ಜೆಡಿಎಸ್ ಯುವ ಮುಖಂಡರ ಮೇಲೆ ಹಲ್ಲೆ ಆರೋಪ: ಎಸ್ಸೈ ಅಮಾನತಿಗೆ ಎಚ್.ಡಿ.ದೇವೇಗೌಡ ಒತ್ತಾಯ

Update: 2019-10-25 12:47 GMT

ಬೆಂಗಳೂರು, ಅ.25: ಯಾದಗಿರಿಯಲ್ಲಿ ಜೆಡಿಎಸ್ ಯುವ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಯಾದಗಿರಿ ನಗರ ಠಾಣೆಯ ಸಬ್ ಇನ್‌ಸ್ಪೆಕ್ಟರ್‌ನ್ನು ಕೂಡಲೇ ಅಮಾನತಿಲ್ಲಿಡಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಒತ್ತಾಯಿಸಿದ್ದಾರೆ.

ಶುಕ್ರವಾರ ಜೆಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಕಾರನ್ನು ಅಡ್ಡಗಟ್ಟಿ ಪ್ರತಿಭಟನೆ ಮಾಡಿದರು ಎಂಬ ಕಾರಣಕ್ಕಾಗಿ ಜೆಡಿಎಸ್ ಯುವ ಕಾರ್ಯಕರ್ತರನ್ನು ಸಬ್ ಇನ್‌ಸ್ಪೆಕ್ಟರ್ ಬಾಪುಗೌಡ ಹಾಗೂ ಸಿಬ್ಬಂದಿಗಳು ಮನಸೋ ಇಚ್ಚೆ ಥಳಿಸಿದ್ದಾರೆ. ಈ ಘಟನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದರು.

ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರಕಾರದ ಅವಧಿಯಲ್ಲಿ ನೀಡಿದ್ದ ಅನುದಾನವನ್ನು ಬಿಜೆಪಿ ಸರಕಾರ ವಾಪಸ್ ಪಡೆದಿದೆಯೆಂದು ಆರೋಪಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರನ್ನು ಅಡ್ಡಗಟ್ಟಿ ಪ್ರಶ್ನಿಸಿದ ಕಾರಣಕ್ಕಾಗಿ ಪೊಲೀಸರು ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಯುವ ಮುಖಂಡ ಮಾರ್ಕಂಡಪ್ಪ ಮಾನೆಗಾರ್ ಮೇಲೆ ಎಫ್‌ಐಆರ್ ದಾಖಲಿಸಿ, ದೈಹಿಕ ಹಿಂಸೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದರು.

ನಾನು ರಾಜಕೀಯ ಜೀವನದಲ್ಲಿ ನನ್ನ ವಿರುದ್ಧವೂ ಪ್ರತಿಭಟನೆಗಳು ನಡೆದಿವೆ. ಆದರೆ, ನಾನು ಯಾವತ್ತಿಗೂ ಬೇರೆ ಪಕ್ಷದ ಕಾರ್ಯಕರ್ತರ ಮೇಲೆ ದ್ವೇಷ ಸಾಧಿಸುವಂತಹ ಮಟ್ಟಕ್ಕೆ ಹೋಗಿಲ್ಲ. ರಾಜಕೀಯ ಕ್ಷೇತ್ರದಲ್ಲಿ ಪ್ರತಿಭಟನೆಗಳು ಸಹಜವಾಗಿರುತ್ತದೆ. ಆದರೆ, ಬಿಜೆಪಿ ಸರಕಾರ ಪ್ರತಿಭಟನೆ ಮಾಡಿದ ಒಂದೇ ಕಾರಣಕ್ಕೆ ಜೆಡಿಎಸ್ ಕಾರ್ಯಕರ್ತರನ್ನು ಗಂಭೀರವಾಗಿ ಥಳಿಸಿದ್ದಾರೆ. ಇಂತಹ ರಾಜಕೀಯ ದ್ವೇಷ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಳ್ಳೆಯದಲ್ಲವೆಂದು ಅವರು ಎಚ್ಚರಿಕೆ ನೀಡಿದ್ದಾರೆ.

ರಾಜಕೀಯ ಕಾರ್ಯಕರ್ತರನ್ನು ಬೆಲ್ಟ್, ಬೂಟ್‌ನಿಂದ ಒಡೆಯುವುದು. ಬಾಯಿಗೆ ಪಿಸ್ತೂಲ್ ಇಟ್ಟು ಬೆದರಿಕೆ ಹಾಕುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ. ಈಗಾಗಲೇ ಬಿ.ಎಸ್.ಯಡಿಯೂರಪ್ಪಗೆ ಪತ್ರಬರೆದಿದ್ದು, ಕೂಡಲೇ ಎಸ್ಸೈ ಬಾಪುಗೌಡ ಸೇರಿದಂತೆ ಹಲ್ಲೆ ಮಾಡಿದ ಆರೋಪಿಗಳನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿದ್ದೇನೆಂದು ತಿಳಿಸಿದರು.

ಮಾಜಿ ಸಚಿವ ಎಚ್.ಡಿ.ರೇವಣ್ಣ ಕೆಎಂಎಫ್‌ನಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ಕೊಟ್ಟಿದ್ದಾರೆ. ನಷ್ಟದಲ್ಲಿದ್ದ ಸಂಸ್ಥೆಯನ್ನು 4ಸಾವಿರ ಕೋಟಿ ರೂ.ಲಾಭ ತರುವಷ್ಟು ಹಂತಕ್ಕೆ ಮುಟ್ಟಿಸಿದ್ದಾರೆ. ಈಗ ಕೇಂದ್ರ ಸರಕಾರ ಹಾಲನ್ನು ವಿದೇಶದಿಂದ ಅಮದು ಮಾಡಿಕೊಳ್ಳುವಂತಹ ಒಪ್ಪಂದಕ್ಕೆ ಮುಂದಾಗಿರುವುದು ಆತಂಕ ಮೂಡಿಸಿದೆ. ಇದು ಜಾರಿಯಾದರೆ ರೈತರಿಗೆ ಮರಣ ಶಾಸನ ಬರೆದಂತೆಯೇ ಸರಿ.

-ಎಚ್.ಡಿ.ದೇವೇಗೌಡ, ಜೆಡಿಎಸ್ ವರಿಷ್ಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News