ಕೋಲಾರ ಸಂಸದ ಎಸ್. ಮುನಿಸ್ವಾಮಿ ವಿರುದ್ಧ ದೂರು ನೀಡಿದ ರೈತ

Update: 2019-10-29 10:39 GMT

ಕೋಲಾರ : ವಿವಾದಾಸ್ಪದ ರಸ್ತೆ ನಿರ್ಮಾಣ ಕಾರ್ಯಕ್ಕೆ ಸಂಸದ ಎಸ್.ಮುನಿಸ್ವಾಮಿ ಬೆಂಬಲ ನೀಡಿದ್ದಾರೆ ಎಂದು ಆರೋಪಿಸಿ ಲಕ್ಕೂರು ಗ್ರಾಮದ ರೈತ ರಾಜಗೋಪಾಲಗೌಡ ಎಂಬವರು ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಲಕ್ಕೂರು ಗ್ರಾಮದ ರೈತ ರಾಜಗೋಪಾಲ ಗೌಡ ಎಂಬುವರ ಜಮೀನಿನಲ್ಲಿ ರಸ್ತೆ ನಿರ್ಮಾಣ ಮಾಡಲು ಸರ್ಕಾರದ ನಿಯಮಾನುಸಾರ ಯಾವುದೇ ನೋಟಿಸ್ ನೀಡದೆ, ಭೂಸ್ವಾಧೀನ ನಿಯಮಗಳನ್ನು ಪಾಲಿಸದೆ ಸಂಸದರು ಅಧಿಕಾರಿಗಳಿಂದ ಸೂಕ್ತ ದಾಖಲೆಗಳು ಪಡೆಯದೆ, ಜಮೀನು ಮಾಲಕರಿಗೂ ತಿಳಿಸದೆ ಕಾನೂನು ಬಾಹಿರವಾಗಿ ಖಾಸಗಿ ಭೂಮಿಯನ್ನು ಅತಿಕ್ರಮಣ ಮಾಡಿ ಏಕಾಏಕಿ ರಸ್ತೆ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. 

ಲಕ್ಕೂರು ಸಮೀಪದ ಜಗದೇನಹಳ್ಳಿಯ ತಮ್ಮ ಜಮೀನಿಗೆ ಅ. 24 ರಂದು ಸಂಸದರು ಮತ್ತು ಅಧಿಕಾರಿಗಳು ಪ್ರವೇಶಿಸಿದ್ದಾರೆ. 
ಮಾಲೂರು ತಹಶೀಲ್ದಾರ್, ಸರ್ಕಲ್ ಇನ್ಸ್ ಪೆಕ್ಟರ್ ಸೇರಿದಂತೆ 27 ಮಂದಿಯ ವಿರುದ್ಧ ಅವರು ದೂರು ನೀಡಿದ್ದಾರೆ. ಸ್ವಂತ ಜಮೀನಿಗೆ ಪ್ರವೇಶಿಸಿ ದಬ್ಬಾಳಿಕೆಯಿಂದ ರಸ್ತೆ ನಿರ್ಮಿಸಿ, ಮರಗಳನ್ನು ನಾಶಗೊಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಂಸದರ ವಿರುದ್ಧ ದೂರು ನನ್ನ ಕೈಗೆ ಕೊಟ್ಟಿಲ್ಲ, ಒಂದು ವೇಳೆ ಠಪಾಲ್ ಗೆ ಕೊಟ್ಟಿದ್ರೆ  ಇಂದು ರಜೆ ಇರುವ ಕಾರಣ ನಾಳೆ ಮಾಹಿತಿ ಸಿಕ್ಕಿದ ಕೂಡಲೇ ಪರಿಶೀಲನೆ ಮಾಡುವೆ.

-  ಕಾರ್ತಿಕ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಗ್ರಾಮದಲ್ಲಿ ಕಳೆದ 35 ವರ್ಷಗಳಿಂದ ರಸ್ತೆ ವಿವಾದ ಇದ್ದು,  ಸದರೀ ಜಾಗ  ಈ ಹಿಂದಿನ ದಾಖಲೆಗಳ ಪ್ರಕಾರ ಸರ್ಕಾರಿ ಜಮೀನು ಎಂದು ತಿಳಿದುಬಂದ ಕಾರಣ ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೆಲಸ ಮಾಡಿದ್ದೇನೆ. ಆದರೆ ಯಾವುದೇ ಭೂ ಅತಿಕ್ರಮಣ ಮಾಡಿಲ್ಲ. 
 - ಎಸ್. ಮುನಿಸ್ವಾಮಿ , ಸಂಸದರು. ಕೋಲಾರ.

ಜಗದೇನಹಳ್ಳಿ ಗ್ರಾಮಕ್ಕೆ ಈಗಾಗಲೇ ಡಾಂಬರು ರಸ್ತೆ ಇದೆ.  ಪ್ರತ್ಯೇಕವಾಗಿ ಇನ್ನೊಂದು ಬೈಪಾಸ್ ರಸ್ತೆ ಬೇಕಾಗಿರಲಿಲ್ಲ,  ಅದೂ ಅಲ್ಲದೆ ನನಗೆ ಭೂಸ್ವಾಧೀನ ಮಾಡಿಕೊಳ್ಳುವ ಯಾವುದೇ ನೋಟಿಸ್ ನೀಡಿಲ್ಲ. ಲ್ಯಾಂಡ್ ಅಕ್ವಿಸಿಷನ್ ಪ್ರೊಸೀಡಿಂಗ್ಸ್ ಏನೂ ಮಾಡದೆ, ಏಕಾಏಕಿ ಕಂದಾಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ, ನನ್ನ ಗಮನಕ್ಕೂ ತರದೇ , ನನ್ನ ಸ್ವಂತ ಜಮೀನನ್ನು ಸಂಸದರೇ ಖುದ್ದು ನಿಂತು ಅತಿಕ್ರಮಣ ಮಾಡಿ ರಸ್ತೆ ಮಾಡಿರುವುದು ಸರಿಯಲ್ಲ. 

- ಲಕ್ಕೂರು ರಾಜಗೋಪಾಲ್ ಗೌಡ, ದೂರುದಾರ ರೈತ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News