ಹೈಪರ್ ಆ್ಯಕ್ಟೀವ್ ಮಕ್ಕಳು
ಶಾಲೆಯಲ್ಲಿ
ಶಾಲೆಯಲ್ಲಿ ಶಿಕ್ಷಕರು ಅಟೆಂಶನ್ ಡಿಫಿಸಿಟ್ ಹೈಪರ್ ಆ್ಯಕ್ಟೀವ್ ಡಿಸಾರ್ಡರ್ ಇರುವ ಮಕ್ಕಳ ಕಡೆಗೆ ಗಮನ ಕೊಡಲು ಕೆಲವು ಸೂಚನೆಗಳನ್ನು ಅನುಸರಿಸಬೇಕು.
1. ಬೇರೆ ಕಡೆಗೆ ಗಮನ ಸೆಳೆಯುವ ಅವಕಾಶಗಳು ಇಲ್ಲದಿರುವ ಅಥವಾ ಕಡಿಮೆ ಇರುವ ಸ್ಥಳದಲ್ಲಿ ಕೂರಿಸಬೇಕು.
2. ಆ ಮಗುವಿಗೆ ಸೂಚನೆಗಳನ್ನು ಕೊಡುವಾಗ ಚಿಕ್ಕದಾಗಿರಬೇಕು ಮತ್ತು ಸ್ಪಷ್ಟವಾಗಿರಬೇಕು. ಉದ್ದುದ್ದ ಮಾತುಗಳನ್ನು ಹೇಳಬಾರದು.
3. ತರಗತಿಯ ನೀತಿ ನಿಯಮಗಳು ಹೀಗಿವೆ, ನೀನು ಹೀಗೇ ಇರಬೇಕು ಎಂಬ ಗಟ್ಟಿ ಎಚ್ಚರಿಕೆ ಕೊಡಬೇಕು. ಆದರೆ ಅದು ಹೆದರಿಸುವಂತೆ ಇರಬಾರದು.
4. ಆ ಮಗುವಿನ ಜೊತೆಗೆ ಆತ್ಮೀಯವಾಗಿದ್ದು, ಪ್ರೋತ್ಸಾಹಿಸುವ ರೀತಿಯಲ್ಲಿರಬೇಕು. ಮುಖ್ಯವಾಗಿ ಸಕಾರಾತ್ಮಕವಾ ಧೋರಣೆಯನ್ನು ಹೊಂದಿರಬೇಕು.
5. ಮಗುವಿನ ಸಣ್ಣ ಸಣ್ಣ ಪ್ರಯತ್ನಗಳನ್ನೂ ಮೆಚ್ಚಬೇಕು.
6. ತನ್ನ ಕಲಿಕೆಯ ವಿಷಯದಲ್ಲಿ ಅಚ್ಚುಕಟ್ಟುತನವನ್ನು ಹೊಂದಲು ನೆರವಾಗಬೇಕು.
7. ನಿಧಾನವಾಗಿ ಕೆಲಸ ಮಾಡಲು ಮತ್ತು ತನ್ನದೇ ಸಮಯವನ್ನು ತೆಗೆದುಕೊಳ್ಳಲು ಹೇಳಬೇಕು. ಆತುರಾತುರವಾಗಿ ಏನೇ ಹೇಳಿದರೂ, ಏನೇ ಮಾಡಿದರೂ ಅದನ್ನು ಮತ್ತೆ ನಿಧಾನವಾಗಿ ಹೇಳುವಂತೆ, ಮಾಡುವಂತೆ ಸೂಚಿಸಬೇಕು. ಬೇರೆಯವರ ವಿಷಯದಲ್ಲಿ ಪ್ರವೇಶಿಸಿದರೆ, ನಿರ್ದಾಕ್ಷಿಣ್ಯವಾಗಿ ನಿರ್ಲಕ್ಷಿಸಬೇಕು.
8. ಮಗುವಿನ ಕೆಲಸಗಳನ್ನು ಮಾಡಿಕೊಳ್ಳಲು ಮಾರ್ಗದರ್ಶನ ನೀಡಬೇಕು.
9. ಮಗುವು ತನ್ನ ತರಗತಿಯಲ್ಲಿ ಓಡಾಡಲು ಬಯಸಿದರೆ ಅದಕ್ಕೆ ಸಣ್ಣ ಅವಕಾಶವನ್ನು ಕೊಡಬೇಕು.
10. ಮಗುವು ತನ್ನ ಕೆಲಸವನ್ನು ಮಾಡಲು ಹೆಚ್ಚಿನ ಸಮಯ ನೀಡಬೇಕು.
11. ಮಗುವು ತಾನೊಮ್ಮೆ ಬರೆದಾದ ಮೇಲೆ ಅದನ್ನು ತಾನೇ ಪರಿಶೀಲಿಸಿ, ನಿರ್ಲಕ್ಷದಿಂದ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಪ್ರೋತ್ಸಾಹಿಸಬೇಕು.
12. ಅಧ್ಯಯನ ಮಾಡುವ ಕೌಶಲ್ಯವನ್ನು ಸರಳವಾಗಿ ಹೇಳಿಕೊಡಬೇಕು. ಅದರಲ್ಲಿ ಟಿಪ್ಪಣಿ ಮಾಡಿಕೊಳ್ಳುವುದು, ಗಟ್ಟಿಯಾಗಿ ಓದುವುದು ಮತ್ತು ಪರೀಕ್ಷೆಗಳಿಗೆ ತಯಾರಾಗುವುದೂ ಇರಬೇಕು. 13.ಓದಬೇಕಾಗಿರುವ ಮತ್ತು ಬರೆಯಬೇಕಾಗಿರುವ ಅಥವಾ ಯಾವುದೇ ಪ್ರಾಜೆಕ್ಟ್‌ಗಳನ್ನು ಕೊಟ್ಟಾಗ ಸಣ್ಣ ಸಣ್ಣ ಭಾಗಗಳಾಗಿ ವಿಂಗಡಿಸಬೇಕು. ಒಂದೊಂದೇ ಮುಗಿಸಲು ಸೂಚಿಸಬೇಕು. ಇದನ್ನು ಮೆಯಲ್ಲಿ ಪೋಷಕರೂ ಮಾಡಬಹುದು.
ಯಾವುದೇ ಮಗುವು ಒಂದು ವ್ಯರ್ಥ ಜೀವವಲ್ಲ ಮತ್ತು ಅದಕ್ಕೆ ತನ್ನ ಉತ್ತಮ ಜೀವನ ನಡೆಸುವ ಹಕ್ಕಿದೆ. ಹಾಗಾಗಿ ಶಿಕ್ಷಕರು ಮಗುವಿನಲ್ಲಿ ವಿಶೇಷ ವಾಗಿರುವಂತಹ ಆಸಕ್ತಿ ಮತ್ತು ಪ್ರತಿಭೆಯನ್ನು ಗುರುತಿಸಿ, ಅದನ್ನು ಪ್ರೋತ್ಸಾಹಿಸಿದರೆ ಮಗುವು ತಾನಾಗಿಯೇ ಶಿಕ್ಷಕರ ಸಲಹೆ ಸೂಚನೆಗಳ ಕಡೆಗೆ ಗಮನ ವಹಿಸಲು ಪ್ರಾರಂಭಿಸುತ್ತದೆ. ಇದು ನನ್ನ ಶಿಕ್ಷಕ ವೃತ್ತಿಜೀವನದಲ್ಲಿ ಕಂಡುಕೊಂಡಿರುವ ಪ್ರಾಯೋಗಿಕಸತ್ಯ.
ಗೊಂದಲಗಳು ಮತ್ತು ಉತ್ತರಗಳು
ಗಮನ ಪಲ್ಲಟ ತೀವ್ರಗಾಮಿತ್ವದ ಸಮಸ್ಯೆಯನ್ನು ತಿಳಿದುಕೊಳ್ಳುವುದರಲ್ಲಿ ಕೆಲವು ಗೊಂದಲಗಳಿವೆ.
1. ಅಟೆಂಶನ್ ಡಿಫಿಸಿಟ್ ಹೈಪರಾಕ್ಟಿವಿಟಿ ಡಿಸಾರ್ಡರ್ (ಎಡಿಎಚ್‌ಡಿ) ಅನ್ನು ಕೆಲವರು ಅಟೆಂಷ್ಶನ್ ಡಿಫಿಸಿಟ್ ಡಿಸಾರ್ಡರ್ (ಎಡಿಡಿ) ಎಂದೂ ಕರೆಯುತ್ತಾರೆ. ಎರಡೂ ಒಂದೇ.
2. ಈ ಸಮಸ್ಯೆ ಇರುವ ಎಲ್ಲಾ ಮಕ್ಕಳೂ ತೀವ್ರತರವಾದ ಚಟುವಟಿಕೆಯಿಂದ ಅಥವಾ ಹೈಪರ್ ಆ್ಯಕ್ಟೀವ್ ಆಗಿಯೇ ಇರುತ್ತಾರೆ ಎಂದು ಭಾವಿಸುವುದು ಬೇಡ. ಹೈಪರ್ ಆಗಿರುವ ಕೆಲವು ಮಕ್ಕಳಿಗೆ ಈ ಸಮಸ್ಯೆಯೇ ಇರುವುದಿಲ್ಲ. ಅವರು ಎಡಿಎಚ್‌ಡಿ ಇರುವಂತೆ ಕಾಣುತ್ತಾರೆ. ಆದರೆ ಅವರು ಚುರುಕಾಗಿದ್ದು, ಗಮನವನ್ನೂ ನೀಡಲು ಸಮರ್ಥ ರಾಗಿರುತ್ತಾರೆ. ದೈಹಿಕವಾಗಿ ಕೆಲವು ಮಕ್ಕಳು ಹೈಪರ್ ಅಲ್ಲದೇ ಇದ್ದು ಒಂದೇ ಜಾಗದಲ್ಲಿ ಇದ್ದರೂ, ಹಗಲುಗನಸು ಕಾಣುತ್ತಾ ಕುಳಿತಲ್ಲೇ ತಟಸ್ಥವಾಗಿದ್ದುಕೊಂಡು ಖಾಲಿಯನ್ನು ನೋಡುತ್ತಿರುವುದೂ ಇದೇ ಸಮಸ್ಯೆ ಆಗಿರುತ್ತದೆ.
3. ಎಡಿಎಚ್‌ಡಿ ಇರುವ ಮಕ್ಕಳು ಎಂದಿಗೂ ಗಮನ ಕೊಡಲು ಸಾಧ್ಯವೇ ಇಲ್ಲ ಎಂದುಕೊಳ್ಳುವುದೂ ಬೇಡ. ಅವರಿಗೆ ಏಕಾಗ್ರತೆ ಸಾಧಿಸಲು ಕಷ್ಟವಾಗಬಹುದು. ಆದರೆ ಅವರಿಗೆ ಕುತೂಹಲಕರವಾಗಿದ್ದು, ರೇಜಿಗೆ ಹುಟ್ಟಿಸದ ವಿಷಯವಾದರೆ ಖಂಡಿತ ಗಮನ ಕೊಡುತ್ತಾರೆ.
4. ಈ ಸಮಸ್ಯೆ ಇರುವ ಮಕ್ಕಳು ಅವರಿಗೆ ಬೇಕಾದಾಗ ಮಾತ್ರ ವಿಧೇಯವಾಗಿ ಚೆನ್ನಾಗಿರುತ್ತಾರೆ ಎಂದು ಕೆಲವರು ಭಾವಿಸುತ್ತಾರೆ. ಆದರೆ, ಅದು ಹಾಗಲ್ಲ. ಅವರು ಅವಿಧೇಯವಾಗಿ ನಡೆದುಕೊಂಡರೂ ಅದು ಉದ್ದೇಶಪೂರ್ವಕವಾಗಿರುವುದಿಲ್ಲ.
5. ದೊಡ್ಡವರಾಗುತ್ತಾ ಆಗುತ್ತಾ ಈ ಸಮಸ್ಯೆ ತಾನಾಗಿಯೇ ಸರಿಹೋಗುವುದು ಎಂದು ಕೆಲವರು ನಿರ್ಲಕ್ಷ ಮಾಡುತ್ತಾರೆ. ಆದರೆ, ಇದು ವಯಸ್ಕರಾದ ಮೇಲೂ ಮುಂದುವರಿಯುತ್ತದೆ. ಚಿಕಿತ್ಸೆ, ತಿಳುವಳಿಕೆ ಮತ್ತು ತರಬೇತಿಯ ಮೂಲಕ ಇದನ್ನು ಹತೋಟಿಗೆ ತರಬಹುದು. ತಾನಾಗೇ ಎಂದಿಗೂ ಸರಿಹೋಗುವುದಿಲ್ಲ. ದೊಡ್ಡವರಾ ಮೇಲೆ ಪ್ರಬುದ್ಧ ರೀತಿಯಲ್ಲಿ ಅಥವಾ ಸರಿಯಾಗಿರುವಂತಹ, ದೂರದೃಷ್ಟಿಯಿರುವಂತಹ ತೀರ್ಮಾನಗಳ್ನು ತೆಗೆದುಕೊಳ್ಳಲು ಬರುವುದಿಲ್ಲ.
6. ಔಷಧಿಯಿಂದ ಇದು ಪೂರ್ತಿ ಸರಿಹೋಗುತ್ತದೆ ಎಂದೂ ಭಾವಿಸಬೇಡಿ. ಅದು ಕೇವಲ ತಾತ್ಕಾಲಿಕ. ಪರಿಣಾಮ ಕಾರಿಯಾದ ಚಿಕಿತ್ಸೆಯಾಗಬೇಕೆಂದರೆ, ಶಿಕ್ಷಣ ದಲ್ಲಿ ಸರಿಯಾದ ಯೋಜನೆ; ಅದರಲ್ಲೂ ಐಎಸ್‌ಪಿ (ಇಂಡಿವಿಶಿಯಲ್ ಎಜುಕೇಶನ್ ಪ್ರೋಗ್ರಾಮ್) ಅಂದರೆ ಮಗುವಿಗೆ ವ್ಯಕ್ತಿಗತವಾಗಿ ಶಿಕ್ಷಣ ನೀಡುವ ಕಾರ್ಯಕ್ರಮ ರೂಪಿಸಬೇಕು. ವರ್ತನೆಗಳ ಮೂಲಕ ಚಿಕಿತ್ಸೆ, ಶಾಲೆ ಮತ್ತು ಮನೆಯಲ್ಲಿ ಮಗುವಿನ ಕಡೆಗೆ ವಿಶೇಷ ಗಮನ, ಮೆದುಳಿಗೆ, ಮನಸ್ಸಿಗೆ ಮತ್ತು ಶರೀರಕ್ಕೆ ಕಸರತ್ತು ನೀಡುವ ವ್ಯಾಯಾಮಗಳು ಹಾಗೂ ಸರಿಯಾದ ಪೌಷ್ಟಿಕ ಆಹಾರ; ಇವೆಲ್ಲವನ್ನೂ ಒಳಗೊಂಡಿರಬೇಕು.
7. ಹುರುಪಿನಿಂದ ಕೂಡಿದವರಂತೆ ಕಾಣುವ ಈ ಮಕ್ಕಳು ಆಲೋಚಿಸದೆಯೇ ಮಾತಾಡಿಬಿಡುತ್ತಾರೆ ಅಥವಾ ಉತ್ತರ ಹೇಳುತ್ತಾರೆ. ಸರಿಯಾದ ಉತ್ತರವನ್ನು ಆಲೋಚಿಸಿ ಅಥವಾ ನೆನಪಿಸಿಕೊಂಡು ಹೇಳುವುದಿಲ್ಲ. ಬದಲಾಗಿ ತಟ್ಟನೆ ಬಾಯಿಗೆ ಬಂದ ಉತ್ತರವನ್ನು ಹೇಳಿಬಿಡುತ್ತಾರೆ. ಕೆಲವೊಮ್ಮೆ ಪ್ರಶ್ನೆಯನು್ನ ಪೂರ್ತಿ ಕೇಳಿಸಿಕೊಳ್ಳುವುದೂ ಇಲ್ಲ.
8. ಸಮಯಾಸಮಯವನ್ನು ನೋಡದೇ ಮಾತಾಡುವುದು, ನುಗ್ಗುವುದು, ಅಪ್ರಾಸಂಗಿಕವಾಗಿ ವರ್ತಿಸುವುದು ಮತ್ತು ಅಧಿಕಪ್ರಸಂಗತನ ಪ್ರದರ್ಶಿಸುವುದು ಅವರ ಸರ್ವೇ ಸಾಮಾನ್ಯವಾದ ಕೆಲಸವಾದ್ದರಿಂದ ಯಾವುದೇ ಹೊಸ ಮಗುವು ಅಥವಾ ವಯಸ್ಕರು ಹಾಗೆ ವರ್ತಿಸಿದಾಗೆಲ್ಲಾ ನಾವು ಯಾಕೆ ಹೀಗೆ ಎಂದು ಗೊಂದಲಕ್ಕೊಳಗಾಗದೇ ಅಥವಾ ಸಿಡಿಮಿಡಿಗೊಳ್ಳದೇ ಸಂಯಮದಿಂದ ವರ್ತಿಸಬೇಕು.
ಮತ್ತೊಂದು ಮಗ್ಗುಲು
ಸಕಾರಾತ್ಮಕವಾಗಿ ನೋಡುವುದಾದರೆ, ಈ ಸಮಸ್ಯೆ ಇರುವ ಮಕ್ಕಳು ಕ್ರಿಯಾಶೀಲವಾಗಿ ಮತ್ತು ಸೃಜನಾತ್ಮಕವಾಗಿರುವರು. ಕಲ್ಪನಾಶಕ್ತಿ ಚೆನ್ನಾಗಿರುವುದು. ಒಂದು ವಿಷಯವನ್ನು ಅನೇಕ ರೀತಿಯ ಆಲೋಚನೆಗಳಿಂದ ತಿಳಿಯುವುದಕ್ಕೂ ಸಾಧ್ಯತೆ ಇರುತ್ತದೆ. ಈ ಸಮಸ್ಯೆ ಇದ್ದ ಸಾಧಕರನ್ನು ಗಮನಿಸಿದರೆ, ಅವರಲ್ಲಿ ವಿಜ್ಞಾನಿಗಳು ಮತ್ತು ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿರುವರು.
ಸಲಿಲತೆಯೂ (ಫ್ಲೆಕ್ಸಿಬಲಿಟಿ) ಕೂಡ ಅವರ ಒಂದು ಸಕಾರಾತ್ಮಕ ಗುಣ. ಹೈಪರ್ ಆ್ಯಕ್ಟೀವ್ ಇರುವ ಮಕ್ಕಳು ಸಾಮಾನ್ಯವಾಗಿ ಬೋರ್ ಮಾಡುವುದಿಲ್ಲ. ಉತ್ಸಾಹ ಮತ್ತು ಚುರುಕುತನ ಅವರ ಆಸ್ತಿ. ಜೊತೆಗೆ ಸ್ವಯಂಪ್ರೇರಿತವಾದ, ಸ್ವಯಂ ಸ್ಫೂರ್ತಿಯಿಂದ (ಸ್ಪಾಂಟೇನಿಯಸ್) ವರ್ತಿಸುವ ಆ ಮಕ್ಕಳ ಸಮಸ್ಯೆಯನ್ನು ಗುರುತಿಸಿ, ಅವರಿಗೆ ಸೂಕ್ತ ಸಮಾಲೋಚನೆ, ತಿಳುವಳಿಕೆ ಮತ್ತು ತರಬೇತಿ ನೀಡಿ ಅವರಲ್ಲಿನ ಉತ್ತಮವಾದದ್ದನ್ನು ಹೊರಗೆ ತರುವುದು ಶಿಕ್ಷಕರ ಮತ್ತು ಪಾಲಕರ ಪಾಲಿನ ಕೆಲಸ.