ಅರಣ್ಯ ಭೂಮಿ ನೆಪದಲ್ಲಿ ರೈತರನ್ನು ಒಕ್ಕಲೆಬ್ಬಿಸಬೇಡಿ: ಮುಖ್ಯಮಂತ್ರಿ ಯಡಿಯೂರಪ್ಪ

Update: 2019-10-31 16:22 GMT

ಬೆಂಗಳೂರು, ಅ. 31: ಅರಣ್ಯ ಭೂಮಿ ಹೆಸರಿನಲ್ಲಿ ರೈತರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸದೆ, ಅವರಿಗೆ ಕೃಷಿ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಗುರುವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸೇಶ್ವರ ಇನಾಂ ಭೂಮಿ ಸಾರಗೋಡು ತತ್ಕೋಳ ಮತ್ತು ಮಸಗಲಿ ಮೀಸಲು ಅರಣ್ಯ ಒತ್ತುವರಿ ತೆರವು ಸಂಬಂಧ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಅರಣ್ಯ ಭೂಮಿ ಉಳುಮೆ ಮಾಡುತ್ತಿರುವ ರೈತರ ವಿರುದ್ಧ ದೂರು ದಾಖಲಿಸಬೇಡಿ ಎಂದು ಸೂಚಿಸಿದರು.

ಅರಣ್ಯ ಭೂಮಿ ಉಳಿದಿದೆ ಎಂದರೆ ಅದಕ್ಕೆ ರೈತರೇ ಕಾರಣ. ಹೀಗಾಗಿ ಯಾವ ರೈತರನ್ನು ಅರಣ್ಯ ಭೂಮಿಯಿಂದ ಒಕ್ಕಲೆಬ್ಬಿಸಬಾರದು. ಅವರ ಕೃಷಿ ಚಟುವಟಿಕೆಗೆ ಅವಕಾಶ ಮಾಡಿಕೊಡಬೇಕೆಂದು ಯಡಿಯೂರಪ್ಪ ಇದೇ ವೇಳೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರೈತರ ಭೂಮಿ ಉಳಿಸಿ: ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಕೇರಳ ಮಾದರಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಅಫಿದವಿಟ್ ಹಾಕಿ ರೈತರ ಜಮೀನು ಉಳಿಸಿಕೊಳ್ಳಬಹುದು. ಅಫಿದವಿಟ್ ಹಾಕದಿದ್ದರೆ ಅರಣ್ಯ ಭೂಮಿಯಲ್ಲಿರುವ ಗ್ರಾಮಗಳನ್ನು ಎತ್ತಂಗಡಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ, ಶಾಸಕರಾದ ಕುಮಾರ ಬಂಗಾರಪ್ಪ, ಎಂ.ಪಿ.ಕುಮಾರಸ್ವಾಮಿ, ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಸೇರಿ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News