ಇನ್ನು ನಿಮ್ಮ ಮೊಬೈಲ್ ನ ರಿಂಗ್ ಆಗುವುದು 30 ಸೆಕೆಂಡ್ ಮಾತ್ರ !

Update: 2019-11-01 18:32 GMT

ಹೊಸದಿಲ್ಲಿ, ನ. 1: ಚಂದಾದಾರರು ತಮಗೆ ಬಂದ ಕರೆಗೆ ಉತ್ತರಿಸದಿದ್ದಲ್ಲಿ ಅಥವಾ ತಿರಸ್ಕರಿಸದೆ ಇದ್ದಲ್ಲಿ ಮೊಬೈಲ್ ಫೋನ್ 30 ಸೆಕೆಂಡ್ ಹಾಗೂ ಲ್ಯಾಂಡ್‌ಲೈನ್ 60 ಸೆಕೆಂಡ್‌ವರೆಗೆ ರಿಂಗಣಿಸಲಿದೆ. ಟೆಲಿಕಾಂ ನಿಯಂತ್ರಕ ಟ್ರಾಯ್ ಶುಕ್ರವಾರ ಈ ಸಮಯ ಮಿತಿ ಹೇರಿದೆ. ಈ ನೂತನ ನಿಯಮ 15 ದಿನಗಳ ಬಳಿಕ ಜಾರಿಗೆ ಬರಲಿದೆ.

 ಕರೆ ಸ್ವೀಕರಿಸಬೇಕಾದ ವ್ಯಕ್ತಿ ಕರೆಗೆ ಉತ್ತರಿಸದಿದ್ದಲ್ಲಿ ಅಥವಾ ತಿರಸ್ಕರಿಸದೆ ಇದ್ದಲ್ಲಿ ರಿಂಗಿಂಗ್ ಅವಧಿಯನ್ನು ಸೆಲ್ಯುಲರ್ ಮೊಬೈಲ್ ಟೆಲಿಫೋನ್ ಸರ್ವೀಸ್ (ಸಿಎಂಟಿಎಸ್)ಗೆ 30 ಸೆಕೆಂಡ್‌ಗಳು ಹಾಗೂ ಮೂಲ ಟೆಲಿಫೋನ್ ಸೇವೆಗೆ 60 ಸೆಕೆಂಡ್‌ಗಳು ನಿಗದಿಪಡಿಸಲಾಗಿದೆ ಎಂದು ಮೂಲ ಟೆಲಿಫೋನ್ ಸೇವೆ ಹಾಗೂ ಸೆಲ್ಯುಲರ್ ಮೊಬೈಲ್ ಟೆಲಿಫೋನ್ ಸೇವೆಯ ಸೇವಾ ನಿಯಮಗಳ ಗುಣಮಟ್ಟದ ತಿದ್ದುಪಡಿಯಲ್ಲಿ ಟ್ರಾಯ್ ಹೇಳಿದೆ.

ಇದನ್ನು ಭಾರತಿ ಏರ್‌ಟೆಲ್ ಹಾಗೂ ವೊಡಾಫೋನ್ ಐಡಿಯಾ ಬೆಂಬಲಿಸಿದೆ. ಆದರೆ, ರಿಲಾಯನ್ಸ್ ಜಿಯೋ ವಿರೋಧ ವ್ಯಕ್ತಪಡಿಸಿದೆ. ರಿಂಗಿಂಗ್ ಅವಧಿಯನ್ನು 15ರಿಂದ 20 ಸೆಕೆಂಡ್ ಗೆ ಸೀಮಿತಗೊಳಿಸಬೇಕು ಎಂದು ರಿಲಾಯನ್ಸ್ ಜಿಯೋ ಆಗ್ರಹಿಸಿತ್ತು. ಒಳಬರುವ ಕರೆಗಳನ್ನು ಸೀಮಿತಗೊಳಿಸುವ ನಿಯಮ ಜಾರಿಯಿಂದ ಮೊಬೈಲ್ ಹಾಗೂ ಲ್ಯಾಂಡ್‌ಲೈನ್ ಗ್ರಾಹಕರ ಸೇವೆಯ ಗುಣಮಟ್ಟ ಸುಧಾರಿಸಲಿದೆ ಎಂದು ಟ್ರಾಯ್ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News