ಅನಿಯಂತ್ರಿತ ವರ್ತನೆಗಳಿಗೆ ಕಡಿವಾಣ
ಹಠಾತ್ ಪ್ರವೃತ್ತಿಯನ್ನು ಪತ್ತೆ ಹಚ್ಚಿ
ಮಕ್ಕಳ ಸಾಮಾನ್ಯ ಗುಣಗಳನ್ನು ಗಮನಿಸಿ. ಅವರ ಸಾಮಾನ್ಯ ಗುಣಗಳನ್ನೇ ಸ್ವಭಾವ ಎಂತಲೂ ಕರೆಯಬಹುದು. ನಾವು ನಿರ್ದೇಶಿಸುವ ಹಾಗೆ ವರ್ತಿಸುವ ಸಂದರ್ಭಗಳ ಹೊರತಾಗಿ ಅವರು ಹೇಗೆ ವರ್ತಿಸುತ್ತಾರೆಂಬುದನ್ನು ಮನೆಯವರಾಗಲಿ, ಶಿಕ್ಷಕರಾಗಲಿ ಗಮನಿಸಬೇಕು. ಪರಿಸರ ಅಥವಾ ವಾತಾವರಣ ಅಥವಾ ಜನರೊಂದಿಗೆ ಅವರು ಹೇಗೆ ಹೊಂದಿಕೊಳ್ಳುತ್ತಾರೆ, ಅವರ ಮನೋಭಾವ (ಮೂಡ್) ಹೇಗಿರುತ್ತದೆ ಎಂದು ಗಮನಿಸಬೇಕು. ಜೊತೆಗೆ ಅವರ ಏಕಾಗ್ರತೆ ಅಥವಾ ಗಮನ ಕೊಡುವ ಅವಧಿಯು ಎಷ್ಟಿರುತ್ತದೆ ಮತ್ತು ಎಷ್ಟು ಹೊತ್ತು ಅವರು ಆಧ್ಯಾತ್ಮದಿಂದ ಅಥವಾ ಶ್ರದ್ಧೆಯಿಂದ ಒಂದು ಕೆಲಸವನ್ನು ಮಾಡಬಲ್ಲರು ಅಥವಾ ಗಮನವನ್ನು ಕೇಂದ್ರೀಕರಿಸಬಲ್ಲರು ಎಂಬುದನ್ನೂ ಗಮನಿಸಿ. ಹಾಗೆಯೇ ಅವರು ಯಾವುದೇ ಕ್ರಿಯೆಗೆ ಹೇಗೆ ಪ್ರತಿಕ್ರಿಯಿಸುತ್ತಾರೆ, ಹೇಗೆ ಪ್ರಚೋದನೆಗೆ ಒಳಗಾಗುತ್ತಾರೆಂಬುದನ್ನೂ ಗಮನಿಸಬೇಕು.
ಈಗ ಮಗುವಿನ ಜೊತೆಯಲ್ಲಿರುವ ತಂದೆ, ತಾಯಿ ಮತ್ತು ಕುಟುಂಬದ ಸದಸ್ಯರು, ಶಾಲೆಯಲ್ಲಾದರೆ ಶಿಕ್ಷಕರು, ಓರಗೆಯವರು; ಒಟ್ಟಾರೆ ಮಗುವಿನ ಜೊತೆಯಲ್ಲಿ ಆಪ್ತವಾಗಿ ಸಮಯ ಮತ್ತು ಕೆಲಸವನ್ನು ಹಂಚಿಕೊಳ್ಳುವವರು ತೋರುವ ಪ್ರತಿಕ್ರಿಯೆ, ಪ್ರಚೋದನೆಗೆ ಒಳಗಾಗುವ ರೀತಿ, ಇವುಗಳನ್ನು ಕೂಡಾ ಗಮನಿಸಬೇಕು. ನಂತರ ಮಗುವಿನ ವರ್ತನೆಗಳಿಗೆ ತಾಳೆ ನೋಡಬೇಕು. ಆಗ ತಿಳಿಯುತ್ತದೆ, ಮಗುವು ತನ್ನ ಜೈವಿಕ ಪರಿಸರದಿಂದ ಈ ಹಠಾತ್ ಪ್ರವೃತ್ತಿಯನ್ನು ಕಲಿತಿದೆಯೋ ಅಥವಾ ಅದಕ್ಕೆ ಅನಿಯಂತ್ರಿತ ಹಠಾತ್ ಪ್ರವೃತ್ತಿಯ ಸಮಸ್ಯೆ ಇದೆಯೋ ಎಂದು.
ಕೆಲವು ನಾಚಿಕೆ ಸ್ವಭಾವದ ಮಕ್ಕಳು ತಂದೆ ಮತ್ತು ತಾಯಿಯ ಚುರುಕಿನ ಮತ್ತು ಹೊರಮುಖಿಯ (ಎಕ್ಸಾವರ್ಟ್) ಸ್ವಭಾವದಂತೆ ವರ್ತಿಸದೇ ಇರಬಹುದು. ಅದು ನನ್ನ ತಂದೆ ತಾಯಿಯ ಹಾಗೆ ವರ್ತಿಸಬಾರದೆಂದೇ ಅವರ ನಿರ್ಧಾರವಾಗಿರಲೂಬಹುದು. ತಂದೆ ತಾಯಿ ಅಂತರ್ಮುಖಿಗಳಾಗಿ (ಇಂಟ್ರಾವರ್ಟ್) ಮಕ್ಕಳು ಹೊರಮುಖಿಗಳಾಗಿ ಹಠಾತ್ ಪ್ರವೃತ್ತಿಯವಾಗಿರಬಹುದು. ಏನೇ ಆಗಲಿ, ಪರಿಸರದ ಪ್ರಭಾವವೋ ಅಥವಾ ಮಗುವಿನ ಸಮಸೆ್ಯಯೋ ಮೊದಲು ಪತ್ತೆ ಹಚ್ಚಬೇಕು.
ಆಲೋಚಿಸುವ ಸಾಮರ್ಥ್ಯ, ಯೋಜನೆಗಳನ್ನು ಮಾಡುವುದು, ಸಮಸ್ಯೆಯನ್ನು ನಿವಾರಿಸುವ ಬಗೆ, ಅಂದುಕೊಂಡದ್ದನ್ನು ಹೇಗೆ ಕ್ರಮಬದ್ಧವಾಗಿ ಮಾಡಬೇಕು ಎಂಬುದೆಲ್ಲವೂ ಯಾವುದೇ ಒಂದು ಮಗುವಿನ ಹುಟ್ಟುಗುಣವೇ ಆಗಿರುತ್ತದೆ. ಆದರೆ ಅವುಗಳನ್ನು ಕಾರ್ಯರೂಪಕ್ಕೆ ತರುವುದಕ್ಕೆ ಅಟೆಂಶನ್ ಡಿಫಿಸಿಟ್ ಹೈಪರಾಕ್ಟಿವಿಟಿ ಡಿಸಾರ್ಡರ್ (ಗಮನ ಪಲ್ಲಟದ ಅನಿಯಂತ್ರಿತ ಚುರುಕುತನದ ಸಮಸ್ಯೆ) ಅಥವಾ ಇಂಪಲ್ಸಿವ್ ಕಂಟ್ರೋಲ್ ಡಿಸಾರ್ಡರ್ (ಅನಿಯಂತ್ರಿತ ಹಠಾತ್ ಪ್ರವೃತ್ತಿ); ಈ ಬಗೆಯ ಸಮಸ್ಯೆಗಳು ಅವರ ವ್ಯಕ್ತಿತ್ವ ವಿಕಾಸದ ವಿಷಯದಲ್ಲಿ ತೊಡಕಾಗುತ್ತವೆ.
ಚೆನ್ನಾಗಿ ನೆನಪಿರಲಿ. ಸಮಾಜ ಮತ್ತು ನಮ್ಮ ಸಹಜೀವಿಗಳು ನಮ್ಮ ವರ್ತನೆಗಳಿಗೆ ತೋರುವ ಪ್ರತಿವರ್ತನೆಗಳು ನಮ್ಮ ವಿಕಾಸಕ್ಕೆ ಪೂರಕವಾಗುತ್ತವೆ. ಹಾಗೆಯೇ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳುವುದಕ್ಕೆ ಅಥವಾ ಟೊಳ್ಳಾಗಿಸಿಕೊಳ್ಳಲೂ ಕಾರಣವಾಗುತ್ತಿರುತ್ತವೆ. ನಮ್ಮ ನಿಯಂತ್ರಣಕ್ಕೇ ಸಿಗದ ನಮ್ಮದೇ ವರ್ತನೆಗಳಿಗೂ ಮತ್ತು ಸಮಾಜದ ಪ್ರತಿವರ್ತನೆಗಳಿಗೂ ಉಂಟಾಗುವ ಸಂಘರ್ಷಗಳು ನಮ್ಮ ವ್ಯಕ್ತಿತ್ವವು ರೂಪುಗೊಳ್ಳುವು ದರ ಮೇಲೆ ಬಹಳ ಪರಿಣಾಮಕಾರಿಯಾದ ಪ್ರಭಾವವನ್ನು ಬೀರುತ್ತವೆ.
ಅತಿಸೂಕ್ಷ್ಮ ಮನಸ್ಸಿನವರು
ಹಠಾತ್ ಪ್ರವೃತ್ತಿಯದು ಒಂದು ಬಗೆಯ ಸಮಸ್ಯೆಯಾದರೆ ಮಕ್ಕಳ ಅತಿಸೂಕ್ಷ್ಮ ಮನಸ್ಥಿತಿ ಇನ್ನೊಂದು ಸಮಸ್ಯೆ. ಇದೂ ಕೂಡಾ ಹಠಾತ್ ಪ್ರವೃತ್ತಿಯೇ. ಆದರೆ ಬೇರೊಂದು ಮುಖ. ಹೈಪೋಸೆನ್ಸಿಟಿವಿಟಿ ಎಂಬ ಈ ಸಮಸ್ಯೆಯ ಮಕ್ಕಳು ಅತ್ಯಂತ ಚಿಕ್ಕಚಿಕ್ಕ ವಿಷಯಕ್ಕೂ ತುಂಬಾ ಭಾವುಕವಾಗಿ, ಗಂಭೀರವಾಗಿ ಪ್ರತಿಕ್ರಿಯಿಸುತ್ತಾರೆ. ಯಾವುದು ಅತ್ಯಂತ ಸಿಲ್ಲಿ ಅಥವಾ ನಿರ್ಲಕ್ಷಿಸಬಹುದಾಗಿರುತ್ತದೆಯೋ ಅಂತಹ ವಿಷಯವನ್ನು ಕೂಡಾ ಎಂತದ್ದೋ ಭಯಾನಕವಾಗಿ, ತಲೆಯ ಮೇಲೆ ಆಕಾಶ ಬಿದ್ದಂತೆ ಭಾವುಕತೆಗೆ ಒಳಗಾಗುತ್ತಾರೆ. ಮನಸ್ಸಿಗೆ ತಂದುಕೊಳ್ಳುತ್ತಾರೆ. ತಮ್ಮ ಭಾವುಕತೆಯನ್ನು ತಡೆದು ಕೊಳ್ಳಲಾಗುವುದಿಲ್ಲ. ಇದೂ ಕೂಡಾ ಅಗತ್ಯಕ್ಕಿಂತ ಹೆಚ್ಚಿಗೆ ಪ್ರಚೋದನೆಗೆ ಒಳಗಾಗುವ ಸಮಸ್ಯೆಯೇ. ಇದರಿಂದ ಒಳ್ಳೆಯ ಪರಿಣಾಮವೇನೂ ಆಗುವುದಿಲ್ಲ. ರೌದ್ರವಾಗಿ ವರ್ತಿಸು ವವರೊಂದು ಸಮಸ್ಯೆಯಾದರೆ, ದಿಢೀರನೆ ಖಿನ್ನತೆ ಜಾರಿ, ಗೋಳಾಡಿಕೊಂಡಿರುವುದೊಂದು ಬಗೆಯ ಹಠಾತ್ ಪ್ರವೃತ್ತಿ.
ಆಟದಲ್ಲಿ ಸೋತರೆ ಯುದ್ಧದಲ್ಲಿ ಸೋತು ಸೆರೆಯಾಳಾಗಿ ಸಾಯುವರಂತೆ ಗೋಳಿಡುವುದು. ಯಾವುದೋ ಒಂದು ಚಾಕೊಲೇಟ್ ತುಂಡು ಸಮವಾಗಿ ಅಥವಾ ಹೆಚ್ಚಿಗೆ ಮುರಿದು ಕೊಡಲಿಲ್ಲ ಎಂದರೆ ದೊಡ್ಡ ಸಾಮ್ರಾಜ್ಯ ಕಳೆದುಕೊಂಡಂತೆ ದುಃಖಿತರಾಗುವುದು. ಅಂಗಡಿಗೆ ನಿನ್ನ ಈಗ ಕರೆದುಕೊಂಡು ಹೋಗಲಾಗುವುದಿಲ್ಲ ಎಂದು ಹೇಳಿ ಹೋದರೆ, ನಡುರಾತ್ರಿಯಲ್ಲಿ ದಮಯಂತಿಯನ್ನು ನಳ ಮಹಾರಾಜನು ಕಾಡುಪಾಲು ಮಾಡಿ ಹೋಗಿರುವಂತೆ ಪರಿತಪಿಸುವುದು, ನೀನು ಆಟಕ್ಕೆ ಬೇಡ ಎಂದರೆ ರಾಮನಿಂದ ಕಾಡಿಗಟ್ಟಲ್ಪಟ್ಟ ಸೀತೆ ಪರಿತ್ಯಕ್ತವಾಗಿರುವಂತೆ ಶೋಕಿುವುದು ಕೆಲವು ಉದಾಹರಣೆಗಳು.
ದೇಹದಿಂದ ಮನಸ್ಸು
ಸರಿ, ಈಗ ಮಗುವಿಗೆ ಇಂತೆಲ್ಲಾ ಸಮಸ್ಯೆಗಳಿವೆ ಎಂದು ತಿಳಿದಾಯಿತು. ಮುಂದೇನು ಮಾಡಬೇಕು?
ಮಗುವಿನ ಆಸಕ್ತಿಗೆ ಅನುಗುಣವಾಗಿ ಯೋಚನೆ ಮಾಡುವುದಕ್ಕೆ, ಯೋಜನೆಗಳನ್ನು ರೂಪಿಸುವುದಕ್ಕೆ ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತರುವುದಕ್ಕೆ ಪ್ರೋತ್ಸಾಹಿಸಬೇಕು. ಯಾವುದೇ ಮಗುವಾಗಲಿ, ತನ್ನ ಆಸಕ್ತಿಯ ಕೆಲಸಕ್ಕೆ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತದೆ. ಸಣ್ಣ ಸಣ್ಣ ವಿವರಗಳನ್ನು ಅದು ಗಮನಿಸಲು ಯತ್ನಿಸುತ್ತದೆ. ದೊಡ್ಡ ವರಿಗೆ ಅದು ಬಾಲಿಶವಾಗಿಯೋ ಅಥವಾ ಅನಗತ್ಯವಾಗಿಯೋ ಕಾಣಬಹುದು. ಆದರೆ ಮಗುವಿಗೆ ಅದು ಬಹಳ ಗಂಭೀರವಾದಂತಹ ವಿಷಯವಾಗಿರುತ್ತದೆ. ಮಗುವಿನ ಆಸಕ್ತಿಯ ವಿಷಯದ ಕೆಲಸಕ್ಕೆ ಅಗತ್ಯವಿರುವ ವಸ್ತುಗಳನ್ನು ಒದಗಿಸಿ ಕೊಟ್ಟು, ಅದಕ್ಕೆ ಪೂರಕವಾದಂತಹ ವಾತಾವರಣವನ್ನು ನಿರ್ಮಿಸಿದರೆ, ಮಗು ತನ್ನ ವಿಷಯದ ಬಗ್ಗೆ ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ.
ಮಗುವು ಎಷ್ಟೋ ಬಾರಿ ತನ್ನ ಆಸಕ್ತಿಯನ್ನು ಕಳೆದುಕೊಳ್ಳಬಹುದು. ಆದರೆ ದೊಡ್ಡವರು ಆಗಾಗ ಅದನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ತಮ್ಮ ಸಾತ್ವಿಕ ಮತ್ತು ಒಲವಿನ ಒತ್ತಡದಿಂದ ಪ್ರೇರೇಪಿಸಬೇಕು. ಅದ್ಯಾವುದೋ ಬಣ್ಣದ ಚಿತ್ರವನ್ನು ಅರ್ಧಕ್ಕೇ ನಿಲ್ಲಿಸಿದಾಗ ಇದು ಚೆನ್ನಾಗಿ ಬರುತ್ತಿದೆ, ಪೂರ್ತಿಗೊಳಿಸು ಎಂದು ಹುರಿದುಂಬಿಸುವುದು, ಮುಗಿದ ನಂತರ ತತ್ಕಾಲದ ಚೌಕಟ್ಟನ್ನು ಒದಗಿಸಿ ಮನೆಯಲ್ಲಿ ಒಂದು ಒಳ್ಳೆಯ ಜಾಗದಲ್ಲಿ ಎಲ್ಲರ ಕಣ್ಣಿಗೆ ಬೀಳುವಂತಿಡಬೇಕು.
ಹಾಡು ಕೇಳುವ ಆಸಕ್ತಿ ಇರುವ ಮಕ್ಕಳಿಗೆ ಹಾಡುವುದನ್ನು ಕಲಿಯುವುದಕ್ಕೆ ಪ್ರೇರೇಪಿಸಿ. ನೃತ್ಯ ನೋಡಲು ಇಷ್ಟವಾದರೆ, ನೃತ್ಯ ಕಲಿಯಲು ಪ್ರೇರೇಪಿಸಿ. ಹಾಗೆಯೇ ಯಾವುದೇ ಪ್ರದರ್ಶಕ ಕಲೆಗಳಾಗಲಿ, ಲಲಿತ ಕಲೆಗಳಾಗಲಿ ಪ್ರದರ್ಶನಕ್ಕೆ ಇಡಲೇ ಬೇಕೆಂಬ ಹಠವೇನೂ ಬೇಡ. ಪ್ರಖ್ಯಾತವಾಗುವ ಗೀಳಂತೂ ಬೇಡವೇ ಬೇಡ. ತಮ್ಮ ಮನಸ್ಸಿನ ಆನಂದಕ್ಕೆ ಅವಿರಲಿ. ಖ್ಯಾತಿ ಬಂದರೆ ಬರಲಿ, ಆದರೆ ಖ್ಯಾತಿಯ ಗೀಳುರೋಗವಂತೂ ಮತ್ತೊಂದು ಮನೋರೋಗವೇ.
ಇಂತಹ ಆಸಕ್ತಿಕರವಾದ ಚಟುವಟಿಕೆಗಳನ್ನು ಮಾಡುವಾಗ ಮಕ್ಕಳು ತಮ್ಮ ಇಂದ್ರಿಯಗಳನ್ನು, ಮೆದುಳಿನ ಚಟುವಟಿಕೆಗಳನ್ನು ತಾವೇ ಕೇಂದ್ರೀಕರಿಸುವ ಯತ್ನ ಮಾಡುತ್ತಾರೆ. ಗಮನವನ್ನು ಕೇಂದ್ರೀಕರಿಸುವುದು ಒಂದು ರೂಢಿ. ಯಾವುದೇ ಸಮಸ್ಯೆ ಇರಲಿ, ಪದೇ ಪದೇ ರೂಢಿಗೊಳಪಡಿಸುವ ಯತ್ನ ಮಾಡಿದರೆ, ಸರಿ ಹೋಗುವುದು ಅಥವಾ ಗಮನಾರ್ಹವಾಗಿ ಒಂದು ಂತಕ್ಕೆ ನಿಯಂತ್ರಣಕ್ಕೆ ಬರುವುದು.
ಯೋಚಿಸುವ, ಯೋಜಿಸುವ, ಆಯೋಜಿಸುವ ಕೆಲಸಗಳನ್ನು ಮಾಡುವ ಮೆದುಳಿನ ಭಾಗಗಳಿಗೆ ಕ್ರಮಬದ್ಧವಾಗಿ ಕೆಲಸ ಮಾಡುವ, ಶಿಸ್ತುಗೊಳಿಸುವ ಕೆಲಸವಾಗುತ್ತದೆ. ಒಂದಂತೂ ನೆನಪಿರಲಿ, ಮಾನಸಿಕವಾಗಿ ಸ್ವಯಂಪ್ರೇರಣೆಯಿಂದ ಶಿಸ್ತುಗೊಳಿಸಿಕೊಳ್ಳುವುದು ಕಷ್ಟವಾದಾಗ, ಶಿಸ್ತುಗೊಳಿಸಿಕೊಳ್ಳುವ ರೂಢಿಗೆ ಒಗ್ಗಲು ದೈಹಿಕ ಅಥವಾ ಭೌತಿಕ ಚಟುವಟಿಕೆಗಳನ್ನು ಮಾಡಬೇಕು. ಕ್ರಮಬದ್ಧ ಮತ್ತು ಉದ್ದೇಶಿತ ಆಶಯಗಳನ್ನು ವಿನ್ಯಾಸಗೊಳಿಸಿಕೊಂಡಿರುವಂತಹ ಭೌತಿಕವಾದ ಚಟುವಟಿಕೆಗಳು ಮನಸ್ಸನ್ನು ಶಿಸ್ತುಗೊಳಿಸುತ್ತದೆ. ಮೆದುಳಿನ ಪ್ರೇರಣೆ, ಪ್ರಚೋದನೆ ಯ ಭಾಗಗಳಿಗೆ ತರಬೇತಿಯನ್ನು ಕೊಡುತ್ತದೆ. ಮಾನಸಿಕ ಶಿಸ್ತಿಗೆ ಶಾರೀರಿಕ ಚಟುವಟಿಕೆಗಳು ದಾರಿಯಾಗುತ್ತವೆ.