ಮುಗಿಯಿತೇ ಅಭಿಯಾನ; ಸ್ವಚ್ಛವಾಯಿತೇ ಭಾರತ..?
ಬಯಲು ಶೌಚಾಲಯ ನಿರ್ಮೂಲನೆ, ಮಲಹೊರುವ ಪದ್ಧತಿಯ ಸಂಪೂರ್ಣ ನಿರ್ಮೂಲನೆ, ಘನ ತ್ಯಾಜ್ಯಗಳ ನಿರ್ವಹಣೆ ಮತ್ತು ಮರುಬಳಕೆ, ಸಂಸ್ಕರಣೆಯ ಉದ್ದೇಶ ಹೊಂದಿತ್ತು. ಜೊತೆಗೆ ಸಾರ್ವಜನಿಕರಲ್ಲಿ ನಿರ್ಮಲೀಕರಣಕ್ಕಾಗಿ ಮಾನಸಿಕ ಬದಲಾವಣೆ, ಸಂಪೂರ್ಣ ಕೊಳಗೇರಿ ನಿರ್ಮೂಲನೆ, ಸಾರ್ವಜನಿಕರ ನಿರ್ಮಲೀಕರಣ ಮತ್ತು ಸಾಮಾಜಿಕ ಸ್ವಾಸ್ಥದ ನಡುವೆ ಇರುವ ಸಂಬಂಧದ ಬಗ್ಗೆ ಜನಜಾಗೃತಿ ಮೂಡಿಸುವುದು ಸ್ವಚ್ಛ ಭಾರತ ಯೋಜನೆಯ ಉದ್ದೇಶವಾಗಿತ್ತು. ಇಷ್ಟು ಉದ್ದೇಶಗಳು ಸರಿಯಾಗಿ ಅನುಷ್ಠಾನವಾಗಿದ್ದರೆ ನಿಜವಾಗಿ ಭಾರತ ದೇಶ ಈ ಐದು ವರ್ಷಗಳಲ್ಲಿ ಇಡೀ ವಿಶ್ವಕ್ಕೆ ಮಾದರಿಯಾಗಿ ಬಿಡುತಿತ್ತು.
ಅನಿಷ್ಟ ಪದ್ಧತಿಗೆ ಪ್ರೋತ್ಸಾಹ?
ಸಮಪರ್ಕವಾಗಿ ನೀರಿಲ್ಲದೆ ಉಪಯೋಗಿಸುವ ಶೌಚಾಲಯಗಳಿಂದ ಮತ್ತೊಂದು ಅಮಾನವೀಯ ಕೆಲಸಕ್ಕೆ ಪ್ರೋತ್ಸಾಹ ನೀಡುತ್ತದೆ ಎನ್ನುವುದಕ್ಕೆ ಸಾಕಷ್ಟು ಸಂಶೋಧಕರು ಮತ್ತು ಪ್ರಶಸ್ತಿ ಪುರಸ್ಕೃತರು ನಿದರ್ಶನಗಳನ್ನು ನೀಡಿದ್ದಾರೆ. ವಿಶ್ವಸಂಸ್ಥೆಯ ವಿಶೇಷ ವರದಿಗಾರರಾದ ಲಿಯೋ ಹೆಲ್ಲರ್ ಅವರು ತಮ್ಮ 2017ರ ವರದಿಯಲ್ಲಿ ಸ್ವಚ್ಛ ಭಾರತ ಮಿಷನ್ ಅನುಷ್ಠಾನವು ಸಫಾಯಿ ಕೆಲಸದಲ್ಲಿ ತೊಡಗಿಕೊಂಡಿರುವ ನಿರ್ದಿಷ್ಟ ಜಾತಿ ಗುಂಪುಗಳ ಮಾನವ ಹಕ್ಕುಗಳ ಉಲ್ಲಂಘನೆಗೆ ಅವಕಾಶ ಮಾಡಿಕೊಟ್ಟಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಬೆಜವಾಡ ವಿಲ್ಸನ್ ಅವರು ಸ್ವಚ್ಛಭಾರತ ಅಭಿಯಾನದ ಕ್ರಿಯಾ ಯೋಜನೆಯಲ್ಲಿ ಮಲಹೊರುವ ಪದ್ಧತಿ ನಿಷೇಧದ ಕುರಿತು ಒಂದೂ ಅಂಶವೂ ಇಲ್ಲ ಎಂದು ಅಭಿಪ್ರಾಯಿಸಿದ್ದಾರೆ. ಆ ಮೂಲಕ ಸ್ವಚ್ಛ ಭಾರತ ಅಭಿಯಾನದ ಉದ್ದೇಶಗಳು ಸರಿಯಾಗಿ ಈಡೇರಿಲ್ಲ ಎನ್ನುವುದನ್ನು ಪ್ರಸ್ತಾಪಿಸಿದ್ದಾರೆ. ಸಮಗ್ರವಾಗಿ ನೀರಿಲ್ಲದೆ ಬಳಸುವಂತಹ ಒಣಪಾಯಿಖಾನೆಗಳು ಮತ್ತು ಎರಡು ಶೌಚಾಲಯಗಳಿಗೆ ಒಂದೇ ಗುಂಡಿಗಳನ್ನು ಮಾಡಿರುವ ಶೌಚಾಲಯಗಳ ಗುಂಡಿಗಳು ತುಂಬಿದಾಗ ಅವುಗಳನ್ನು ಸ್ವಚ್ಛ ಮಾಡಲು ಮತ್ತೆ ಕರ್ಮಚಾರಿಗಳೇ ಬೇಕು. ಹೀಗಾಗಿ ಪುನಃ ಸಮಾಜದಲ್ಲಿ ಬಹುಹಿಂದಿನಿಂದಲೂ ನಡೆದುಕೊಂಡು ಬಂದಿರುವ ಮಲಹೊರುವ ಅನಿಷ್ಟ ಪದ್ಧತಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದೆ ಎನ್ನುವುದು ವಿಪರ್ಯಾಸದ ಸಂಗತಿ.
ಭಾರತ ಇಂದು ವಿಶ್ವದ ದೊಡ್ಡ ರಾಷ್ಟ್ರವಾಗಿ ಗುರುತಿಸಿ ಕೊಳ್ಳುವ ಮಟ್ಟಿಗೆ ವಿವಿಧ ಕ್ಷೇತ್ರಗಳಲ್ಲಿ ಬೆಳೆಯುತ್ತಿದೆ. ಜೊತೆಗೆ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ವಿಶ್ವದ ಎರಡನೇ ದೊಡ್ಡ ರಾಷ್ಟ್ರವೂ ಹೌದು. ದೇಶ ಎಷ್ಟೇ ಆಧುನೀಕರಣಕ್ಕೆ ತೆರೆದುಕೊಂಡರೂ ಇಂದಿಗೂ ಭಾರತ ಬಯಲು ಮುಕ್ತ ಶೌಚಾಲಯ ಹೊಂದಲು ಸಾಧ್ಯವಾಗಿಲ್ಲ ಎನ್ನುವುದು ನಿಜಕ್ಕೂ ವಿಪರ್ಯಾಸ. ಒಂದು ದೇಶದ ಅಭಿವೃದ್ಧಿಗೆ ಆ ದೇಶದ ಜನರ ಆರೋಗ್ಯವೂ ಅತೀ ಮುಖ್ಯಪಾತ್ರ ವಹಿಸುತ್ತದೆ. ಇದನ್ನು ಮನಗಂಡ ಕೇಂದ್ರ ಸರಕಾರ ದೇಶದ ಮಾಲಿನ್ಯವನ್ನು ನಿಯಂತ್ರಿಸಲು 2014ರ ಅಕ್ಟೋಬರ್ 2ರಿಂದ 2019ರ ಅಕ್ಟೋಬರ್ 2ರವರೆಗಿನ ಐದು ವರ್ಷಗಳ ಅವಧಿಯನ್ನು ಸ್ವಚ್ಛಭಾರತ ಯೋಜನೆಗೆ ನಿಗದಿ ಮಾಡಿಕೊಂಡಿತು. 2014 ಅಕ್ಟೋಬರ್ 2ರಂದು ಸ್ವತಃ ಪ್ರಧಾನಿ ಮೋದಿಯವರೇ ದಿಲ್ಲಿಯ ರಾಜಪಥ್‌ನಲ್ಲಿ ಪೊರೆಕೆ ಹಿಡಿದು ಕಸ ಗುಡಿಸುವ ಮೂಲಕ ಯೋಜನೆಗೆ ವಿದ್ಯುಕ್ತ ಚಾಲನೆ ನೀಡಿದ್ದರು. ಈ ಯೋಜನೆ ಮುಖ್ಯವಾಗಿ ಬಯಲು ಶೌಚಾಲಯ ನಿರ್ಮೂಲನೆ, ಮಲಹೊರುವ ಪದ್ಧತಿಯ ಸಂಪೂರ್ಣ ನಿರ್ಮೂಲನೆ, ಘನ ತ್ಯಾಜ್ಯಗಳ ನಿರ್ವಹಣೆ ಮತ್ತು ಮರುಬಳಕೆ, ಸಂಸ್ಕರಣೆಯ ಉದ್ದೇಶ ಹೊಂದಿತ್ತು. ಜೊತೆಗೆ ಸಾರ್ವಜನಿಕರಲ್ಲಿ ನಿರ್ಮಲೀಕರಣಕ್ಕಾಗಿ ಮಾನಸಿಕ ಬದಲಾವಣೆ, ಸಂಪೂರ್ಣ ಕೊಳಗೇರಿ ನಿರ್ಮೂಲನೆ, ಸಾರ್ವಜನಿಕರ ನಿರ್ಮಲೀಕರಣ ಮತ್ತು ಸಾಮಾಜಿಕ ಸ್ವಾಸ್ಥದ ನಡುವೆ ಇರುವ ಸಂಬಂಧದ ಬಗ್ಗೆ ಜನಜಾಗೃತಿ ಮೂಡಿಸುವುದು ಸ್ವಚ್ಛ ಭಾರತ ಯೋಜನೆಯ ಉದ್ದೇಶವಾಗಿತ್ತು. ಇಷ್ಟು ಉದ್ದೇಶಗಳು ಸರಿಯಾಗಿ ಅನುಷ್ಠಾನವಾಗಿದ್ದರೆ ನಿಜವಾಗಿ ಭಾರತ ದೇಶ ಈ ಐದು ವರ್ಷಗಳಲ್ಲಿ ಇಡೀ ವಿಶ್ವಕ್ಕೆ ಮಾದರಿಯಾಗಿ ಬಿಡುತಿತ್ತು. ಅದನ್ನೇ ಯೋಜನೆ ಜಾರಿ ಮಾಡುವ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಸ್ವಚ್ಛ ಭಾರತ ಯೋಜನೆಯಿಂದ 2019ರ ಅಕ್ಟೋಬರ್ 2ರ ಹೊತ್ತಿಗೆ, ಮಹಾತ್ಮ್ಮಾ ಗಾಂಧಿಜೀಯವರ 150ನೇ ಜನ್ಮ ಜಯಂತಿಗೆ ಇಡೀ ದೇಶದ ಜನರು ಅತೀ ದೊಡ್ಡ ಕೃತಜ್ಞತೆ ಸಲ್ಲಿಸುತ್ತಾರೆ ಎಂದಿದ್ದರು. ಅದಕ್ಕಾಗಿ ಯೋಜನೆಗೆ 14,623 ಕೋಟಿ ರೂ.ಅನ್ನು ಕೇಂದ್ರ ಸರಕಾರವು ಮೀಸಲಿಟ್ಟಿತ್ತು.
ಆದರೆ ಯೋಜನೆ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಫಲನೀಡಲಿಲ್ಲ ಎನ್ನುವುದು ಗೊತ್ತಿರುವ ವಿಷಯ. ಸ್ವಚ್ಛ ಭಾರತ ಅಭಿಯಾನದಡಿ ಮುಖ್ಯವಾಗಿ ಬಯಲು ಮುಕ್ತ ಶೌಚಾಲಯ ನಿರ್ಮಾಣಕ್ಕಾಗಿ ಪ್ರತೀ ಪಟ್ಟಣವನ್ನು ಗಮನದಲ್ಲಿ ಟ್ಟುಕೊಂಡು 2.5 ಲಕ್ಷ ಸಾಮೂಹಿಕ ಶೌಚಾಲಯಗಳು, 2.6 ಲಕ್ಷ ಸಾರ್ವಜನಿಕ ಶೌಚಾಲಯಗಳ ನಿರ್ಮಾಣದ ಗುರಿ ಹೊಂದಲಾಗಿತ್ತು. ಜೊತೆಗೆ ಪ್ರತೀ ಮನೆಗಳಿಗೆ ಶೌಚಾಲಯ ನಿರ್ಮಿಸುವುದಕ್ಕಾಗಿ 4,165 ಕೋಟಿ ರೂ. ಮತ್ತು ಸಮುದಾಯ ಶೌಚಾಲಯದ ನಿರ್ಮಾಣಕ್ಕಾಗಿ 655 ಕೋಟಿ ರೂ. ವ್ಯಯಿಸ ಲಾಯಿತು. ಅದರಲ್ಲೂ ಗಾಮೀಣ ಪ್ರದೇಶದಲ್ಲಿ 11.11 ಲಕ್ಷ ಶೌಚಾಲಯ ನಿರ್ಮಿಸಲು 1.34 ಸಾವಿರ ಕೋಟಿ ರೂ. ವೆಚ್ಚ ಮಾಡಲಾಯಿತು. ಆರಂಭದಲ್ಲಿ ಪ್ರತೀ ಶೌಚಾಲಯಕ್ಕೆ 10 ಸಾವಿರ ರೂ. ನೀಡಲಾಗುತಿತ್ತು. ಆದರೆ ಶೌಚಾಲಯ ನಿರ್ಮಿಸುವುದರಷ್ಟೇ ಸಾಲದು ಅವುಗಳ ಸರಿಯಾದ ಬಳಕೆಗೆ ನೀರಿನ ಅಗತ್ಯವೂ ಇದೆ ಎಂಬ ಕಾರಣದಿಂದ ಎರಡು ಸಾವಿರ ರೂ. ಶೌಚಾಲಯಕ್ಕೆ ಬೇಕಾಗಿರುವ ನೀರಿನ ವ್ಯವಸ್ಥೆ ಕಲ್ಪಿಸಿಕೊಳ್ಳುವುದಕ್ಕೂ ಅನುದಾನ ಸೇರಿಸಿ ಒಟ್ಟು 12,000 ರೂ. ಕೊಡಲು ನಿರ್ಧರಿಸಲಾಯಿತು. ವಿಪರ್ಯಾಸವೆಂದರೆ ಇಂದು ಬಹುತೇಕ ಗ್ರಾಮೀಣ ಭಾಗದ ಶೌಚಾಲಯಗಳಿಗೆ ನೀರಿನ ವ್ಯವಸ್ಥೆಯೇ ಇಲ್ಲ. ನೀರಿನ ವ್ಯವಸ್ಥೆ ಇಲ್ಲದಿದ್ದರೆ ಆ ಶೌಚಾಲಯಗಳು ಬಹುತೇಕ ನಿರುಪಯೋಗಿ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಅದರಲ್ಲೂ ನೀರಿನ ತೀವ್ರ ಕೊರತೆ ಇರುವ ಬಯಲು ಸೀಮೆ ಜಿಲ್ಲೆಗಳು, ರಾಜ್ಯಗಳಲ್ಲಿ ಶೌಚಾಲಯಗಳು ಎಷ್ಟರ ಮಟ್ಟಿಗೆ ಉಪಯೋಗಕ್ಕೆ ಬರುತ್ತಿವೆ ಎನ್ನುವುದನ್ನು ಸಾರಿ ಹೇಳುತ್ತವೆ.
ಇಷ್ಟೆಲ್ಲ ಆದರೂ ಇಂದಿಗೂ ಗ್ರಾಮೀಣ ಪ್ರದೇಶಗಳು ಬಯಲು ಮಲವಿಸರ್ಜನೆ ಮುಕ್ತವಾಗಿಲ್ಲ. ಅದಕ್ಕೊಂದು ಸ್ಪಷ್ಟ ಉದಾಹರಣೆ 2019ರ ಸೆಪ್ಟಂಬರ್ 25ರಂದು ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಭಾವಖೇಡಿ ಗ್ರಾಮದಲ್ಲಿ ಬಯಲು ಮಲವಿಸರ್ಜನೆ ಮಾಡಿದ ದಲಿತ ಬಾಲಕರಿಬ್ಬರನ್ನು ಹತ್ಯೆ ಮಾಡಲಾಯಿತು. ಇದಕ್ಕೂ ಮೊದಲೇ ಅಂದರೆ 2018ರ ಎಪ್ರಿಲ್ 4 ರಂದು ಈ ಗ್ರಾಮವನ್ನು ‘ಬಯಲು ಮುಕ್ತ ಶೌಚಾಲಯ ಗ್ರಾಮ’ವೆಂದು ಘೋಷಿಸಲಾಗಿತ್ತು. ಆದರೆ ಘಟನೆ ಬಳಿಕ ಅಲ್ಲಿನ ಜಿಲ್ಲಾಧಿಕಾರಿ ಅನುಗ್ರಹ ಅವರು ತನಿಖೆ ನಡೆಸಿದಾಗ ಆ ಇಬ್ಬರು ಬಾಲಕರ ಮನೆಯಲ್ಲೂ ಶೌಚಾಲಯವಿರಲಿಲ್ಲ ಎಂಬ ಸತ್ಯ ಬಯಲಾಗಿದೆ. ಅಷ್ಟೇ ಏಕೆ ಸೆಪ್ಟಂಬರ್ ತಿಂಗಳ ಅಂತ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಗ್ರಾಮವೊಂದಕ್ಕೆ ಹಬ್ಬಕ್ಕೆಂದು ಹೋದ ನನಗೆ ಆ ಗ್ರಾಮದ ಕೆರೆ ಕಟ್ಟೆಗಳ ಸುತ್ತಮುತ್ತ ಓಡಾಡಲು ಸಾಧ್ಯವೇ ಇಲ್ಲದಷ್ಟು ಮಲವಿಸರ್ಜನೆ ಮಾಡಿರುವ ದೃಶ್ಯ ಈಗಲೂ ಕಣ್ಮುಂದೆ ಇದೆ. ಇನ್ನು ಹಾಸನ ಜಿಲ್ಲೆಯ ಬೇಲೂರು ತಾಲೂಕು, ಅರಸೀಕೆರೆ ತಾಲೂಕಿನ ಸಾಕಷ್ಟು ಹಳ್ಳಿಗಳಲ್ಲಿ, ಕುಡಿಯುವ ನೀರಿಗೂ ಹಾಹಾಕಾರವಿದೆ. ಇನ್ನು ಶೌಚಾಲಯಗಳಿದ್ದರೂ ಅವುಗಳಿಗೆ ಬೀಗ ಹಾಕಲಾಗಿದೆ.
ಇವು ಕೆಲವು ಉದಾಹರಣೆಗಳಷ್ಟೇ, ಇಂತಹ ನೂರಾರು ಪ್ರಕರಣಗಳಿವೆ. ಬಯಲು ಮುಕ್ತ ಶೌಚಾಲಯ ದೇಶವನ್ನಾಗಿಸುವ ಕಾರ್ಯದಲ್ಲಿ ಜನರನ್ನು ಜಾಗೃತರನ್ನಾಗಿಸಿ ಎಲ್ಲರೂ ಶೌಚಾಲಯವನ್ನೇ ಬಳಸುವಂತೆ ಮಾಡಲು ಕಾರ್ಯಯೋಜನೆ ರೂಪಿಸಲಾಗಿತ್ತು. ಅದಕ್ಕಾಗಿ 1,828 ಕೋಟಿ ರೂ.ಯನ್ನು ವ್ಯಯಿಸಲಾಗಿದೆ. ಇದರ ಜಾಹೀರಾತಿಗಾಗಿ 393.12 ಕೋಟಿ ರೂ. ಖರ್ಚು ಮಾಡಲಾಗಿದೆ. ಆದರೆ ನಾವು ಜಾಮರಾಜನಗರ ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ನೋಡಿದರೆ ಜನರು ಶೌಚಾಲಯ ಗಳನ್ನು ಬಳಸುವುದು ನಮ್ಮ ಸಂಸ್ಕೃತಿಯಲ್ಲ ಎಂದು ಭಾವಿಸಿ ಇಂದಿಗೂ ಬಯಲಿನಲ್ಲೇ ಶೌಚ ಮುಗಿಸುವುದನ್ನು ಕಾಣಬಹುದು. ಇನ್ನು ಇಲ್ಲಿ ನೀರಿನ ಕೊರತೆಯಿಂದಲೂ ಶೌಚಾಲಯ ಬಳಕೆಯಾಗದೆ ಉಳಿದಿವೆ ಎನ್ನುವುದು ಅಷ್ಟೇ ಸತ್ಯ. ಇಂತಹ ನೂರಾರು ಹಳ್ಳಿಗಳು ಸಿಗುತ್ತವೆ. ಇವರಿಗೆಲ್ಲ ಯಾವ ರೀತಿಯ ಜಾಗೃತಿಯನ್ನು ಮೂಡಿಸಲಾಗಿದೆ. 2018ರ ನವೆಂಬರ್‌ನಿಂದ 2019ರ ಫೆಬ್ರವರಿ ವರೆಗೆ ನಡೆಸಿದ ಸಮೀಕ್ಷೆಗಳ ಪ್ರಕಾರ, ಸ್ವಚ್ಛ ಭಾರತ ಅಭಿಯಾನ ಜಾಲತಾಣದಲ್ಲಿ ಒಂದು ಅಂಕಿಅಂಶಗಳಿದ್ದರೆ, ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಅಂಕಿಅಂಶಗಳು ಮತ್ತೊಂದು ಲೆಕ್ಕಾಚಾರವನ್ನೇ ಹೇಳುತ್ತಿವೆ. ಎರಡು ಸಮೀಕ್ಷೆಗಳಲ್ಲೂ ವ್ಯತ್ಯಾಸ ಇವೆ. 93.1 ಕುಟುಂಬಗಳಿಗೆ ಶೌಚಾಲಯವಿದೆ ಎಂದು ಸ್ವಚ್ಛ ಭಾರತ ಅಭಿಯಾನದ ಜಾಲತಾಣದಲ್ಲಿ ದತ್ತಾಂಶವಿದ್ದರೆ, ಅದರದೇ ಮರು ಸಮೀಕ್ಷೆಯಲ್ಲಿ ಶೇ.96ರಷ್ಟು ಶೌಚಾಲಯವಿದೆ ಎಂದು ಉಲ್ಲೇಖಿಸಲಾಗಿದೆ. ಮತ್ತೊಂದೆಡೆ ಶೇ.96.5ರಷ್ಟು ಜನರು ಮಾತ್ರ ಶೌಚಾಲಯ ಬಳಸುತ್ತಾರೆ, ಉಳಿದ ಶೇ. 3.5ರಷ್ಟು ಜನರು ಶೌಚಾಲಯವಿದ್ದರೂ ವಿವಿಧ ಕಾರಣಗಳಿಗೆ ಬಳಸುತ್ತಿಲ್ಲವೆಂದು ಅಂಕಿಗಳು ಹೇಳುತ್ತವೆ. ರೈಸ್ ಸಮೀಕ್ಷೆ ವರದಿ ಪ್ರಕಾರ ಶೇ.44ರಷ್ಟು ಜನರು ಮಧ್ಯಪ್ರದೇಶ, ಉತ್ತರ ಪ್ರದೇಶ ರಾಜಸ್ಥಾನ ಮತ್ತು ಬಿಹಾರದಲ್ಲಿ ಶೌಚಾಲಯವಿದ್ದರೂ ಅವುಗಳನ್ನು ಬಳಸುವುದಿಲ್ಲವೆಂದು ಹೇಳಿದೆ. ಇಷ್ಟೆಲ್ಲಾ ಕೊರತೆಗಳಿದ್ದರೂ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮಾತ್ರ 2019ರ ಅಕ್ಟೋಬರ್ 2ರಂದು ಸಬರಮತಿ ಆಶ್ರಮದಲ್ಲಿ ಇಡೀ ದೇಶವು ಬಯಲು ಮುಕ್ತ ಶೌಚಾಲಯ ದೇಶ, ಭಾರತದ ಗ್ರಾಮಗಳು ತಾವಾಗಿಯೇ ನಮ್ಮದು ಬಯಲು ಶೌಚ ಮುಕ್ತ ಗ್ರಾಮ ಎಂದು ಘೋಷಿಸಿಕೊಂಡಿವೆ ಅಂತ ಹೇಳಿಕೊಂಡಿರುವುದು ನಗೆಪಾಟಲಾಗಿದೆ.