ಅಯೋಧ್ಯೆ: ಹೀಗೊಬ್ಬ ಸಂತನ ನೆನಪು

Update: 2019-11-16 14:40 GMT
ಬಾಬಾ ಲಾಲ್ ದಾಸ್ 

ಅಯೋಧ್ಯೆ ತೀರ್ಪು ಹೊರ ಬಿದ್ದಿದೆ. ಈ ತೀರ್ಪು ಹತ್ತು ಹಲವು ವಿರೋಧಾ ಭಾಸಗಳನ್ನು ಹೊಂದಿದೆ. ಒಟ್ಟಾರೆ ವಿವಾದವೇ ವಿರೋಧಾಭಾಸಗಳಿಂದ ಕೂಡಿರುವಾಗ ತೀರ್ಪಿನಲ್ಲಿ ವಿರೋಧಾಭಾಸ ಗಳಿರುವುದು ಸಹಜವೇ ಆಗಿದೆ. ಸೌಹಾರ್ದವನ್ನು ಕೆಡಿಸುವುದಕ್ಕಾಗಿಯೇ ಸೃಷ್ಟಿಯಾದ ವಿವಾದ ವೊಂದನ್ನು ಸೌಹಾರ್ದದಿಂದ ಮುಗಿಸಲು ಹೊರಡುವಾಗ ನ್ಯಾಯ ವ್ಯವಸ್ಥೆಗೆ ಧಕ್ಕೆಯಾಗಲೇ ಬೇಕು. ಪ್ರಜಾಸತ್ತೆ ನೋವನ್ನನುಭವಿಸಲೇ ಬೇಕು. ಅಯೋಧ್ಯೆ ವಿವಾದ ಹೊತ್ತು ತರುವ ಹಲವು ಕಹಿ-ಸಿಹಿ ನೆನಪುಗಳಲ್ಲಿ ಒಂದು ಬಾಬಾ ಲಾಲ್ ದಾಸ್. ಅಯೋಧ್ಯೆ ವಿವಾದ ನೂರಾರು ಜನರ ಮಾನ, ಪ್ರಾಣವನ್ನು ತಿಂದು ಹಾಕಿದೆ. ಇದೇ ಸಂದರ್ಭದಲ್ಲಿ ಬಾಬಾ ಲಾಲ್ ದಾಸ್ ಎಂಬ ಮಹಂತನ ಸಾವು ಕೂಡ ಅಯೋಧ್ಯೆಯೊಂದಿಗೆ ಬೆಸೆದುಕೊಂಡಿದೆ. ಈ ಸಂತ ಅಯೋಧ್ಯೆಯೊಂದಿಗೆ ಅವಿನಾಭಾವ ನಂಟವನ್ನು ಹೊಂದಿದ್ದರೂ ಇಂದು ಅವರ ನೆನಪು ಯಾರಿಗೂ ಬೇಕಾಗಿಲ್ಲ.

ಬಾಬಾ ಲಾಲ್ ದಾಸ್ ಹತ್ಯೆಯಾಗಿ 26 ವರ್ಷವಾಗುತ್ತಿದೆ. ನವೆಂಬರ್ 16, 1993ರಂದು ಅಯೋಧ್ಯೆಯಿಂದ ಕೇವಲ 20 ಕಿ. ಮೀ. ದೂರದಲ್ಲಿರುವ ರಾಣಿಪುರ ಚಟ್ಟರ್ ಗ್ರಾಮದಲ್ಲಿ ಈತನನ್ನು ಗುಂಡಿಕ್ಕಿ ಕೊಂದು ಹಾಕಲಾಯಿತು. ಮತ್ತು ಆ ಹತ್ಯೆಯನ್ನು ಪೊಲೀಸರು ಗಂಭೀರವಾಗಿ ಸ್ವೀಕರಿಸಲೇ ಇಲ್ಲ. ಯಾವುದೋ ಭೂವಿವಾದಕ್ಕೆ ಪ್ರಕರಣವನ್ನು ಅಂಟಿಸಿ, ಮುಗಿಸಿ ಬಿಡಲಾಯಿತು. ದುರಂತವೆಂದರೆ, ಈ ಮಹಂತ ನಿಜಕ್ಕೂ ಭಾರತದ ಅತಿ ದೊಡ್ಡ ಭೂವಿವಾದವೊಂದರ ಪಾಲುದಾರರಾಗಿದ್ದರು. ಲಾಲ್ ದಾಸ್ ಮಹಂತ ಇನ್ನಾರೂ ಅಲ್ಲ, ಅವರು ಬಾಬರಿ ಮಸೀದಿಯ ಕೇಂದ್ರ ಗುಮ್ಮಟದ ಅಡಿಯಲ್ಲಿರುವ ವಿವಾದಿತ ರಾಮ್ ಜನ್ಮಭೂಮಿ ದೇವಸ್ಥಾನದ ಮುಖ್ಯ ಅರ್ಚಕರಾಗಿದ್ದರು. 1981ರಲ್ಲಿ ನ್ಯಾಯಾಲಯವೇ ಅವರನ್ನು ಅರ್ಚಕರನ್ನಾಗಿ ನೇಮಕ ಮಾಡಿತ್ತು. ಇನ್ನೊಂದು ಮುಖ್ಯ ಅಂಶವೆಂದರೆ, ವಿಎಚ್‌ಪಿ 1984ರಲ್ಲಿ ರಾಮ್‌ಜನ್ಮಭೂಮಿ ಅಭಿಯಾನ ಆರಂಭಿಸಿದಾಗ ಅದನ್ನು ಮೊಟ್ಟ ಮೊದಲು ಇವರು ವಿರೋಧಿಸಿದ್ದರು. ರಾಮಜನ್ಮ ಭೂಮಿ ಅಭಿಯಾನ ಬಿಜೆಪಿಗೆ ಸಾಕಷ್ಟು ಲಾಭವನ್ನುಂಟು ಮಾಡಿತು. 1991ರ ಜೂನ್‌ನಲ್ಲಿ ಬಿಜೆಪಿ ಉತ್ತರ ಪ್ರದೇಶ ವಿಧಾನಸಭೆಯ 419 ಸ್ಥಾನಗಳಲ್ಲಿ ಅರ್ಧಕ್ಕಿಂತ ಹೆಚ್ಚಿನದನ್ನು ಗೆದ್ದಿತು ಮತ್ತು ಕಲ್ಯಾಣ್ ಸಿಂಗ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ರಾಮಮಂದಿರ ನಿರ್ಮಾಣ ಕ್ಕಿರುವ ಒಂದೊಂದೇ ಅಡಚಣೆಗಳನ್ನು ನಿವಾರಣೆ ಮಾಡಲು ಅದಾಗಲೇ ವಿಎಚ್‌ಪಿ ಯೋಜನೆಗಳನ್ನು ರೂಪಿಸಿತ್ತು. ಈಗಾಗಲೇ ಇರುವ ಬಾಬರಿ ಮಸೀದಿ ಕಟ್ಟಡ ಮೊತ್ತ ಮೊದಲ ಅಡಚಣೆ ಎಂದು ವಿಎಚ್‌ಪಿ ಭಾವಿಸಿತ್ತು. ಅಂತೆಯೇ ಎರಡನೆಯ ಅಡಚಣೆಯಾಗಿ ಅದಕ್ಕೆ ಕಂಡಿದ್ದು, ವಿವಾದಿತ ಸ್ಥಳದ ಮುಖ್ಯ ಅರ್ಚಕ ಲಾಲ್‌ದಾಸ್. ಈ ಮಾತನ್ನು ಪೈಝಾಬಾದ್ ಮೂಲದ ಹಿರಿಯ ಪತ್ರಕರ್ತ ಸುಮನ್ ಗುಪ್ತಾ ಹೇಳುತ್ತಾರೆ. 1992 ರ ಡಿಸೆಂಬರ್ 6 ರಂದು ಮಸೀದಿ ನೆಲಸಮಗೊಳಿಸುವ ಕೆಲವು ತಿಂಗಳುಗಳ ಮೊದಲು, ಕಲ್ಯಾಣ್ ಸಿಂಗ್ ಸರಕಾರವು 1992 ರ ಮಾರ್ಚ್‌ನಲ್ಲಿ ಲಾಲ್ ದಾಸ್ ಅವರನ್ನು ಪ್ರಧಾನ ಅರ್ಚಕರ ಸ್ಥಾನದಿಂದ ತೆಗೆದುಹಾಕಿತು. ಲಾಲ್ ದಾಸ್ ಬದಲಿಗೆ ಬಂದ ಮಹಂತ ಸತ್ಯೇಂದ್ರ ದಾಸ್ ಅವರು ರಾಮ ಜನ್ಮ ಭೂಮಿ ದೇವಸ್ಥಾನದ ಪ್ರಧಾನ ಅರ್ಚಕರಾಗಿ ನೇಮಕವಾದರು. ಇದಕ್ಕಾಗಿ ಪೊಳ್ಳು ನೆಪಗಳನ್ನು ಸರಕಾರ ಹೇಳಿತು. ಮುಖ್ಯವಾಗಿ ಲಾಲ್‌ದಾಸ್ ವಿರುದ್ಧ ಭ್ರಷ್ಟಾಚಾರದ ಆರೋಪಗಳಿದ್ದವು ಎಂದು ವಿಎಚ್‌ಪಿ ಆರೋಪಿಸಿತು. ಆದರೆ ಬಾಬರಿ ಮಸೀದಿ ನೆಲಸಮಕ್ಕೆ ಮೊದಲು, ಆ ಆಂದೋಲನವನ್ನೇ ವಿರೋಧಿಸುತ್ತಿರುವ ಮಹಂತರನ್ನು ದೂರವಿಡುವುದು ವಿಎಚ್‌ಪಿಗೆ ಮತ್ತು ಬಿಜೆಪಿ ಸರಕಾರಕ್ಕೆ ಅತ್ಯಗತ್ಯವಾಗಿತ್ತು ಎನ್ನುವುದು ಮೇಲ್ನೋಟಕ್ಕೆ ಅರ್ಥೈಸಬಹುದು. ಅಯೋಧ್ಯೆ ಪ್ರಕರಣದ ಹಿಂದಿರುವ ವಿಷ ಜಾಲಗಳನ್ನು ಗುರುತಿಸಿ ಮಹಂತ ಸುಮ್ಮಗಿದ್ದಿದ್ದರೆ ಸಮಸ್ಯೆ ಇರುತ್ತಿರಲಿಲ್ಲವೇನೋ. ಆದರೆ ಲಾಲ್ ದಾಸ್ ಅವರು ತನ್ನನ್ನು ಕಿತ್ತು ಹಾಕಿರುವುದರ ವಿರುದ್ಧ ಮೊಕದ್ದಮೆ ದಾಖಲಿಸಿದರು. ಇಂದಿಗೂ ಈ ಪ್ರಕರಣ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದ ಮುಂದೆ ಬಾಕಿ ಉಳಿದಿದೆ. ಲಾಲ್ ದಾಸ್ ಅವರು ಬಹುತ್ವದ ನೆಲೆಯಿಂದ ಬಂದವರು. ಅವಧ್‌ನ ಗಂಗಾ-ಜಮುನಿ ಸಮ್ಮಿಳಿತ ಸಂಸ್ಕೃತಿಯ ಸಂಪ್ರದಾಯಗಳನ್ನು ನಂಬಿದವರು. ರಾಮಜನ್ಮಭೂಮಿ ಆಂದೋಲವನ್ನು ಅವರು ಬಹಿರಂಗವಾಗಿಯೇ ಟೀಕಿಸಿದ್ದರು. ‘ಇದು ಚುನಾವಣೆಗಾಗಿ ನಡೆಸುತ್ತಿರುವ ರಾಜಕೀಯ’ ಎಂದಿದ್ದರು. ಅವಧ್‌ನ ಮುಸ್ಲಿಮ್ ರಾಜರ ನೆರವಿನಿಂದ ಅಯೋಧ್ಯೆಯ ಹೆಚ್ಚಿನ ದೇವಾಲಯಗಳನ್ನು ಹೇಗೆ ನಿರ್ಮಿಸಲಾಗಿದೆ ಮತ್ತು 1855 ರಲ್ಲಿ ಹಿಂದೂ ಗಳು ಮತ್ತು ಮುಸ್ಲಿಮರ ನಡುವಿನ ಘರ್ಷಣೆಯ ನಂತರ ಹಿಂದೂ ಪುರೋಹಿತರು ಮತ್ತು ಮುಸ್ಲಿಂ ಸೂಫಿಗಳು ಹೇಗೆ ಸೌಹಾರ್ದಯುತವಾಗಿ ಬದುಕಲು ನಿರ್ಧರಿಸಿದ್ದರು ಎಂಬುದರ ಕುರಿತು ಅವರು ಆಗಾಗ ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದರು. ಹಿಂದೂ-ಮುಸ್ಲಿಮ್ ಸಾಮರಸ್ಯ ವನ್ನು ಕಾಪಾಡುವುದಕ್ಕೆ ಅವರು ನಡೆಸಿದ ಪ್ರಯತ್ನವನ್ನು ಇಂದಿಗೂ ಅಯೋಧ್ಯೆಯ ಕೆಲವು ಹಿರಿಯರು ನೆನೆದುಕೊಳ್ಳುತ್ತಾರೆ. ಬಾಬರಿ ಮಸೀದಿ ಉರುಳಿದ ವರ್ಷದೊಳಗೆ ಈ ಸಂತ ನಿಗೂಢವಾಗಿ ಕೆಲವು ದುಷ್ಕರ್ಮಿಗಳಿಂದ ಕೊಲ್ಲಲ್ಪಟ್ಟರು. ಆದರೆ ಈ ಸಂತ ಬಿತ್ತಿ ಹೋದ ಸೌಹಾರ್ದ ಇನ್ನೂ ಅಯೋಧ್ಯೆಯಲ್ಲಿ ಒಂದಿಷ್ಟು ಜೀವಂತವಿದೆ. ಅಯೋಧ್ಯೆಯ ತೀರ್ಪಿನಂದು ಅದು ಸಾಬೀತಾಯಿತು ಕೂಡ. ಲಾಲ್ ದಾಸ್ ಇಂದು ಇಲ್ಲವಾಗಿರಬಹುದು. ಆದರೆ ಅವರ ಕೋಮು ಐಕ್ಯತೆ ಮತ್ತು ಸಾಮರಸ್ಯದ ಸಂದೇಶವು ಅಯೋಧ್ಯೆ ಮತ್ತು ದೇಶಕ್ಕೆ ಎಂದಿಗಿಂತಲೂ ಹೆಚ್ಚು ಮಹತ್ವದ್ದಾಗಿದೆ.

Writer - ಅವನೀಂದ್ರ, ಬೆಂಗಳೂರು

contributor

Editor - ಅವನೀಂದ್ರ, ಬೆಂಗಳೂರು

contributor

Similar News