ಚಿನ್ಮಯಾನಂದ ಪ್ರಕರಣ: ಇಬ್ಬರು ಬಿಜೆಪಿ ಮುಖಂಡರಿಗೆ ಸಂಕಷ್ಟ

Update: 2019-11-06 03:42 GMT

ಶಹಜಹಾನ್‌ಪುರ, ನ.6: ಕೇಂದ್ರದ ಮಾಜಿ ಸಚಿವ ಚಿನ್ಮಯಾನಂದ ವಿರುದ್ಧದ ಲೈಂಗಿಕ ಶೋಷಣೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಉತ್ತರ ಪ್ರದೇಶ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಜೆಪಿಎಸ್ ರಾಥೋಡ್ ಅವರ ತಮ್ಮ ಡಿಪಿಎಸ್ ರಾಥೋಡ್ ಸೇರಿದಂತೆ ಇಬ್ಬರು ಬಿಜೆಪಿ ಮುಖಂಡರ ವಿರುದ್ಧ ಸುಲಿಗೆ ಪ್ರಕರಣ ಸಂಬಂಧ ಆರೋಪಪಟ್ಟಿ ಸಲ್ಲಿಸಲಿದೆ.

ಸ್ಥಳೀಯ ಬಿಜೆಪಿಯ ಪ್ರಭಾವಿ ಮುಖಂಡ ಅಜಿತ್ ಸಿಂಗ್ ವಿರುದ್ಧವೂ ಚಿನ್ಮಯಾನಂದ ಸುಲಿಗೆ ಪ್ರಕರಣದ ಸಂಬಂಧ ಆರೋಪ ಹೊರಿಸಲಾಗಿದೆ. ಇದರೊಂದಿಗೆ ಶಹಜಹಾನ್‌ಪುರ ಬಿಜೆಪಿಯಲ್ಲಿನ ಆಂತರಿಕ ಸಂಘರ್ಷದ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಆರಂಭದಲ್ಲಿ ಅಪರಿಚಿತರ ವಿರುದ್ಧ ಸುಲಿಗೆ ಪ್ರಕರಣ ದಾಖಲಿಸಲಾಗಿತ್ತು. ಆದರೆ ಎಸ್‌ಐಟಿ ತನಿಖೆ ವೇಳೆ ಕಾನೂನು ವಿದ್ಯಾರ್ಥಿನಿ ಹಾಗೂ ಆಕೆಯ ಸ್ನೇಹಿತರ ವಿರುದ್ಧ ಆರೋಪ ಹೊರಿಸಲಾಗಿತ್ತು. ಎಸ್‌ಐಸಿ ಬುಧವಾರ ಚಿನ್ಮಯಾನಂದ ವಿರುದ್ಧ ಲೈಂಗಿಕ ಹಲ್ಲೆ ಆರೋಪದ ಬಗ್ಗೆಯೂ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಿದೆ.

"ಪ್ರಕರಣದ ತನಿಖೆ ಮುಗಿದಿದ್ದು, ಬುಧವಾರ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗುತ್ತದೆ. ರಾಜಸ್ಥಾನದ ದಾವೂಸಾದಲ್ಲಿ ಕಾನೂನು ವಿದ್ಯಾರ್ಥಿನಿಯಿಂದ ಕಸಿದುಕೊಳ್ಳಲಾದ ಪೆನ್‌ಡ್ರೈವ್ ಅನ್ನು ಬಿಜೆಪಿ ಮುಖಂಡರಾದ ಡಿಪಿಎಸ್ ರಾಥೋಡ್ ಮತ್ತು ಅಜಿತ್ ಸಿಂಗ್ ಅವರಿಂದ ವಶಪಡಿಸಿಕೊಳ್ಳಲಾಗಿದೆ" ಎಂದು ಎಸ್‌ಐಟಿ ಮುಖ್ಯಸ್ಥ ನವೀನ್ ಅರೋರಾ ಪ್ರಕಟಿಸಿದ್ದಾರೆ.

ಈ ಪೆನ್‌ಡ್ರೈವನ್ನು ಲ್ಯಾಪ್‌ಟಾಪ್‌ನಲ್ಲಿ ಹಾಕಿ ಸಂಪರ್ಕ ಸಂಖ್ಯೆಗಳನ್ನು ಪರಿಶೀಲಿಸಿದ್ದಾರೆ. ಬಳಿಕ ಚಿತ್ರಗಳನ್ನು ಡಿಲೀಟ್ ಮಾಡಿ ಚಿನ್ಮಯಾನಂದ ಅವರನ್ನು ಆರೋಪದಿಂದ ಬಚಾವ್ ಮಾಡಲು 1.25 ಕೋಟಿ ರೂಪಾಯಿ ಕೇಳಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರೂ ತಪ್ಪಿತಸ್ಥರು ಎಂದು ಅರೋರಾ ವಿವರಿಸಿದರು.

ಇದರೊಂದಿಗೆ ಚಿನ್ಮಯಾನಂದ ಅವರಿಂದ ಸುಲಿಗೆ ಮಾಡಲಾಗಿದೆ ಎಂಬ ಪ್ರಕರಣದ ಆರೋಪಿಗಳ ಸಂಖ್ಯೆ ಆರಕ್ಕೇರಿದೆ. ಚಿನ್ಮಯಾನಂದ ವಿರುದ್ಧ ಲೈಂಗಿಕ ಆರೋಪ ಹೊರಿಸಿದ ಕಾನೂನು ವಿದ್ಯಾರ್ಥಿನಿ, ಸಂಜಯ್, ವಿಕ್ರಮ್ ಮತ್ತು ಸಚಿನ್ ಇತರ ಆರೋಪಿಗಳು. ಈ ಎಲ್ಲರೂ ಜೈಲಿನಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News