ಟಿಪ್ಪು ವಿವಾದ: ಪಠ್ಯದಿಂದ ತೆಗೆದು ಹಾಕಬೇಕಾದ ಇನ್ನಷ್ಟು ಹೆಸರುಗಳು
ಟಿಪ್ಪುಸುಲ್ತಾನ್‌ರಿಗೆ ಸಂಬಂಧಿಸಿದ ಎಲ್ಲ ಪ್ರಸ್ತಾಪಗಳನ್ನು ರಾಜ್ಯದ ಎಲ್ಲ ಪಠ್ಯ ಪುಸ್ತಕಗಳಿಂದ ಕಿತ್ತು ಹಾಕುವ ಕುರಿತು ಸರಕಾರವು ಚಿಂತನೆ ನಡೆಸಿದೆ ಎಂದು ರಾಜ್ಯದ ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪಅವರು ಅಕ್ಟೊಬರ್ 30 ರಂದು ನೀಡಿರುವ ಹೇಳಿಕೆಯು ಟಿಪ್ಪುಸುಲ್ತಾನರ ಅಭಿಮಾನಿಗಳಲ್ಲಿ ಮಾತ್ರವಲ್ಲ, ಸ್ವಸ್ಥ ಸಮಾಜದಲ್ಲಿ ನಂಬಿಕೆಯುಳ್ಳ ರಾಜ್ಯದ ಎಲ್ಲ ನಾಗರಿಕರಲ್ಲಿ ತೀವ್ರ ಕಳವಳ ಮೂಡಿಸಿದೆ. ರಾಜ್ಯದ ಬಲಪಂಥೀಯ ವಿಚಾರಧಾರೆಯ ಕೆಲವು ಮಂದಿ ಬಹುಕಾಲದಿಂದ ಟಿಪ್ಪು ಸುಲ್ತಾನರ ವಿರುದ್ಧ ಅಪಪ್ರಚಾರದಲ್ಲಿ ನಿರತರಾಗಿರುವುದು ನಿಜವಾದರೂ ಒಂದು ರಾಜ್ಯದ ಮುಖ್ಯಮಂತ್ರಿಸ್ಥಾನದಲ್ಲಿರುವವರು ಅಂತಹ ವಿಚಾರಧಾರೆಯ ವಕ್ತಾರರಂತೆ ಮಾತನಾಡಿರುವುದು ಸಹಜವಾಗಿಯೇ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ. ಯಡಿಯೂರಪ್ಪನೇತೃತ್ವದ ಸರಕಾರವು ಅಧಿಕಾರ ಗ್ರಹಣ ಮಾಡಿದೊಡನೆ ಟಿಪ್ಪು ಜಯಂತಿಯನ್ನು ರದ್ದುಗೊಳಿಸಿದ್ದು, ಜನತೆ ಆ ಆಘಾತದಿಂದ ಹೊರಬರುವ ಮುನ್ನವೇ ಸರಕಾರವು ಪಠ್ಯ ಪುಸ್ತಕಗಳ ಕೇಸರೀಕರಣದ ಅಭಿಯಾನದಲ್ಲಿ ತೊಡಗಿ, ಅದರ ಅಂಗವಾಗಿ ಟಿಪ್ಪುಸುಲ್ತಾನರ ಪ್ರಸ್ತಾಪವನ್ನು ಪಠ್ಯಪುಸ್ತಕಗಳಿಂದ ಕಿತ್ತು ಹಾಕುವ ಕಾರ್ಯಾಚರಣೆಗೆ ಇಳಿದಿರುವುದು ಜನತೆಯ ಆತಂಕಕ್ಕೆ ಕಾರಣವಾಗಿದೆ. ಸಮಾಜದ ಕೇಸರೀಕರಣದ ಯೋಜನೆಯನ್ವಯ ಗಾಂಧೀಜಿ, ಜವಾಹರ್‌ಲಾಲ್ ನೆಹರೂ ಸೇರಿದಂತೆ ಎಲ್ಲ ಜನಪ್ರಿಯ ನಾಯಕರ ಪ್ರಸ್ತಾಪವನ್ನು ಪಠ್ಯಪುಸ್ತಕಗಳಿಂದ ಕಿತ್ತು ಹಾಕಿ ಅವರ ಸ್ಥಾನದಲ್ಲಿ ಸಾವರ್ಕರ್ ಮತ್ತು ಗೋಲ್ವಾಲ್ಕರ್ ತರದ ವ್ಯಕ್ತಿಗಳ ವೈಭವೀಕೃತ ಪರಿಚಯವನ್ನು ಮತ್ತು ಅವರ ವಿಚಾರಧಾರೆಗಳನ್ನು ಪಠ್ಯಪುಸ್ತಕಗಳಲ್ಲಿ ತುರುಕುವ ಸಂಚು ನಡೆಯುತ್ತಿದೆ ಎಂಬ ವದಂತಿಗಳು ಸಮಾಜದಲ್ಲಿ ಬಹುಕಾಲದಿಂದ ಚಲಾವಣೆಯಲ್ಲಿವೆ. ಟಿಪ್ಪುಸುಲಾನರ ಪ್ರಸ್ತಾಪವನ್ನು ಕಿತ್ತು ಹಾಕುವ ಕ್ರಮವು ಆ ದಿಕ್ಕಿನಲ್ಲಿ ಹಾಕಲಾದ ಪ್ರಥಮಹೆಜ್ಜೆ ಇರಬಹುದೇ ಎಂಬ ಸಂದೇಹವು ಜನತೆಯನ್ನು ಕಾಡುತ್ತಿದೆ.
ಶಾಸಕರೊಬ್ಬರು ಟಿಪ್ಪು ಸುಲ್ತಾನರ ಹೆಸರನ್ನು ಪಠ್ಯಪುಸ್ತಕಗಳಿಂದ ಕಿತ್ತು ಹಾಕಬೇಕೆಂದು ಆಗ್ರಹಿಸಿ ಬರೆದಿರುವ ಪತ್ರಕ್ಕೆ ಸ್ಪಂದಿಸಿ, ಈ ಕುರಿತು ಮೂರೇ ದಿನಗಳೊಳಗೆ ವರದಿ ಸಲ್ಲಿಸುವಂತೆ ತಾನು ಪಠ್ಯ ಪುಸ್ತಕ ಸಮಿತಿಗೆ ಆದೇಶಿಸಿರುವುದಾಗಿ ರಾಜ್ಯ ಪ್ರೌಢ ಶಿಕ್ಷಣ ಸಚಿವರು ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು. ಅದರ ಬೆನ್ನಿಗೆ ಇದೀಗ ಮುಖ್ಯಮಂತ್ರಿಗಳ ಹೇಳಿಕೆ ಬಂದಿದೆ. ರಾಜ್ಯದ ಬಡ ಜನತೆಯ ಲಕ್ಷಗಟ್ಟಲೆ ಮನವಿ ಪತ್ರಗಳು ಸರಕಾರೀ ಕಪಾಟುಗಳಲ್ಲಿ ಗೆದ್ದಲುಗಳಿಗೆ ಆಹಾರವಾಗುತ್ತಿರುವ ಸನ್ನಿವೇಶದಲ್ಲಿ, ಸರಕಾರವು ಟಿಪ್ಪು ಸುಲ್ತಾನರ ವಿರುದ್ಧ ಕಾರ್ಯಾಚರಣೆಯ ವಿಷಯದಲ್ಲಿ ಇಷ್ಟೊಂದು ಅಮಿತೋತ್ಸಾಹ ತೋರಿ ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳುತ್ತಿರುವುದರ ಔಚಿತ್ಯದ ಬಗ್ಗೆ ಜನತೆ ಚಕಿತರಾಗಿದ್ದಾರೆ. ರಾಜ್ಯದಲ್ಲಿ ನೆರೆಪೀಡಿತರು, ಬರಪೀಡಿತರು, ಹಸಿವು ಪೀಡಿತರು, ನಿರಾಶ್ರಿತರು, ಭ್ರಷ್ಟಾಚಾರ ಪೀಡಿತರು ಮುಂತಾದ ವಿವಿಧ ಸಂತ್ರಸ್ತ ವರ್ಗಗಳು ತಮ್ಮ ವಿವಿಧ ತುರ್ತು ಬೇಡಿಕೆಗಳ ಈಡೇರಿಕೆಗಾಗಿ ಕಾತರದಿಂದ ಕಾಯುತ್ತಿರುವಾಗ ಸರಕಾರವು ಅವರೆಲ್ಲರನ್ನು ಕಡೆಗಣಿಸಿ ಕೇಸರೀಕರಣದ ಏಜಂಡಾ ಅನುಷ್ಠಾನಿಸಲು ಹೊರಟಿರುವುದು ಜನತೆಯನ್ನು ನಿರಾಶರಾಗಿಸಿದೆ. ಟಿಪ್ಪುಸುಲ್ತಾನರ ಹೆಸರನ್ನು ಪಠ್ಯಪುಸ್ತಕಗಳಿಂದ ಕಿತ್ತು ಹಾಕಬೇಕೆಂದು ಆಗ್ರಹಿಸುತ್ತಿರುವವರು ತಮ್ಮ ಬೇಡಿಕೆಯ ಪರವಾಗಿ ಮಂಡಿಸುವ ಎರಡು ಮುಖ್ಯ ಕಾರಣಗಳು ಹೀಗಿವೆ: 1. ಟಿಪ್ಪುವಿನ ವ್ಯಕ್ತಿತ್ವ ವಿವಾದಾಸ್ಪದ. 2. ಟಿಪ್ಪುಅನೇಕರಿಗೆ ಅನ್ಯಾಯಗಳನ್ನು ಮಾಡಿದ್ದಾರೆಂಬ ಆರೋಪವಿದೆ. ಯಾರನ್ನಾದರೂ ಪಠ್ಯ ಪುಸ್ತಕಗಳಿಂದ ಕಿತ್ತು ಹಾಕುವುದಕ್ಕೆ ಈ ಎರಡು ಮಾನದಂಡಗಳೇ ಪರ್ಯಾಪ್ತವಾಗಿದ್ದರೆ, ಈ ಎರಡು ಮಾನದಂಡಗಳನ್ನು ಕೇವಲ ಟಿಪ್ಪು ಸುಲ್ತಾನರಿಗೆ ಮಾತ್ರ ಮೀಸಲಿಡುವುದೇಕೆ? ನಮ್ಮ ಪಠ್ಯ ಪುಸ್ತಕಗಳಲ್ಲಿ ಬೇರೆ ಹಲವು ರಾಜ ಮಹಾರಾಜರ ಹಾಗೂ ಇತರ ಮಹನೀಯರ ಪ್ರಸ್ತಾಪವೂ ಇದೆಯಲ್ಲಾ? ಟಿಪ್ಪುವಿನ ವ್ಯಕ್ತಿತ್ವದ ಮೌಲ್ಯ ಮಾಪನಕ್ಕೆ ಬಳಸಲಾದ ಪ್ರಸ್ತುತ ಮಾನದಂಡಗಳನ್ನೇ ಆಧಾರದವಾಗಿಟ್ಟು ಪಠ್ಯ ಪುಸ್ತಕಗಳಲ್ಲಿರುವ ಇತರ ಎಲ್ಲ ವ್ಯಕ್ತಿತ್ವಗಳ ಮೌಲ್ಯಮಾಪನ ಮಾಡಬೇಡವೇ? ಉದಾ: ಪಶ್ಚಿಮ ಬಂಗಾಳ, ಕರ್ನಾಟಕ ಸೇರಿದಂತೆ ವಿವಿಧೆಡೆ ಮರಾಠರ ದೌರ್ಜನ್ಯಗಳು, ಅಶೋಕನ ಕಳಿಂಗ ಯುದ್ಧ, ಬೌದ್ಧರ ಮೇಲೆ ಶಂಕರಾಚಾರ್ಯರ ದೌರ್ಜನ್ಯ, ಶಿವಾಜಿ ಸೇರಿದಂತೆ ಈ ದೇಶದ ಎಲ್ಲ ರಾಜರುಗಳು ನಡೆಸಿದ ಯುದ್ಧಗಳಲ್ಲಿ ಹರಿದ ರಕ್ತಪಾತ ಇವನ್ನೆಲ್ಲ ಯಾವ ದೃಷ್ಟಿಯಿಂದ ನೋಡಬೇಕು?
ಪ್ರಸ್ತುತ ಮಾನದಂಡದ ಆಧಾರದಲ್ಲಿ ನೋಡಿದರೆ ಇತಿಹಾಸದ ಬಹುತೇಕ ಎಲ್ಲ ವ್ಯಕ್ತಿಗಳನ್ನೂ ನಾವು ನಮ್ಮ ಪಠ್ಯಪುಸ್ತಕಗಳಿಂದ ಕಿತ್ತುಹಾಕಬೇಕಾಗಬಹುದು. ಸಾಮ್ರಾಜ್ಯ ವಿಸ್ತರಿಸಲು, ಶತ್ರುಗಳನ್ನ ಎದುರಿಸಲು ಎಲ್ಲ ರಾಜರೂ ಯುದ್ಧಗೈದಿದ್ದಾರೆ. ಅಲ್ಲೆಲ್ಲ ಅಮಾಯಕರ ಹತ್ಯಾಕಾಂಡಗಳು ನಡೆದಿವೆ. ಜೊತೆಗೆ ಎಲ್ಲ ಐತಿಹಾಸಿಕ ವ್ಯಕ್ತಿಗಳ ಮೇಲೂ ಒಂದಷ್ಟು ಆರೋಪಗಳಿವೆ. ಎಲ್ಲರ ಸುತ್ತಲೂ ಒಂದಷ್ಟು ವಿವಾದಗಳಿವೆ. ಈ ರೀತಿಯ ಸಬೂಬನ್ನು ಮುಂದಿಟ್ಟು ನಾವು ವ್ಯಕ್ತಿಗಳನ್ನು ಪಠ್ಯ ಪುಸ್ತಕಗಳಿಂದ ದೂರವಿಡುವುದಾದರೆ ಐತಿಹಾಸಿಕ ಮಾತ್ರವಲ್ಲ, ಪೌರಾಣಿಕ ವ್ಯಕ್ತಿಗಳ ಹೆಸರುಗಳನ್ನೂ ಪಠ್ಯಗಳಿಂದ ಕಿತ್ತೊಗೆಯಬೇಕಾದೀತು. ಏಕೆಂದರೆ, ಕೆದಕಲು ಹೋದರೆ ಎಲ್ಲ ಪೌರಾಣಿಕ ವ್ಯಕ್ತಿತ್ವಗಳ ಸುತ್ತಲೂ ವಿವಾದಗಳಿವೆ. ಅವರ ಮೇಲೂ ಆರೋಪಗಳಿವೆ. ಈ ಕಾರಣಕ್ಕಾಗಿ ಅವರೆಲ್ಲರ ಹೆಸರುಗಳನ್ನೂ ನಮ್ಮ ಪಠ್ಯ ಪುಸ್ತಕಗಳಿಂದ ಕಿತ್ತು ಹಾಕಲು ಹೊರಟರೆ ಮತ್ತೆ ನಮ್ಮ ಬಳಿ ಉಳಿಯುವ ಆಯ್ಕೆ ಫಾಂಟಮ್, ಟಾರ್ಜನ್‌ಗಳಂತಹ ಕಾರ್ಟೂನ್ ಪಾತ್ರಗಳನ್ನಷ್ಟೇ ನಮ್ಮ ಪಠ್ಯ ಪುಸ್ತಕಗಳಲ್ಲಿ ಪರಿಚಯಿಸಬೇಕಾದೀತು. ನಮ್ಮ ನಾಡಿನ ಬಲಪಂಥೀಯ ವಿಚಾರ ಧಾರೆಯ ಜನ, ಬ್ರಿಟಿಷರಿಗೆ ವಿಧೇಯತೆ ಘೋಷಿಸಿ, ಮಹಾತ್ಮಾ ಗಾಂಧೀಜಿಯವರ ಹತ್ಯಾ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಾವರ್ಕರ್‌ರಿಗೆ ಸಂಬಂಧಿಸಿದ ವಿವಾದಗಳು ಮತ್ತು ಅವರ ಮೇಲಿರುವ ಗಂಭೀರ ಆರೋಪಗಳನ್ನೆಲ್ಲ ಕಡೆಗಣಿಸಿ ಅವರಿಗೆ ‘ಭಾರತ ರತ್ನ’ ನೀಡಬೇಕೆಂದು ಆಗ್ರಹಿಸುವ ಔದಾರ್ಯ ತೋರಿದ್ದಾರೆ. ಇಂಥವರು ಬ್ರಿಟಿಷರ ಪಾಲಿಗೆ ದುಸ್ವಪ್ನರಾಗಿದ್ದ ಟಿಪ್ಪು ಸುಲ್ತಾನರ ವಿಷಯದಲ್ಲಿ ಒಂದಷ್ಟು ನ್ಯಾಯೋಚಿತ ನಿಲುವು ತಾಳಬೇಕಾದ ಅಗತ್ಯವಿದೆ. ಹಾಗೆಯೇ ಮಾನ್ಯ ಮುಖ್ಯ ಮಂತ್ರಿಗಳು ಮತ್ತು ಅವರ ನೇತೃತ್ವದ ರಾಜ್ಯ ಸರಕಾರವು ಹಗೆಸಾಧನೆ ಮತ್ತು ಕೇಸರೀಕರಣದ ಚಟುವಟಿಕೆಯಲ್ಲಿ ಕಾಲಹರಣ ಮಾಡುವ ಬದಲು ರಾಜ್ಯದ ಜನಸಾಮಾನ್ಯರ ಹಿತರಕ್ಷಣೆಯ ಕಾರ್ಯದಲ್ಲಿ ತೊಡಗಿಕೊಳ್ಳಬೇಕಾದ ಅಗತ್ಯವಿದೆ.