ಪುಸ್ತಕ ಪ್ರೇಮಿ ಟಿಪ್ಪು

Update: 2019-11-06 18:20 GMT

ರಾಜ್ಯ ಸರಕಾರವು ಟಿಪ್ಪುಸುಲ್ತಾನರ ಕುರಿತ ಪಾಠಗಳನ್ನು ಶೈಕ್ಷಣಿಕ ಪಠ್ಯಪುಸ್ತಕಗಳಿಂದ ಹಿಂದೆಗೆಯಲು ಮುಂದಾಗಿದೆ. ಇದು ಒಂದು ರಾಜಕೀಯ ಷಡ್ಯಂತ್ರ. ಚರ್ಚೆಯ ಹಾದಿಯನ್ನೇ ದಿಕ್ಕು ತಪ್ಪಿಸುವ ಕುಯುಕ್ತಿಯಿದು. ಈ ಸಂದರ್ಭದಲ್ಲಿ ಟಿಪ್ಪುವಿನ ಜನಪರವಾದಂತಹ ವಿವಿಧ ಮುಖಗಳ ಕುರಿತ ಚರ್ಚೆ ಇನ್ನಷ್ಟು ಬಿರುಸಾಗಿ ಆಗಬೇಕಾದುದು ಕಾಲದ ತುರ್ತು. ಈ ನಿಟ್ಟಿನಲ್ಲಿ ಮಹಾನ್ ಪುಸ್ತಕ ಪ್ರೇಮಿ ಟಿಪ್ಪುವಿನ ಪುಸ್ತಕ ಪ್ರೇಮದ ಕುರಿತಂತಹ ಒಂದು ಟಿಪ್ಪಣಿ.

ಟಿಪ್ಪುವಿನ ಮದುವೆಗೆ ಮುಂಚೆ ಹೈದರ್ ಅಲಿ ಟಿಪ್ಪುವಿನಲ್ಲಿ ಕೇಳಿದರು. ‘‘ಮಗನೇ ನನ್ನದೆಲ್ಲವೂ ನಿನ್ನದೇ.... ಆದರೂ ನಿನ್ನ ಮದುವೆಯ ಸಂದರ್ಭದಲ್ಲಿ ನಿನ್ನ ಖುಷಿಯನ್ನು ಇಮ್ಮಡಿಗೊಳಿಸಲು ನಿನಗೇನಾದರೂ ಕೊಡಬೇಕೆಂದಿದ್ದೇನೆ....’’ ಅದಕ್ಕೆ ಟಿಪ್ಪು‘‘ನೀವು ಈಗಾಗಲೇ ಬಹಳಷ್ಟನ್ನು ಕೊಟ್ಟಿದ್ದೀರಿ... ನನಗೆ ಇನ್ನೇನು ಬೇಡ’’ ಎಂದಾಗ ಅಪ್ಪಹೈದರ್ ಪಟ್ಟು ಬಿಡದೇ ಒತ್ತಾಯಿಸಿದರು. ‘‘ಹಾಗಾದರೆ ನನಗೊಂದು ಗ್ರಂಥ ಭಂಡಾರ ನಿರ್ಮಿಸಿ ಕೊಡಿ’’ ಎಂದರು ಟಿಪ್ಪು. ಹೈದರ್ ಅಲಿಗೆ ಸೋಜಿಗವೆನಿಸಿತ್ತು. ಗ್ರಂಥ ಭಂಡಾರ...? ಅಂದರೆ ಪುಸ್ತಕಗಳು...?

ಹೈದರ್ ಅಲಿ ಅನಕ್ಷರಸ್ಥರಾಗಿದ್ದರು. ಅವರಿಗೆ ಲೆಕ್ಕ ಮಾತ್ರ ಗೊತ್ತಿತ್ತು. ಲೆಕ್ಕ ಬರೆದಿಡುವ ಪುಸ್ತಕಗಳ ಮಹತ್ವ ಮಾತ್ರ ತಿಳಿದಿತ್ತು. ಅದರಲ್ಲೂ ಬರಬೇಕಾಗಿದ್ದ ತೆರಿಗೆಗಳ ವಿವರಗಳಿದ್ದ ಪುಸ್ತಕಗಳ ಪ್ರಾಶಸ್ತ್ಯ ಮಾತ್ರ ತಿಳಿದಿತ್ತು. ಕುರ್‌ಆನ್, ಗೀತಾ, ತಾಲ್ಮಡ್, ಬೈಬಲ್, ಗುರು ಗ್ರಂಥ್ ಸಾಹಿಬ್ ಮುಂತಾದ ಪವಿತ್ರ ಗ್ರಂಥಗಳನ್ನು ಓದುತ್ತಿದ್ದವರನ್ನು ಹೈದರ್ ಅಲಿ ಗೌರವಿಸುತ್ತಿದ್ದರು. ಅಂತಹ ಪುಸ್ತಕಗಳು ಮನುಷ್ಯ ಕೆಡುಕು ಮಾಡುವುದರಿಂದ ದೂರವಿರಿಸುತ್ತದೆಂದು ಹೈದರ್ ನಂಬಿದ್ದರು. ಟಿಪ್ಪುವಿನ ಗುರುಗಳಾದ ಮೌಲವಿ ಉಬೇದುಲ್ಲಾ ಮತ್ತು ಗೋವರ್ಧನ ಪಂಡಿತರು ಟಿಪ್ಪುವಿಗೆ ಸಾಕಷ್ಟು ಪುಸ್ತಕಗಳನ್ನು ಉಡುಗೊರೆಯಾಗಿ ಕೊಟ್ಟು ಹೋಗಿದ್ದರು. ಟಿಪ್ಪುವಿನ ದೊಡ್ಡ ಅಭ್ಯಾಸದ ಕೋಣೆಯ ತುಂಬಾ ಪುಸ್ತಕಗಳೇ ತುಂಬಿದ್ದವು. ಟಿಪ್ಪುಇನ್ನೂ ಪುಸ್ತಕಗಳು ಬೇಕೆನ್ನುವುದಾದರೆ ಹೈದರ್ ಬೇಡವೆನ್ನಲಾರರು. ಹೈದರ್ ರಾಜ್ಯದಲ್ಲಿರುವ ಎಲ್ಲಾ ಪುಸ್ತಕಗಳನ್ನು ಖರೀದಿಸಿ ಟಿಪ್ಪುವಿಗೆ ಕೊಡಲು ಪ್ರಧಾನಿ ಪೂರ್ಣಯ್ಯಗೆ ಆಜ್ಞೆ ಮಾಡಿದರು. ಟಿಪ್ಪುತನ್ನ ಮನಸ್ಸಿನಲ್ಲಿರುವ ದೊಡ್ಡ ಯೋಜನೆಯನ್ನು ಹೇಳಿದರು. ‘‘ನಾನು ಎಲ್ಲಾ ಸಂಸ್ಕೃತಿಗಳ, ಎಲ್ಲಾ ರಾಷ್ಟ್ರಗಳ ಪುಸ್ತಕಗಳನ್ನು ಸಂಗ್ರಹಿಸಬೇಕೆಂದಿದ್ದೇನೆ. ಆಗ ನಿನ್ನ ಕುರಿತೂ ಮುಂದೊಂದು ದಿನ ಜನರು ಓದಬಹುದು’’ ಎಂದು ಭವಿಷ್ಯ ನುಡಿದಿದ್ದರು. ‘‘ಆದರೆ ಬೇರೆ ದೇಶಗಳ ಪುಸ್ತಕಗಳು ಬೇರೆ ಭಾಷೆಯಲ್ಲಿರುತ್ತವಲ್ಲವೇ?’’ ಎಂದು ಹೈದರ್ ಪ್ರಶ್ನಿಸಿದರು.

ಅವುಗಳನ್ನು ಭಾಷಾಂತರ ಮಾಡಿಸಬೇಕು ಎಂದು ಟಿಪ್ಪು ಹೇಳಿದರು. ಪರಕೀಯ ಭಾಷೆಗಳಲ್ಲಿ ಟಿಪ್ಪುವಿಗೆ ಪರ್ಷಿಯನ್ ಭಾಷೆ ತುಂಬಾ ಚೆನ್ನಾಗಿ ಗೊತ್ತಿತ್ತು. ಫ್ರೆಂಚ್ ಮತ್ತು ಇಂಗ್ಲಿಷ್ ಭಾಷೆಗಳನ್ನೂ ಟಿಪ್ಪುಅಭ್ಯಾಸ ಮಾಡಿದ್ದರಾದರೂ ಅವುಗಳ ಮೇಲೆ ಹಿಡಿತ ಸಾಧಿಸಲಾಗಿರಲಿಲ್ಲ. ಟಿಪ್ಪುವಿಗೆ ಕನ್ನಡ, ಹಿಂದಿ ಮತ್ತು ಉರ್ದುವಲ್ಲದೆ ಅಲ್ಪ ಸ್ವಲ್ಪ ಮಲಯಾಳಂ ಮತ್ತು ತಮಿಳು ಗೊತ್ತಿತ್ತು. ಪೂರ್ಣಯ್ಯನ ಉಸ್ತುವಾರಿಯಲ್ಲಿ ಹೈದರ್ ಅಲಿಯ ಆಜ್ಞೆ ಮೇರೆಗೆ ಟಿಪ್ಪುವಿಗಾಗಿ ಸ್ಥಾಪಿಸಿದ ಗ್ರಂಥಾಲಯಕ್ಕೆ ನೂರುಲ್ ಅಮೀನ್ ಎಂಬವನನ್ನು ಮುಖ್ಯ ಗ್ರಂಥಾಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಅವನ ಸಹಾಯಕ ಗ್ರಂಥಾಧಿಕಾರಿಗಳು, ಪುಸ್ತಕ ಪಟ್ಟಿ ತಯಾರಕರು, ಸಂಶೋಧನಾ ಸಹಾಯಕರು, ಪರಿಶೀಲಕರು ಮುಂತಾದ ಹುದ್ದೆಗಳಿಗೆ ದೇಶ ವಿದೇಶಗಳ ವಿಷಯ ತಜ್ಞರನ್ನು ನೇಮಿಸಲಾಗಿತ್ತು.

ಫ್ರೆಂಚ್, ಜರ್ಮನ್, ಇಂಗ್ಲಿಷ್, ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳ ಅನುವಾದಕರನ್ನೂ ನೇಮಿಸಲಾಗಿತ್ತು. ಕೇಂದ್ರ ಗ್ರಂಥ ಭಂಡಾರವಲ್ಲದೇ ರಾಜ್ಯದ ವಿವಿಧೆಡೆ ಚಿಕ್ಕ ಪುಸ್ತಕ ಭಂಡಾರಗಳನ್ನೂ ಟಿಪ್ಪುಸ್ಥಾಪಿಸಿದ್ದರು. ಓದುವುದು ಉಸಿರಾಡುವಷ್ಟೇ ಸುಲಭವಾಗಿರಬೇಕು ಎಂದು ಟಿಪ್ಪುಪ್ರತಿಪಾದಿಸುತ್ತಿದ್ದರು. ಆ ಕಾಲದಲ್ಲೇ ಗ್ರಂಥ ಭಂಡಾರಗಳಿಗೆ ಹೋಗಿ ಓದಲು ಬಾಲಕ-ಬಾಲಕಿಯರಿಗೆ ಪ್ರೋತ್ಸಾಹ ನೀಡಬೇಕೆಂದು ಟಿಪ್ಪುಆದೇಶಿಸಿದ್ದರು. ಟಿಪ್ಪುವಿನ ಗ್ರಂಥ ಭಂಡಾರಕ್ಕೆ ಪುಸ್ತಕಗಳನ್ನು ಆಯ್ಕೆ ಮಾಡಲು ವಿದ್ವಾಂಸರ ಸಲಹೆಗಳನ್ನು ಆಗಾಗ ಕೇಳಲಾಗುತ್ತಿತ್ತು. ಅಂತಹ ವಿದ್ವಾಂಸರಲ್ಲಿ ಬಹುಮುಖ ಪ್ರತಿಭೆಯ ಫ್ರೆಂಚ್ ವಿದ್ವಾಂಸ ಫಿಯರಿ ಕೆರನ್ ಡ ಬ್ಯೂಮಾರ್ಕೆಸ್ ಕೂಡಾ ಒಬ್ಬನಾಗಿದ್ದ. ಆತ ಸುಪ್ರಸಿದ್ಧ ಬಾರ್ಬರ್ ಆಫ್ ಸೆವಿಲೆ ಹಾಗೂ ಫಿಗಾರೋ ಎಂಬ ಗ್ರಂಥಗಳನ್ನು ಬರೆದಿದ್ದ. ಆತ ಫ್ರೆಂಚ್ ಸಂಸ್ಕೃತಿ, ಸಾಹಿತ್ಯ, ಕಲೆ ಮತ್ತು ತತ್ವಶಾಸ್ತ್ರಗಳ ಕುರಿತ ಶ್ರೇಷ್ಠ ಪುಸ್ತಕಗಳು ಟಿಪ್ಪುವಿನ ಗ್ರಂಥ ಭಂಡಾರ ಸೇರಲು ಕಾರಣಕರ್ತನಾಗಿದ್ದ. ಆತ ಸೂಚಿಸಿದ ಪುಸ್ತಕಗಳಲ್ಲಿ ಟಿಪ್ಪುವಿನ ಮೇಲೆ ಅತ್ಯಂತ ಪ್ರಭಾವ ಬೀರಿದ ಗ್ರಂಥ ಥಾಮಸ್ ಜೆಪರ್ಸನ್ ಬರೆದಿದ್ದ ಅಮೆರಿಕ ಸ್ವಾತಂತ್ರ್ಯ ಘೋಷಣೆ. ಅದು ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯದ ಕುರಿತ ಶ್ರೇಷ್ಠ ಕೃತಿಯಾಗಿತ್ತು. ಟಿಪ್ಪುಅದನ್ನು ಆಗಾಗ ಓದುತ್ತಿದ್ದರು. ಅದು ಟಿಪ್ಪುವಿನ ಮನ ಕಲಕಿತ್ತು. ಅದು ಬ್ರಿಟಿಷರ ವಿರುದ್ಧದ ಅವರ ಹೋರಾಟದ ಕೆಚ್ಚನ್ನು ಇಮ್ಮಡಿಗೊಳಿಸಿತ್ತು.

ಅದರಲ್ಲಿನ ಒಂದು ಅಂಶವು ಟಿಪ್ಪುವಿನ ವ್ಯಕ್ತಿತ್ವದ ಮೇಲೆಯೂ ಅಪಾರ ಪ್ರಭಾವ ಬೀರಿದ್ದನ್ನು ನಾವು ಟಿಪ್ಪುವಿನ ಮಾನವ ಹಕ್ಕುಗಳ ಪರ ಮತ್ತು ಮತೀಯ ಸೌಹಾರ್ದದ ಕಾನೂನಿನಲ್ಲಿ ಕಾಣಲು ಸಾಧ್ಯ. ಟಿಪ್ಪುವಿನ ಮೇಲೆ ಅಪಾರ ಪ್ರಭಾವ ಬೀರಿದ ಥಾಮಸ್ ಜೆಫರ್ಸನ್ ಅವರ ಅಮೆರಿಕ ಸ್ವಾತಂತ್ರ್ಯ ಘೋಷಣೆ ಗ್ರಂಥದ ಆ ಪ್ಯಾರಾ ಇಂತಿದೆ. ‘‘ನಾವು ಈ ಸ್ವಯಂ ವೇದ್ಯ ಸತ್ಯಗಳನ್ನು ಎತ್ತಿ ಹಿಡಿಯುತ್ತೇವೆ. ಎಲ್ಲಾ ಮಾನವರು ಸಮಾನರಾಗಿಯೇ ಸೃಷ್ಟಿಯಾದವರು. ಅವರ ಸೃಷ್ಟಿಕರ್ತ ಅವರಿಗೆ ಅವರಿಂದ ಬೇರ್ಪಡಿಸಲಾಗದಂತಹ ಹಕ್ಕುಗಳನ್ನು ಕೊಟ್ಟಿದ್ದಾನೆ. ಆ ಹಕ್ಕುಗಳಲ್ಲಿ ಜೀವನ, ಸ್ವಾತಂತ್ರ್ಯ ಮತ್ತು ಸಂತೋಷದ ಅನ್ವೇಷಣೆಗಳೂ ಸೇರಿವೆ. ಈ ಹಕ್ಕುಗಳ ರಕ್ಷಣೆಗಾಗಿ ಪ್ರಜೆಗಳು ಸರಕಾರವನ್ನು ರಚಿಸಿಕೊಳ್ಳುತ್ತಾರೆ. ಸರಕಾರಗಳಿಗೆ ನ್ಯಾಯಬದ್ಧ ಅಧಿಕಾರ ದೊರಕುವುದು ಅವುಗಳ ಪ್ರಜೆಗಳ ಒಪ್ಪಿಗೆಯಿಂದಾಗಿದೆ. ಯಾವ ಸರಕಾರವಾದರೂ ಈ ಉದ್ದೇಶಗಳಿಗೆ ಭಂಗ ತಂದರೆ ಆ ಸರಕಾರವನ್ನು ಮಾರ್ಪಡಿಸುವ ಅಥವಾ ತೆಗೆದು ಹಾಕುವ ಅಧಿಕಾರ ಆ ಪ್ರಜೆಗಳಿಗೆ ಇದೆ. ಹಾಗೂ ತಮ್ಮ ಸುರಕ್ಷತೆ ಮತ್ತು ಸಂತೋಷಗಳನ್ನು ಕಾಪಾಡಬಹುದಾದಂತಹ ಸಿದ್ಧಾಂತಗಳ ತಳಹದಿಯ ಮೇಲೆ ಅಧಿಕಾರ ಬಳಸಿ ಕಾರ್ಯನಿರ್ವಹಿಸುವಂತಹ ಹೊಸ ಸರಕಾರವನ್ನು ಅವರು ಸ್ಥಾಪಿಸಿಕೊಳ್ಳಬಹುದು.’’

ಹಾಗೆ ದೇಶ ವಿದೇಶಗಳ ಅತ್ಯಂತ ಮೌಲ್ಯಯುತ ಪುಸ್ತಕಗಳನ್ನು ಟಿಪ್ಪುಸಂಗ್ರಹಿಸಿದ್ದರು. ಅವರು ಅದೆಂತಹ ಪುಸ್ತಕ ಪ್ರೇಮಿಯಾಗಿದ್ದರೆಂದರೆ ‘‘ಇವೇ ನನ್ನ ಸಂಪತ್ತು. ಈ ಸಂಪತ್ತು ಬೆಳ್ಳಿ-ಬಂಗಾರಗಳಿಗಿಂತಲೂ ಮೌಲ್ಯಯುತವಾದವುಗಳು ಮತ್ತು ಹೆಚ್ಚು ಶಾಶ್ವತವಾದವುಗಳು. ಇವುಗಳನ್ನು ಯಾರೂ ಕದಿಯಲಾರರು ಮತ್ತು ನಾಶಪಡಿಸಲಾರರು’’ ಎಂದು ಟಿಪ್ಪುಹೇಳುತ್ತಿದ್ದರು. ಆದರೆ ಅವರ ಲೆಕ್ಕಾಚಾರ ತಪ್ಪಾಗಿತ್ತು. ಬ್ರಿಟಿಷರು ಶ್ರೀರಂಗಪಟ್ಟಣವನ್ನು ಕೈ ವಶಪಡಿಸಿಕೊಂಡಾಗ ಮೊದಲು ದಾಳಿಗೀಡಾದವುಗಳಲ್ಲಿ ಟಿಪ್ಪುವಿನ ಗ್ರಂಥ ಭಂಡಾರವೂ ಒಂದಾಗಿತ್ತು. ಇಂತಹ ದೂರದೃಷ್ಟಿಯ ರಾಜನನ್ನು ನಾವು ಇತಿಹಾಸದಲ್ಲೆಲ್ಲೂ ಕಾಣಲು ಸಾಧ್ಯವಿಲ್ಲ 

Writer - ಇಸ್ಮತ್ ಪಜೀರ್

contributor

Editor - ಇಸ್ಮತ್ ಪಜೀರ್

contributor

Similar News