ಅಯೋಧ್ಯೆ-ಬಾಬರಿ ಪ್ರಕರಣದ ತೀರ್ಪು ನೀಡಿದ ಐವರು ನ್ಯಾಯಾಧೀಶರಿವರು...

Update: 2019-11-09 06:22 GMT

ಹೊಸದಿಲ್ಲಿ, ನ.9: ಅಯೋಧ್ಯೆ ವಿವಾದ ಕುರಿತಾದ ಬಹುನಿರೀಕ್ಷಿತ ತೀರ್ಪನ್ನು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ  ರಂಜನ್ ಗೊಗೊಯಿ ನೇತೃತ್ವದ ಪಂಚ ಸದಸ್ಯರ ಸಾಂವಿಧಾನಿಕ ಪೀಠ ಇಂದು ಪ್ರಕಟಿಸಿದೆ. ಈ ಪೀಠದಲ್ಲಿದ್ದ ಐವರು ನ್ಯಾಯಾಧೀಶರ ವಿವರ ಈ ಕೆಳಗಿದೆ.

ಸಿಜೆಐ ರಂಜನ್ ಗೊಗೊಯಿ

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅಸ್ಸಾಂನವರಾಗಿದ್ದು  ಈಶಾನ್ಯ ರಾಜ್ಯ ಮೂಲದ ಪ್ರಥಮ ಸಿಜೆಐ ಆಗಿದ್ದಾರೆ.  ಈ ತಿಂಗಳು ನಿವೃತ್ತರಾಗಲಿರುವ ಗೊಗೊಯಿ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ ಸಹಿತ ಹಲವಾರು ಪ್ರಮುಖ ಪ್ರಕರಣಗಳ ತೀರ್ಪು ನೀಡಿದವರು.

ಜಸ್ಟಿಸ್ ಎಸ್. ಎ. ಬೊಬ್ಡೆ

ಮುಂದಿನ ಸಿಜೆಐ ಆಗಿ ಇನ್ನು ಕೆಲವೇ ದಿನಗಳಲ್ಲಿ ಅಧಿಕಾರ ವಹಿಸಿಕೊಳ್ಳಲಿರುವ ಜಸ್ಟಿಸ್ ಬೊಬ್ಡೆ ಅವರು ಮಹಾರಾಷ್ಟ್ರ ಮೂಲದವರಾಗಿದ್ದು, ಬಾಂಬೆ ಹೈಕೋರ್ಟಿನ ಹೆಚ್ಚುವರಿ ನ್ಯಾಯಾಧೀಶರಾಗಿ, ಮಧ್ಯ ಪ್ರದೇಶ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. 2013ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಪದೋನ್ನತಿ ಹೊಂದಿದ್ದರು.

ಜಸ್ಟಿಸ್ ಡಿ ವೈ ಚಂದ್ರಚೂಡ್

ಸುಪ್ರೀಂ ಕೋರ್ಟಿನ ಮಾಜಿ ಸಿಜೆಐ ಡಿವೈ ಚಂದ್ರಚೂಡ್ ಅವರ ಪುತ್ರರಾಗಿರುವ ವೈವಿ ಚಂದ್ರಚೂಡ್ ಅವರು ಮೇ 2016ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಖಾಸಗಿತನದ ಹಕ್ಕಿನ ಕುರಿತು ತೀರ್ಪು ಸಹಿತ ಸಮಯ ಸಂದ ಹಾಗೆ ಅಪ್ರಸ್ತುತವಾಗುವ ಹಲವಾರು ತೀರ್ಪುಗಳನ್ನು ರದ್ದುಗೊಳಿಸಿದವರಾಗಿರುವ ಅವರು  ಮುಂಬೈ ವಿವಿ ಹಾಗೂ ಅಮೆರಿಕಾದ ಒಕ್ಲಹಾಮ ಯುನಿವರ್ಸಿಟಿ ಸ್ಕೂಲ್ ಆಫ್ ಲಾ ಇಲ್ಲಿನ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.

ಜಸ್ಟಿಸ್ ಅಶೋಕ್ ಭೂಷಣ್

ಎಪ್ರಿಲ್ 2001ರಲ್ಲಿ  ನ್ಯಾಯಾಧೀಶರಾಗಿ ನೇಮಕಗೊಂಡ ಜಸ್ಟಿಸ್ ಅಶೋಕ್ ಭೂಷಣ್ ಕೇರಳ ಹೈಕೋರ್ಟ್ ನ್ಯಾಯಾಧೀಶರಾಗಿ ಹಾಗೂ ಹಂಗಾಮಿ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು. ಮೇ 2016ರಲ್ಲಿ ಅವರು ಸುಪ್ರೀಂ ಕೋರ್ಟಿಗೆ ನೇಮಕಗೊಂಡಿದ್ದಾರೆ.

ಜಸ್ಟಿಸ್ ಅಬ್ದುಲ್ ನಝೀರ್

ನ್ಯಾ. ಅಬ್ದುಲ್ ನಝೀರ್ ಅವರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪದ ಬೆಳುವಾಯಿಯವರು. ನ್ಯಾ. ನಝೀರ್ ಅವರು ಮಂಗಳೂರಿನ ಎಸ್ ಡಿ ಎಂ ಕಾನೂನು ವಿದ್ಯಾಲಯದಲ್ಲಿ ಎಲ್.ಎಲ್.ಬಿ ಪದವಿ ಪಡೆದಿದ್ದಾರೆ.

1983ರಲ್ಲಿ ಕರ್ನಾಟಕ ಹೈಕೋರ್ಟ್ ನಲ್ಲಿ ವಕೀಲಿ ವೃತ್ತಿ ಜೀವನ ಪ್ರಾರಂಭಿಸಿದ ನ್ಯಾ. ನಝೀರ್ ಅವರು 2003ರಲ್ಲಿ ಕರ್ನಾಟಕ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕವಾದರು. 2004ರಲ್ಲಿ ಪೂರ್ಣ ಪ್ರಮಾಣದ ನ್ಯಾಯಾಧೀಶರಾದರು. ಫೆಬ್ರವರಿ 2017ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕವಾದರು. ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗದೆ ನೇರವಾಗಿ ಸುಪ್ರೀಂ ಕೋರ್ಟ್ ಗೆ ನೇಮಕಗೊಂಡ ಮೂರನೇ ನ್ಯಾಯಾಧೀಶ ನ್ಯಾ. ನಝೀರ್ ಅವರು. 

ಬೆಳುವಾಯಿಯ ಫಕೀರ್ ಸಾಬ್ ಅವರ ಸುಪುತ್ರರಾದ ನಝೀರ್ ಅವರು ಮೂಡುಬಿದಿರೆಯ ಮಹಾವೀರ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದರು. ಬಳಿಕ ಮಂಗಳೂರಿನ ಎಸ್ ಡಿ ಎಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News