ಅಭಿನವ ಪಂಪ ಡಾ. ಎಲ್.ಬಸವರಾಜು

Update: 2019-11-02 17:58 GMT

ಬಸವರಾಜು ಅವರು ನೂರಾರು ಪುಸ್ತಕಗಳನ್ನು ಬರೆದು ರಾಶಿ ಹಾಕಲಿಲ್ಲ. ಹಾಗೆ ನೋಡಿದರೆ ಸಂಖ್ಯೆಯ ದೃಷ್ಟಿಯಿಂದ ಅವರ ಪುಸ್ತಕಗಳು 60ನ್ನೂ ದಾಟುವುದಿಲ್ಲ. ಆದರೆ ಸತ್ವದ ದೃಷ್ಟಿಯಿಂದ ಅವರ ಒಂದೊಂದು ಕೃತಿಗಳೂ ಮಹತ್ವವೇ ಆಗಿವೆ. ಗ್ರಂಥ ಸಂಪಾದನೆಯ ಅಮೃತಪಥದಲ್ಲಿ ಪ್ರಾಚೀನ ಕೃತಿಗಳನ್ನು ಶಾಸ್ತ್ರೀಯವಾಗಿ ವಿಶ್ಲೇಷಿಸಿ ಅವರು ಕಟ್ಟಿಕೊಟ್ಟಿರುವ ಒಂದೊಂದು ಉದ್ಗ್ರಂಥಗಳೂ ಕನ್ನಡಮ್ಮನ ಕೊರಳಿನ ರತ್ನಮಾಲೆಯಾಗಿವೆ.

ಮನೆಯಲ್ಲಿ ಹೆಂಡತಿಯನ್ನು ಹೊಡೆಯುವವರು ಸೀತೆ ಯನ್ನು ಕುರಿತು ಕಾದಂಬರಿ ಬರೆದರೆ ಹೇಗೆ ಮೌಲಿಕವಾಗುತ್ತದೆ ಹೇಳಿ? ಕೃತಿಗೂ ಬದುಕಿಗೂ ಸಂಬಂಧ ವಿರುವುದು ಅತ್ಯಂತ ಮುಖ್ಯ ಅಲ್ಲವೇ?

ಎಲ್ಲೆಲ್ಲೂ ಮಾತು ಅಗತ್ಯಕ್ಕಿಂತ ಹೆಚ್ಚಾಗುತ್ತಿದೆ. ಕೇವಲ ಮಾತಿನಿಂದ ಏನನ್ನೂ ಸಾಧಿಸಲಾಗದು. ಸಾಹಿತಿಗಳಲ್ಲೂ ರಾಜಕಾರಣಿಗಳಂತೆ ಅದೊಂದು ಚಾಳಿಯಾಗುತ್ತಿದೆ. ಅಹಂಕಾರಕ್ಕಾಗಿಯೋ, ಪ್ರಚಾರಕ್ಕಾಗಿಯೋ ಬರೆಯುವವರೇ ಅಧಿಕವಾಗಿದ್ದಾರೆ ಎನಿಸುತ್ತದೆ. ಸಾಹಿತಿ ಗಳಲ್ಲೂ ಕೆಟ್ಟ ದ್ವೇಷ ವನ್ನು ಕಾಣುತ್ತಿದ್ದೇವೆ. ಅದನ್ನು ಬಿಡದ ಹೊರತು ಕನ್ನಡವೂ ಉದ್ಧಾರವಾಗದು, ದೇಶವೂ ಉದ್ಧಾರವಾಗದು.

ಸ್ವಂತ ಜಾತಿ ತಿರಸ್ಕರಿಸಿ ತೀರಾ ಸಾಮಾನ್ಯರ ಜೊತೆ ಬಸವಣ್ಣ ತನ್ನನ್ನು ಸಮೀಕರಿಸಿಕೊಂಡ. ಲಿಂಗಾಯಿತ ಸಮಾಜದಲ್ಲಿ ಕ್ಷೌರಿಕರು, ಮಡಿವಾಳರು, ಅಕ್ಕಸಾಲಿಗರು, ದೇವಾಂಗರು, ಕಮ್ಮಾರರು, ದಲಿತರು ಎಲ್ಲಾ ಇದ್ದರು. ಈಗ ಎಲ್ಲರಿಗೂ ಬೇರೆ ಬೇರೆ ಸ್ವಾಮಿಗಳು ಇದ್ದಾರೆ. ಜಾತಿಗೊಂದೊಂದು ಮಠವಿದೆ. ಬಸವಣ್ಣನನ್ನು ಮಠದಿಂದ ಓಡಿಸಿಬಿಟ್ಟಿದ್ದಾರೆ, ಜಂಗಮರು ಪುರೋಹಿತರಾಗಿದ್ದಾರೆ. ಮಕ್ಕಳಿಗೆ ಹಾಲುಣಿಸುವುದು ಬಿಟ್ಟು ವಿಷ ಉಣಿಸುತ್ತಿದ್ದಾರೆ. ಶಿಕ್ಷಣವನ್ನು ಯಾಕೆ ಖಾಸಗೀಕರಣ ಮಾಡಬೇಕಾಗಿತ್ತು. ಸಿನೆಮಾ ಮಾಡುವವರು, ದುಡ್ಡಿರುವವರೆಲ್ಲಾ ಶಾಲೆ ನಡೆಸುತ್ತಿ ದ್ದಾರೆ. ಇವತ್ತು ಮೇಷ್ಟ್ರುಗಳೆಲ್ಲಾ ಶಿಶುಪಾಲರಾಗುತ್ತಿದ್ದಾರೆ. ಹೆಸರು ಶಿಶುಪಾಲ, ಆದರೆ ನಿಜವಾಗಿ ರಾಕ್ಷಸರು.

‘‘ಅಲ್ರೀ 60 ವರ್ಷ ಬೇಕೇನ್ರಿ ದಲಿತರ ಸ್ಥಿತಿ ಸುಧಾರಿಸಲು. ಇಷ್ಟು ವರ್ಷ ಕಳೆದರೂ ಒಬ್ಬನೇ ಒಬ್ಬ ದಲಿತ ಇನ್ನೂ ಮುಖ್ಯ ಮಂತ್ರಿಯಾಗಿಲ್ಲ ಯಾಕೆ? ಖರ್ಗೆಗಿಂತ ಪರ್ಸನಾಲಿಟಿ ಬೇಕೇನ್ರಿ ಮುಖ್ಯಮಂತ್ರಿ ಆಗೋದಕ್ಕೆ?’’

ಮೇಲಿನ ಮಾತುಗಳೆಲ್ಲವೂ ಡಾ. ಎಲ್. ಬಸವರಾಜು ಅವರ ಮೊನಚು ನಾಲಿಗೆಯಿಂದ ಹರಿದು ಬಂದಂಥವು! ಅವರು ಮಾತನಾಡುತ್ತಿದ್ದದ್ದೇ ಹೀಗೆ. ಸತ್ಯ ಹೇಳಲು ಎದೆಗಾರಿಕೆ ಬೇಕು ಎನ್ನುವವರು ಮೊದಲು ಅವರನ್ನು ನೋಡಬೇಕಿತ್ತು. ಏಕೆಂದರೆ ಯಾವುದೇ ಮುಚ್ಚುಮರೆ ಇಲ್ಲದೆ ತಮಗನಿಸಿದ ಸತ್ಯವನ್ನು ಯಾವುದೇ ಮುಲಾಜಿಲ್ಲದೆ ನೇರವಾಗಿ ಅಷ್ಟೇ ನಿಷ್ಟುರವಾಗಿ ಹೇಳುತ್ತಿದ್ದ ಜಾಯಮಾನದ ಅಪರೂಪದ ವ್ಯಕ್ತಿ ಅವರು. ಹಾಗಾಗಿ ಸಾತ್ವಿಕ ಸಿಟ್ಟಿನ ಆ ಸಾರಸ್ವತ ಸಂತನಿಗೆ ಸಾಹಿತ್ಯ ವಲಯದಲ್ಲಿ ಬೆಂಕಿ ಎಂಬ ಮತ್ತೊಂದು ಅನ್ವರ್ಥ ನಾಮವೂ ಇತ್ತು. ಇಂಥ ಬೆಂಕಿ ಕೆಡಕನ್ನು ಸುಡುತ್ತಾ, ಒಳಿತನ್ನು ಬೆಳಗುತ್ತಾ ಸಾರಸ್ವತ ಲೋಕದ ಮಹಾ ಬೆಳಕಾಗಿ ತಮ್ಮ ವಿದ್ವತ್‌ಪೂರ್ಣ ಸಾರ್ಥಕ ಕೃತಿಗಳಿಂದ ಕನ್ನಡ ಸಾಹಿತ್ಯ ಭಂಡಾರವನ್ನು ಶ್ರೀಮಂತಗೊಳಿಸಿರುವುದು ಬೆಳಕಿನಷ್ಟೇ ಸತ್ಯ! ಜನಮುಖಿ ವಿದ್ವಾಂಸ, ಸಮಷ್ಟಿ ಪ್ರಜ್ಞೆಯ ಸಾಹಿತಿ, ಅಭಿನವ ಪಂಪ, ಕಾಯಕ ನಿಷ್ಟ ಸಾಹಿತಿ, ಬಹುಶ್ರುತ ಪಂಡಿತ, ವಿದ್ವತ್ತಿನತವ ನಿಧಿ, ಪ್ರಗತಿಪರ ಚಿಂತನೆಯ ಮೌನ ಸಾಧಕ, ಕನ್ನಡ ವಿಮರ್ಶೆಯ ಮುಂದಿನ ನೇಗಿಲು, ಅಲ್ಲಮ ಪ್ರಭೆಯ ಅಪೂರ್ವ ವ್ಯಕ್ತಿ, ವಚನ ಸಾಹಿತ್ಯ ಪ್ರವೀಣ, ಬಸವ ಸಾಹಿತ್ಯ ಧುರೀಣ, ಜೈನ ಸಾಹಿತ್ಯ ನಿಪುಣ, ಬೌದ್ಧ ಸಾಹಿತ್ಯ ಸಿಂಧು, ಶರಣ ಸಾಹಿತ್ಯ ಬಂಧು, ಸತ್ಯನಿಷ್ಠ ಸಂಶೋಧಕ, ಮಾನವೀಯ ಸಾಹಿತ್ಯ ರತ್ನ, ಘನ ವಿದ್ವತ್ತಿನ ಗುಪ್ತನಿಧಿ, ಸಾಹಿತ್ಯ ಲೋಕದ ಸವ್ಯಸಾಚಿ ಎಂದೆಲ್ಲಾ ನೂರಾರು ವಿಶೇಷಣಗಳನ್ನು ಹೊಂದಿದ್ದ ಬಸವರಾಜು ಅವರಿಗೆ ಇವುಗಳಾವೂ ಉತ್ಪ್ರೇಕ್ಷೆ ಎನಿಸಿರಲಿಲ್ಲ. ಇಂಥ ಸಾವಿರ ಸಾವಿರ ವಿಶೇಷಣಗಳಿಗೂ ಅರ್ಹವಾಗುವ ಘನವಿದ್ವತ್ತು ಅವರ ಲೇಖನಿಗಿತ್ತು. ಹಾಗಾಗಿ ಅವರು ಸೃಷ್ಟಿಸಿದ ಪ್ರತಿಯೊಂದು ಕೃತಿಗಳೂ ಅಮೂಲ್ಯ ರತ್ನಗಳೇ ಆಗಿವೆ.

ಅದು ಸಂಶೋಧನೆ ಇರಬಹುದು, ವಿಮರ್ಶೆ ಇರ ಬಹುದು, ಸಂಪಾದನೆ ಇರಬಹುದು, ಸೃಜನೇತರ ಸಾಹಿತ್ಯ ವಿರಬಹುದು, ಸೃಜನಶೀಲ ಸಾಹಿತ್ಯವಿರಬಹುದು, ಪೂರ್ವದ ಹಳೆಗನ್ನಡವಿರಬಹುದು, ನಡುಗನ್ನಡವಿರಬಹುದು, ಹೊಸಗನ್ನಡವಿರಬಹುದು ಎಲ್ಲದರಲ್ಲೂ ಬಸವರಾಜು ಸಿದ್ಧಹಸ್ತರಾಗಿದ್ದರು. ಅವರು ಲೇಖನಿ ಹರಿಸಿದ್ದಲ್ಲೆಲ್ಲಾ ವಿದ್ವತ್ತಿನ ಬೆಳಕು ತನ್ನಂತಾನೆ ಪ್ರವಹಿಸುತ್ತಿತ್ತು. ಆದಿಕವಿ ಪಂಪನ ಅದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯವನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ, ಅನುವಾದಿಸಿ ಅವರು ಶಾಸ್ತ್ರೀಯವಾಗಿ ಸಂಪಾದಿಸಿರುವ ರೀತಿ ಅವರ ವಿದ್ವತ್ತಿಗಿಡಿದ ಕೈಗನ್ನಡಿಯಾಗಿದೆ. ಸರಳ ಪಂಪಭಾರತ ಆಗಲಿ ಪಂಪನ ಸಮಸ್ತ ಭಾರತ ಕಥಾಮೃತ ಆಗಲಿ ಬಸವರಾಜು ಅವರಂಥ ವಿದ್ವಾಂಸರಿಂದಲ್ಲದೆ ಬೇರಾರಿಂದಲೂ ಬರಲು ಸಾಧ್ಯವಿಲ್ಲವೆನ್ನುವಷ್ಟು ಗಟ್ಟಿ ಕೃತಿಗಳಾಗಿವೆ. ಇವು ಬರೀ ಗಟ್ಟಿಯಲ್ಲ ಕನ್ನಡ ಸಾರಸ್ವತ ಲೋಕದ ಚಿನ್ನದ ಗಟ್ಟಿಗಳು. ಹಾಗೆಯೇ ಬಸವರಾಜು ಅವರು ಸಂಪಾದಿಸಿರುವ ಸಿದ್ಧರಾಮ ಚರಿತೆ ಮತ್ತು ಅಶ್ವಘೋಷನ ಬುದ್ಧಚರಿತೆಯನ್ನು ಕನ್ನಡಕ್ಕೆ ತಂದಿರುವ ಬಗೆ ಬೆರಗುಗೊಳಿಸುತ್ತದೆ. ದೇವನೂರು ಮಹದೇವ ಅವರ ‘ಕುಸುಮ ಬಾಲೆ’ಯನ್ನು ಕಾವ್ಯದ ಲಯಕ್ಕೆ ಅಳವಡಿಸಿ ಕಾವ್ಯ ಕುಸುಮ ಬಾಲೆ ಯಾಗಿಸಿರುವ ಅವರ ಲೇಖನಿಯ ವಿಶಿಷ್ಟತೆಯೇ ಒಂದು ಹೊಸಬಗೆ, ಇದೊಂದು ಚಾರಿತ್ರಾರ್ಹ ಪ್ರಯೋಗ. ವಚನ ಸಾಹಿತ್ಯದಲ್ಲಂತೂ ಅವರಿಗವರೇ ಸಾಟಿ ಎನ್ನುವಂತಹ ಅಮೋಘ ಕೃಷಿ, ಹಳಕಟ್ಟಿಯವರನ್ನು ಹೊರತುಪಡಿಸಿದರೆ ಬಸವರಾಜು ಅವರಷ್ಟು ವಚನ ಸಾಹಿತ್ಯ ಕೃಷಿ ಮಾಡಿದವರು ವಿರಳ. ಇಲ್ಲವೆಂದರೂ ಆದೀತು. ಒಂದು ರೀತಿ ಹಳಕಟ್ಟಿ ಮತ್ತು ಬಸವರಾಜು ಅವರುಗಳನ್ನು ವಚನ ಸಾಹಿತ್ಯದ ಎರಡು ಕಣ್ಣುಗಳೆನ್ನಬಹುದು. ವಚನ ಸಾಹಿತ್ಯದ ವಿಚಾರದಲ್ಲಿ ಬಸವರಾಜು ಅವರು ಕನ್ನಡ ಸಂಶೋಧನಾ ಕ್ಷೇತ್ರಕ್ಕೆ ಹೊಸದೊಂದು ಬಸವರಾಜ ಮಾರ್ಗವನ್ನೇ ನಿರ್ಮಿಸಿ ಕೊಟ್ಟಿದ್ದಾರೆ. ಅವರು ವಚನಸಾಹಿತ್ಯದ ಬಗ್ಗೆ ಬರೆಯಲು ಕುಳಿತರೆ, ಮಾತನಾಡಲು ನಿಂತರೆ ಎಲ್ಲಾ ವಚನಕಾರರೂ ಅವರ ಮೈಮನವನ್ನೆಲ್ಲಾ ತುಂಬಿಕೊಂಡುಬಿಡುತ್ತಿದ್ದರು. ಅಂದ ಹಾಗೆ ಅವರ ಒಂದು ಪುಸ್ತಕದ ಹೆಸರೂ ಅಲ್ಲಮನು ಮೈಮೇಲೆ ಬಂದಾಗ.

ಇಷ್ಟೆಲ್ಲಾ ವಿದ್ವತ್ತಿನ ಕಣಜವೇ ಆಗಿದ್ದ ಡಾ. ಎಲ್. ಬಸವರಾಜು ಕವಿಯಾದದ್ದು ಅವರಿಗೆ 75 ತುಂಬಿದ ಇಳಿವಯಸ್ಸಿನಲ್ಲಿ ಎಂದರೆ ಎಂಥವರಿಗೂ ಆಶ್ಚರ್ಯವಾಗದಿರದು. 45 ವರ್ಷ ಸಂಶೋಧನೆ ಬಳಿಕ ಕಾವ್ಯ ಎನ್ನುವ ಕನ್ಯೆ ಈ ಮುದುಕನ ಕೈಹಿಡಿದಳು. ಅವಳ ತೆಕ್ಕೆಯಲ್ಲಿ ನಾನೀಗ ಬಂಧಿ ಎಂದು ಬಸವರಾಜು ಅವರೇ ಒಂದು ಕಡೆ ಹೇಳಿಕೊಂಡಿದ್ದಾರೆ. ತಮ್ಮ ಎಪ್ಪತ್ತೈದರ ಹರೆಯದಲ್ಲಿ ಆರುನೂರು ಕವಿತೆಗಳನ್ನೊಳಗೊಂಡ ಠಾಣಾಂತರ ಮತ್ತು ಜಾಲಾರಿ ಕವನ ಸಂಕಲನಗಳನ್ನು ಪ್ರಕಟಿಸಿದ್ದು ಅವರ ಕಾವ್ಯಕೃಷಿಯ ವಿಶೇಷ. ವಿದ್ವತ್ತಿನ ಮೇರು ಪರ್ವತದಂತಿದ್ದ ಡಾ. ಎಲ್. ಬಸವರಾಜು ಅವರು ಚಿನ್ನದ ಗಣಿ ಕೋಲಾರ ಜಿಲ್ಲೆಯ ಇಡಗೂರಿನವರು. 1919ರ ಅಕ್ಟೋಬರ್ 5ರಂದು ಜನನ. ತಂದೆ ಶಿವಾರ್ಚಕ ಲಿಂಗಪ್ಪ, ತಾಯಿ ವೀರಮ್ಮ. ಬಡತನವನ್ನು ಬೆನ್ನಿಗಂಟಿಸಿಕೊಂಡೇ ಹುಟ್ಟಿದ್ದ ಬಸವರಾಜು ಅವರು ಎಳೆಯ ವಯಸ್ಸಿನಲ್ಲೇ ಪೋಷಕರನ್ನು ಕಳೆದುಕೊಂಡ ನತದೃಷ್ಟರು. ಆದರೂ ಅದೃಷ್ಟದ ಬಾಗಿಲು ಮುಂದಿದೆ ಎಂಬ ಆಶಾಭಾವನೆಯಿಂದಲೇ ಉದರ ಪೋಷಣೆಗಾಗಿ ತನ್ನ ತಂದೆಯಂತೆ ಇಡಗೂರಿನ ಭೀಮೇಶ್ವರ ದೇವಾಲಯದಲ್ಲಿ ಅರ್ಚಕರಾಗಿ ಅವರು ಕೆಲಸ ಮಾಡುತ್ತಲೇ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಮುಗಿಸಿದರು. ನಂತರ ತುಮಕೂರಿನ ಸಿದ್ದಗಂಗಾ ಮಠಕ್ಕೆ ಸೇರಿ ಪ್ರೌಢಶಿಕ್ಷಣ ವ್ಯಾಸಂಗ ಮಾಡಿದರು. 1942ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಆನರ್ಸ್ ಪದವಿ ಪಡೆದು ಕೆಲಕಾಲ ಸರಕಾರಿ ಲೆಕ್ಕ ವಿಭಾಗದಲ್ಲಿ ಕೆಲಸ ಮಾಡಿದರು.

1946ರಲ್ಲಿ ಎಂ.ಎ. ಪದವಿಗಳಿಸಿದ ಬಸವರಾಜು ಅವರು ದಾವಣಗೆರೆಯ ಧರ್ಮರತ್ನಾಕರ ಮುದ್ದುರಾಮಪ್ಪ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇರಿಕೊಂಡರು. ಆದರೆ ಅವರು ಅಲ್ಲಿ ಹೆಚ್ಚು ಕಾಲ ಇರಲಿಲ್ಲ. 1951ರಲ್ಲಿ ಮೈಸೂರಿನ ಯುವರಾಜ ಕಾಲೇಜಿಗೆ ಅಧ್ಯಾಪಕರಾಗಿ ಬಂದು, ನಂತರ ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಗೆ ಸೇರಿಕೊಂಡರು. ಇಲ್ಲಿ ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ ಅವರು ಸಲ್ಲಿಸಿದ ಅವಿಸ್ಮರಣೀಯ ಸೇವೆ ಇಂದಿಗೂ ಮಾನಸಗಂಗೋತ್ರಿಯಲ್ಲಿ ದಾಖಲಾಗಿದೆ. ಅಪಾರ ಶಿಷ್ಯ ಪಡೆಯ ಅಭಿಮಾನದ ನೆರಳಲ್ಲಿ ಸುಮಾರು ಮೂರುವರೆ ದಶಕಗಳ ಕಾಲ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿದ್ದ ಅವರು 1979ರಲ್ಲಿ ನಿವೃತ್ತರಾದರು. ಆದರೆ ತಮ್ಮ ಲೇಖನಿಗೆ ನಿವೃತ್ತಿಯೇ ಇಲ್ಲ ವೆಂಬಂತೆ ಇಳಿವಯಸ್ಸಿನಲ್ಲೂ ಸಾಹಿತ್ಯ ಕೃಷಿಯನ್ನು ಒಂದು ವ್ರತ ವಾಗಿ ಮಾಡಿಕೊಂಡು ಬದುಕಿರುವವರೆಗೂ ಬರೆಯುತ್ತಲೇ ತನ್ಮೂಲಕ ಇತರರಿಗೆ ಮಾದರಿಯಾಗಿದ್ದ ಮಹಾನ್ ಲೇಖಕರವರು.

ಬಸವರಾಜು ಅವರು ನೂರಾರು ಪುಸ್ತಕಗಳನ್ನು ಬರೆದು ರಾಶಿ ಹಾಕಲಿಲ್ಲ. ಹಾಗೆ ನೋಡಿದರೆ ಸಂಖ್ಯೆಯ ದೃಷ್ಟಿಯಿಂದ ಅವರ ಪುಸ್ತಕಗಳು 60ನ್ನೂ ದಾಟುವುದಿಲ್ಲ. ಆದರೆ ಸತ್ವದ ದೃಷ್ಟಿಯಿಂದ ಅವರ ಒಂದೊಂದು ಕೃತಿಗಳೂ ಮಹತ್ವವೇ ಆಗಿವೆ. ಗ್ರಂಥ ಸಂಪಾದನೆಯ ಅಮೃತಪಥದಲ್ಲಿ ಪ್ರಾಚೀನ ಕೃತಿಗಳನ್ನು ಶಾಸ್ತ್ರೀಯವಾಗಿ ವಿಶ್ಲೇಷಿಸಿ ಅವರು ಕಟ್ಟಿಕೊಟ್ಟಿರುವ ಒಂದೊಂದು ಉದ್ಗ್ರಂಥಗಳೂ ಕನ್ನಡಮ್ಮನ ಕೊರಳಿನ ರತ್ನಮಾಲೆಯಾಗಿವೆ. ತಮ್ಮ ಪಾಂಡಿತ್ಯ ಮತ್ತು ಸಂಶೋಧನೆಗೆ ತಮ್ಮ ವಿದ್ಯಾಗುರುಗಳೂ ಆಗಿದ್ದ ಸಾಹಿತ್ಯ ದಿಗ್ಗಜಗಳಾದ ತೀ.ನಂ.ಶ್ರೀ., ಡಿ.ಎಲ್. ನರಸಿಂಹಾಚಾರ್, ಕುವೆಂಪು, ಜಿ.ಪಿ. ರಾಜರತ್ನಂ, ದ.ರಾ. ಬೇಂದ್ರೆ, ಎ.ಆರ್. ಕೃಷ್ಣಶಾಸ್ತ್ರಿ ಮುಂತಾದವರಿಂದ ಶಹಭಾಶ್‌ಗಿರಿ ಪಡೆದಿದ್ದ ಡಾ. ಎಲ್. ಬಸವರಾಜು ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿಯ ಅನುವಾದ ಪ್ರಶಸ್ತಿ, ಬಸವ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ಚಿದಾನಂದ ಪ್ರಶಸ್ತಿ, ಪಂಪ ಪ್ರಶಸ್ತಿ, ಪ್ರೊ. ಸಂ.ಶ. ಭೂಷನೂರ ಮಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಭಾಷಾ ಸಮ್ಮಾನ ಪ್ರಶಸ್ತಿ, ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ, ಮೈಸೂರು ವಿವಿಯ ಗೌರವ ಡಾಕ್ಟರೇಟ್, ಹಂಪಿ ವಿವಿಯ ನಾಡೋಜ ಪುರಸ್ಕಾರ ಮುಂತಾದ ಪ್ರಶಸ್ತಿಗಳು ಬಂದಿವೆ. ಇವೆಲ್ಲವೂ ಬಸವರಾಜು ಅವರ ಜೀವಮಾನದ ಸಾಹಿತ್ಯ ಸಾಧನೆಗೆ ಸಂದ ಮಹತ್ವಪೂರ್ಣ ಗೌರವಗಳು. ಇವೆಲ್ಲಕ್ಕೂ ರತ್ನಪ್ರಾಯವಾಗಿ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಅಮೃತಗೌರವ ಅವರಿಗೆ ದೊರೆತದ್ದು ಅವರ ಸಂಶೋಧನಾ, ಸಂಪಾದನಾ ಸಾಹಿತ್ಯ ಕೈಂಕರ್ಯಕ್ಕೆ ದೊರೆತ ಅಮೃತ ಫಲವೆನ್ನಬಹುದು.

ನಾಟಕಾಮೃತ ಬಿಂದುಗಳು, ಭಾರತರೂಪಕ, ರಾಮಾಯಣ ನಾಟಕ ತ್ರಿವೇಣಿ, ಅಲ್ಲಮನ ವಚನ ಚಂದ್ರಿಕೆ, ಅಲ್ಲಮನ ವಚನಗಳು, ಬಸವಣ್ಣನ ವಚನಗಳು, ಅಕ್ಕನ ವಚನಗಳು, ಸರ್ವಜ್ಞನ ವಚನಗಳು, ದೇವರ ದಾಸಿಮಯ್ಯನ ವಚನಗಳು, ಪ್ರಭುದೇವರ ಶೂನ್ಯ ಸಂಪಾದನೆ, ಗೂಳೂರು ಸಿದ್ದವೀರಣ್ಣನ ಶೂನ್ಯ ಸಂಪಾದನೆ, ಬಸವ ವಚನಾಮೃತ (3 ಭಾಗಗಳಲ್ಲಿ), ಸರ್ವಜ್ಞನ ವಚನಗಳ ವಿದ್ವದಾವೃತ್ತಿ, ಪರಮಾರ್ಥ, ಶಿವದಾಸ ಗೀತಾಂಜಲಿ, ತಿರುಮಲಾರ್ಯ ಮತ್ತು ಚಿಕ್ಕದೇವರಾಜ ಒಡೆಯರು, ಶೃಂಗಾರ ನಿದರ್ಶನ, ಮಹಾದೇವನ ಮಹಾಲಿಂಗೇಂದ್ರ ವಿಜಯ, ಶಿವಗಣ ಪ್ರಸಾದಿ ಮಹಾದೇವಯ್ಯನ ಶೂನ್ಯ ಸಂಪಾದನೆ, ವೀರಶೈವ ತತ್ವ ಮತ್ತು ಆಚರಣೆ, ಕನ್ನಡ ಛಂದಸ್ಸಂಪುಟ, ಪಂಪನ ಆದಿಪುರಾಣ, ವಚನ ಚಿಂತನ, ಕಲುಬುರ್ಗಿಯ ಶರಣ ಬಸವ, ತೊರವೆ ರಾಮಾಯಣ ಸಂಗ್ರಹ, ಹರಿಹರನು ಕಂಡ ಜ್ಯೋತಿರ್ಲಿಂಗದ ಮೂರು ಮುಖಗಳು, ಶಬ್ದಮಣಿ ದರ್ಪಣ, ಶರಣ ಬಸವ ಸಂಪುಟ, ಸರ್ವಜ್ಞನ ವಚನಗಳ ಜನಪ್ರಿಯ ಆವೃತ್ತಿ, ಶ್ರೀ ಶರಣ ಶಿವಬಸವ ಅಪ್ಪ ಅವರ ಮಹಾದಾಸೋಹ ಸೂತ್ರಗಳು, ಪಂಪಪೂರ್ವ ಯುಗ, ನಿಜಗುಣ ಶಿವಯೋಗಿ, ಬಸವಣ್ಣನವರ ಷಟ್‌ಸ್ಥಲ ವಚನಗಳು, ನಿಜಗುಣ ಶಿವಯೋಗಿಯ ತತ್ವದರ್ಶನ, ಠಾಣಾಂತರ, ಜಾಲಾರಿ, ಸರಳ ಪಂಪ ಭಾರತ, ಬುದ್ಧ ಚರಿತೆ, ಪಂಪ ಭಾರತ ಕಥಾಮೃತ, ಸರಳ ಸಿದ್ಧರಾಮ ಚರಿತೆ, ಸರಳ ಹರಿಶ್ಚಂದ್ರ ಚರಿತೆ, ಪಂಪನ ಸರಳ ಆದಿಪುರಾಣ, ಸೌಂದರನಂದ, ಹಳೆಗನ್ನಡ ವಿಶೇಷ ಶಬ್ದಕೋಶ, ಬಸವಪೂರ್ವ ವಚನಕಾರರು, ರಾಕ್ಷಸರಿಗೆ ಕತ್ತಲೆಯೇ ಬೆಳಕು, ಡೊಂಕು ಬಾಲದ ನಾಯಕರು, ಕಡಕೋಳ ಮಡಿವಾಳಪ್ಪ ಮುಂತಾದವು ಬಸವರಾಜು ಅವರ ಮೌಲಿಕ ಕೃತಿಗಳು.

ತೊಂಬತ್ಮೂರು ವರ್ಷಗಳ ತುಂಬು ಜೀವನ ನಡೆಸಿ 2012 ಜನವರಿ 29ರಂದು ಬಸವರಾಜು ಅವರು ಇಹ ಲೋಕಯಾತ್ರೆ ಮುಗಿಸಿದರೂ ತಮ್ಮ ಸಾಧನೆ, ಸಿದ್ಧಿ, ಕೃತಿಗಳ ಮೂಲಕ ಸಾರಸ್ವತ ಲೋಕದ ಚಿರಂಜೀವಿಯಾಗಿದ್ದಾರೆ.

Writer - ಬನ್ನೂರು ಕೆ. ರಾಜು

contributor

Editor - ಬನ್ನೂರು ಕೆ. ರಾಜು

contributor

Similar News