ಎಂದೂ ಬಿಡುಗಡೆಯಾಗದ ಕೈದಿಗಳ ಕಥನ ಈ ‘ದ್ವೀಪ’

Update: 2019-11-07 05:36 GMT

ರಚನೆ: ಅಥೋಲ್ ಫುಗಾರ್ಡ್

ಅನುವಾದ: ಎಸ್.ಆರ್. ರಮೇಶ್

ನಿರ್ದೇಶನ: ಲಕ್ಷ್ಮಣ್ ಕೆ.ಪಿ.

ನಟನೆ: ಚಂದ್ರಹಾಸ್ ಉಳ್ಳಾಲ ಹಾಗೂ ಪ್ರಭಾಕರ್ ಕಾಪಿಕಾಡ್

ಬದುಕನ್ನು ಒಪ್ಪಿಕೊಂಡ ಮೇಲೆ ಪ್ರಜಾಸತ್ತೆ ವ್ಯವಸ್ಥೆಯಲ್ಲಿ ಪ್ರತಿಭಟನೆ, ಹೋರಾಟ ಅನಿವಾರ್ಯ. ಆದರೆ, ಪ್ರತಿರೋಧವನ್ನು, ವಾಸ್ತವದ ನಗ್ನತೆಯನ್ನು ಪ್ರಭುತ್ವ ಯಾವುದೇ ಕಾಲ, ದೇಶದಲ್ಲಿ ಸಹಿಸಿದ್ದು ಇಲ್ಲವೇ ಇಲ್ಲ. ಹೀಗೆ ಕಾಲಕಾಲಕ್ಕೆ ಪ್ರತಿರೋಧ ಒಡ್ಡಿದವರನ್ನು ಹಣಿಯಲು ಪ್ರಭುತ್ವವೆನ್ನುವುದು ಹೊಸ ಹೊಸ ತಂತ್ರಗಳ ಪ್ರಯೋಗ ಮಾಡುತ್ತಲೇ ಇರುತ್ತದೆ. ಇತಿಹಾಸದ ಪುಟಗಳಲ್ಲಿ ರಾಜಾಜ್ಞೆ ಮೀರಿ, ಸರ್ವಾಧಿಕಾರವನ್ನು ಪ್ರಶ್ನಿಸಿ ಬಲಿಯಾದವರ ಸಂಖ್ಯೆಗೇನೂ ಕಡಿಮೆಯಿಲ್ಲ. ಇತ್ತೀಚೆಗೆ ಮಂಗಳೂರಿನ ಪಾದುವ ಥಿಯೇಟರ್ ಹಬ್‌ನ ವೀಕೆಂಡ್ ನಾಟಕ ಸರಣಿಯಲ್ಲಿ ‘ಆಯನ ನಾಟಕದ ಮನೆ’ ಅಭಿನಯಿಸಿದ ‘ದ್ವೀಪ’ ನಾಟಕ ಕೂಡಾ ಇದಕ್ಕೆ ಪುರಾವೆ ನೀಡುವಂತಿದೆ.

 ಚಳವಳಿಯಲ್ಲಿ ಭಾಗವಹಿಸಿ ಪ್ರಭುತ್ವದ ಸರ್ವಾಧಿಕಾರಿ ಧೋರಣೆ ವಿರುದ್ಧ ಘೋಷಣೆ ಕೂಗಿ ಜೈಲು ಸೇರಿದ ಹೋರಾಟಗಾರರಿಬ್ಬರು ದೇಶ ದ್ರೋಹದ ಚಟುವಟಿಕೆಯಲ್ಲಿ ತೊಡಗಿರುವ ಆಪಾದನೆಯ ಮೇಲೆ ಜೀವಾವಧಿ ಶಿಕ್ಷೆಗೆ ಒಳಗಾಗಿ ‘ದ್ವೀಪ’ಕ್ಕೆ ಗಡಿಪಾರು ಮಾಡಲ್ಪಟ್ಟ ಕೈದಿಗಳ ಕಥನವೇ ಈ ‘ದ್ವೀಪ’ ನಾಟಕ. ಇಲ್ಲಿನ ಕಥನ, ಪಾತ್ರಗಳು, ರೂಪಕಗಳು ಪ್ರಸಕ್ತ ದಿನಗಳಲ್ಲಿನ ಪ್ರಭುತ್ವಕ್ಕೆ ಕನ್ನಡಿ ಹಿಡಿಯುತ್ತವೆ. ಪ್ರಜೆಗಳ ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕಲು ಏನೆಲ್ಲ ಅಸ್ತ್ರಗಳನ್ನು ಬಳಸಲಾಗುತ್ತಿದೆ ಎನ್ನ್ನುವುದಕ್ಕೆ ನಾಟಕ ಸಾಕ್ಷಿ ಹೇಳುತ್ತದೆ.

‘ದ್ವೀಪ’ಕ್ಕೆ ಗಡಿಪಾರು ಮಾಡಲ್ಪಟ್ಟ ಈ ಇಬ್ಬರು ಕೈದಿಗಳ ಬಾಲ್ಯದ ದಿನಗಳು, ಆಗ ಕಂಡಿದ್ದ ಕನಸುಗಳು ನಿರರ್ಥಕವಾಗಿ ಕಣ್ಣಮುಂದೆ ಹಾದು ಹೋಗುತ್ತವೆ. ಹೆಂಡಿರು ಮಕ್ಕಳ ಚಿತ್ರ ಚಿಟ್ಟೆಯಾಗಿ ಸುತ್ತ ಹಾರುತ್ತವೆ. ಸಮುದ್ರದ ಮರಳಿನಲ್ಲಿ ಅರಮನೆ ಕಟ್ಟಿದ್ದು, ಅಲೆದಾಡಿದ್ದು, ಹೋರಾಟದ ದಿನಗಳು, ರಕ್ತದಲ್ಲಿ ಒದ್ದೆಯಾದ ಬಟ್ಟೆ, ಪೊಲೀಸರ ಒದೆ ಎಲ್ಲ ಅಂದರೆ ಎಲ್ಲವನ್ನೂ ನೆನಪಿಗೆ ತಂದುಕೊಳ್ಳುವ ಕೈದಿಗಳು, ಪರಸ್ಪರ ನಗೆ, ವಿಷಾದವನ್ನು ಎರಚಾಡಿಕೊಂಡು ತೋಯ್ದು ತಪ್ಪಿಡಿಯಾಗುತ್ತಾರೆ. ದಿನದ ಮತ್ತು ಪ್ರತಿ ಮಾತಿನ ಕೊನೆಗೆ ಮೂಡಿ ಮರೆಯಾಗುವ ಬಿಡುಗಡೆಯ ಆಸೆ, ಅವರೊಳಗೆ ಒಂದು ಬಗೆಯ ಏಕಾಕಿತನವನ್ನೂ, ಪ್ರತಿರೋಧವನ್ನೂ ಹೆಚ್ಚಿಸುತ್ತದೆ. ಬಿಡುಗಡೆಯನ್ನು ಹಪಹಪಿಸಿದಷ್ಟು, ಕಾಲದ ಬಗ್ಗೆ ಯೋಚಿಸಿದಷ್ಟು ದೀರ್ಘವಾಗುತ್ತಿದೆ ಎನಿಸುತ್ತದೆ. ‘ಯಾವಾಗ ಹೊರಗೆ ಕಳುಹಿಸುತ್ತಾರೋ? ಎಂದು ಮಾರುದ್ದನೆಯ ನಿಟ್ಟುಸಿರು ಬಿಡುವ ಕೈದಿಯೊಬ್ಬ ‘ಇಡೀ ಸಮುದ್ರದ ನೀರನ್ನು ಕುಡಿದು ಉಚ್ಚಿ ಹೊಯ್ದೇನು’ ಎಂದು ಜೈಲರ್ ಬಗ್ಗೆ ರೋಸಿ ಹೋಗುತ್ತಾನೆ. ದಿನಾ ಅವವೇ ಪ್ರಶ್ನೆಗಳು, ಅದೇ ಚಡಪಡಿಕೆ, ನರಳಾಟ ಮರುಕಳಿಸುತ್ತದೇ ಹೊರತು ಅವರ ಪಾಲಿಗೆ ಬಿಡುಗಡೆ ಎನ್ನುವ ದಿನ ಬರುವುದೇ ಇಲ್ಲ. ‘‘ಎಷ್ಟು ದಿನಾಂತ ಹೀಗೆ ಇದೇ ಪ್ರಶ್ನೆ ಕೇಳ್ತಿಯಾ? ವಾಪಾಸ್ ಕಳುಹಿಸಲಿಕ್ಕಲ್ಲ ನಮ್ಮನ್ನಿಲ್ಲಿ ಇಟ್ಟುಕೊಂಡಿರುವುದು’’ ಎನ್ನುವ ಇನ್ನೋರ್ವ ಕೈದಿಯ ಮಾತಿಗೆ ಇನ್ನಷ್ಟು ಧೃತಿಗೆಡುವ ಕೈದಿ ‘ಐ ಹೇಟ್ ಯು’ ಎಂದು ಸಿಟ್ಟಿಗೇಳುತ್ತಾನೆ. ಪರಸ್ಪರ ಜಗಳಕ್ಕಿಳಿಯುತ್ತಾರೆ ಕೂಡಾ. ಏನೇ ಆದರೂ ಜೈಲು ವಾಸ ಮತ್ತು ಒಟ್ಟಿಗೆ ಬದುಕುವ ಅನಿವಾರ್ಯ ವಾಸ್ತವ ಅರಿವಿಗೆ ಬಂದಾಗ ಮಾತು ಪರಸ್ಪರ ಹಿತ ನೀಡುವ ಕಡೆಗೆ ಹೊರಳುತ್ತವೆ. ಮತ್ತೆ ಜೀವದ ಗೆಳೆಯರಾಗುತ್ತಾರೆ. ಹೀಗೆ ಒಂದಿನಿತೂ ಬದಲಾವಣೆಯಾಗದ ಕೈದಿಗಳ ದಿನಚರಿಯ ನಡುವೆ ರಾಜಾಜ್ಞೆ ಮೀರಿ ಆತ್ಮಸಾಕ್ಷಿಯ ಕರೆಗೆ ಓಗೊಟ್ಟು ಒಡಹುಟ್ಟಿದ ಸಹೋದರನ ಅಂತ್ಯ ಸಂಸ್ಕಾರ ಮಾಡಿ ಗಲ್ಲುಶಿಕ್ಷೆಗೆ ಒಳಪಟ್ಟ ‘ಅಂತಿಗೊನೆ ವಿಚಾರಣೆ ಮತ್ತು ಶಿಕ್ಷೆ’ ಎಂಬ ನಾಟಕ ಅಭಿನಯಿಸಬೇಕಾದ ಅನಿವಾರ್ಯ ಎದುರಾಗುತ್ತದೆ. ಜೀವಾವಧಿ ಶಿಕ್ಷೆಗೆ ಒಳಗಾದ ಕೈದಿಯೊಬ್ಬ ತನ್ನಂತೆ ಯಾವ ತಪ್ಪನ್ನೂ ಮಾಡದೆ ಗಲ್ಲು ಶಿಕ್ಷೆಗೆ ಒಳಗಾದ ‘ಅಂತಿಗೊನೆ’ ಪಾತ್ರ ಅಭಿನಯಿಸಬೇಕಾಗಿರುವುದು ಆತನೊಳಗೆ ಸಹಜವಾಗಿ ಸಂಕಟವನ್ನುಂಟು ಮಾಡುತ್ತದೆ. ಅಲ್ಲದೆ, ‘ಅಂತಿಗೊನೆ’ ನಾಟಕ ಪ್ರತಿರೋಧದ ಪ್ರತೀಕವಾಗಿಯೂ ಕಾಣುತ್ತದೆ. ನಾಟಕದ ತಯಾರಿಯಲ್ಲಿರುವಾಗಲೇ ಒಬ್ಬ ಕೈದಿಗೆ 90 ದಿನಗಳಲ್ಲಿ ಅನಿರೀಕ್ಷಿತ ಬಿಡುಗಡೆಯಾಗುವ ಸುಯೋಗದ ಸುದ್ದಿ ತಿಳಿಯುತ್ತದೆ. ಇನ್ನೆಂದೂ ಚಳವಳಿ, ಆಂದೋಲನದಲ್ಲಿ ಭಾಗವಹಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟು ಬಂದಿರುವ ಆ ಕೈದಿ ‘‘ಮೊದಲ ಬಾರಿಗೆ ದ್ವೀಪದಲ್ಲಿ ಕೈ ಬೀಸಿ ನಡೆದೆ’’ ಎನ್ನುವ ಮಾತಿನೊಳಗೆ ಖುಷಿಯೋ, ವಿಷಾದವೋ ಮೆತ್ತಿಕೊಂಡಿರುತ್ತದೆ. ಬಿಡುಗಡೆಯ ಬಗ್ಗೆ ಆತನ ಸಹ ಕೈದಿ ಆಡುವ ಮಾತುಗಳು ಇಂದಿನ ರಾಜಕೀಯ ವ್ಯವಸ್ಥೆಯನ್ನು ನಗ್ನಗೊಳಿಸುತ್ತವೆ. ‘‘ಹೀಗೆ ಜೈಲಿನಿಂದ ಹೊರ ಹೋಗಿ, ಯಾವುದೋ ರಾಜಕೀಯ ಪಕ್ಷ ಸೇರಿ, ನಿಗಮ ಮಂಡಳಿಯ ಅಧ್ಯಕ್ಷನಾಗಿ, ಅವಕಾಶ ಸಿಕ್ಕಿದರೆ, ಮುಖ್ಯಮಂತ್ರಿಯೂ ಆಗಿ, ಕೊನೆಗೆ ಪ್ರಭುತ್ವದ ವಿರುದ್ಧ ಹೋರಾಡುವವರೆಲ್ಲ ಮೂರ್ಖರು ಎಂದು ಗೇಲಿ ಮಾಡುವವರಲ್ಲಿ ನೀನೂ ಒಬ್ಬನಾಗುವೆ’’ ಎಂದು ಮೂದಲಿಸುತ್ತಾನೆ. ‘‘ಓ ನನ್ನ ಜನರೇ ಹಗೆಯನ್ನು ಬಿತ್ತಿ ಹಗೆಯನ್ನು ಬೆಳೆಯುವ ಈ ದುರಿತ ಕಾಲದಲ್ಲಿ ಮೌನವಾಗಿ ಬದುಕುವುದಕ್ಕಿಂತ ನನ್ನ ಸಾವನ್ನು ಬದುಕಲು ದ್ವೀಪಕ್ಕೆ ಬಂದಿರುವೆ’’ ಎಂದು ಸಾರುವ ‘ಅಂತಿಗೊನೆ’ ಎನ್ನುವ ದುರಂತ ನಾಟಕವನ್ನು ಅಭಿನಯಿಸಿದ್ದಕ್ಕೆ ಸೆಲ್ ನಂ.3ರ ಈ ಇಬ್ಬರು ಕೈದಿಗಳನ್ನು ಮತ್ತೆ ಒದ್ದು ಒಳಹಾಕುವ ದೃಶ್ಯದ ಮೂಲಕ ನಾಟಕ ಅಂತ್ಯಗೊಳ್ಳುತ್ತದೆ. ಪ್ರೇಕ್ಷಕರ ಮುಖದಲ್ಲಿನ ವಿಷಾದ, ಕಣ್ಣಂಚಲ್ಲಿ ಮೂಡಿದ ಹನಿ ಹರಳುಗಟ್ಟುತ್ತದೆ. ಇಂತಹದ್ದೊಂದು ನಾಟಕದಲ್ಲಿ ಅಭಿನಯಿಸಿದ ಹಿರಿಯ ರಂಗಭೂಮಿ ಹಾಗೂ ಸಿನೆಮಾ ನಟರಾದ ಚಂದ್ರಹಾಸ್ ಉಳ್ಳಾಲ ಮತ್ತು ಪ್ರಭಾಕರ್ ಕಾಪಿಕಾಡ್ ಅವರ ನಟನೆ ಮನೋಜ್ಞವಾಗಿದೆ. ತಮ್ಮ ಎಂದಿನ ಹಾವ, ಭಾವಗಳ ಮೂಲಕ ನಾಟಕದ ಆಶಯ ಪ್ರೇಕ್ಷಕನ ಮನಮುಟ್ಟಿಸುವಲ್ಲಿ ಸಫಲರಾಗಿದ್ದಾರೆ. ನಾಟಕದುದ್ದಕ್ಕೂ ಬಳಸಿದ ಸಂಕೇತಗಳು, ರೂಪಕಗಳು ಅತ್ಯಂತ ಅರ್ಥಪೂರ್ಣವಾಗಿವೆ. ನಾಟಕದ ಜೀವಾಳವಾಗಿರುವ ಹಿನ್ನೆಲೆ ಸಂಗೀತ ತಣ್ಣಗೆ ಆವರಿಸಿಕೊಂಡಿದೆ.

Writer - ಕಳಕೇಶ್ ಗೊರವರ, ರಾಜೂರ

contributor

Editor - ಕಳಕೇಶ್ ಗೊರವರ, ರಾಜೂರ

contributor

Similar News

ಜಗದಗಲ
ಜಗ ದಗಲ