ಕಾಶ್ಮೀರಕ್ಕೆ ರಾಜಕೀಯ ಪಕ್ಷಗಳ ಭೇಟಿ ನಿರ್ಬಂಧಿಸಿ ವಿದೇಶಿ ನಿಯೋಗಕ್ಕೆ ಅವಕಾಶ ನೀಡಿದ್ದೇಕೆ?

Update: 2019-10-28 16:35 GMT

ಹೊಸದಿಲ್ಲಿ,ಅ.28: ಭಾರತೀಯ ರಾಜಕೀಯ ನಾಯಕರು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡುವುದನ್ನು ತಡೆದಿದ್ದ ಕೇಂದ್ರ ಸರಕಾರವು ಐರೋಪ್ಯ ಒಕ್ಕೂಟದ ಸಂಸದೀಯ ನಿಯೋಗಕ್ಕೆ ಅಂತಹ ಅವಕಾಶ ನೀಡಿರುವುದೇಕೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರು ಸೋಮವಾರ ಪ್ರಶ್ನಿಸಿದ್ದಾರೆ.

“ವಿದೇಶಿ ನಿಯೋಗಕ್ಕೆ ಕಾಶ್ಮೀರ ಭೇಟಿಗೆ ಅವಕಾಶ ನೀಡಲಾಗುತ್ತಿದೆ. ಹೀಗಿರುವಾಗ ಭಾರತೀಯ ರಾಜಕೀಯ ಪಕ್ಷಗಳ ‘ ನಾಯಕರು ಮತ್ತು ಸಂಸದರನ್ನೇಕೆ ಶ್ರೀನಗರ ವಿಮಾನ ನಿಲ್ದಾಣದಿಂದಲೇ ಪದೇ ಪದೇ ವಾಪಸ್ ಕಳುಹಿಸಲಾಗುತ್ತಿತ್ತು? ಸರ್ವೋಚ್ಚ ನ್ಯಾಯಾಲಯವು ಅನುಮತಿಸಿದ ನಂತರವೇ ಶ್ರೀನಗರವನ್ನು ಪ್ರವೇಶಿಸಲು ನನಗೆ ಅವಕಾಶ ನೀಡಲಾಗಿತ್ತು. ಇಂದಿಗೂ ಭಾರತೀಯ ಸಂಸದರಿಗೆ ಕಾಶ್ಮೀರ ಭೇಟಿಗೆ ಅವಕಾಶವಿಲ್ಲ,ಆದರೆ ಪ್ರಧಾನಿ ಮೋದಿಯವರು ಐರೋಪ್ಯ ಒಕ್ಕೂಟದ ಸಂಸದರನ್ನು ಸ್ವಾಗತಿಸುತ್ತಿದ್ದಾರೆ” ಎಂದು ಯೆಚೂರಿ ಟ್ವೀಟಿಸಿದ್ದಾರೆ.

ಐರೋಪ್ಯ ಒಕ್ಕೂಟದ ಸಂಸದೀಯ ನಿಯೋಗಕ್ಕೆ ಕಾಶ್ಮೀರ ಭೇಟಿಗೆ ಸೌಲಭ್ಯ ಕಲ್ಪಿಸುತ್ತಿರುವುದು ಈ ಸರಕಾರವು ಹತಾಶಗೊಂಡಿದೆ ಮತ್ತು ಜಮ್ಮು-ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗಳ ಕುರಿತು ಹಲವಾರು ಪ್ರಶ್ನೆಗಳನ್ನೆತ್ತಿರುವ ಜಾಗತಿಕ ಸಮುದಾಯವನ್ನು ಸಂತುಷ್ಟಗೊಳಿಸುವ ಒತ್ತಡದಲ್ಲಿದೆ ಎನ್ನುವುದನ್ನು ತೋರಿಸುತ್ತಿದೆ. ಕಾಶ್ಮೀರದ ಬಗ್ಗೆ ಜಾಗತಿಕ ಸಮುದಾಯಕ್ಕೆ ಮನದಟ್ಟು ಮಾಡುವಲ್ಲಿ ಸರಕಾರವು ಹತಾಶಗೊಂಡಿದೆ. ಜಮ್ಮು-ಕಾಶ್ಮೀರದಲ್ಲಿ ಎಲ್ಲವೂ ಸಹಜವಾಗಿದೆ ಎಂದು ಅದು ಹೇಳುತ್ತಿದೆಯಾದರೂ ವಸ್ತುಸ್ಥಿತಿ ಬೇರೆಯೇ ಆಗಿದೆ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಹೇಳಿದರು.

ಪ್ರಧಾನಿ ಮೋದಿ ಅವರು ಐರೋಪ್ಯ ಒಕ್ಕೂಟದ ನಿಯೋಗವನ್ನು ಸ್ವಾಗತಿಸುವ ಮೂಲಕ ಕಾಶ್ಮೀರ ವಿಷಯದ ಜಾಗತೀಕರಣಕ್ಕೆ ಪ್ರಯತ್ನಿಸುತ್ತಿದ್ದಾರೆ. ಭಾರತ ಸರಕಾರವು ವಿದೇಶಿ ಪ್ರಜೆಗಳನ್ನು ಕಾಶ್ಮೀರಕ್ಕೆ ಕಳುಹಿಸುತ್ತಿದೆ ಎಂದು ಸಿಪಿಐ ನಾಯಕ ಅತುಲ್ ಅಂಜಾನ್ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News