‘ವಿಶ್ವವಿದ್ಯಾನಿಲಯಗಳಿಗೆ ಸ್ವಾಯತ್ತತೆ’ ಎಂಬ ಮೋಸ!
ಭಾಗ-2
ದೇಶದ ಸಾರ್ವಜನಿಕ ಶಿಕ್ಷಣದ ಮೇಲೆ ಸರಕಾರಿ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ದಾಳಿಗಳ ಕುರಿತು ವಿಚಾರಣೆ ನಡೆಸಲು ಪೀಪಲ್ಸ್ ಕಮಿಷನ್ ಫಾರ್ ಶ್ರಿಂಕಿಂಗ್ ಡೆಮಾಕ್ರಟಿಕ್ ಸ್ಪೇಸ್ (ಪಿಸಿಎಸ್‌ಡಿಎಸ್) ಸಂಘಟನೆಯು ನಿವೃತ್ತ ನ್ಯಾಯಾಧೀಶರನ್ನೂ ಒಳಗೊಂಡ ಒಂದು ಜನತಾ ನ್ಯಾಯಮಂಡಳಿಯನ್ನು ರಚಿಸಿತ್ತು. ಅದರ ಮುಂದೆ ನೂರಾರು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಸಾಕ್ಷ್ಯ ಹೇಳಿ ಹಸಿಹಸಿ ಸತ್ಯಗಳನ್ನು ಬಿಚ್ಚಿಟ್ಟಿದ್ದರು. ಅವುಗಳ ಆಧಾರದಲ್ಲಿ ಈ ವಿಶೇಷ ಸರಣಿಯನ್ನು ನಿರೂಪಿಸಲಾಗಿದೆ.
ವಿಶ್ವವಿದ್ಯಾನಿಲಯಗಳಿಗೆ ‘ಸ್ವಾಯತ್ತತೆ’ ನೀಡುವ ಸರಕಾರದ ಕ್ರಮ ಕೂಡಾ ಶಿಕ್ಷಣದ ಖಾಸಗೀಕರಣದ ಕಾರ್ಯಕ್ರಮವನ್ನು ಮುಂದೊತ್ತುವ ನಡೆ ಎಂಬುದು ಸ್ಪಷ್ಟ. ಇದೊಂದು ದೊಡ್ಡ ಮುಚ್ಚುಮರೆಯ ಮೋಸ. ನ್ಯಾಯಮಂಡಳಿಯ ಮುಂದೆ ನೀಡಲಾದ ಹಲವಾರು ಸಾಕ್ಷ್ಯಗಳಿಂದ ಇದು ಬಯಲಾಯಿತು.
ಈಗ ನೀಡಲಾಗುತ್ತಿರುವ ಸ್ವಾಯತ್ತತೆಯನ್ನು ಅಕಾಡಮಿಕ್ ಸ್ವಾತಂತ್ರ್ಯ ಎಂಬುದಾಗಿ ಪರಿಗಣಿಸಬಾರದು ಎಂದು ಎಚ್ಚರಿಸಿದ ಪ್ರೊ. ರೊಮಿಲಾ ಥಾಪರ್, ‘‘ನಿಜವಾಗಿಯೂ ಅದು ವಿಶ್ವವಿದ್ಯಾನಿಲಯಗಳಿಗೆ ಸರಕಾರಿ ಅನುದಾನ, ನಿಲ್ಲಿಸಿ, ನಿಮ್ಮ ಹಣಕಾಸಿನ ಮೂಲವನ್ನು ನೀವೇ ಹುಡುಕಿಕೊಳ್ಳಿ ಎಂದು ಹೇಳುವ ಮೂಲಕ ಹಣಕಾಸಿನ ಸ್ವಾತಂತ್ರ್ಯವನ್ನು ನೀಡುತ್ತದೆ’’ ಎಂದು ವಿವರಿಸಿದ್ದಾರೆ.
ಈ ರೀತಿ ಹಣಕಾಸು ಸ್ವಾಯತ್ತತೆ ನೀಡುವುದರ ಅರ್ಥವೆಂದರೆ, ದೇಶದ ಜನರಿಗೆ ಉತ್ತಮ ಗುಣಮಟ್ಟದ ಮತ್ತು ಕೈಗೆಟಕುವ ಶಿಕ್ಷಣದ ಹಕ್ಕುಗಳನ್ನು ನೀಡುವ ಸಲುವಾಗಿ ಸಾರ್ವಜನಿಕ ನಿಧಿಯನ್ನು ಪಡೆಯುವ ವಿಶ್ವವಿದ್ಯಾನಿಲಯಗಳಿಗೆ ಸಂಬಂಧಿಸಿದಂತೆ ತನ್ನ ಬದ್ಧತೆಯಿಂದ ಸರಕಾರ ಹಿಂದೆ ಸರಿಯುವುದಾಗಿದೆ ಎಂದು ಪ್ರೊ. ನಾರಾಯಣ್ ಹೇಳಿದ್ದಾರೆ.
‘ಸೂಪರ್ ಅಟಾನಮಿ’, ‘ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್ ಆ್ಯಂಡ್ ಎಕ್ಸಲೆನ್ಸ್’ ಮುಂತಾದ ಆಕರ್ಷಕ ಹೆಸರುಗಳಲ್ಲಿ ಖಾಸಗೀಕರಣದ ಕ್ರಮಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಪ್ರೊ. ಮುಜುಮ್‌ದಾರ್ ಹೇಳಿದರು. ಉತ್ಕೃಷ್ಟತೆಯ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಶ್ರೇಣೀಕರಣ ಮಾಡಿ ರ್ಯಾಂಕಿಂಗ್ ನೀಡುವುದರ ಉದ್ದೇಶವೆಂದರೆ, ಈ ಖಾಸಗೀಕರಣಕ್ಕೆ ಮಾನ್ಯತೆ ಒದಗಿಸುವುದು ಎಂದು ಅವರು ಹೇಳಿದರು.
ಶ್ರೇಣೀಕೃತ ಸ್ವಾಯತ್ತತೆಯ ಮೂಲಕ ವಿಶ್ವವಿದ್ಯಾನಿಲಯಗಳಿಗೆ ಹಣಕಾಸು ಕೊರತೆ ಉಂಟುಮಾಡುವುದರಿಂದ ಅವುಗಳು ಸಾಮಾಜಿಕ ವೈವಿಧ್ಯವನ್ನು ಪ್ರತಿಫಲಿಸುವುದು ಅಸಾಧ್ಯವಾಗುವಂತೆ ಮಾಡಲಾಗುತ್ತಿದೆ ಎಂದು ಪ್ರೊ. ಕೃಷ್ಣಕುಮಾರ್ ಆತಂಕ ವ್ಯಕ್ತಪಡಿಸಿದರು. ಕೊನೆಗೂ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಈಗಷ್ಟೇ ಶಕ್ತರಾಗಿರುವ ಆದಿವಾಸಿಗಳು, ದಲಿತರು, ಅಲ್ಪಸಂಖ್ಯಾತರು ಮತ್ತು ಬಡವರು ಉನ್ನತ ಶಿಕ್ಷಣ ಪಡೆಯದಂತೆ ಈ ವ್ಯವಸ್ಥೆ ವಂಚಿಸುತ್ತದೆ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಉನ್ನತ ಶಿಕ್ಷಣದ ಅಭಿವೃದ್ಧಿಯ ನವ ಉದಾರವಾದಿ ಪ್ರಕ್ರಿಯೆಯು ವಿದ್ಯಾರ್ಥಿಗಳ ನೋಂದಣಿಯಲ್ಲಿ ಹೆಚ್ಚಳಕ್ಕೆ ಮತ್ತು ಅವರ ಸಾಮಾಜಿಕ ಸಂರಚನೆಯಲ್ಲಿ ನಾಟಕೀಯ ಬದಲಾವಣೆಗೆೆ ಕಾರಣವಾಗಿದೆ ಎಂದು ಪ್ರೊ. ಮುಜುಮ್‌ದಾರ್ ಹೇಳಿದ್ದಾರೆ. ಇದೇ ವೇಳೆಗೆ ಶಿಕ್ಷಣ ಸಂಸ್ಥೆಗಳ ಬೋಧಕ ಸಿಬ್ಬಂದಿಯಲ್ಲಿ ಎಸ್ಟಿ, ಎಸ್ಟಿ ಮತ್ತು ಒಬಿಸಿಯವರ ಪ್ರಾತಿನಿಧ್ಯ ಮೂರನೇ ಒಂದಕ್ಕಿಂತ ಕಡಿಮೆ ಇದೆ ಎಂದವರು ತಿಳಿಸಿದ್ದಾರೆ.
ವಿಶ್ವವಿದ್ಯಾನಿಲಯಗಳಲ್ಲಿ ಕಡೆಗಣಿತ ವರ್ಗಗಳ ಜನರ ಪ್ರವೇಶಾತಿ ಹೆಚ್ಚುತ್ತಿರುವ ಸಂದರ್ಭದಲ್ಲೇ ಇದು ಸಂಭವಿಸುತ್ತಿದೆ ಎಂದ ಪ್ರೊ. ನಾರಾಯಣ್, ಸರಕಾರ ವಾಸ್ತವವಾಗಿ ಇದನ್ನು ಕಡಿಮೆ ಮಾಡಲು ಬಯಸುತ್ತಿದ್ದು, ಇಂದು ನಡೆಯುತ್ತಿರುವ ಆಕ್ರಮಣವು ಸಂಶೋಧನೆಯನ್ನು ಪ್ರೋತ್ಸಾಹಿಸುವ ಮತ್ತು ಸಮಾಜದ ದುರ್ಬಲ ವರ್ಗಗಳಿಗೆ ಹೆಚ್ಚಿನ ಅವಕಾಶ ನೀಡುವ ಜೆಎನ್‌ಯುನಂತಹ ಸಾರ್ವಜನಿಕ ಅನುದಾನದಿಂದ ನಡೆಯುವ ವಿಶ್ವವಿದ್ಯಾನಿಲಯಗಳ ಸ್ವರೂಪ ಮತ್ತು ದೃಷ್ಟಿಕೋನದ ಮೇಲೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಸರಕಾರದ ಇಂತಹ ನಡೆಯನ್ನು ವಿರೋಧಿಸುವವರನ್ನು ‘ರಾಷ್ಟ್ರ ವಿರೋಧಿ’ ಎಂದು ಕರೆಯುವ ಸರಕಾರದ ಶ್ರೇಣೀಕೃತ ಸ್ವಾಯತ್ತತೆಯ ಧೋರಣೆಯಲ್ಲಿ ವಾಸ್ತವವಾಗಿ ರಾಷ್ಟ್ರೀಯತೆಯೇ ಮಾಯವಾಗಿದೆ ಎಂದು ಪ್ರೊ. ನಾರಾಯಣ್ ಹೇಳಿದರು. ವಿಶ್ವವಿದ್ಯಾನಿಲಯಗಳಲ್ಲಿ 20 ಶೇಕಡಾ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ವಿದೇಶೀಯರಾಗಿರಬೇಕು ಎಂದು ಸೂಚಿಸುವ ಸರಕಾರದ ನಿಬಂಧನೆಯಲ್ಲಿ ಇದರ ಸ್ಪಷ್ಟ ಚಿತ್ರಣ ಸಿಗುತ್ತದೆ ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿಗಳು 2015ರ ಎಪ್ರಿಲ್‌ನಲ್ಲಿ ಶುಲ್ಕ ಹೆಚ್ಚಳ ವಿರೋಧಿಸಿ ಯಾಕಾಗಿ ಹೋರಾಟ ಆರಂಭಿಸಿದರು? ಎಂದು ಹೇಳಿದ ಮಹಾತ್ಮಾ ಗಾಂಧಿ ಹಿಂದಿ ವಿಶ್ವವಿದ್ಯಾನಿಲಯದ ಪಿಎಚ್‌ಡಿ ವಿದ್ಯಾರ್ಥಿನಿ ಆರತಿ, ವಿಶ್ವವಿದ್ಯಾನಿಲಯಗಳ ಶುಲ್ಕ ಹೆಚ್ಚಳದಿಂದ ತಮ್ಮ ಶೈಕ್ಷಣಿಕ ಆಕಾಂಕ್ಷೆಗಳನ್ನು ಕೈಬಿಡಬೇಕಾಗಿಬರುವವರಲ್ಲಿ ಎಸ್ಸಿ, ಎಸ್ಟಿ ಒಬಿಸಿ ಮತ್ತು ಮಹಿಳೆಯರೇ ಹೆಚ್ಚು ಎಂದರು.
ಖಾಸಗೀಕರಣವನ್ನು ಪ್ರೋತ್ಸಾಹಿಸುವ ಸಲುವಾಗಿಯೇ ತರಲಾಗಿರುವ ಶೈಕ್ಷಣಿಕ ಸುಧಾರಣೆಗಳು ಮತ್ತು ಅದರ ಪರಿಣಾಮವಾಗಿ ಸಂಶೋಧನಾತ್ಮಕ ಮನೋಭಾವವನ್ನು ಬೆಳೆಸುವ ಶಿಕ್ಷಣ ಸಂಸ್ಥೆಗಳು ದಾಖಲಾತಿಯಲ್ಲಿ ಕಡಿತ ಮಾಡಬೇಕಾದ ನಿರ್ಬಂಧಕ್ಕೆ ಒಳಗಾಗಿವೆ ಎಂದು ಪ್ರೊ. ಮುಜುಮ್‌ದಾರ್ ವಿವರಿಸಿದರು. ಇದಕ್ಕೆ ಉದಾಹರಣೆ ನೀಡಿದ ಅವರು, ಈ ಕಾರಣದಿಂದ ಜೆಎನ್‌ಯುನಲ್ಲಿ ಒಂದು ವರ್ಷದಲ್ಲಿ ಸಂಶೋಧನಾ ಕಾರ್ಯಕ್ರಮಗಳಲ್ಲಿ ದಾಖಲಾತಿಯು 1,200ರಿಂದ ನೂರಕ್ಕಿಂತಲೂ ಕೆಳಗಿಳಿದಿದೆ ಎಂದವರು ಹೇಳಿದರು.
ಸ್ವಾಯತ್ತತೆಯ ಹಣೆಬರಹವು ಟಾಟಾ ಇನ್‌ಸ್ಟ್ಟಿಟ್ಯೂಟ್ ಆಫ್ ಸೋಷಿಯಲ್ ಸಾಯನ್ಸಸ್ (ಟಿಐಎಸ್‌ಎಸ್) ಪರಿಸ್ಥಿತಿಯಿಂದ ಸ್ಪಷ್ಟವಾಗಿ ತಿಳಿಯುತ್ತದೆ. ಈ ಸಂಸ್ಥೆಯ ವಿದ್ಯಾರ್ಥಿಗಳಾದ ಲಕ್ಷ್ಮಣ್ ಮತ್ತು ಗೌಮಿನ್ ಲಾಲ್ ಅವರು ತಮ್ಮ ಸಾಕ್ಷಗಳ ಮೂಲಕ ಕಠೋರವಾದ ಚಿತ್ರಣವನ್ನು ನೀಡಿದರು. ಟಿಐಎಸ್‌ಎಸ್ ಈಗಾಗಲೇ ಎರಡು ಕ್ಷೇತ್ರಗಳಲ್ಲಿ- ಅದೆಂದರೆ, ಒಂದು ಖಾಸಗಿ ಮತ್ತು ಇನ್ನೊಂದು ಸಾರ್ವಜನಿಕ- ಸ್ವಾಯತ್ತ ಸಂಸ್ಥೆಯಾಗಿ ಕಾರ್ಯಾಚರಿಸುತ್ತಿದೆ. ಪ್ರಸ್ತುತ ಸರಕಾರ 2014ರಲ್ಲಿ ಅಧಿಕಾರಕ್ಕೆ ಬಂದಂದಿನಿಂದ ಟಿಐಎಸ್‌ಎಸ್ ಯುಜಿಸಿಯಿಂದ ವಾರ್ಷಿಕ 26 ಕೋಟಿ ರೂ.ವರೆಗಿನ ಅನುದಾನ ಕಡಿತಕ್ಕೆ ಸಾಕ್ಷಿಯಾಗಿದೆ. ಹಾಗಿದ್ದರೂ, 2012ರಿಂದಲೇ ಅದು ಹಣಕಾಸಿನ ಬಿಕ್ಕಟ್ಟಿನ ಕುರಿತು ದೂರು ನೀಡಿ, ಸರಕಾರದಿಂದ ಹೆಚ್ಚಿನ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಿದ್ದರೂ, ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಸಂಸ್ಥೆಗಳಿಂದ ಟಿಐಎಸ್‌ಎಸ್‌ಗೆ ಹೆಚ್ಚುಹೆಚ್ಚು ಖಾಸಗಿ ಹಣ ಒಳಸುರಿಯುತ್ತಿದೆ!
ಆದರೆ, ಇದೇ ವೇಳೆಗೆ, 2012ರಲ್ಲಿ ಗುವಾಹಟಿಯಲ್ಲಿ ಮತ್ತು 2013ರಲ್ಲಿ ಹೈದರಾಬಾದ್‌ನಲ್ಲಿ ಹೊಸ ಕೇಂದ್ರಗಳನ್ನು ತೆರೆಯಲಾಯಿತು. ಟಿಐಎಸ್‌ಎಸ್‌ಗೆ ಪಟ್ನಾ, ಹೈದರಾಬಾದ್, ಗುವಾಹಟಿ, ತುಲಜಾಪುರದಲ್ಲಿ ಕೇಂದ್ರಗಳಿವೆ. ಟಿಐಎಸ್‌ಎಸ್‌ನ 180 ತಾತ್ಕಾಲಿಕ ಬೋಧಕ ಸಿಬ್ಬಂದಿಗೆ ಹಣ ನೀಡುವುದು ಟಾಟಾ ಟ್ರಸ್ಟ್‌ನಂತಹ ಖಾಸಗಿ ಸಂಸ್ಥೆಗಳು. ಆದರೆ, ಅವರ ನೇಮಕಾತಿ ವೇಳೆ ಯಾವುದೇ ಮೀಸಲಾತಿಯನ್ನು ಅಳವಡಿಸಲಾಗಿಲ್ಲ.
2014ರಿಂದ ಸರಕಾರವು ಟಿಐಎಸ್‌ಎಸ್‌ಗೆ ನಿಮ್ಮ ವೆಚ್ಚದ 30 ಶೇಕಡಾವನ್ನು ನೀವೇ ಸಂಪಾದಿಸಿ ಎಂದು ಹೇಳುತ್ತಿದೆ. ಇದರ ಪರಿಣಾಮವಾಗಿ ಶುಲ್ಕವು ಕಳೆದ ಮೂರು ವರ್ಷಗಳಲ್ಲಿ 40 ಶೇಕಡಾ ಮತ್ತು ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ 100 ಶೇಕಡಾ ಏರಿಕೆ ಕಂಡಿದೆ. ಈ ರೀತಿಯಾಗಿ ಇಡೀ ಶೈಕ್ಷಣಿಕ ವೆಚ್ಚದ ಹೊರೆಯನ್ನು ವಿದ್ಯಾರ್ಥಿಗಳ ಮೇಲೆ ಹಾಕಲಾಗಿದೆ. ಎಸ್ಸಿ, ಎಸ್ಟಿ, ಒಬಿಸಿ ವಿದ್ಯಾರ್ಥಿಗಳಿಗೆ 2015ರಿಂದ ಶುಲ್ಕವು ಪ್ರತೀ ಸೆಮಿಸ್ಟರಿಗೆ 4,500 ರೂ. ಇತ್ತು. ಅದನ್ನು ಒಬಿಸಿ ವಿದ್ಯಾರ್ಥಿಗಳಿಗೆ ಏರಿಸಲಾಗಿದ್ದು, ಅವರು ಪ್ರತೀ ಸೆಮಿಸ್ಟರಿಗೆ 61,000 ರೂ. ನೀಡಬೇಕಾಗಿದ್ದು, ಇದು ವರ್ಷಕ್ಕೆ 1,22,000 ರೂ. ಆಗುತ್ತದೆ. ಇದು ಒಬಿಸಿ ವಿದ್ಯಾರ್ಥಿಗಳಲ್ಲಿ ನಡುವೆ ಓದು ನಿಲ್ಲಿಸುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳಕ್ಕೆ ಕಾರಣವಾಗಿದ್ದು, ಬೇಗನೇ ಈ ಪರಿಸ್ಥಿತಿ ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗೆ ವಿಸ್ತರಿಸಲಿದೆ.
ಈ ಸ್ವಾಯತ್ತತೆ ಎಂಬುದು ಗುಣಮಟ್ಟದ ಶಿಕ್ಷಣದ ಮುಖವಾಡ ಧರಿಸಿಬರುವ ಖಾಸಗೀಕರಣ ಎಂಬುದು ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ನೀಡಿರುವ ಬಹಳಷ್ಟು ಸಾಕ್ಷಗಳಿಂದ ಬಯಲಾಗಿದ್ದು, ಸರಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡು ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ. ಜೊತೆಗೆ ಖಾಸಗಿ ಶಿಕ್ಷಣ ಮಾಫಿಯಾಗಳಿಗೆ ಲಾಭ ಮಾಡಿಕೊಡುತ್ತಿದೆ.
ಈ ಸ್ವಾಯತ್ತತೆ ಎಂಬುದು ಗುಣಮಟ್ಟದ ಶಿಕ್ಷಣದ ಮುಖವಾಡ ಧರಿಸಿಬರುವ ಖಾಸಗೀಕರಣ ಎಂಬುದು ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ನೀಡಿರುವ ಬಹಳಷ್ಟು ಸಾಕ್ಷಗಳಿಂದ ಬಯಲಾಗಿದ್ದು, ಸರಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡು ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ. ಜೊತೆಗೆ ಖಾಸಗಿ ಶಿಕ್ಷಣ ಮಾಫಿಯಾಗಳಿಗೆ ಲಾಭ ಮಾಡಿಕೊಡುತ್ತಿದೆ.