ಸುಪ್ರೀಂ ಕೋರ್ಟ್ ತೀರ್ಪು ಗೌರವಿಸಿ: ಮಸೀದಿಗಳಿಂದ ಸಂದೇಶ

Update: 2019-11-02 04:05 GMT

ಅಯೋಧ್ಯೆ/ ಲಕ್ನೋ: ಅಯೋಧ್ಯೆ ವಿವಾದದ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಈ ತಿಂಗಳ 17ರ ಒಳಗಾಗಿ ಪ್ರಕಟವಾಗುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ, ಶಾಂತಿ ಮತ್ತು ಬ್ರಾತೃತ್ವದ ಸಲುವಾಗಿ ಎಲ್ಲರೂ ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸಬೇಕು ಎಂದು ಉತ್ತರ ಪ್ರದೇಶದ ಮಸೀದಿಗಳು ಶುಕ್ರವಾರ ಸೂಚನೆ ನೀಡಿವೆ.

"ಯಾವುದೇ ಘೋಷಣೆ, ಆಚರಣೆ ಅಥವಾ ಆರೋಪಗಳನ್ನು ಮಾಡದೇ, ಏಕತೆಯನ್ನು ಉದ್ದೀಪಿಸಬೇಕು. ಆ ಮೂಲಕ ದೇಶದ ಸಾಮರಸ್ಯಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು" ಎಂದು ಸಂದೇಶ ನೀಡಲಾಗಿದೆ.

ಲಕ್ನೋದಲ್ಲಿ ಆಯಿಶಾಬಾಗ್ ಈದ್ಗಾ ಇಮಾಮ್ ಹಾಗೂ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಆಡಳಿತ ಸಮಿತಿ ಸದಸ್ಯ ಮೌಲಾನಾ ಖಾಲಿದ್ ರಶೀದ್ ಫರಂಗಿ ಮಹಲಿ, ಶುಕ್ರವಾರದ ಪ್ರಾರ್ಥನೆಗೆ ಮುನ್ನ ಮಾಡಿದ ಭಾಷಣದಲ್ಲಿ ಈ ಭಾವನಾತ್ಮಕ ಮನವಿ ಮಾಡಿದರು. ಅಯೋಧ್ಯೆ ಮತ್ತು ಪಕ್ಕದ ಫೈಝಾಬಾದ್‌ನ ಮಸೀದಿಗಳಲ್ಲಿ ಕೂಡಾ ಶಾಂತಿಗಾಗಿ ಮನವಿ ಮಾಡಲಾಯಿತು.

"ಹೊರಗೆ ಯಾವುದೇ ಸಂಭ್ರಮಾಚರಣೆ ಮಾಡುವಂತಿಲ್ಲ ಅಥವಾ ವದಂತಿ ಅಥವಾ ಘೊಷಣೆಗಳನ್ನು ಕೂಗುವಂತಿಲ್ಲ. ಇಂಥ ಚಟುವಟಿಕೆಗಳು ತೀರ್ಪಿನ ಬಳಿಕ ಇತರ ಸಮುದಾಯಗಳ ಧಾರ್ಮಿಕ ಭಾವನೆಗಳಿಗೆ ನೋವು ತರುವ ಸಾಧ್ಯತೆ ಇದೆ" ಎಂದು ಮಹಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News