10 ಸಾವಿರ ರೂ. ಬಂಡವಾಳದೊಂದಿಗೆ ಕಂಪೆನಿ ಆರಂಭಿಸಿದ ಯುವಕನ ತಿಂಗಳ ವರಮಾನ ಈಗ 50 ಲಕ್ಷ ರೂ.!

Update: 2019-10-25 15:27 GMT

ತಿರುಪುರ್, ಅ.24: ಐದು ವರ್ಷಗಳ ಹಿಂದೆ ತಮಿಳುನಾಡಿನ ತಿರುಪುರ್ ನಲ್ಲಿ ಸಿಸಿಟಿವಿ ಆಪರೇಟರ್ ಆಗಿದ್ದ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರ್ ಝುಬೈರ್ ರಹಮಾನ್ ಈಗ 'ಫ್ಯಾಶನ್ ಫ್ಯಾಕ್ಟರಿ' ಎಂಬ ಇ-ಕಾಮರ್ಸ್ ಕಂಪೆನಿಯ ಮಾಲಕ. ಕೇವಲ 10,000 ರೂ. ಮೂಲ ಬಂಡವಾಳದೊಂದಿಗೆ ರಹಮಾನ್ ಆರಂಭಿಸಿದ ಈ ಕಂಪನಿ ಈಗ ಮಾಸಿಕ 50 ಲಕ್ಷ ರೂ. ವರಮಾನ ಗಳಿಸುತ್ತಿದೆ.

ಐದು ವರ್ಷಗಳ ಹಿಂದೆ, ಆಗ 21 ವರ್ಷದ ಝುಬೈರ್ ಒಮ್ಮೆ ಇ-ಕಾಮರ್ಸ್ ಕಂಪೆನಿಯೊಂದಕ್ಕೆ ಸಿಸಿಟಿವಿ ಅಳವಡಿಸಲು ಹೋಗಿದ್ದೇ ಅವರ ಜೀವನಕ್ಕೆ ಮಹತ್ವಪೂರ್ಣ ತಿರುವು ಒದಗಿಸಿತು. ಆ ಕಂಪೆನಿ ಹೇಗೆ ಲಾಭ ಗಳಿಸುತ್ತಿದೆ ಎಂದು ಅದರ ಮ್ಯಾನೇಜರ್ ರಿಂದ ತಿಳಿದುಕೊಂಡ ಝುಬೈರ್ ತನ್ನ ಊರಾದ ತಿರುಪುರ್ ಟೆಕ್ಸ್ ಟೈಲ್ ಉತ್ಪನ್ನಗಳಿಗೆ ಖ್ಯಾತವಾದುದರಿಂದ ಇದನ್ನೇ ಆಧಾರವಾಗಿಸಿ ಒಳ್ಳೆಯ ಆನ್ ಲೈನ್ನ್ ಕಂಪೆನಿ ಆರಂಭಿಸಬಹುದೆಂದು ಅಲ್ಲಿನ ಹಲವಾರು ಟೆಕ್ಸ್‍ಟೈಲ್ ಸಂಸ್ಥೆಗಳ ಜತೆ ಮಾತನಾಡಿದರು. ಕೊನೆಗೆ ತಮ್ಮ ಉದ್ಯೋಗ ತೊರೆದು 2015ರಲ್ಲಿ ಕೇವಲ 10,000 ರೂ. ಬಂಡವಾಳದೊಂದಿಗೆ 'ದಿ ಫ್ಯಾಶನ್ ಫ್ಯಾಕ್ಟರಿ' ಎಂಬ ಕಂಪೆನಿ ಆರಂಭಿಸಿದರು.

ಆರಂಭದಲ್ಲಿ ಫ್ಲಿಪ್ ಕಾರ್ಟ್ ಹಾಗೂ ಅಮೆಝಾನ್ ನಲ್ಲಿ ತಮ್ಮ ಉತ್ಪನ್ನಗಳನ್ನು ಲಿಸ್ಟ್ ಮಾಡಿದ್ದ ಅವರಿಗೆ ದಿನಕ್ಕೆ ಒಂದೆರಡು ಆರ್ಡರ್ ದೊರೆಯುತ್ತಿತ್ತು. ನಂತರ ಮಕ್ಕಳ ಉಡುಪುಗಳ ಕೋಂಬೋ ಪ್ಯಾಕ್ ಮೇಲೆ ಅವರು ಗಮನಹರಿಸಿದರು. ಹೀಗೆ ಬೇಡಿಕೆ ಹೆಚ್ಚಾಗುತ್ತಾ ಹೋದಂತೆ 30,000 ರೂ. ಹೂಡಿಕೆ ಮಾಡಿ ಉಡುಪು ತಯಾರಿಕಾ ಘಟಕ ಆರಂಭಿಸಿದ ಅವರು ಸ್ಥಳೀಯವಾಗಿ ಲಭ್ಯ ಬಟ್ಟೆಗಳನ್ನು ಬಳಸಿ ಮಕ್ಕಳ ಟಿ ಶರ್ಟ್, ಪೈಜಾಮ, ಮತ್ತಿತರ ಉಡುಪುಗಳನ್ನು ತಯಾರಿಸಿದರು.

ಅವರ ಸಂಸ್ಥೆಗೆ ದಿನಕ್ಕೆ 200ರಿಂದ 300 ಆರ್ಡರ್ ಗಳು ದೊರೆಯಲಾರಂಭಿಸಿದವು. ಇದೀಗ ಅವರ ಕಂಪೆನಿ ವಾರ್ಷಿಕ 6.5 ಕೋಟಿ ರೂ. ಆದಾಯ ಗಳಿಸುತ್ತಿದೆ ಹಾಗೂ ಮುಂದಿನ ಒಂದು ವರ್ಷದಲ್ಲಿ 12 ಕೋಟಿ ರೂ. ಆದಾಯ ಗಳಿಸುವ ಗುರಿ ಹೊಂದಿದೆ

ಇನ್ನಷ್ಟು ಹಣಕಾಸಿನ ಸಹಾಯ ದೊರೆತರೆ ದೊಡ್ಡ ಮಟ್ಟದಲ್ಲಿ ಉದ್ಯಮವನ್ನು ಬೆಳೆಸಿ ತಮ್ಮ ಉತ್ಪನ್ನಗಳನ್ನು ದುಬೈ ರಿಟೇಲರ್ ಗಳಿಗೂ ಮಾರಾಟ ಮಾಡಿ ಜಾಗತಿಕವಾಗಿ ತಮ್ಮ ಛಾಪು ಮೂಡಿಸುವ ಉದ್ದೇಶ ಝುಬೈರ್ ಗಿದೆ.

ಮಾಹಿತಿ ಕೃಪೆ: yourstory.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News