ಇಂದಿನಿಂದ ದೆಹಲಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ

Update: 2019-10-29 15:57 GMT

ಹೊಸದಿಲ್ಲಿ: ದೆಹಲಿಯ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯನ್ನು ಆಮ್ ಆದ್ಮಿ ಪಾರ್ಟಿ ಸರ್ಕಾರ ಇಂದಿನಿಂದ ಜಾರಿಗೊಳಿಸಲಿದೆ.

ಮಹಿಳೆಯರ ಭದ್ರತೆಯ ದೃಷ್ಟಿಯಿಂದ ಎಲ್ಲ 5558 ಬಸ್ಸುಗಳಿಗೆ ಮಂಗಳವಾರ ಮಾರ್ಷಲ್‌ಗಳನ್ನು ಕೂಡಾ ನಿಯೋಜಿಸಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಕಟಿಸಿದ್ದಾರೆ. ಉಚಿತ ಸವಾರಿಯ ಯೋಜನೆ ಐಚ್ಛಿಕವಾಗಿರುತ್ತದೆ. ಉಚಿತ ಪ್ರಯಾಣ ಆಯ್ಕೆ ಮಾಡಿಕೊಳ್ಳುವ ಮಹಿಳಾ ಪ್ರಯಾಣಿಕರಿಗೆ ತಿಳಿನೇರಳೆ ಬಣ್ಣದ ಟಿಕೆಟನ್ನು ಒಂದು ಪ್ರಯಾಣಕ್ಕಾಗಿ ವಿತರಿಸಲಗುತ್ತದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ದೆಹಲಿ ಸಾರಿಗೆ ನಿಗಮದ ಬಸ್ಸುಗಳಲ್ಲಿ ಪ್ರತಿದಿನ ಸುಮಾರು 44 ಲಕ್ಷ ಮಂದಿ ಪ್ರಯಾಣಿಸುತ್ತಾರೆ. ಈ ಪೈಕಿ ಶೇಕಡ 35ರಷ್ಟು ಮಹಿಳೆಯರು ಎಂದು ಸರ್ಕಾರಿ ಅಂಕಿ ಅಂಶಗಳು ತಿಳಿಸಿವೆ.

"ಭಾಯ್ ದೂಜ್ ಸಂದರ್ಭದಲ್ಲಿ ದೆಹಲಿ ಸರ್ಕಾರ ಮಹಿಳೆಯರಿಗಾಗಿ ಉಚಿತ ಪ್ರಯಾಣ ಯೋಜನೆ ಆರಂಭಿಸುತ್ತಿದೆ. ಮಹಿಳೆಯರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ಎಲ್ಲ ಪ್ರಯಾಣಿಕರು ಸಾರ್ವಜನಿಕ ಸಾರಿಗೆಯಲ್ಲಿ ಸುರಕ್ಷಿತವಾಗಿರಬೇಕು ಎಂಬ ಉದ್ದೇಶದಿಂದ ಪ್ರತಿ ಬಸ್‌ಗಳಿಗೆ ಮಾರ್ಷಲ್‌ಗಳನ್ನು ನೇಮಕ ಮಾಡಲಾಗುತ್ತದೆ" ಎಂದು ಕೇಜ್ರಿವಾಲ್ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು. ಸ್ವತಃ ಕೇಜ್ರಿವಾಲ್ ಈ ಯೋಜನೆಗೆ ಉದ್ಘಾಟನೆ ನೀಡುವ ಸಂದರ್ಭದಲ್ಲಿ ಬಸ್ ಪ್ರಯಾಣ ಕೈಗೊಳ್ಳುವರು.

ಡಿಟಿಸಿ ಬಸ್‌ಗಳಲ್ಲಿ ನೋಯ್ಡ, ಗುರುಗ್ರಾಮ, ಗಾಝಿಯಾಬಾದ್ ಮತ್ತು ಫರೀದಾಬಾದ್‌ನಂಥ ಇತರ ನಗರಗಳಿಗೆ ಪ್ರಯಾಣಿಸುವ ಮಹಿಳೆಯರು ಕೂಡಾ ಪಾವತಿಸಬೇಕಿಲ್ಲ. ಮುಂದಿನ ವರ್ಷದ ಆರಂಭದಲ್ಲಿ ದೆಹಲಿ ವಿಧಾನಸಭೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಕೇಜ್ರಿ ಸರ್ಕಾರದ ಈ ಕ್ರಮಕ್ಕೆ ವಿಶೇಷ ಮಹತ್ವ ಬಂದಿದೆ.

ದೆಹಲಿಯಲ್ಲಿ ಪ್ರಸ್ತುತ ಹವಾನಿಯಂತ್ರಿತವಲ್ಲದ ಬಸ್‌ಗಳಲ್ಲಿ 5 ರಿಂದ 15 ರೂಪಾಯಿ ಹಾಗೂ ಹವಾನಿಯಂತ್ರಿತ ಬಸ್ಸುಗಳಲ್ಲಿ 10 ರಿಂದ 25 ರೂಪಾಯಿ ಟಿಕೆಟ್ ದರ ಇದೆ. ಹೊಸ ಯೋಜನೆಗಾಗಿ ಸರ್ಕಾರ ಮೊದಲ ವರ್ಷ 350 ಕೋಟಿ ರೂ. ವೆಚ್ಚ ಮಾಡಬೇಕಾಗುತ್ತದೆ.

ಹಿರಿಯ ನಾಗರಿಕರು, ವಿದ್ಯಾರ್ಥಿಗಳಿಗೂ ಸೌಲಭ್ಯ: ಕೇಜ್ರಿವಾಲ್

ಮುಂದಿನ ದಿನಗಳಲ್ಲಿ ಇದೇ ರೀತಿಯ ಸೌಲಭ್ಯವನ್ನು ಹಿರಿಯ ನಾಗರಿಕರು ಹಾಗೂ ವಿದ್ಯಾರ್ಥಿಗಳಿಗೆ ಒದಗಿಸಲಾಗುವುದು. ಡಿಟಿಸಿ ಹಾಗೂ ಕ್ಲಸ್ಟರ್ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡುವ ಪ್ರಸಕ್ತ ಯೋಜನೆಯ ಫಲಿತಾಂಶವನ್ನು ದಿಲ್ಲಿ ಸರಕಾರ ವಿಶ್ಲೇಷಿಸಿದ ಬಳಿಕ ಈ ಸೌಲಭ್ಯ ಅಸ್ತಿತ್ವಕ್ಕೆ ತರಲಾಗುವುದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಇತ್ತೀಚೆಗೆ ಲೋಕಾರ್ಪಣೆಗೊಳಿಸಿದ ‘ಎಕೆ ಆ್ಯಪ್’ ಮೂಲಕ ಮಾತನಾಡಿದ ಅವರು, ಎಲ್ಲದನ್ನೂ ಒಂದೇ ಬಾರಿ ಮಾಡಲು ಸಾಧ್ಯವಿಲ್ಲ. ಆದರೆ, ನಾವು ಖಂಡಿತವಾಗಿ ಇದನ್ನು ಅಸ್ತಿತ್ವಕ್ಕೆ ತರುತ್ತೇವೆ ಎಂದು ಹೇಳಿದರು.

ಲಿಂಗ ಸಮಾನತೆ ತರುವಲ್ಲಿ ಈ ಯೋಜನೆ ನೆರವಾಗಲಿದೆ. ಅತ್ಯಧಿಕ ಸಾರಿಗೆ ವೆಚ್ಚದ ಕಾರಣಕ್ಕೆ ಶಾಲೆ ಹಾಗೂ ಕಾಲೇಜು ತ್ಯಜಿಸುವ ಬಾಲಕಿಯರು, ಯುವತಿಯರು ಇನ್ನು ಮುಂದೆ ಶಿಕ್ಷಣ ತ್ಯಜಿಸುವ ಅಗತ್ಯ ಇಲ್ಲ ಎಂದು ಅವರು ತಿಳಿಸಿದರು.

 ಇನ್ನು ಅವರು ಮನೆಯಿಂದ ದೂರವಿರುವ ಉತ್ತಮ ಶಾಲೆ ಹಾಗೂ ಕಾಲೇಜುಗಳಿಗೆ ಬಸ್ ಮೂಲಕ ತೆರಳಬಹುದು. ಅಲ್ಲದೆ, ಕಚೇರಿ ದೂರವಿರುವ ಮಹಿಳೆಯರು ಪ್ರಯಾಣ ವೆಚ್ಚದ ಬಗ್ಗೆ ಚಿಂತಿಸಬೇಕಿಲ್ಲ ಎಂದು ಕೇಜ್ರಿವಾಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News