ಏಕೀಕರಣದ ಕಹಳೆ ಮೊಳಗಿಸಿದ ಭೂಮಿ ಧಾರವಾಡ: ಜಿಲ್ಲಾಧಿಕಾರಿ ದೀಪಾ ಚೋಳನ್

Update: 2019-11-01 17:45 GMT

ಧಾರವಾಡ, ನ.1: ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ದೊರೆತಿರುವ ಪ್ರಾಮುಖ್ಯತೆಯಂತೆಯೇ, ಕರ್ನಾಟಕ ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟದೊಂದಿಗೆ, ಕರ್ನಾಟಕ ಏಕೀಕರಣಕ್ಕಾಗಿ ನಡೆದ ಚಳವಳಿಯೂ ಮಹತ್ವ ಪಡೆದಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಸ್ಮರಿಸಿಕೊಂಡಿದ್ದಾರೆ.

ಶುಕ್ರವಾರ ನಗರದ ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ 64ನೆಯ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ವಿವಿಧ ಸುಮಾರು 19 ಆಡಳಿತ ವಿಭಾಗಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳು, ಬ್ರಿಟಿಷರ ಆಡಳಿತದ ನಂತರ ಮತ್ತೆ ಒಂದಾಗಿದ್ದು ನಮ್ಮೆಲ್ಲರ ಸುಯೋಗವಾಗಿದೆ. ಕರ್ನಾಟಕ ಏಕೀಕರಣದ ಚಳವಳಿಯು ಇದೇ ನಮ್ಮ ಧಾರವಾಡದ ನೆಲದಲ್ಲಿ ಜನ್ಮ ತಾಳಿದ್ದು ನಮಗೆಲ್ಲ ಅಭಿಮಾನದ ಸಂಗತಿಯಾಗಿದೆ ಎಂದು ಅವರು ಹೇಳಿದರು.

ಕರ್ನಾಟಕ ಏಕೀಕರಣಕ್ಕೆ ಒತ್ತಾಯಿಸಿ ಹುಬ್ಬಳ್ಳಿ ಸಮೀಪದ ಅದರಗುಂಚಿ ಗ್ರಾಮದಲ್ಲಿ ಅಂದಿನ ನೇತಾರರಾಗಿದ್ದ ಅದರಗುಂಚಿ ಶಂಕರಗೌಡ ಪಾಟೀಲರು 23 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದರು. ಅದರ ಪರಿಣಾಮವಾಗಿ ಲೋಕಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಲು ಸಾಧ್ಯವಾಯಿತು. ಇದಕ್ಕೂ ಮುನ್ನ ಮುಂಡಗೋಡದಲ್ಲಿ ನಾರಾಯಣ ಪೈ, ರೋಣ ತಾಲೂಕಿನ ಜಕ್ಕಲಿಯಲ್ಲಿ ಅಂದಾನಪ್ಪ ದೊಡ್ಡಮೇಟಿ ಇದೇ ಕಾರಣಕ್ಕೆ ಹೋರಾಟ ಮಾಡಿದ್ದರು ಎಂದು ದೀಪಾ ಚೋಳನ್ ತಿಳಿಸಿದರು.

ಸುದೀರ್ಘ ಹೋರಾಟದ ಫಲವಾಗಿ 1956ರ ನವೆಂಬರ್ 1ರಂದು ಕನ್ನಡ ಮಾತನಾಡುವ ಪ್ರದೇಶಗಳೆಲ್ಲ ಅಖಂಡವಾಗಿ ಮೈಸೂರು ರಾಜ್ಯದಲ್ಲಿ ಒಂದುಗೂಡಿದವು. ಈ ರಾಜ್ಯಕ್ಕೆ 1973 ರಲ್ಲಿ ಅಂದಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು ‘ಕರ್ನಾಟಕ’ ಎಂದು ಮರುನಾಮಕರಣ ಮಾಡಿದರು ಅವರು ಹೇಳಿದರು.

ಕಾರ್ಯಕ್ರಮಕ್ಕೆ ಮುಂಚಿತವಾಗಿ ನಗರದಲ್ಲಿರುವ ಪ್ರೊ.ಕೆ.ಜಿ.ಕುಂದಣಗಾರ ಮತ್ತು ಡೆಪ್ಯೂಟಿ ಚನ್ನಬಸಪ್ಪಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿ.ಪಂ.ಅಧ್ಯಕ್ಷೆ ವಿಜಯಲಕ್ಷ್ಮಿ ಕೆಂಪೇಗೌಡ ಪಾಟೀಲ, ನಗರ ಪೊಲೀಸ್ ಆಯುಕ್ತ ಆರ್.ದಿಲೀಪ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News