ಕನ್ನಡ ಅಸ್ಮಿತೆ; ಏನಿದು? ಎಂತಿದು?

Update: 2019-10-19 12:08 GMT

ಇವರು ಇವರೇ. ಅವರಲ್ಲ; ನಾನು ನಾನೇ, ಬೇರೆ ಯಾರೂ ಅಲ್ಲ ಎಂದು ಸೂಚಿಸುವುದೇ ಅಸ್ಮಿತೆ. ದೇಹಾಕಾರ, ಉಡುಪು, ನಂಬಿಕೆ, ವರ್ತನೆ, ಆಚರಣೆ, ಸಂಗೀತ, ಕಲೆ, ಕರಕುಶಲ ವಸ್ತು ಇತ್ಯಾದಿಗಳೆಲ್ಲ ಅಸ್ಮಿತೆಯ ಅಂಶಗಳೇ ಆದರೂ ಅಸ್ಮಿತೆಯ ಲಕ್ಷಣಗಳನ್ನೆಲ್ಲ ಸರ್ವಾಂತರ್ಯಾಮಿಯಾಗಿ ಆವರಿಸಿಕೊಂಡಿರುವುದೂ ಸಮುದಾಯದ ಭಾಷೆಯೇ. ಭಾವನಾತ್ಮಕವಾಗಿ ಜನರನ್ನು ಒಟ್ಟಿಗೆ ತರುವುದು ಎಲ್ಲ ಭಾಷಾ ಅಸ್ಮಿತೆಗಳ ಪ್ರಮುಖ ಕಾಳಜಿಯಾಗಿದ್ದು ಅದು ಕನ್ನಡದ ಸಂದರ್ಭದಲ್ಲಿಯೂ ನಿಜವಾದದ್ದು.

ಕನ್ನಡ ರಾಜ್ಯೋತ್ಸವದ ಹೊಸ್ತಿಲಲ್ಲಿರುವಾಗ ಕನ್ನಡ ಅಸ್ಮಿತೆ ಎನ್ನುವ ಪದಪ್ರಯೋಗ ಮತ್ತೆ ಮತ್ತೆ ಕೇಳಿಬರುತ್ತಿದೆ. ತುಂಬ ಜನರಿಗೆ ಇದೇನು ಎನ್ನುವ ಪ್ರಶ್ನೆ ಕಾಡುತ್ತದೆ. ಹಾಗಿದ್ದರೆ ಅಸ್ಮಿತೆ ಎಂದರೇನು? ಕನ್ನಡ ಅಸ್ಮಿತೆ ಎಂದರೆ ಏನು? ಅದರತ್ತ ಬೆಳಕು ಚೆಲ್ಲುವ ಸಣ್ಣಪ್ರಯತ್ನವೇ ಈ ಲೇಖನ.

ಅಸ್ಮಿತೆ ತನ್ನ ಚಹರೆಗಳನ್ನು, ತನ್ನತನವನ್ನು ಮತ್ತು ತನ್ನ ಸ್ಥಾನಮಾನಗಳನ್ನು ಗುರುತಿಸಿಕೊಳ್ಳುವ ಅರ್ಥವನ್ನು ಹೊಂದಿರುವ ಪರಿಭಾಷೆ. ಇಂಗ್ಲಿಷ್‌ನ (‘Identity’) (ಗುರುತು) ಮತ್ತು (Existence) (ಅಸ್ತಿತ್ವ) ಎರಡರ ಅರ್ಥವೂ ಇರುವ ಪರಿಕಲ್ಪನೆಯಿದು. ಆದರೆ, ಇದಕ್ಕೂ ಮೀರಿದ ವಿಸ್ತಾರವಾದ ಮತ್ತು ಆಳವಾದ ಅರ್ಥವ್ಯಾಪ್ತಿ ಹಿಂದಿ ಭಾಷೆಯಿಂದ ಬಂದ ಈ ಪರಿಕಲ್ಪನೆಗಿದೆ.

ಜಾಗತಿಕವಾದ ಕೆಲವು ಉದಾಹರಣೆಗಳ ಮೂಲಕ ಇದನ್ನು ನೋಡುವುದಾದರೆ, ಕುರ್ದಿಶ್ ಭಾಷೆಯನ್ನಾಡುವ ಜನಾಂಗ ಮಧ್ಯ ಪ್ರಾಚ್ಯದಲ್ಲಿದ್ದು ಇರಾಕ್, ಇರಾನ್, ಟರ್ಕಿಗಳ ಸಂಧಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಮೂರೂ ದೇಶಗಳಲ್ಲಿ ಹರಡಿಹೋಗಿರುವ ಈ ಭಾಷಿಕರಿಗೆ ರಾಷ್ಟ್ರವಿಲ್ಲ. ಜನಾಂಗಿಕ ಭಿನ್ನತೆಯಿಂದಾಗಿ ತಾವು ಪ್ರತ್ಯೇಕವಾಗಬೇಕೆಂದು ಹೋರಾಡುತ್ತಿದ್ದಾರೆ. ಇವರ ವಿಶಿಷ್ಟತೆಯ ಮುಖ್ಯ ಚಹರೆಗಳಲ್ಲಿ ಇವರ ಭಾಷೆಯೂ ಒಂದಾಗಿದೆ. ಈ ಜನಾಂಗವನ್ನು ಹತ್ತಿಕ್ಕುತ್ತಿರುವ ರಾಷ್ಟ್ರಗಳಲ್ಲಿ, ಮುಖ್ಯವಾಗಿ ಟರ್ಕಿಯಲ್ಲಿ, ಈ ಕುರ್ದಿಶ್ ಭಾಷೆಯನ್ನು ಬಳಸಲು ನಿರ್ಬಂಧಗಳಿವೆ.

ಎರಡನೆಯದು ಮಾಕ್ರೊ ಅಲ್ಗಾಂಕಿಯನ್ ಭಾಷಾ ಕುಟುಂಬಕ್ಕೆ ಸೇರಿದ ಒಜಿಬ್ವ ಭಾಷೆ ಮತ್ತು ಫ್ರೆಂಚ್ ಭಾಷೆಗೆ ಸಂಬಂಧಿಸಿದ್ದಾಗಿದೆ. ಉತ್ತರ ಅಮೆರಿಕದ ಕೆನಡಾ ಈಗ ಒಂದು ಕಾಮನ್ ವೆಲ್ತ್ ರಾಷ್ಟ್ರವಾಗಿದೆ. ಆದರೆ ಫ್ರೆಂಚ್ ವಸಾಹತಾಗಿದ್ದ ಇಂದಿನ ಕೆನಾಡದ ಕ್ವಿಬೆಕ್ ಪ್ರಾಂತದಲ್ಲಿ ಫ್ರೆಂಚ್ ಭಾಷಿಕ ಸಮುದಾಯವಿದೆ. ಬಹುದಿನಗಳಿಂದ ಕೆನಡಾದಲ್ಲಿ ಎರಡು ರಾಷ್ಟ್ರಗಳ ಬೇಡಿಕೆಯಿದೆ. ಫ್ರೆಂಚ್ ಮಾತಾಡುವ ಸಮುದಾಯವೇ ಈ ಬೇಡಿಕೆಯನ್ನು ಮಂಡಿಸಿದ್ದು, ತಮ್ಮ ಭಾಷೆಯನ್ನು ಪ್ರತ್ಯೇಕತೆಗೆ ಮುಖ್ಯ ಕಾರಣವನ್ನಾಗಿ ಇರಿಸಿಕೊಂಡಿದ್ದಾರೆ. ಇಂಥದೇ ಪರಿಸ್ಥಿತಿ ವಿಭಜನಪೂರ್ವ ಪಾಕಿಸ್ತಾನದಲ್ಲೂ ಇತ್ತು. 1947 ರಿಂದ 1971 ರವರೆಗೆ ಎರಡು ಭೌಗೋಳಿಕ ವಿಭಾಗಗಳಲ್ಲಿದ್ದ ಈ ರಾಷ್ಟ್ರಗಳಿಂದ ಬಾಂಗ್ಲಾದೇಶ ಪ್ರತ್ಯೇಕವಾಗಿ ರೂಪುಗೊಂಡಿತು. ಎರಡೂ ಭಾಗಗಳು ಧಾರ್ಮಿಕ ಏಕತೆಯನ್ನು ಹೊಂದಿದ್ದರೂ ಭಿನ್ನತೆಗೆ ಇದ್ದ ಕಾರಣಗಳಲ್ಲಿ ಭಾಷೆಯೂ ಮುಖ್ಯವಾಗಿದೆ.

ಮೂರನೆಯ ಉದಾಹರಣೆ ಭಾರತದ್ದೇ ಆದ ಉರ್ದು ಮತ್ತು ಸಿಂಧಿ ಭಾಷೆಗಳಿಗೆ ಸಂಬಂಧಿಸಿದ್ದಾಗಿದೆ. ಭಾರತದಲ್ಲಿ ರಾಜ್ಯಗಳ ಮರುವಿಂಗಡಣೆಗೆ ಭಾಷೆಯನ್ನೇ ಮುಖ್ಯ ಆಧಾರವನ್ನಾಗಿ ಇರಿಸಿಕೊಳ್ಳಲಾಗಿದೆ. ಹೀಗಿದ್ದರೂ ಎರಡು ಪ್ರಮುಖ ಭಾಷಾ ಸಮುದಾಯಗಳಾದ ಉರ್ದು ಮತ್ತು ಸಿಂಧಿಗಳಿಗೆ ಭೌಗೋಳಿಕ ಪ್ರತ್ಯೇಕತೆ ಇಲ್ಲ. ಎಷ್ಟೋ ರಾಜ್ಯಗಳಲ್ಲಿ ಈ ಭಾಷಾ ಸಮುದಾಯಗಳು ಹಂಚಿಹೋಗಿವೆ. ಕೆಲವು ರಾಜ್ಯಗಳಲ್ಲಿ ಪ್ರತ್ಯೇಕ ಭಾಷಾ ಸಮುದಾಯಗಳು ಹಂಚಿಹೋಗಿವೆ. ಕೆಲವು ರಾಜ್ಯಗಳಲ್ಲಿ ಪ್ರತ್ಯೇಕ ಭಾಷಾ ಸಮುದಾಯಗಳು ಅಲ್ಪಸಂಖ್ಯಾತವಾಗಿ ಅಡಕಗೊಂಡಿವೆ. ಭಾಷಾ ಅಲ್ಪಸಂಖ್ಯಾತರು ಎಂಬ ಗುಂಪನ್ನು ನಿರ್ದೇಶಿಸಿ ಕೆಲವು ಶಾಸನಬದ್ಧ ಸವಲತ್ತುಗಳನ್ನು ಕಲ್ಪಿಸುವ ಕಾನೂನುಗಳು ಜಾರಿಯಲ್ಲಿವೆ. ಈಗ ನಾಡಿನಾದ್ಯಂತ ನಡೆಯುತ್ತಿರುವ ಹಲವಾರು ಪ್ರತ್ಯೇಕವಾದಿ ಹೋರಾಟಗಳಲ್ಲಿ ಕೆಲವು ತಮ್ಮ ಪ್ರತ್ಯೇಕತೆಗೆ ಭಾಷೆಯನ್ನೇ ಮುಖ್ಯ ಚಹರೆಯನ್ನಾಗಿ ಇರಿಸಿಕೊಂಡಿವೆ. ಇಲ್ಲೆಲ್ಲಾ ಭಾಷಾ ಅಲ್ಪಸಂಖ್ಯಾತ ಸಮುದಾಯವೊಂದು ಪ್ರತ್ಯೇಕ ಅಸ್ತಿತ್ವಕ್ಕೆ ಹೋರಾಡುತ್ತಿರುತ್ತದೆ. ಈ ಹೋರಾಟದಲ್ಲಿ ಭಾಷೆ ಮುಖ್ಯ ಚಹರೆಯಾಗಿರುತ್ತದೆ. ಭಾಷೆಯ ಪ್ರತ್ಯೇಕತೆಯನ್ನು ಗುರಿಯಾಗಿಸಿಕೊಂಡು ತಮ್ಮ ಸಾಂಸ್ಕೃತಿಕ ಅಸ್ತಿತ್ವಕ್ಕಾಗಿನ ಹೋರಾಟ ಮತ್ತು ಭಾಷೆಯ ಅಸ್ತಿತ್ವವನ್ನೇ ಗುರಿಯಾಗಿಸಿಕೊಂಡ ಎರಡು ಬಗೆಯ ಹೋರಾಟಗಳನ್ನು ಕಾಣಬಹುದು. ಮೇಲ್ಕಂಡ ಉದಾಹರಣೆಗಳು ಅಸ್ಮಿತೆ ಕೇವಲ ಭಾಷೆಗೆ ಸಂಬಂಧಿಸಿದ್ದಲ್ಲ ಎನ್ನುವುದನ್ನು ಹೇಳುತ್ತಿವೆ. ಮೊದಲ ಎರಡು ನಿದರ್ಶನಗಳಲ್ಲಿ ಅಸ್ಮಿತೆಗೆ ಭಾಷೆಗಿಂತ ಮುಖ್ಯವಾಗಿ ಭೌಗೋಳಿಕ ನೆಲೆಯಿದೆ. ಟಿಬೆಟಿಯನ್ನರ, ತಮಿಳರ, ಕೊಡವ ಸಮುದಾಯದವರ, ಫೆಲೆಸ್ತೀನಿಯರ ಹಾಗೂ ಕಾಶ್ಮೀರಿ ಪಂಡಿತರ ವಿಚಾರದಲ್ಲಿಯೂ ಇದು ಅನ್ವಯವಾಗುಂತಹದ್ದು. ಸಂಕೇತಿ ಭಾಷೆ ಮಾತನಾಡುವ ಸಮುದಾಯದ ಅಸ್ಮಿತೆಯ ಪ್ರಧಾನ ನೆಲೆ ಭಾಷೆ ಅಥವಾ ಭೌಗೋಳಿಕ ನೆಲೆಯದ್ದಾಗಿರದೆ ಸಾಂಸ್ಕೃತಿಕವಾದದ್ದಾಗಿದೆ. ಮೇಲೆ ಉದಾಹರಿಸಿದ ಮೂರನೆಯ ನಿದರ್ಶನ ಸಂಕೇತಿ ಸಮುದಾಯದ ಆದ್ಯತೆಯಾದ ಸಾಂಸ್ಕೃತಿಕ ನೆಲೆಯದ್ದು. ಭಾರತದ ಪಾರ್ಸಿ ಸಮುದಾಯದವರ ಅಸ್ಮಿತೆಯ ನೆಲೆ ಪ್ರಧಾನವಾಗಿ ಭಾಷೆ, ಭೌಗೋಳಿಕ ಅಥವಾ ಸಾಂಸ್ಕೃತಿಕವಾದದ್ದಲ್ಲ. ತಮ್ಮ ಸಮುದಾಯವೇ ಕಣ್ಮರೆಯಾಗುತ್ತಿದೆ ಎಂಬ ಆತಂಕದಲ್ಲಿ ಹುಟ್ಟಿದ ಜನಾಂಗಿಕ ನೆಲೆಯದ್ದು. ಹಕ್ಕಿ-ಪಿಕ್ಕಿ ಸಮುದಾಯದಂತಹ ಅಲೆಮಾರಿ ಸಮುದಾಯಗಳಿಗೆ ಭಾಷಿಕ ಅಸ್ಮಿತೆಯೂ ಕಾಡುವುದಿಲ್ಲ. ಅವರಿಗೆ ಪ್ರಧಾನವಾಗಿ ಕಾಡುವುದು ಅನ್ನ, ನೀರು, ನೆರಳುಗಳನ್ನು ಗಳಿಸಲು ಪ್ರತಿದಿನ ಹೋರಾಡಬೇಕಾದ ಬದುಕಿನ ಪ್ರಶ್ನೆ.

ಮೇಲಿನ ಉದಾಹರಣೆಗಳನ್ನು ತಾತ್ವಿಕವಾಗಿ ನೋಡಿದಾಗ, ಒಂದು ಭಾಷೆಯ ಅಥವಾ ಸಮುದಾಯದ ಮಧ್ಯಮ ಮತ್ತು ಶ್ರೀಮಂತ ವರ್ಗಗಳು ತಮ್ಮ ಭಾಷಾ ಅಸ್ಮಿತೆಯ ರಕ್ಷಣೆಗಾಗಿ ಹೋರಾಡುತ್ತಿದ್ದರೆ ಕೆಳವರ್ಗಗಳಿಗೆ ಅದು ಆತಂಕದ ಸಂಗತಿಯಲ್ಲ ಎಂಬುದು ಮನದಟ್ಟಾಗುತ್ತದೆ. ಭಾಷಾ ಅಸ್ಮಿತೆ ಕುರಿತ ಚರ್ಚೆಯಲ್ಲಿ ಮಧ್ಯಮ ವರ್ಗಕ್ಕೆ ಸಂಬಂಧಿಸಿದಂತೆ ಟೀಕೆ ಮಾಡುವಾಗಲೂ ಎಚ್ಚೆತ್ತ ಮಧ್ಯಮವರ್ಗಗಳೇ ಅಂತಿಮವಾಗಿ ಭಾಷೆಯ ಕುರಿತ ಜನಪರ ಹೋರಾಟಕ್ಕೆ ತಾತ್ವಿಕ ಚೌಕಟ್ಟು ಮತ್ತು ನಾಯಕತ್ವ ಕೊಡುತ್ತವೆ ಎಂಬುದನ್ನು ಗಮನಿಸಬೇಕಾಗುತ್ತದೆ.

ಅಸ್ಮಿತೆಯನ್ನು ಪ್ರತಿಷ್ಠೆಯನ್ನಾಗಿಸಿಕೊಂಡ ಸಮುದಾಯಗಳು ಹುಸಿ ಅಸ್ಮಿತೆಯ ನಾಶದ ಆತಂಕದಲ್ಲಿರುತ್ತವೆ. ಜೀವಂತ ಭಾಷೆಯಾದ ಹಕ್ಕಿಪಿಕ್ಕಿ ಸಮುದಾಯದ ಭಾಷೆಯ ಉಳಿವಿಗೆ ಯಾವ ಪ್ರಯತ್ನವೂ ನಡೆಯದ ಸಮಯದಲ್ಲಿಯೇ ಸಂಸ್ಕೃತದಂತಹ ಜನಬಳಕೆಯಿಲ್ಲದ ಭಾಷೆಯು ದೇವಭಾಷೆಯೆಂಬ ಪ್ರತಿಷ್ಠೆ, ಸಂಪತ್ತು, ಸೌಲಭ್ಯ, ಎಲ್ಲವನ್ನೂ ಗಳಿಸುತ್ತದೆ. ಉತ್ತರದ ಕೆಲವೇ ರಾಜ್ಯಗಳ ಭಾಷೆ ರಾಷ್ಟ್ರಭಾಷೆಯೆಂಬ ಪ್ರಚಾರ-ಪ್ರತಿಷ್ಠೆ ಹಾಗೂ - ಧನಕನಕ ವಸ್ತುವಾಹನಾದಿಗಳೆಲ್ಲವನ್ನೂ ಪಡೆಯುತ್ತದೆ. ಪ್ರಪಂಚದ ಮೂರನೇ ಎರಡು ಭಾಗದಲ್ಲಿ ಬಳಕೆಯಲ್ಲಿ ಇಲ್ಲದ ಇಂಗ್ಲಿಷ್ ಭಾಷೆ ಅಂತರ್‌ರಾಷ್ಟ್ರೀಯವಾಗುತ್ತದೆ ಎಂಬ ಬರಗೂರು ಅವರ ಅಸಮಾಧಾನಕ್ಕೆ ಸಕಾರಣಗಳಿವೆ. ಸುಮಾರು ಒಂದು ಕೋಟಿ ಜನರಾಡುವ ತುಳುವನ್ನು ಕರ್ನಾಟಕ ರಾಜ್ಯ ಇಂದಿನವರೆಗೆ ಅಧಿಕೃತ ಭಾಷೆಯೆಂದೇ ಘೋಷಿಸಿಲ್ಲ. ಖಾಸಿ, ಜೈಂಟಿಯಾ, ಕೊಡವ, ಬೃಜ ಮೊದಲಾದ ಅನೇಕ ಭಾಷೆಗಳದೂ ಇದೇ ಕತೆ.

ಕರ್ನಾಟಕದಲ್ಲಿ ಇವತ್ತಿಗೂ ತುಳು-ಕೊಡವದಂಥ ಭಾಷೆಗಳಿಗೆ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರಾಧ್ಯಾಪಕರೇ ಇಲ್ಲ. ಹೀಗೆ ದೇಶದ ಸುಮಾರು 24 ಸ್ವತಂತ್ರ ಭಾಷೆಗಳಲ್ಲಿ ಪ್ರಾಧ್ಯಾಪಕರು ಇಲ್ಲ ಎಂದು ಪುರುಷೋತ್ತಮ ಬಿಳಿಮಲೆ ಅವರು ದೇಶಿ ಭಾಷೆಗಳಿಗೆ ಪ್ರಭುತ್ವ ತೋರುವ ನಿರ್ಲಕ್ಷವನ್ನು ಅಂಕಿ ಅಂಶಗಳೊಂದಿಗೆ ವಿವರಿಸುತ್ತಾರೆ. ಒಂದು ಭಾಷೆ ಪ್ರತಿಷ್ಠಿತ ಎನಿಸಿಕೊಳ್ಳುವ ಅಥವಾ ನಿರ್ಲಕ್ಷಕ್ಕೆ ಒಳಗಾಗುವ ಪ್ರಶ್ನೆಯು ಆ ಭಾಷೆ ಎಷ್ಟು ಜೀವಂತವಾಗಿದೆ ಎನ್ನುವುದಕ್ಕಿಂತ ಅದು ಯಾವ ವರ್ಗದ್ದು ಮತ್ತು ಪ್ರಭುತ್ವದ ಮೇಲೆ ಅದರ ಪ್ರಭಾವದ ಸ್ವರೂಪವೇನು ಎಂಬುದು ನಿರ್ಣಾಯಕವಾಗಿರುತ್ತದೆ. ಆದ್ದರಿಂದಲೇ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಪ್ರಬಲವಾಗಿರುವ ಜನರ ಭಾಷೆಗಳು ಎಲ್ಲ ಸವಲತ್ತುಗಳನ್ನೂ ಪಡೆದುಕೊಳ್ಳುತ್ತಿವೆ. ದುರ್ಬಲರ ನಾಲಿಗೆ ಕಟ್ಟಿ ಹೋಗಿದೆ. ಅವರ ಭಾಷೆಗಳು ವಿನಾಶದತ್ತ ಚಲಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕನ್ನಡದ ಅಸ್ಮಿತೆಯ ಪ್ರಶ್ನೆಯು ಬಿ.ಎಂ.ಶ್ರೀ. ಅವರ ವೈಚಾರಿಕ ಚಿಂತನೆಯಿಂದ ಆರಂಭಿಸಿ ಕೆ.ವಿ. ನಾರಾಯಣ ಅವರ ವೈಜ್ಞಾನಿಕ ಚಿಂತನೆಯವರೆಗೆ ಹಲವು ಭಿನ್ನ ಸ್ತರಗಳಲ್ಲಿ, ಭಿನ್ನ ಆಯಾಮಗಳಲ್ಲಿ ಬೆಳೆಯುತ್ತ ಬಂದಿರುವುದನ್ನು ಗಮನಿಸಬಹುದು. ಒಂದು ಭಾಷೆಯ ಅಸ್ಮಿತೆಯ ಪ್ರಶ್ನೆ ಯಾವ ಯಾವ ಕಾರಣಗಳಿಗಾಗಿ ಹುಟ್ಟುತ್ತದೆ ಎಂಬುದು ಅಧ್ಯಯನಯೋಗ್ಯವಾದ ವಿಚಾರವಾಗಿದೆ. ಯಾವುದೇ ವ್ಯಕ್ತಿ/ಸಮುದಾಯಕ್ಕೆ ತನ್ನತನದ ಹುಡುಕಾಟ ಆರಂಭವಾಗುವುದು ಸಾಮಾನ್ಯವಾಗಿ ಎದುರಾಳಿಯ ಕಲ್ಪನೆಯಿಂದ. ಅದೇ ರೀತಿ ಒಂದು ಭಾಷೆಗೂ ಅಸ್ಮಿತೆಯ ಪ್ರಶ್ನೆ ಕಾಡುವುದು ಸಾಮಾನ್ಯವಾಗಿ ಪ್ರಬಲವಾದ ಎದುರಾಳಿಯ ಪ್ರವೇಶವಾಗಿ ತನ್ನ ಅಸ್ತಿತ್ವದ ಬಗ್ಗೆ ಆತಂಕ ಮೂಡಿದಾಗ. ಸಹಜವಾಗಿ ಈ ಆತಂಕ ಹಾಗೂ ಹೋರಾಟದ ಹಿಂದೆ ತನ್ನನ್ನು ರಕ್ಷಿಸಿಕೊಳ್ಳುವ ಉದ್ದೇಶವಿರುತ್ತದೆ. 1905ರಲ್ಲಿ ಬ್ರಿಟಿಷ್ ಗವರ್ನರಾಗಿದ್ದ ಲಾರ್ಡ್ ಕರ್ಜನ್ನನ ಬಂಗಾಳ ವಿಭಜನೆ ಘಟನೆಯೇ ಮೊತ್ತಮೊದಲು ಭಾರತದ ವಿವಿಧ ಭಾಷಾ ಅಸ್ಮಿತೆಗಳ ಜಾಗೃತಿಗೆ ಮೂಲವಾಯಿತು ಎನ್ನುವುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು.

ಯಾವುದೇ ಅಸ್ಮಿತೆಯ ಮೇಲೆ ಕಾಲದ ಚಾರಿತ್ರಿಕ ಒತ್ತಡಗಳು ಪ್ರಧಾನ ಪಾತ್ರ ವಹಿಸುತ್ತವೆ. ಕನ್ನಡವು ವಿವಿಧ ಕಾಲಘಟ್ಟಗಳಲ್ಲಿ ಸಂಸ್ಕೃತ, ಇಂಗ್ಲಿಷ್ ಭಾಷೆಗಳ ಎದುರಿನಲ್ಲಿ ತನ್ನ ಅಸ್ಮಿತೆಗಾಗಿ ಹೋರಾಟ ನಡೆಸಿದೆ. ಭಾಷಾ ಅಸ್ಮಿತೆಗೆ ಆತಂಕಮೂಲವಾದ ವಿಧೇಯತೆಯ ಮತ್ತು ಸಂಘರ್ಷದ ಗುಣವಿರುವಂತೆ ಯಜಮಾನಿಕೆಯ ಗುಣಗಳೂ ಇವೆ. ಎದುರಾಳಿಯ ಆತಂಕದಿಂದ ತನ್ನನ್ನು ರಕ್ಷಿಸಿಕೊಳ್ಳಲು ಅಸ್ಮಿತೆಯ ಪ್ರಶ್ನೆ ಕಾಡಿದರೆ ಉಪಭಾಷೆಗಳ ಮೇಲೆ ಯಜಮಾನಿಕೆ ಸ್ಥಾಪಿಸಲು ಅದರ ಅಸ್ಮಿತೆಯ ಜಾಗೃತಿ ಉಂಟಾಗುತ್ತದೆ. ಕನ್ನಡ ಭಾಷೆಯು ಇಂಗ್ಲಿಷ್, ಸಂಸ್ಕೃತ, ಉರ್ದು, ತುಳು, ಲಂಬಾಣಿ, ಕೊಂಕಣಿ, ಕೊಡವ, ಹಕ್ಕಿಪಿಕ್ಕಿ ಭಾಷೆಗಳ ಎದುರು ವರ್ತಿಸುವ ಬಗೆ ಏಕಪ್ರಕಾರವಾಗಿಲ್ಲ. ಕನ್ನಡವು ಕೊಡವ, ತುಳು, ಹಕ್ಕಿಪಿಕ್ಕಿ, ಲಂಬಾಣಿಗಳಂತಹ ಭಾಷೆಗಳಿಗೆ ಯಜಮಾನ ಭಾಷೆಯಂತೆಯೂ, ಸಂಸ್ಕೃತ ಮತ್ತು ಇಂಗಿಷ್‌ನ ಎದುರು ಅಧೀನ ಭಾಷೆಯಂತೆಯೂ ವರ್ತಿಸುತ್ತದೆ. ಅಂದರೆ ದಮನಿತ ಮತ್ತು ದಮನಕಾರಿ ಎರಡೂ ಆಯಾಮಗಳನ್ನು ಕನ್ನಡ ಒಳಗೊಂಡಿದೆ. ಕರ್ನಾಟಕದಲ್ಲಿಯೇ ಹಲವು ಸೊಗಡಿನ ಕನ್ನಡವಿದೆ. ಧಾರವಾಡ, ಮಂಡ್ಯ, ಮಂಗಳೂರು ಕನ್ನಡಗಳಲ್ಲಿ ಅಗಾಧ ವ್ಯತ್ಯಾಸಗಳಿವೆ. ಇದರೊಂದಿಗೆ ಗ್ರಾಮೀಣ ಕನ್ನಡ ಹಾಗೂ ನಗರ ಕನ್ನಡದ ನಡುವಿನ ಮೇಲರಿಮೆ/ಕೀಳರಿಮೆಯ ಸಂಬಂಧಗಳು ಕೂಡ ಕನ್ನಡದ ಅಸ್ಮಿತೆಯನ್ನು ನಿರ್ಧರಿಸುವ ಅಂಶವಾಗಿವೆ. ಈ ಹಿನ್ನೆಲೆಯಲ್ಲಿ ಕನ್ನಡಕ್ಕೆ ಸಾಮಾಜಿಕ ನೆಲೆಯಲ್ಲಿ ಹಲವಾರು ತರತಮಗಳಿವೆ. ಆದ್ದರಿಂದ ಕನ್ನಡ ಅಸ್ಮಿತೆ ಎನ್ನುವುದು ಏಕಘನಾಕೃತ ಅಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಕನ್ನಡ ಭಾಷಾ ಅಸ್ಮಿತೆಗೆ ಇನ್ನೊಂದು ಸ್ವರೂಪ ಬಂದಿದ್ದು ಸರೋಜಿನಿ ಮಹಿಷಿ ಸಮಿತಿಯು ನೀಡಿದ ವರದಿಯಿಂದ. ಈ ವರದಿ ಪ್ರಕಾರ ಯಾವುದೇ ವ್ಯಕ್ತಿ 15ವರ್ಷಗಳ ಕಾಲ ಕರ್ನಾಟಕದಲ್ಲಿ ನೆಲೆಸಿದರೆ ಆ ವ್ಯಕ್ತಿಯನ್ನು ಕರ್ನಾಟಕದ ಪ್ರಜೆ ಹಾಗೂ ಕನ್ನಡಿಗ ಎಂದು ಗುರುತಿಸಲು ಸಾಧ್ಯ. ಬೇರೊಂದು ರೀತಿಯಲ್ಲಿ ಉಪಯುಕ್ತವಾದರೂ ಕನ್ನಡಿಗರನ್ನು ವ್ಯಾಖ್ಯಾನಿಸುವಾಗ 15 ವರ್ಷ ಕಾಲಾವಧಿ ಮತ್ತು ಕರ್ನಾಟಕದಲ್ಲಿ ವಾಸ ಇವೆರಡು ಮುಖ್ಯ ನೆಲೆಗಳಾಗಿ ಭಾಷೆಯ ಪ್ರಶ್ನೆ ಹಿಂದಕ್ಕೆ ಸರಿಯಿತು.

ಕನ್ನಡಿಗ ಪದದಲ್ಲಿ ಕನ್ನಡ ಮಾತನಾಡುವ ವ್ಯಕ್ತಿ ಎಂಬ ಅಭಿಪ್ರಾಯವಿದ್ದರೂ ಇಡೀ ವ್ಯಾಖ್ಯೆ ಭಾಷೆಯನ್ನು ಬಿಟ್ಟು ದೇಶ ಮತ್ತು ವ್ಯಕ್ತಿಗಳಿಗೆ ಸೀಮಿತವಾಯಿತು. ಯಾವುದೇ ಮಾನವ ಸಮಾಜದಲ್ಲಿ ಭಾಷೆ ಎಂಬುದು ಯಾವತ್ತೂ ಕೇವಲ ಭಾಷಿಕ ಪ್ರಶ್ನೆ ಮಾತ್ರ ಆಗಿರುವುದಿಲ್ಲ. ಭಾಷೆಯಿಂದ ನಾಡು-ಸಂಸ್ಕೃತಿಯನ್ನು ಬೇರ್ಪಡಿಸಲಾಗುವುದಿಲ್ಲ. ಭಾಷೆಯನ್ನು ಬಳಸುವ ಮೂಲಕವೇ ಅವನ್ನು ಜೀವಂತವಾಗಿಡಬೇಕಾಗುತ್ತದೆ. ಭಾಷೆ ಮತ್ತು ಸಂಸ್ಕೃತಿಗಳು ಜನರ ಬದುಕಿನೊಂದಿಗೆ ಬೆಸೆದುಕೊಂಡಿರುತ್ತದೆ. ಭಾಷೆ ಆರ್ಥಿಕತೆ, ಸಾಮಾಜಿಕತೆ, ಧಾರ್ಮಿಕತೆ ಮತ್ತು ಸಾಂಸ್ಕೃತಿಕ ಆಯಾಮಗಳನ್ನು ಒಳಗೊಂಡಿರುತ್ತದೆ. ಈ ಹಿನ್ನೆಲೆಯಲ್ಲಿಯೇ ಆ ನಿರ್ದಿಷ್ಟ ಭಾಷೆಯ ಅಸ್ಮಿತೆಯನ್ನು ಗುರುತಿಸಬೇಕಾಗುತ್ತದೆ. ಕನ್ನಡ ಭಾಷೆಯೂ ಇದರಿಂದ ಹೊರತಲ್ಲ. ಕನ್ನಡದ ಸಂದರ್ಭದಲ್ಲಿ ಈ ಮಾತುಗಳು ಇನ್ನೊಂದು ವಾಸ್ತವವನ್ನು ಹೇಳುತ್ತಿವೆ. ಭಾಷಾ ವಿಜ್ಞಾನಿಗಳು ಅಭಿಪ್ರಾಯಪಡುವಂತೆ ಭಾಷಾ ಅಸ್ಮಿತೆಯ ಅಧ್ಯಯನಕ್ಕೆ ಭಾಷೆಯ ರಚನೆಯನ್ನು ಮಾತ್ರ ವಿವರಿಸುವ ಭಾಷಾ ವಿಜ್ಞಾನದ (Structural Linguistics) ಥಿಯರಿಗಳು ದೊಡ್ಡ ಪ್ರಮಾಣದಲ್ಲಿ ಸಹಾಯಕ್ಕೆ ಬರುವುದಿಲ್ಲ. ಗೂಗಿ ವಾ ಥಿಯಾಂಗೊ ವ್ಯಾಖ್ಯಾನಿಸುವಂತೆ ಭಾಷೆಯೆಂದರೆ, ಜನತೆ ಚರಿತ್ರೆಯಲ್ಲಿ ತಾನು ಪಡೆದ ಅನುಭವಗಳ ಸ್ಮತಿಸಂಚಯ. ಒಂದು ಸಮುದಾಯದ ಸಂಸ್ಕೃತಿಯ ಹುಟ್ಟು, ಬೆಳವಣಿಗೆ ಕೂಡುವಿಕೆ, ಬದಲಾಯಿಸುವಿಕೆ, ಕೊನೆಗೆ ಪೀಳಿಗೆಯಿಂದ ಪೀಳಿಗೆಗೆ ಸಾಗಿಸುವಿಕೆ- ಈ ಎಲ್ಲವನ್ನು ಅದರ ಭಾಷೆ ಮಾಡುತ್ತಿರುತ್ತದೆ. ಭಾಷೆ ಸಂಸ್ಕೃತಿಯ ಹುಟ್ಟು, ಬೆಳವಣಿಗೆ, ಕೂಡುವಿಕೆ, ಬದಲಾಯಿಸುವಿಕೆ, ಕೊನೆಗೆ ಪೀಳಿಗೆಯಿಂದ ಪೀಳಿಗೆಗೆ ಸಾಗಿಸುವಿಕೆ- ಈ ಎಲ್ಲವನ್ನು ಅದರ ಭಾಷೆ ಮಾಡುತ್ತಿರುತ್ತದೆ. ಭಾಷೆ ಸಂಸ್ಕೃತಿಯ ರೂಪಿಯಾಗಿರುತ್ತದೆ. ಅಂತಲೇ ಸಂಸ್ಕೃತಿಯನ್ನು ಭಾಷೆಯಿಂದ ಬೇರ್ಪಡಿಸುವುದು ಅಸಾಧ್ಯ. ಇದನ್ನು ಕೆ.ವಿ. ಸುಬ್ಬಣ್ಣನವರ ಮಾತುಗಳಲ್ಲಿ ಸಮಗ್ರವಾಗಿ ಹೇಳಬಹುದಾದರೆ ಒಂದು ಭಾಷೆ-ಸಂಸ್ಕೃತಿಯೆಂದರೆ, ಅದು ಒಂದು ಜನಪದದ ಸಮಸ್ತ ಮನಸ್ಸಿನ ಲೋಕಾಕೃತಿ ಕನ್ನಡದ ಸಂದರ್ಭದಲ್ಲಿ ಭಾಷಾ ವಿಜ್ಞಾನಿ ಕೆ.ವಿ.ನಾರಾಯಣ ಅವರು ಅಸ್ಮಿತೆ ಎನ್ನುವುದಕ್ಕೆ ಕನ್ನಡದ ಗುರುತುಗಳು ಎಂದೂ, ವಿಮರ್ಶಕ ರಾಜೇಂದ್ರ ಚೆನ್ನಿ ಅವರು ಕನ್ನಡದ ಸ್ವಂತಿಕೆ ಎಂದೂ ವ್ಯಾಖ್ಯಾನಿಸುತ್ತಾರೆ. ಪಿ.ವಿ. ನಾರಾಯಣ ಅವರ ಪ್ರಕಾರ ಕಾಲದ ದೀರ್ಘವಾಹಿನಿಯ ಜೊತೆಗೆ ಸಮಾನಾಂತರವಾಗಿ ನಮ್ಮ ಭಾಷೆಯ ಸಾತತ್ಯ ನಮ್ಮನ್ನು ಆವರಿಸಿಕೊಂಡಿದ್ದು, ನಮ್ಮ ಭಾಷೆಯ ಕಾರಣದಿಂದಾದ ಈ ಸ್ವರೂಪವೇ ಕನ್ನಡತನ; ಆಲೋಚನೆ, ವಿಚಾರ, ಅನುಭವ, ಅಭಿವ್ಯಕ್ತಿ-ಇವುಗಳಲ್ಲಿ ತಾದ್ರೂಪ್ಯವನ್ನೇ ಉಂಟುಮಾಡಿರುವ ಗುಣ. ಒ.ಎಲ್. ನಾಗಭೂಷಣಸ್ವಾಮಿ ಅವರು ವ್ಯಾಖ್ಯಾನಿಸುವಂತೆ ವೈವಿಧ್ಯದ ಪರಿಕಲ್ಪನೆಯ ಇನ್ನೊಂದು ಮಗ್ಗಲು ಅಸ್ಮಿತೆ. ಇವರು ಇವರೇ. ಅವರಲ್ಲ; ನಾನು ನಾನೇ, ಬೇರೆ ಯಾರೂ ಅಲ್ಲ ಎಂದು ಸೂಚಿಸುವುದೇ ಅಸ್ಮಿತೆ. ದೇಹಾಕಾರ, ಉಡುಪು, ನಂಬಿಕೆ, ವರ್ತನೆ, ಆಚರಣೆ, ಸಂಗೀತ, ಕಲೆ, ಕರಕುಶಲ ವಸ್ತು ಇತ್ಯಾದಿಗಳೆಲ್ಲ ಅಸ್ಮಿತೆಯ ಅಂಶಗಳೇ ಆದರೂ ಅಸ್ಮಿತೆಯ ಲಕ್ಷಣಗಳನ್ನೆಲ್ಲ ಸರ್ವಾಂತರ್ಯಾಮಿಯಾಗಿ ಆವರಿಸಿಕೊಂಡಿರುವುದೂ ಸಮುದಾಯದ ಭಾಷೆಯೇ. ಭಾಷೆ ನಷ್ಟವಾದರೆ ಸಮುದಾಯದ ಅಸ್ಮಿತೆಯೂ ಇಲ್ಲವಾಗುತ್ತದೆ. ಭಾವನಾತ್ಮಕವಾಗಿ ಜನರನ್ನು ಒಟ್ಟಿಗೆ ತರುವುದು ಎಲ್ಲ ಭಾಷಾ ಅಸ್ಮಿತೆಗಳ ಪ್ರಮುಖ ಕಾಳಜಿಯಾಗಿದ್ದು ಅದು ಕನ್ನಡದ ಸಂದರ್ಭದಲ್ಲಿಯೂ ನಿಜವಾದದ್ದು.

(ಲೇಖಕರು ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಸಂಸ್ಥೆಯಲ್ಲಿ ಸಹ ಸಂಶೋಧಕರು)

Writer - ಡಾ. ಸರ್ಜಾಶಂಕರ ಹರಳಿಮಠ

contributor

Editor - ಡಾ. ಸರ್ಜಾಶಂಕರ ಹರಳಿಮಠ

contributor

Similar News