ಮೋದಿಯವರ ವೈಯಕ್ತಿಕ ಟೀಕೆ ಮಾಡಿದ ಪಾಕ್ ವಿದೇಶಾಂಗ ಸಚಿವರಿಗೆ ಪತ್ರಕರ್ತೆ ಬರ್ಕಾ ದತ್ ತರಾಟೆ

Update: 2019-11-10 11:10 GMT
Photo: twitter.com/BDUTT

ಲಾಹೋರ್, ನ.10: ಕರ್ತಾರ್ ಪುರ ಕಾರಿಡಾರ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ ಪಾಕಿಸ್ತಾನದ ವಿದೇಶಾಂಗ ಖಾತೆ ಸಚಿವ ಶಾ ಮೆಹಮೂದ್ ಖುರೇಶಿ ಅವರನ್ನು ಭಾರತೀಯ ಪತ್ರಕರ್ತೆ ಬರ್ಕಾ ದತ್ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಪಂಜಾಬ್ ಗವರ್ನರ್ ನಿವಾಸದಲ್ಲಿ ಭಾರತೀಯ ಪತ್ರಕರ್ತರಿಗೆ ಶುಕ್ರವಾರ ಆಯೋಜಿಸಿದ್ದ ಔತಣಕೂಟದಲ್ಲಿ ಶಾ ಅವರು, ದಿಢೀರನೇ ಪ್ರತ್ಯಕ್ಷರಾಗಿ, "ಮೋದಿಯವರ ಸಂಕುಚಿತ ಮನೋಭಾವ ಕರ್ತಾರ್‍ ಪುರ ಭಾವನೆಗಳಿಗೆ ನೋವು ತಂದಿದೆ" ಎಂದು ಹೇಳಿದರು.

ಪಾಕ್ ಸಚಿವರ ಅಭಿಪ್ರಾಯವನ್ನು ಪ್ರಶ್ನಿಸಿದ ಹಿರಿಯ ಪತ್ರಕರ್ತೆ ಬರ್ಕಾ ದತ್, "ಮೋದಿಯವರನ್ನು ಟೀಕಿಸುವ ಮೂಲಕ ಇಲ್ಲಿ ಹಾಜರಿರುವ ಭಾರತೀಯ ಪ್ರತಿನಿಧಿಗಳನ್ನು ಅವಮಾನಿಸುತ್ತಿದ್ದೀರಿ" ಎಂದು ತರಾಟೆಗೆ ತೆಗೆದುಕೊಂಡರು. ತಕ್ಷಣ ಹೇಳಿಕೆ ಬದಲಾಯಿಸಿದ ಖುರೇಷಿ, "ಇಲ್ಲ, ಇಲ್ಲ..ನಿಮ್ಮನ್ನೆಲ್ಲ ನಾನು ಸ್ವಾಗತಿಸುತ್ತೇನೆ" ಎಂದು ಹೇಳಿದರು.

ಘಟನೆ ಬಗ್ಗೆ ದತ್ ಟ್ವೀಟ್ ಮಾಡಿದ್ದಾರೆ. "ಮೋದಿಯವರ ಬಗ್ಗೆ ವೈಯಕ್ತಿಕವಾಗಿ ಟೀಕಿಸಿದಾಗ, ಕರ್ತಾರ್‍ಪುರಕ್ಕೆ ಏಕೆ ಕಾಶ್ಮೀರವನ್ನು ಥಳಕು ಹಾಕುತ್ತಿದ್ದೀರಿ ಎಂದು ಕೇಳಿದೆ. ಮೋದಿಯವರ ಸಹಕಾರ ಇಲ್ಲದಿದ್ದರೆ ಕರ್ತಾರ್‍ ಪುರ ಯೋಜನೆ ಕಾರ್ಯಗತಗೊಳ್ಳುತ್ತಿರಲಿಲ್ಲ ಎಂದು ನಾನು ಸ್ಪಷ್ಟಪಡಿಸಿದೆ" ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News