ಮಗನ ಓಸಿಐ ಮಾನ್ಯತೆ ರದ್ದು: ಅಂಕಣಕಾರ್ತಿ ತಲ್ವೀನ್ ಸಿಂಗ್ ಹೇಳಿದ್ದೇನು?

Update: 2019-11-09 04:06 GMT

ಹೊಸದಿಲ್ಲಿ, ನ.9: ಖ್ಯಾತ ಲೇಖಕ ಅತೀಶ್ ತಸೀರ್ ಅವರಿಗೆ ನೀಡಿದ್ದ ಸಾಗರೋತ್ತರ ಭಾರತೀಯ ಪ್ರಜೆ (ಓಸಿಐ) ಸ್ಥಾನಮಾನವನ್ನು ರದ್ದುಪಡಿಸಿರುವ ಪ್ರಕರಣದಲ್ಲಿ ತಾಯಿ ಹಾಗೂ ಅಂಕಣಕಾರ್ತಿ ತಲ್ವೀನ್ ಸಿಂಗ್ ಮಗನನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

"ಅತೀಶ್ ತಾಯಿಗೆ ಭಾರತೀಯ ಪೌರತ್ವ ಇದೆ. ಗೃಹಸಚಿವರಿಗೆ ಇಷ್ಟವಾಗದ ಲೇಖನವೊಂದನ್ನು ಆತ ಬರೆಯುವವರೆಗೂ ಭಾರತದಲ್ಲಿ ವಾಸಿಸುವ ಅವರ ಹಕ್ಕನ್ನು ಎಂದೂ ಪ್ರಶ್ನಿಸಿರಲಿಲ್ಲ" ಎಂದು ಅವರು ಟ್ವೀಟ್ ಮಾಡಿದ್ದಾರೆ.

"ಸೋನಿಯಾ ಗಾಂಧಿಯವರನ್ನು ನಾನು ಟೀಕಿಸಿದಷ್ಟೂ ಯಾರೂ ಟೀಕಿಸಿರಲಾರರು; ಆದರೆ ಕಾಂಗ್ರೆಸ್ ಪಕ್ಷ ಇಂಥ ಶಿಕ್ಷಾ ಕ್ರಮಕ್ಕೆ ಮುಂದಾಗಲಿಲ್ಲ. ಸೋನಿಯಾ ಗಾಂಧಿಯವರು ತಮ್ಮದೇ ವಿಧಾನದಲ್ಲಿ ಪ್ರತೀಕಾರ ತೆಗೆದುಕೊಂಡರು. ಆದರೆ ನನ್ನ ಮಗನಿಗೆ ಹಾನಿ ಮಾಡುವ ಪ್ರಯತ್ನ ಮಾಡಲಿಲ್ಲ" ಎಂದು ಮತ್ತೊಂದು ಟ್ವೀಟ್‌ಗೆ ಉತ್ತರವಾಗಿ ತಲ್ವೀನ್ ಟ್ವೀಟ್ ಮಾಡಿದ್ದಾರೆ.

ಈ ಮಧ್ಯೆ ಕೇಂದ್ರದ ಕ್ರಮಕ್ಕೆ ಹಲವು ಮಂದಿ ವಿರೋಧ ಪಕ್ಷಗಳ ಮುಖಂಡರು, ಸಮಾಜ ವಿಜ್ಞಾನಿಗಳು ಮತ್ತು ಮಾನವ ಹಕ್ಕು ಸಂಘಟನೆಗಳ ಕಾರ್ಯಕರ್ಯರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.

ಅತೀಶ್, ತಲ್ವೀನ್ ಸಿಂಗ್ ಹಾಗೂ ಪಾಕಿಸ್ತಾನಿ ರಾಜಕಾರಣಿ ಸಲ್ಮಾನ್ ತಸೀರ್ ಅವರ ಮಗ. ಪಾಕಿಸ್ತಾನದ ಧರ್ಮನಿಂದನೆ ಕಾಯ್ದೆಯ ವಿರುದ್ಧ ಮಾತನಾಡಿದ್ದಕ್ಕಾಗಿ ತಸೀರ್ ಅವರನ್ನು 2011ರಲ್ಲಿ ಹತ್ಯೆ ಮಾಡಲಾಗಿತ್ತು. ಮೋದಿ ವಿರುದ್ಧ "ಡಿವೈಡರ್ ಇನ್ ಚೀಫ್" ಶೀರ್ಷಿಕೆಯಡಿ ಟೈಮ್ ನಿಯತಕಾಲಿಕದಲ್ಲಿ ಲೇಖನ ಬರೆದದ್ದಕ್ಕೆ ಪ್ರತೀಕಾರವಾಗಿ ಅತೀಶ್‌ಗೆ ನೀಡಿದ್ದ ಸಾಗರೋತ್ತರ ಭಾರತೀಯ ಪ್ರಜೆ ಸ್ಥಾನಮಾನವನ್ನು ಕಿತ್ತುಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಸ್ವತಃ ಅತೀಶ್ ತಮ್ಮ ಲೇಖನದಲ್ಲಿ ಶುಕ್ರವಾರ "ನಾನು ಭಾರತೀಯ. ಸರ್ಕಾರ ಏಕೆ ನನ್ನನ್ನು ಗಡೀಪಾರು ಮಾಡುತ್ತಿದೆ" ಎಂದು ಪ್ರಶ್ನಿಸಿದ್ದಾರೆ. ನನ್ನ ಅಜ್ಜಿಗೆ ಮುಂದಿನ ವರ್ಷ 90 ವರ್ಷ ತುಂಬುತ್ತದೆ. ತಾಯಿಗೆ 70 ವರ್ಷವಾಗುತ್ತಿದೆ. ಸರ್ಕಾರ ನನ್ನನ್ನು ದೇಶ ಹಾಗೂ ಕುಟುಂಬದಿಂದ ಬೇರ್ಪಡಿಸುತ್ತಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News