ಐಫೋನ್ ನಲ್ಲಿ ಫೇಸ್ ಬುಕ್ ಬಳಸುವವರಿಗೆ ಆಘಾತಕಾರಿ ಸುದ್ದಿ!
ಸ್ಯಾನ್ ಫ್ರಾನ್ಸಿಸ್ಕೋ, ನ.13: ಇತ್ತೀಚೆಗೆ ತಮ್ಮ ಫೇಸ್ ಬುಕ್ ಖಾತೆಗೆ ಐಫೋನ್ ನಿಂದ ಲಾಗಿನ್ ಮಾಡಿದ ಹಲವರು ತಮ್ಮ ಫೋನ್ ಕ್ಯಾಮರಾ ಸ್ವಯಂಚಾಲಿತವಾಗಿ ಆನ್ ಆಗುವುದನ್ನು ಗಮನಿಸಿ ಆಘಾತಗೊಂಡಿದ್ದರು. ಫೇಸ್ ಬುಕ್ ತಮ್ಮ ಮೇಲೆ ಗೂಢಚರ್ಯೆ ನಡೆಸುತ್ತಿದೆಯೇ ಎಂದು ಹಲವರು ಆತಂಕವನ್ನೂ ವ್ಯಕ್ತಪಡಿಸಿದ್ದರು. ಇದೀಗ ಖಚಿತಗೊಂಡಿರುವ ಮಾಹಿತಿಗಳ ಪ್ರಕಾರ ಫೇಸ್ ಬುಕ್ ನಲ್ಲಿರುವ ಬಗ್ ಒಂದು ಐಫೋನ್ ಗಳ ಕ್ಯಾಮರಾಗಳನ್ನು ಬಳಕೆದಾರರ ಅನುಮತಿಯಿಲ್ಲದೆ ಆನ್ ಮಾಡುತ್ತಿದೆ.
ಫೇಸ್ ಬುಕ್ ಉಪಾಧ್ಯಕ್ಷ ಗಯ್ ರೋಸೆನ್ ಈ ಬಗ್ಗೆ ಆರಂಭದಲ್ಲಿ ಟ್ವೀಟ್ ಮಾಡಿ ಇದೊಂದು 'ಬಗ್' ಥರ ಕಾಣುತ್ತಿದೆ ಹಾಗೂ ತನಿಖೆ ನಡೆಯುತ್ತಿದೆ ಎಂದಿದ್ದರಲ್ಲದೆ ಈ ಗಂಭೀರ ವಿಚಾರವನ್ನು ಸಂಸ್ಥೆಯ ಗಮನಕ್ಕೆ ತಂದವರಿಗೆ ಕೃತಜ್ಞತೆಯನ್ನೂ ಸಲ್ಲಿಸಿದ್ದರು. ನಂತರ ಇನ್ನೊಂದು ಟ್ವೀಟ್ ಮಾಡಿದ ಅವರು ಇದು 'ಬಗ್' ಎಂದು ದೃಢ ಪಡಿಸಿದ್ದಾರಲ್ಲದೆ ಲೇಟೆಸ್ಟ್ ಐಒಎಸ್ 13 ಸಾಫ್ಟ್‍ವೇರ್ ಹೊಂದಿದ ಐಫೋನ್ ಬಳಕೆದಾರರನ್ನು ಮಾತ್ರ ಇದು ಬಾಧಿಸಿದೆ ಎಂದಿದ್ದಾರೆ.
``ನಮ್ಮ ಐಒಎಸ್ ಆ್ಯಪ್ ಲ್ಯಾಂಡ್ ಸ್ಕೇಪ್ ನಲ್ಲಿ ತಪ್ಪಾಗಿ ಅಳವಡಿಸಲ್ಪಟ್ಟಿತ್ತು ಎಂದು ಇತ್ತೀಚೆಗೆ ನಮಗೆ ತಿಳಿದು ಬಂತು. ಅದನ್ನು ಕಳೆದ ವಾರ ಸರಿಪಡಿಸುವ ಸಂದರ್ಭ ಫೇಸ್ ಬುಕ್ ನಲ್ಲಿ ಫೋಟೋಗೆ ಟ್ಯಾಪ್ ಮಾಡಿದಾಗ ಆ್ಯಪ್ ತನ್ನಿಂತಾನಾಗಿಯೇ ಕ್ಯಾಮರಾ ಸ್ಕ್ರೀನ್ ಗೆ ತೆರಳುವ ಬಗ್ ಸೇರಿಕೊಂಡಿತ್ತು. ಇದರಿಂದಾಗಿ ಯಾವುದೇ ಫೋಟೋ ವೀಡಿಯೋ ಅಪ್‍ಲೋಡ್ ಆದ ದಾಖಲೆಯಿಲ್ಲ'' ಎಂದು ಅವರು ಬರೆದಿದ್ದಾರೆ.
ಸಮಸ್ಯೆ ಹೊಂದಿರುವ ಐಫೋನ್ ಬಳಕೆದಾರರಿಗೆ ಅನುಕೂಲವಾಗಲು ಒಂದು ಪರಿಹಾರ ಕಂಡು ಹಿಡಿಯುವ ಆ್ಯಪ್ ಅನ್ನು ಆ್ಯಪಲ್ ಆ್ಯಪ್ ಸ್ಟೋರ್‍ಗೆ ಫೇಸ್ ಬುಕ್ ಸೇರಿಸುವುದು ಎಂದು ರೋಸೆನ್ ಹೇಳಿದ್ದಾರೆ.