ವಿದ್ಯಾರ್ಥಿ, ಅಧ್ಯಾಪಕರನ್ನು ಹಿಂಡುತ್ತಿರುವ ಖಾಸಗೀಕರಣ
ಭಾಗ-1
ದೇಶದ ಸಾರ್ವಜನಿಕ ಶಿಕ್ಷಣದ ಮೇಲೆ ಸರಕಾರಿ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ದಾಳಿಗಳ ಕುರಿತು ವಿಚಾರಣೆ ನಡೆಸಲು ಪೀಪಲ್ಸ್ ಕಮಿಷನ್ ಫಾರ್ ಶ್ರಿಂಕಿಂಗ್ ಡೆಮಾಕ್ರಟಿಕ್ ಸ್ಪೇಸ್ (ಪಿಸಿಎಸ್‌ಡಿಎಸ್) ಸಂಘಟನೆಯು ನಿವೃತ್ತ ನ್ಯಾಯಾಧೀಶರನ್ನೂ ಒಳಗೊಂಡ ಒಂದು ಜನತಾ ನ್ಯಾಯಮಂಡಳಿಯನ್ನು ರಚಿಸಿತ್ತು. ಅದರ ಮುಂದೆ ನೂರಾರು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಸಾಕ್ಷ್ಯ ಹೇಳಿ ಹಸಿಹಸಿ ಸತ್ಯಗಳನ್ನು ಬಿಚ್ಚಿಟ್ಟಿದ್ದರು. ಅವುಗಳ ಆಧಾರದಲ್ಲಿ ಈ ವಿಶೇಷ ಸರಣಿಯನ್ನು ನಿರೂಪಿಸಲಾಗಿದೆ.
ಇಂದು ಶಿಕ್ಷಣರಂಗವು ಎಲ್ಲ ಕಡೆಗಳಿಂದ ದಾಳಿಗೆ ತುತ್ತಾಗುತ್ತಿದ್ದು, ಸರಕಾರಿ ಪ್ರಾಯೋಜಿತ ಖಾಸಗೀಕರಣ, ಜಾಗತೀಕರಣ ಮೂಲಭೂತವಾಗಿ ಇದರ ಹಿಂದಿದೆ. ಈ ಕ್ಷೇತ್ರವನ್ನು ಕಾಡುತ್ತಿರುವ ಅನೇಕ ರೋಗಗಳನ್ನು ಹಾಗೂ ಅವುಗಳಿಗೆ ಕಾರಣಗಳನ್ನು ಮತ್ತು ಕಾರಣಕರ್ತರನ್ನು ಕುರಿತು ಇಲ್ಲಿ ಚರ್ಚಿಸಲಾಗಿದೆ. ಮೊದಲಿಗೆ ಕೆಲವು ಖ್ಯಾತ ಶಿಕ್ಷಣ ತಜ್ಞರು ನ್ಯಾಯಮಂಡಳಿಯ ಮುಂದೆ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಪರಿಶೀಲಿಸೋಣ.
ಭಾರತದಲ್ಲಿ ಶಿಕ್ಷಣ ವ್ಯವಸ್ಥೆಯ ಕೊಳೆಯುವಿಕೆಯು ಇತ್ತೀಚಿನದ್ದಲ್ಲ; ಅದರ ಬೇರು ವಸಾಹತುಶಾಹಿ ಕಾಲದಿಂದಲೂ ಮುಂದುವರಿದುಕೊಂಡುಬಂದಿರುವ ಧೋರಣಾತ್ಮಕ ಚೌಕಟ್ಟಿನಲ್ಲಿದೆ. ಪ್ರಮುಖವಾದ ಹಿನ್ನಡೆಯು 1986ರಲ್ಲಿ ಹೊಸ ಶಿಕ್ಷಣ ನೀತಿಯನ್ನು ರೂಪಿಸಿದಾಗ ಆರಂಭವಾಯಿತು. ಸಾರ್ವಜನಿಕ ಸಂಸ್ಥೆಗಳ ಸವಕಳಿ, ಅನುದಾನಗಳ ಹಿಂದೆಗೆತ, ಸಾಂಸ್ಥಿಕ ಕೊಳೆತ ಇತ್ಯಾದಿಗಳು ಪ್ರಾದೇಶಿಕ ವಿಶ್ವವಿದ್ಯಾನಿಲಯಗಳು, ಅವುಗಳ ಅಧೀನ ಕಾಲೇಜುಗಳು ಮತ್ತು ವೃತ್ತಿಶಿಕ್ಷಣ ಕ್ಷೇತ್ರಗಳನ್ನು ಮೊದಲಿಗೆ ಬಾಧಿಸಿದರೆ, ಇದೀಗ ಅದು ಹೆಚ್ಚು ಸಂರಕ್ಷಿತ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ (ಜೆಎನ್‌ಯು), ದಿಲ್ಲಿ ವಿಶ್ವವಿದ್ಯಾನಿಲಯ (ಡಿಯು) ಮುಂತಾದವುಗಳಿಗೆ ತಲುಪಿದೆ ಎಂದು ಪ್ರೊ. ಕೃಷ್ಣಕುಮಾರ್ ಶಿಕ್ಷಣ ಕುರಿತ ನ್ಯಾಯಮಂಡಳಿಯ ಮುಂದೆ ಹೇಳಿದ್ದಾರೆ.
ನವ ಉದಾರವಾದದ ಆರಂಭವು ಸಾಂಸ್ಥಿಕ ಸಂರಚನೆ, ಅವುಗಳ ಹಣಕಾಸು ಮೂಲ ಮಾತ್ರವಲ್ಲದೆ, ಅವುಗಳ ವಿಷಯ ಹಾಗೂ ಉದ್ದೇಶಗಳಿಗೆ ಸಂಬಂಧಿಸಿದಂತೆ ಕೂಡಾ ಭಾರತೀಯ ಉನ್ನತ ಶಿಕ್ಷಣದ ಖಾಸಗೀಕರಣದ ಬಹುಮುಖಿ ಪ್ರಕ್ರಿಯೆಗೆ ಉತ್ತೇಜನ ನೀಡಿತು ಎಂಬ ಅಭಿಪ್ರಾಯ ಪ್ರೊ. ಸುಜಿತ್ ಮುಜುಮ್‌ದಾರ್ ಅವರದ್ದಾಗಿತ್ತು.
2014ರ ಸಾರ್ವತ್ರಿಕ ಚುನಾವಣೆಯ ನಂತರದಿಂದ ನವ ಉದಾರವಾದ ಮತ್ತು ಸರ್ವಾಧಿಕಾರಿ ಪ್ರವೃತ್ತಿಯ ಮೇಳೈಸುವಿಕೆ ಸ್ಪಷ್ಟವಾಗಿ ಹೆಚ್ಚುವುದರ ಜೊತೆಗೆ, ಈಗಿನ ಪ್ರಭುತ್ವದ ಅಂಗಸಂಸ್ಥೆಗಳು ಮತ್ತು ರಾಜಕೀಯದ ಮೂಲಕ ಪ್ರಜಾಪ್ರಭುತ್ವದ ಮೇಲಿನ ದಾಳಿಗಳು ಹೆಚ್ಚಿವೆ ಮತ್ತು ಶಿಕ್ಷಣ ಸಂಸ್ಥೆಗಳ ಮೇಲಿನ ಆಕ್ರಮಣವು ಈ ಪ್ರಕ್ರಿಯೆಯ ಭಾಗವಾಗಿದೆ ಎಂದು ಪ್ರೊ. ಮುಜುಮ್‌ದಾರ್ ಹೇಳಿದ್ದಾರೆ.
ಪ್ರೊ. ಎನ್. ರಘುರಾಮ್ ಅವರ ಪ್ರಕಾರ, ಇಂದು ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯೆಂದು ಹೇಳಲಾಗುತ್ತಿದ್ದು, ಶಿಕ್ಷಣ ಬಯಸಿ ಬರುವ ವಿದ್ಯಾರ್ಥಿಗಳ ಸಂಖ್ಯೆ ಏರಿದ್ದರೂ, ಸರಕಾರವು ಶಿಕ್ಷಣ ಕ್ಷೇತ್ರದಲ್ಲಿ ಈಗ ಮಾಡುತ್ತಿರುವ ಹೂಡಿಕೆಗಿಂತ ಭಾರತೀಯ ಆರ್ಥಿಕತೆಯು ಅಷ್ಟೇನೂ ಬೆಳವಣಿಗೆ ಕಾಣದಿದ್ದ ಉದಾರೀಕರಣಪೂರ್ವ ಕಾಲದಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿತ್ತು. ಉನ್ನತ ಶಿಕ್ಷಣಕ್ಕೆ ಬೇಡಿಕೆ ಹೆಚ್ಚುತ್ತಿದ್ದರೂ ಸರಕಾರವು ಶಿಕ್ಷಣ ಕುರಿತ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದು, ಹೂಡಿಕೆ ಸ್ಥಗಿತಗೊಂಡಿರುವುದು ಶಿಕ್ಷಣದ ಖಾಸಗೀಕರಣ ಮತ್ತು ಜಾಗತೀಕರಣಕ್ಕೆ ದಾರಿಮಾಡಿಕೊಟ್ಟಿದೆ.
2014ರಿಂದೀಚೆಗೆ ಶಿಕ್ಷಣ ಕ್ಷೇತ್ರಕ್ಕೆ ಬಜೆಟ್ ಅನುದಾನದಲ್ಲಿ ವಾಸ್ತವಿಕ ಇಳಿಕೆಯಾಗಿದ್ದು, ಅದೇ ಹೊತ್ತಿಗೆ ಸರಕಾರವು ಖಾಸಗಿ ರಂಗಕ್ಕೆ ಜಮೀನು, ಅನುದಾನ ಮತ್ತಿತರ ಸೌಲಭ್ಯಗಳನ್ನು ಒದಗಿಸುವುದು, ಸಾರ್ವಜನಿಕ ಶಿಕ್ಷಣಕ್ಕೆ ನಿಧಿ ಕಡಿತ ಮಾಡುವುದರ ಪರಿಣಾಮವಾಗಿ ಅದನ್ನು ಕುಂಠಿತಗೊಳಿಸುವುದರ ಮೂಲಕ ಶಿಕ್ಷಣದಲ್ಲಿ ಖಾಸಗಿ ಹೂಡಿಕೆಗೆ ಪ್ರೋತ್ಸಾಹ ಒದಗಿಸಿದೆ ಎಂದು ಅವರು ವಿವರಿಸಿದ್ದಾರೆ.
ಕಳೆದ 60-65 ವರ್ಷಗಳಿಂದಲೂ ಭಾರತದ ಶಿಕ್ಷಣ ಕ್ಷೇತ್ರದಲ್ಲಿ ಬಿಕ್ಕಟ್ಟು ಇದೆ ಎಂದು ಹೇಳಿದ ಪ್ರೊ. ರೊಮಿಲಾ ಥಾಪರ್, ಅದು ಎಂದಿಗೂ ಇಂದಿನ ಪರಿಸ್ಥಿತಿಯಷ್ಟು ಕೆಟ್ಟದಾಗಿರಲಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಿರ್ದಿಷ್ಟವಾಗಿ ಸಾಮಾಜಿಕ ವಿಜ್ಞಾನಗಳು, ಮತ್ತವುಗಳನ್ನು ಉತ್ತಮವಾಗಿ ಕಲಿಸುವುದಕ್ಕೆ ಹೆಸರಾಗಿರುವ ಜೆಎನ್‌ಯು, ಜಾದವಪುರ ವಿಶ್ವವಿದ್ಯಾನಿಲಯ (ಜೆಯು), ಹೈದರಾಬಾದ್ ಕೇಂದ್ರ ವಿಶ್ವವಿದ್ಯಾನಿಲಯ (ಎಚ್‌ಸಿಯು), ಮುಂಬೈಯ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸಾಯನ್ಸಸ್ (ಟಿಐಎಸ್‌ಎಸ್) ವಿಶೇಷವಾಗಿ ದಾಳಿಗೆ ತುತ್ತಾಗಿವೆ. ಏಕೆಂದರೆ, ಅವು ನಾವು ಬದುಕುತ್ತಿರುವ ಸಮಾಜದ ಚಿಕಿತ್ಸಕ ವಿಶ್ಲೇಷಣೆಯನ್ನು ಒದಗಿಸುತ್ತಿದ್ದು, ಅದು ಸುಶಿಕ್ಷಿತ, ಚಿಂತನಶೀಲ ಪ್ರಜೆಗಳನ್ನು ಸೃಷ್ಟಿಸಲು ನೆರವಾಗುತ್ತಿದೆ. ವಿಶ್ವವಿದ್ಯಾನಿಲಯ ಹಂತವೂ ಸೇರಿದಂತೆ ಶಿಕ್ಷಣದಲ್ಲಿ ಕೇಂದ್ರ ವಿಷಯ ಎಂದರೆ, ವಿದ್ಯಾರ್ಥಿಗಳಿಗೆ ಹೇಗೆ ಪ್ರಶ್ನಿಸಬೇಕು, ಪ್ರಶ್ನೆ ಮಾಡುವುದರ ಮಹತ್ವವೇನು ಎಂಬುದನ್ನು ಕಲಿಸಲಾಗುತ್ತಿಲ್ಲ; ಬದಲಾಗಿ, ತಮಗೆ ನೀಡಲಾದ ಮಾಹಿತಿಯನ್ನು ವಿಮರ್ಶೆಯೇ ಇಲ್ಲದೆ ಕಲಿಯಲು ಮತ್ತು ಅವುಗಳನ್ನು ಪ್ರಶ್ನಿಸದಿರಲು ಕಲಿಸಲಾಗುತ್ತಿದೆ. ರಾಜಕೀಯ ಸಂಸ್ಥೆಗಳಿಗೆ ಮತ್ತು ಅಧಿಕಾರದಲ್ಲಿರುವ ಜನರಿಗೆ ಪ್ರಶ್ನೆಗಳನ್ನು ಎತ್ತುವ ಅಥವಾ ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ವಿಶ್ಲೇಷಿಸುವ ಪ್ರಜೆಗಳು ಬೇಕಾಗಿಲ್ಲ. ಅನಿರ್ಬಂಧಿತ ಮತ್ತು ಪ್ರೋತ್ಸಾಹಿತ ಖಾಸಗೀಕರಣಕ್ಕೆ ಅವಕಾಶಮಾಡಿಕೊಡುವ ಸಲುವಾಗಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಉದ್ದೇಶಪೂರ್ವಕವಾಗಿ ಮತ್ತು ಯೋಜಿತ ರೀತಿಯಲ್ಲಿ ದುರ್ಬಲಗೊಳಿಸುವುದರೊಂದಿಗೆ, ಪ್ರಸ್ತುತ ಆಡಳಿತದಲ್ಲಿ ಶಿಕ್ಷಣದ ಮೇಲಿನ ದಾಳಿಗಳು ತೀವ್ರಗೊಂಡಿವೆ. ಖಾಸಗೀಕರಣದ ದಾರಿಗೆ ತಡೆಯೊಡ್ಡುವ ಅಥವಾ ಕಿರಿಕಿರಿಯನ್ನುಂಟುಮಾಡುವ ಸಾಧ್ಯತೆಗಳಿರುವ ಎಲ್ಲ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ಸಮನ್ವಯಿತ ರೀತಿಯಲ್ಲಿ ಇಲ್ಲವಾಗಿಸುವ ಮೂಲಕ ಇದನ್ನು ಮಾಡಲಾಗುತ್ತಿದೆ ಎಂದವರು ಹೇಳಿದರು.
ಹಿಂದಿನ ಯುಪಿಎ ಸರಕಾರ ತನ್ನ ಎರಡನೇ ಅವಧಿಯಲ್ಲಿ ಎಂಟು ಮಸೂದೆಗಳ ಮೂಲಕ ತನ್ನ ಖಾಸಗೀಕರಣದ ಕಾರ್ಯಕ್ರಮವನ್ನು ಮುಂದುವರಿಸಲು ಹೊರಟಾಗ ಶಿಕ್ಷಕ ಸಮುದಾಯಕ್ಕೆ ಈ ಮಸೂದೆಗಳನ್ನು ಪರಿಶೀಲಿಸುತ್ತಿದ್ದ ಸಂಸದೀಯ ಸ್ಥಾಯಿ ಸಮಿತಿಯ ಮುಂದೆ ಕನಿಷ್ಠ ಪಕ್ಷ ತನ್ನ ಅಭಿಪ್ರಾಯಗಳನ್ನು ಮುಂದಿಡುವ ಅವಕಾಶವಾದರೂ ಇತ್ತು ಮತ್ತು ಇದರಿಂದಾಗಿ ಈ ಮಸೂದೆಗಳಲ್ಲಿ ಏಳಕ್ಕೆ ಕಡಿವಾಣ ಬಿದ್ದು, ಕೇವಲ ಒಂದು ಮಾತ್ರ ಅಂಗೀಕಾರವಾಯಿತು ಎಂದು ದಿಲ್ಲಿ ವಿಶ್ವವಿದ್ಯಾನಿಲಯದ ಅಧ್ಯಾಪಕರ ಸಂಘ (ಡಿಯುಟಿಎ)ದ ಮಾಜಿ ಅಧ್ಯಕ್ಷ ಪ್ರೊ. ನಂದಿತಾ ನಾರಾಯಣ್ ನೆನಪಿಸಿಕೊಂಡರು. ಇನ್ನೊಂದು ಕಡೆಯಲ್ಲಿ ಪ್ರಸ್ತುತ ಸರಕಾರವು, ಸಂಸದೀಯ ಸ್ಥಾಯಿ ಸಮಿತಿಯ ಮುಂದಿಡುವ ಗೋಜಿಗೇ ಹೋಗದೆ, ಇಡೀ ಪ್ರಕ್ರಿಯೆಯನ್ನು ಕಡೆಗಣಿಸಿ, ಸಂಸತ್ತು ಅಂಗೀಕರಿಸಿದ ಕಾಯ್ದೆ ಕಾನೂನುಗಳಲ್ಲಿ ಬದಲಾವಣೆಗಳನ್ನು ಮಾಡುತ್ತಿದೆ ಎಂದವರು ಹೇಳಿದರು.
ಉನ್ನತ ಶಿಕ್ಷಣಕ್ಕೆ ಅನುದಾನ ಹಿಂದೆಗೆತ
ಶಿಕ್ಷಣ ಸಂಸ್ಥೆಗಳ ಅನುದಾನದಲ್ಲಿ ಕಡಿತ ಮಾಡಿರುವ ಪರಿಣಾಮವಾಗಿ ದೇಶದ ವಿಶ್ವವಿದ್ಯಾನಿಲಯಗಳಾದ್ಯಂತ ಶುಲ್ಕದಲ್ಲಿ ಭಾರೀ ಹೆಚ್ಚಳ, ಹಣಕಾಸು ನೆರವಿನ ಹಿಂದೆಗೆತ, ವಿದ್ಯಾರ್ಥಿವೇತನ ಮತ್ತು ಫೆಲೋಶಿಪ್‌ಗಳ ರದ್ದತಿ ಇತ್ಯಾದಿ ಸಮಸ್ಯೆಗಳು ಉಂಟಾಗಿವೆ. 2005ರಿಂದೀಚೆಗೆ ತಮ್ಮ ವಿಶ್ವವಿದ್ಯಾನಿಲಯದಲ್ಲಿ ನಿರಂತರವಾಗಿ ಶುಲ್ಕ ಏರಿಕೆಯಾಗಿದೆ ಎಂದು ಲಕ್ನೊ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಾದ ಕರುಣೇಶ್ ದ್ವಿವೇದಿ ಮತ್ತು ಅಂಕಿತ್ ಸಿಂಗ್ ಬಾಬು ತೀರ್ಪುಗಾರರ ಮಂಡಳಿಗೆ ತಿಳಿಸಿದರು. 1,400 ರೂ. ಶುಲ್ಕವಿದ್ದ ಕೆಲವು ಕೋರ್ಸುಗಳಿಗೆ ಈಗ 36,000 ರೂ.ಗಳಾಗಿದ್ದು, 1,200 ರೂ. ಇದ್ದವುಗಳು 24,000 ರೂ.ಗಳಾಗಿವೆ ಎಂದವರು ತಿಳಿಸಿದರು.
ಪಟ್ನಾ ಎನ್‌ಐಟಿಯ ರಮಾಶಿಶ್ ಕುಮಾರ್ ಅವರ ಸಾಕ್ಷ್ಯದಿಂದ ಕಟುವಾದ ಚಿತ್ರಣವೊಂದು ದೊರೆಯಿತು. ವಿದ್ಯಾರ್ಥಿವೇತನ ಹಿಂದೆಗೆತದ ವಿರುದ್ಧ ವಿದ್ಯಾರ್ಥಿ ಸಮುದಾಯವು ನಿರಂತರ ಪ್ರತಿಭಟನೆ ನಡೆಸಿದ ಬಳಿಕ ಕುಮಾರ್ ಅವರಿಗೆ ಎರಡು ವರ್ಷಗಳ ಕಾಲ ವಿದ್ಯಾರ್ಥಿವೇತನದ ಹಣ ಸಿಕ್ಕಿತಾದರೂ, ಅಂತಿಮ ವರ್ಷದಲ್ಲಿ ಸಿಗಲೇ ಇಲ್ಲ. ಇದರಿಂದಾಗಿ ಅವರಂತಹ ವಿದ್ಯಾರ್ಥಿಗಳು ಶಿಕ್ಷಣ ಶುಲ್ಕ ನೀಡಲಾಗದೆ ಕಾಲೇಜು ಬಿಡಬೇಕಾಯಿತು. ಇದೇ ವೇಳೆ, ಶಿಕ್ಷಣ ಶುಲ್ಕವು ವರ್ಷಕ್ಕೆ 73,000 ರೂ. ಇದ್ದದ್ದು 2016ರಿಂದೀಚೆಗೆ ವರ್ಷಕ್ಕೆ 1,20,000 ರೂ.ಗೆ ಏರಿದೆ. ಇದಲ್ಲದೆ, ರಾಷ್ಟ್ರೀಯ ವಿದ್ಯಾರ್ಥಿವೇತನ ಯೋಜನೆ ಬಂದ ಮೇಲೆ ವಿದ್ಯಾರ್ಥಿವೇತನವನ್ನು ಅರ್ಧದಷ್ಟು ಕಡಿತ ಮಾಡಲಾಗಿದ್ದು, ಏನಿದ್ದರೂ ವಿದ್ಯಾರ್ಥಿಗಳು ತಮಗೆ ಬರಬೇಕಾದ ವಿದ್ಯಾರ್ಥಿ ವೇತನದ ಹಣವನ್ನು ಪಡೆಯಲು ಕಂಬದಿಂದ ಕಂಬಕ್ಕೆ ಅಲೆಯಬೇಕಾಗುತ್ತಿದೆ.
ಜಾರ್ಖಂಡ್ ಸರಕಾರವು ರಾಜ್ಯಾದ್ಯಂತ ವಿದ್ಯಾರ್ಥಿವೇತನವನ್ನು ಅರ್ಧದಷ್ಟು ಕಡಿತಗೊಳಿಸಿದ್ದು, ಇದರಿಂದ ಎಸ್ಸಿ, ಎಸ್ಟಿ ಮತ್ತು ಓಬಿಸಿ ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ದೂರಮಾಡಿದಂತಾಗಿದೆ ಎಂದು ನೀಲಾಂಬರ್- ಪೀತಾಂಬರ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಪ್ರೇಮ್ ಕುಮಾರ್ ತಿಳಿಸಿದ್ದಾರೆ. ತನ್ನ ಸ್ವಂತ ಕಷ್ಟವನ್ನು ವಿವರಿಸಿದ ಅವರು, ತನಗೆ ವಿದ್ಯಾರ್ಥಿವೇತನ ಬಂದಿಲ್ಲವೆಂದೂ, ತನಗೆ ಹಕ್ಕಿನಿಂದ ಬರಬೇಕಾದ ಬಾಕಿಯನ್ನು ಪಡೆಯಲುಹೋದರೆ ತನ್ನನ್ನು ಭ್ರಷ್ಟ ಬೇಡಿಕೆ ಮತ್ತು ಅವಮಾನಗಳಿಗೆ ಗುರಿಪಡಿಸಲಾಗಿದೆ ಎಂದೂ ತಿಳಿಸಿದ್ದಾರೆ. ವಿದ್ಯಾರ್ಥಿವೇತನದ ವಿಳಂಬದಿಂದಾಗಿ ತನಗೆ ಮಾನಸಿಕ ಕಿರುಕುಳ ಮತ್ತು ಆರ್ಥಿಕ ಸಂಕಷ್ಟ ಎರಡನ್ನೂ ಎದುರಿಸುವಂತಾಗಿದೆ ಮಾತ್ರವಲ್ಲ, ಶಿಕ್ಷಣದ ಈಗಿನ ಸ್ಥಿತಿಯನ್ನು ನೋಡಿದಾಗ ತಾನು ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯುವುದಾದರೂ ಹೇಗೆ ಎಂದು ಚಿಂತೆಯಾಗುತ್ತಿದೆ ಎಂದವರು ವಿವರಿಸಿದ್ದಾರೆ.
ಇದೇ ರೀತಿಯ ಸಂಕಷ್ಟ ಲುಧಿಯಾನದ ಪಂಜಾಬ್ ವಿಶ್ವವಿದ್ಯಾನಿಲಯದ ಬೂಟಾ ಸಿಂಗ್ ಅವರ ಸಾಕ್ಷಿಯಲ್ಲಿ ಪ್ರತಿಧ್ವನಿಸಿತು. ಮಾರ್ಚ್ 2017ರಲ್ಲಿ ವಿಶ್ವವಿದ್ಯಾನಿಲಯದ ಸೆನೆಟ್ ಮಂಡಳಿಯು ಎಲ್ಲ ಕೋರ್ಸುಗಳ ಶುಲ್ಕವನ್ನು ಹಲವು ಪಟ್ಟು ಏರಿಸಿದರ ಪರಿಣಾಮವಾಗಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆದಿತ್ತು. ಉದಾಹರಣೆಗೆ ಬಿ.ಫಾರ್ಮಾ ಕೋರ್ಸಿನ ಶುಲ್ಕ 5,080 ರೂ. ಇದ್ದುದನ್ನು 50,000 ರೂ.ಗಳಿಗೆ ಮತ್ತು ಪತ್ರಿಕೋದ್ಯಮ ಎಂ.ಎ.ಗೆ 5,290 ರೂ. ಇದ್ದುದನ್ನು 30,000ರೂ.ಗಳಿಗೆ, ಅದೇ ರೀತಿ ದಂತ ವೈದ್ಯಕೀಯ ಕೋರ್ಸಿನ ಶುಲ್ಕವನ್ನು 86,000 ರೂ.ಗಳಿಂದ 1.50 ಲಕ್ಷ ರೂ.ಗಳಿಗೆ ಏರಿಸಲಾಗಿತ್ತೆಂದು ಅವರು ವಿವರಿಸಿದರು. ವಿವಿಧ ಕೋರ್ಸುಗಳ ಶುಲ್ಕ ಹೆಚ್ಚಿಸುವ ವಿಶ್ವವಿದ್ಯಾನಿಲಯದ ನಿರ್ಧಾರವು ಕ್ಯಾಂಪಸಿನಲ್ಲಿ ಪ್ರತಿಭಟನೆಯ ಕಿಡಿ ಹಚ್ಚಿತ್ತು.
ಐಐಟಿ ಮುಂಬೈಯ ವಿದ್ಯಾರ್ಥಿ ಟೋನಿ ಕುರಿಯನ್ ತನ್ನ ಸಾಕ್ಷಿಯಲ್ಲಿ, ಐಐಟಿ ಮುಂಬೈಯ ಆಡಳಿತವು ವಿದ್ಯಾರ್ಥಿಗಳ ಜೊತೆಗಾಗಲೀ, ಅವರ ಪ್ರತಿನಿಧಿಗಳ ಜೊತೆಗಾಗಲೀ ಸಮಾಲೋಚಿಸದೆ, ಏಕಾಏಕಿಯಾಗಿ ಶುಲ್ಕ ಏರಿಕೆಯನ್ನು ಜಾರಿಗೊಳಿಸಿತೆಂದು ತಿಳಿಸಿದರು. ಶುಲ್ಕ ಏರಿಕೆಯು ಪ್ರತೀ ಸೆಮಿಸ್ಟರಿಗೆ 8,000 ರೂ.ಗಳಿಂದ 11,000 ರೂ.ಗಳ ವ್ಯಾಪ್ತಿಯಲ್ಲಿತ್ತೆಂದು ಮತ್ತು ಇದು ಹೆಚ್ಚುಕಡಿಮೆ ಅವಗಣಿತ ವರ್ಗಗಳ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಿಂದ ಮತ್ತು ಐಐಟಿಗಳಿಂದ ಹೊರದಬ್ಬುವುದಕ್ಕೆ ಸಮ ಎಂದು ಅವರು ಹೇಳಿದ್ದಾರೆ.
ಆದರೂ, ಸರಕಾರ ಖಾಸಗೀಕರಣಕ್ಕೆ ಪ್ರೋತ್ಸಾಹ ನೀಡುತ್ತಾ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನೇ ಕೊಲ್ಲುತ್ತಿದ್ದು, ಇದಕ್ಕೆ ಬಹಳಷ್ಟು ಸಾಕ್ಷ್ಯಗಳಿವೆ.
2014ರಿಂದೀಚೆಗೆ ಶಿಕ್ಷಣ ಕ್ಷೇತ್ರಕ್ಕೆ ಬಜೆಟ್ ಅನುದಾನದಲ್ಲಿ ವಾಸ್ತವಿಕ ಇಳಿಕೆಯಾಗಿದ್ದು, ಅದೇ ಹೊತ್ತಿಗೆ ಸರಕಾರವು ಖಾಸಗಿ ರಂಗಕ್ಕೆ ಜಮೀನು, ಅನುದಾನ ಮತ್ತಿತರ ಸೌಲಭ್ಯಗಳನ್ನು ಒದಗಿಸುವುದು, ಸಾರ್ವಜನಿಕ ಶಿಕ್ಷಣಕ್ಕೆ ನಿಧಿ ಕಡಿತ ಮಾಡುವುದರ ಪರಿಣಾಮವಾಗಿ ಅದನ್ನು ಕುಂಠಿತಗೊಳಿಸುವುದರ ಮೂಲಕ ಶಿಕ್ಷಣದಲ್ಲಿ ಖಾಸಗಿ ಹೂಡಿಕೆಗೆ ಪ್ರೋತ್ಸಾಹ ಒದಗಿಸಿದೆ ಎಂದು ಪ್ರೊ. ಎನ್. ರಘುರಾಮ್ ವಿವರಿಸಿದ್ದಾರೆ.