ಚೆಂಬಳಕಿನ ಕವಿಯ ಪರಿಮಳವ ಮೊಗೆದು...

Update: 2019-10-28 18:30 GMT

ಡಾ. ಜಿ. ಎಂ. ಹೆಗಡೆ ಅವರ ‘ಚೆಂಬೆಳಕಿನ ಕವಿ-ಚೆನ್ನವೀರ ಕಣವಿ’ ಕೃತಿ, ಕಣವಿಯವರ ಬದುಕು ಸಾಹಿತ್ಯದ ಮೇಲೆ ಸಮಗ್ರವಾಗಿ ಬೆಳಕು ಚೆಲ್ಲುವ ಕೃತಿ.

‘ಅಲ್ಲಿಂದ, ಇಲ್ಲಿಂದ ಎಲ್ಲಿಂದಲೋ ಬಂದ ಬೆಳಕುಗಳನ್ನು ಪ್ರಸ್ನತೆಯ ಪಾಕದಲ್ಲಿ ಹರಳುಗೊಳಿಸುತ್ತ ಸಾನೆಟ್ಟುಗಳ ಗುಡಿ ಕಟ್ಟಿ ಒಳಗೊಂದು ಪ್ರೀತಿಯ ಹಣತೆ ಹಚ್ಚಿಡುವ...’ ಕಣವಿಯ ಕಲೆಗಾರಿಕೆಯನ್ನು ಬಿಡಿಸಿಡುವ ಪ್ರಯತ್ನವೂ ಈ ಕೃತಿಯಲ್ಲಿ ನಡೆದಿದೆ. ಮುಖ್ಯವಾಗಿ ಅವರ ಕಾವ್ಯಾಧ್ಯಯನದ ಕಡೆಗೆ ಬರಹಗಳು ಗಮನ ನೀಡುತ್ತವೆ.

ಈ ಕೃತಿಯಲ್ಲಿ ಒಟ್ಟು ಏಳು ಅಧ್ಯಾಯಗಳಿವೆ. ಮೊದಲನೆಯದು, ಚೆನ್ನವೀರ ಕಣವಿ ಜೀವನಪಥದ ಕಡೆಗೆ ಬೆಳಕು ಚೆಲ್ಲುತ್ತದೆ. ಆ ಬಳಿಕ ಕಣವಿ ಕಾವ್ಯ ಭಂಡಾರ , ಕಣವಿ ಅವರ ಸುನೀತಗಳು, ಕಣವಿಯವರ ಕಾವ್ಯ ಮೀಮಾಂಸೆ, ಕಣವಿಯವರ ಆಯ್ದ ಕವಿತೆಯ ಸಂಗ್ರಹಗಳು ಮತ್ತು ಸಮಗ್ರ ಕಾವ್ಯ, ಪ್ರಜ್ಞಾನೇತ್ರದ ಬೆಳಕಿನಲ್ಲಿ ಕಣವಿ ವ್ಯಕ್ತಿತ್ವ ಹೀಗೆ ಬೇರೆ ಬೇರೆ ತಲೆಬರಹಗಳ ಮೂಲಕ ಕಣವಿ ಕಾವ್ಯಗಳನ್ನು ವಿಶ್ಲೇಷಿಸಲಾಗಿದೆ.

 ‘‘ಕಣವಿಯವರ ವ್ಯಕ್ತಿತ್ವ ಮತ್ತು ಸಾಹಿತ್ಯದಲ್ಲಿ ನಾವು ಭಿನ್ನತೆ ಬಿರುಕು ಕಾಣುವುದು ಸಾಧ್ಯವಿಲ್ಲ. ‘ಅಲ್ಲ ಸಲ್ಲದ ವಿಷಮ ವಿಪರೀತ ಭಾವನೆಯ ವಿಷಗಾಳಿ ಎನ್ನ ಬಳಿ ಸುಳಿಯದಿರಲಿ’ ಎಂದು ಆಶಿಸಿದ ಕಣವಿ ಅವರಲ್ಲಿ ವಿಶ್ವಭಾವಾತ್ಮಕ ಧೋರಣೆಯಿದೆ. ನಯ-ವಿನಯಗಳು ಕಣವಿಯವರ ಸ್ವಭಾವದಲ್ಲಿ ಮೇಳೈಸಿವೆ. ಸಿಟ್ಟು, ಕ್ರೌರ್ಯ, ರೋಷ, ಆಕ್ರೋಶಗಳಿಂದ ದೂರವಿದ್ದು ಮನಸ್ಸಿನ ಸದಸದ್ವಿವೇಕವನ್ನು ಸದಾ ಜಾಗೃತವಾಗಿಟ್ಟುಕೊಳ್ಳುವ ಗುಣ ಚೆನ್ನವೀರ ಕಣವಿಯವರ ಚೇತನದ ವೈಶಿಷ್ಟವಾಗಿದೆ’’ ಎಂದು ಲೇಖಕರು ಅಭಿಪ್ರಾಯಪಡುತ್ತಾರೆ. ಸಾಂಸ್ಕೃತಿಕವಾದ ರಾಜಕಾರಣದಿಂದ ದೂರವಿದ್ದುಕೊಂಡು ಜಾತ್ಯತೀತ ವೌಲ್ಯಗಳನ್ನು ಸಾಹಿತ್ಯ ಮತ್ತು ಬದುಕಿನಲ್ಲಿ ಅಳವಡಿಸಿಕೊಂಡು ಕಣವಿಯವರು ಹೆಜ್ಜೆಗಳನ್ನು ಹಾಕಿ, ಕಿರಿಯರಿಗೆ ಮಾದರಿಯಾಗಿದ್ದಾರೆ. ಸಾಹಿತ್ಯವಲಯದಲ್ಲಿ ಅಜಾತ ಶತ್ರುವಾಗಿರುವ ಕಣವಿಯವರು ಸಂಘಟನೆ, ಸಂವಾದ, ಬೌದ್ಧಿಕ ಪ್ರಾಮಾಣಿಕತೆಯಿಂದ ಅವಿನಾಭಾವ ಸಂಬಂಧವನ್ನು ನಿರ್ಮಿಸಿದ್ದಾರೆ ಎಂದು ಕೃತಿ ಅಭಿಪ್ರಾಯಪಡುತ್ತದೆ. ಹೊಸ ತಲೆಮಾರಿನ ಓದುಗರಿಗೆ ಕಣವಿ ಕಾವ್ಯ ಜಗತ್ತಿಗೆ ಪ್ರವೇಶಿಸಲು ಈ ಕೃತಿ ಬಹಳಷ್ಟು ನೆರವನ್ನು ನೀಡುತ್ತದೆ. ಸಾಹಿತ್ಯದ ವಿದ್ಯಾರ್ಥಿಗಳು ಅತ್ಯವಶ್ಯವಾಗಿ ಹೊಂದಿರಬೇಕಾದ ಪುಸ್ತಕ ಇದು. ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಈ ಕೃತಿಯನ್ನು ಹೊರತಂದಿದೆ. 128 ಪುಟಗಳ ಈ ಕೃತಿಯ ಮುಖಬೆಲೆ 120 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News