ಬಾಲ್ಯದ ಬಿಡಿ ಚಿತ್ರಗಳು....

Update: 2019-10-18 18:39 GMT

 ಬರಹಗಾರರನ್ನು ಪ್ರಕೃತಿ ಮತ್ತು ಬಾಲ್ಯ ಕಾಡಿದಷ್ಟು ಇನ್ನಾವುದೂ ಕಾಡಿಲ್ಲ. ಬಾಲ್ಯಕ್ಕೂ ಪ್ರಕೃತಿಗೂ ಅವಿನಾಭಾವ ನಂಟಿದೆ. ಪ್ರಕೃತಿಯನ್ನು ಬಾಲ್ಯ ಕುತೂಹಲದಿಂದ ವೀಕ್ಷಿಸುತ್ತದೆ. ಮುಗ್ಧತೆ ಪ್ರಕೃತಿಯನ್ನು ರಮ್ಯವಾಗಿಸುತ್ತದೆ. ಆದುದರಿಂದಲೇ ಇರಬೇಕು ಕವಿಗಳು ಪದೇ ಪದೇ ಪ್ರಕೃತಿ ಮತ್ತು ಬಾಲ್ಯದ ಕುರಿತಂತೆ ಬರೆಯುವುದು. ಎಲ್ಲ ಲೇಖಕರು ಒಂದಲ್ಲ ಒಂದು ಸಂದರ್ಭದಲ್ಲಿ ತಮ್ಮ ಬಾಲ್ಯದ ನೆನಪುಗಳನ್ನು ಬರೆಯುತ್ತಾರೆ. ಆ ನೆನಪುಗಳೇ ಲೇಖಕರನ್ನು ರೂಪಿಸಿರುತ್ತದೆ. ನಾರಾಯಣ ಬಾಬಾನಗರ ಅವರ ‘ನೆರಳಿನ್ಹಾಂಗ ನೆನಪು’ ಬಾಲ್ಯದ ಬಣ್ಣದ ಬಿಡಿ ಚಿತ್ರಗಳು. ಈ ಕೃತಿಯಲ್ಲಿ ನಾರಾಯಣ ಬಾಬಾನಗರ ಅವರು ತಮ್ಮ ಬಾಲ್ಯದ ನೆನಪುಗಳನ್ನು ದಾಖಲಿಸುತ್ತಾ ಹೋಗುತ್ತಾರೆ. ತಾವು ಬಾಲ್ಯದಲ್ಲಿ ಆಡಿದ ಆಟಗಳು, ಕಂಡ ವ್ಯಕ್ತಿಗಳು, ಮಾಡಿದ ಪ್ರವಾಸ, ಊರ ಜಾತ್ರೆ....ಹೀಗೆ ಬಾಲ್ಯದ ಕಣ್ಣುಗಳಿಗೆ ಕಂಡಿದ್ದನ್ನು ಉತ್ತರ ಕರ್ನಾಟಕದ ಗಂಡು ಮೆಟ್ಟಿನ ಭಾಷೆಯಲ್ಲಿ ನಿರೂಪಿಸುತ್ತಾರೆ. ಇಲ್ಲಿರುವ ಬರಹಗಳು ಕೇವಲ ಅವರೊಬ್ಬರದೇ ಆಗದೆ ಓದುಗರ ಅನುಭವವೂ ಆಗಿ ಬೆಳೆಯುತ್ತದೆ. ಸಾಧಾರಣವಾಗಿ ಯಾರದೇ ಬಾಲ್ಯದ ನೆನಪುಗಳು ನಮ್ಮ ಬಾಲ್ಯವನ್ನು ನೆನಪಿಸುವುದು ಸಹಜ. ಇಲ್ಲೂ ಅದೇ ನಡೆಯುತ್ತದೆ.

ಇಲ್ಲಿ ಒಟ್ಟು 24 ಲೇಖನಗಳಿವೆ. ಜಾತ್ರಿ ಜೊತಿಗಿನ ನೆನಪಿನ ಬುತ್ತಿ, ಹುಸೇನಿ ಕಥೆಯಾದ, ಹೋಳಿ ಹುಣ್ಣಿಮೆಯ ಬಣ್ಣ ಬಣ್ಣದ ನೆನಪುಗಳು, ಬಿರ ಬಿರ ಬಿಸಿಲಾಗ...ಲಾಲಾವಾಲನ ನೆನಪು, ಸಿದ್ಧಾರೂಢನ ಜೋಳಿಗಿ ಓಣಿ ತುಂಬಾ ಹೋಳಿಗಿ...ಬಾಲ್ಯದ ಸಣ್ಣ ಸಣ್ಣ ಖುಷಿಗಳನ್ನು ಅವರು ಉತ್ತರ ಕರ್ನಾಟಕದ ಭಾಷೆಯಲ್ಲಿ ನಿರೂಪಿಸುವ ಚಂದ ನಮ್ಮನ್ನು ಹಿಡಿದಿಡುತ್ತದೆ. ಬಹುಶಃ ಬಾಲ್ಯದ ಖುಷಿ ಎಲ್ಲರದೂ ಒಂದೇ ಆಗಿರಬಹುದು. ಆದರೆ ಅನುಭವಗಳು ಪ್ರದೇಶದಿಂದ ಪ್ರದೇಶಕ್ಕೆ ಬೇರೆ ಬೇರೆಯಾಗಿರುತ್ತದೆ. ಉತ್ತರ ಕರ್ನಾಟಕ ಅದರಲ್ಲೂ ವಿಜಯಪುರದವರಾಗಿರುವ ಲೇಖಕರ ಅನುಭವ ಜಗತ್ತು ಉಳಿದವರಿಗೆ ಈ ಕಾರಣದಿಂದ ವಿಶಿಷ್ಟವಾಗಿ ಕಾಣಬಹುದು. ಅಲ್ಲಿಯ ಆಚಾರ ವಿಚಾರ, ಊಟ ತಿಂಡಿ, ಶಾಲೆ, ಬಯಲು, ಆಟ ಎಲ್ಲವೂ ಆ ನೆಲದ ಮಣ್ಣಿಗೆ ಸಂಬಂಧಪಟ್ಟವುಗಳು. ಆದುದರಿಂದ ತಮ್ಮ ಬರಹದ ನಿರೂಪಣೆಗೂ ಅವರು ಅದೇ ನೆಲದ ಭಾಷೆಯನ್ನು ಬಳಸಿದ್ದಾರೆ ಮತ್ತು ಆ ಕಾರಣಕ್ಕಾಗಿಯೇ ಅವರ ಅನುಭವಗಳು ಹೆಚ್ಚು ಜೀವಂತವಾಗಿವೆ.

ಬೆನಕ ಬುಕ್ಸ್ ಬ್ಯಾಂಕ್ ಈ ಕೃತಿಯನ್ನು ಹೊರತಂದಿದೆ. 132 ಪುಟಗಳ ಈ ಕೃತಿಯ ಮುಖಬೆಲೆ 120 ರೂ. ಆಸಕ್ತರು 73384 37666 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News

ಜಗದಗಲ
ಜಗ ದಗಲ