ಮಾಹಿತಿ ಆಯೋಗಗಳ ಹುದ್ದೆ ಭರ್ತಿ ಮಾಡುತ್ತಿರುವ ವಿವರ ನೀಡಿ: ಕೇಂದ್ರ, 9 ರಾಜ್ಯ ಸರಕಾರಗಳಿಗೆ ಸುಪ್ರೀಂ ಕೋರ್ಟ್

Update: 2019-11-06 17:02 GMT

ಹೊಸದಿಲ್ಲಿ: ನ. 6: ಕೇಂದ್ರ ಹಾಗೂ ರಾಜ್ಯ ಮಾಹಿತಿ ಆಯೋಗಗಳಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿರುವ ಬಗ್ಗೆ ಸ್ಥಿತಿಗತಿ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಬುದವಾರ ಕೇಂದ್ರ ಹಾಗೂ 9 ರಾಜ್ಯ ಸರಕಾರಗಳಿಗೆ ನಿರ್ದೇಶಿಸಿದೆ.

 ಈ ಹಿಂದಿನ ಆದೇಶ ಅನುಸರಿಸಿಲ್ಲ ಎಂದು ಆರೋಪಿಸಿ ಆರ್‌ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಹಾಗೂ ಇತರರು ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಸಲ್ಲಿಸಲಾಗುವ ಕುಂದುಕೊರತೆಗೆ ಸಂಬಂಧಿಸಿದ ಮನವಿಗಳನ್ನು ಕೇಂದ್ರ ಹಾಗೂ ರಾಜ್ಯ ಮಾಹಿತಿ ಆಯೋಗ ಪರಿಶೀಲನೆ ನಡೆಸುತ್ತದೆ.

 ಪ್ರತಿ ಆಯೋಗ ಮುಖ್ಯ ಮಾಹಿತಿ ಆಯುಕ್ತ ಹಾಗೂ 10 ಮಂದಿ ಮಾಹಿತಿ ಆಯುಕ್ತರನ್ನು ಹೊಂದಿರುತ್ತದೆ. ನ್ಯಾಯಾಲಯದ ನಿರ್ದೇಶನದಂತೆ ಹುದ್ದೆಗೆ ಆಯ್ಕೆಯಾದ ಹಾಗೂ ಶಾರ್ಟ್‌ ಲಿಸ್ಟ್ ಆದ ಹೆಸರುಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪ್ರಕಟಿಸುತ್ತಿಲ್ಲ ಎಂದು ದೂರುದಾರರು ಹೇಳಿದ್ದಾರೆ.

ಪಾರದರ್ಶಕ ರೀತಿಯಲ್ಲಿ ರಾಜ್ಯ ಮುಖ್ಯ ಮಾಹಿತಿ ಆಯುಕ್ತರು ಹಾಗೂ ಮಾಹಿತಿ ಆಯುಕ್ತರ ಹುದ್ದೆಗೆ ನೇಮಕ ನಡೆಸಲು ಕೂಡಲೇ ಕ್ರಮ ಕೈಗೊಳ್ಳಲು ಮಹಾರಾಷ್ಟ್ರ, ಆಂಧ್ರಪ್ರದೇಶ, ಒಡಿಶಾ ಸರಕಾರಕ್ಕೆ ನಿರ್ದೇಶ ನೀಡುವಂತೆ ದೂರುದಾರರು ಕೋರಿದ್ದರು. 2017 ಆಗಸ್ಟ್‌ನಲ್ಲಿ ಆರಂಭವಾಗಿರುವ ಆಂಧ್ರಪ್ರದೇಶ ಆಯೋಗ ಇಂದಿಗೂ ಮುಖ್ಯ ಮಾಹಿತಿ ಆಯುಕ್ತರಿಲ್ಲದೆ ಕಾರ್ಯಾಚರಿಸುತ್ತಿದೆ.

ಮಾಹಿತಿ ಹಕ್ಕು ಕಾಯ್ದೆ ಮನವಿಗಳ ಬಾಕಿಯನ್ನು ಕಡಿಮೆ ಮಾಡಲು ರಾಜ್ಯ ಮಾಹಿತಿ ಆಯೋಗದಲ್ಲಿರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ನ್ಯಾಯಾಲಯ ಡಿಸೆಂಬರ್‌ನಲ್ಲಿ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತ್ತು. ಕೇಂದ್ರ ಮಾಹಿತಿ ಆಯೋಗಕ್ಕೆ ಸದಸ್ಯರ ಆಯ್ಕೆ ಪ್ರಕ್ರಿಯೆಯನ್ನು ಬಹಿರಂಗಗೊಳಿಸುವಂತೆ ಹಾಗೂ ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಅನುಸರಿಸುವಂತೆ ನ್ಯಾಯಾಲಯ ಕೇಂದ್ರ ಸರಕಾರಕ್ಕೆ ಸೂಚಿಸಿತ್ತು.

ಕೇಂದ್ರ ಹಾಗೂ ರಾಜ್ಯ ಮಾಹಿತಿ ಆಯೋಗಗಳಲ್ಲಿ ಖಾಲಿ ಹುದ್ದೆಗಳನ್ನು ಗಡುವಿನ ಒಳಗೆ ಭರ್ತಿ ಮಾಡಿ ನಾಲ್ಕು ವಾರಗಳಲ್ಲಿ ಅಫಿದಾವಿತ್ ಸಲ್ಲಿಸುವಂತೆ 2018 ಜುಲೈಯಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ನಿರ್ದೇಶಿಸಿತ್ತು. ಅಲ್ಲದೆ, ಅಫಿದವಿತ್ ಸಲ್ಲಿಸಲು ವಿಫಲವಾದಲ್ಲಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಹಾಗೂ ರಾಜ್ಯಗಳಿಗೆ ಎಚ್ಚರಿಕೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News