ಆಮಂತ್ರಿತ ಗಣ್ಯರಿಗೆ ಸಂಸ್ಥೆಯ ಕಾರ್ಯದರ್ಶಿ ವಂದನಾರ್ಪಣೆ ಸಲ್ಲಿಸಿದರು. ಬಾಲಕಿಯರ ಸಂಗೀತದೊಂದಿಗೆ ಅಂಬೇಡ್ಕರ್ ಅವರಿಗೆ ಪುಷ್ಪಗುಚ್ಛ ನೀಡಿ ಸನ್ಮಾನಿಸಲಾಯಿತು.
(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)