ಮಾನವ ಮೃಗಾಲಯ: ಇದು ಜಗತ್ತಿನ ಸರ್ವಶ್ರೇಷ್ಠ ರಾಷ್ಟ್ರಗಳ ದುರಂತ ಕಥೆ!

Update: 2019-11-16 17:20 GMT

ಒಮ್ಮೆ ಭಾರತದ ರಾಷ್ಟ್ರಪತಿ ಸರ್ವೇಪಲ್ಲಿ ರಾಧಾಕೃಷ್ಣರು ರಶ್ಯದ ಅಧ್ಯಕ್ಷ ಸ್ಟಾಲಿನ್‌ರನ್ನು ಭೇಟಿಯಾದಾಗ, ಸ್ಟಾಲಿನ್ ರಾಧಾಕೃಷ್ಣರಿಗೆ ನನ್ನನ್ನು ಭೇಟಿಯಾಗಲು ಎಲ್ಲರೂ ಭಯ ಪಡುತ್ತಾರೆ ಆದರೆ ನೀವು ಮಾತ್ರ ನನ್ನ ಜೊತೆ ಯಾವುದೇ ಅಂಜಿಕೆಯಿಲ್ಲದೆ ನಿರ್ಭಯವಾಗಿ ಮಾತನಾಡುವಿರಿ ಹೇಗೆ? ಎಂದು ಕೇಳಿದರಂತೆ. ಆಗ ರಾಧಾಕೃಷ್ಣರು ಸ್ಟಾಲಿನ್‌ರಿಗೆ ಎಲ್ಲರೊಳಗೂ ಒಬ್ಬ ಮನುಷ್ಯನಿರುತ್ತಾನೆ. ಆ ಮನುಷ್ಯನೊಡನೆ ಮಾತಾಡಲು ಏಕೆ ಭಯ ಪಡಬೇಕುಎಂದು ತನಗೆಸೆದ ಪ್ರಶ್ನೆಯನ್ನೇ ಉತ್ತರವಾಗಿಸಿದರಂತೆ.

ಒಮ್ಮಮ್ಮೆ ಮನುಷ್ಯನೊಳಗಿರುವ ಮನುಷ್ಯನೂ ಸಾಯುತ್ತಾನೆ. ಅವನ ಆ ಒಳಗಿನ ಮನುಷ್ಯತ್ವ ಅತಿ ವೇಗವಾಗಿ ಬದಲಾಗುತ್ತಿರುವ ಜಗತ್ತಿನ ಆಗುಹೋಗುಗಳ ನಡುವೆ ನೆಲಕಚ್ಚಿ ಬಿಡುತ್ತದೆ. ಅಗ ಅವನು ಪರ್ಯಾಯವೆಂಬಂತೆ ತನಗೇ ಅರಿವಿಲ್ಲದಂತೆ ಕೆಲವೊಂದು ಹೀನ ಸಂಪ್ರದಾಯಗಳನ್ನು ಸೃಷ್ಟಿಸಿ ಬಿಡುತ್ತಾನೆ. ಅಂತಹದ್ದೊಂದು ಹೀನ ಮನಸ್ಥಿತಿಯ ಫಲಿತಾಂಶವೇ ಈ ಮಾನವ ಮೃಗಾಲಯ.

ಮಾನವ ಮೃಗಾಲಯಗಳು ಬೆಳಕಿಗೆ ಬಂದದ್ದು ಕ್ರಿ.ಶ.ಹತ್ತೊಂಬತ್ತನೇ ಶತಮಾನದಲ್ಲಿ. ಯೂರೋಪ್ ಸಮಾಜದ ಅಲ್ಪಸಂಖ್ಯಾತರನ್ನು ಅದರಲ್ಲೂ ವಿಶೇಷವಾಗಿ ಕರಿಯರನ್ನು ಕಬ್ಬಿಣದ ಬೋನುಗಳಲ್ಲಿ ಹಾಕಿ, ಸಭಿಕರಿಗೆ ಮನರಂಜನೆಯನ್ನು ನೀಡುತ್ತಿದ್ದ ಈ ವಿಚಿತ್ರ,ಅಮಾನವೀಯ ಅಚರಣೆ ಇಪ್ಪತ್ತೊಂದನೆ ಶತಮಾನದವರೆಗೂ ರೂಢಿಯಲ್ಲಿತ್ತು. ಆಫ್ರಿಕಾದ ಕರಿಯರನ್ನು ವಿಶೇಷವಾಗಿ ಪಿಗ್ಮಿ ಬುಡಕಟ್ಟಿನ ಕರಿಯರನ್ನು ಈ ಘೋರ ಕೃತ್ಯಗಳಲ್ಲಿ ಬಳಸಿಕೊಳ್ಳಲಾಯಿತು. ವರ್ಣಭೇದ ನೀತಿಯೇ ಮಾನವೀಯತೆ ಎಂಬ ಶ್ವೇತ ಕಾಗದದ ಮೇಲಣ ಕಪ್ಪು ಚುಕ್ಕೆಯಾದರೆ,ಮಾನವ ಮೃಗಾಲಯಗಳು ಇಂತಹ ಹಲವು ಕಪ್ಪು ಚುಕ್ಕೆಗಳ ಬೃಹತ್ ಮೊತ್ತ.

ಕ್ರಿ.ಶ.1850ರಲ್ಲಿ ಜರ್ಮನಿಯಲ್ಲಿ ಆರಂಭಗೊಂಡ ಈ ಮಾನವ ಮೃಗಾಲಯಗಳಲ್ಲಿ ಆಫ್ರಿಕಾದ ಕರಿಯರನ್ನು ತಂದು ಪ್ರಾಣಿಗಳ ಮಧ್ಯೆ ಬಿಡಲಾಗುತ್ತಿತ್ತು. ಅಲ್ಲಿರುವ ಪ್ರಾಣಿಗಳ ಜೊತೆ ಆಟವಾಡುವಂತೆ, ಚಿಂಪಾಂಜಿಗಳನ್ನು ಎತ್ತಿಕೊಳ್ಳುವಂತೆ ಬಲವಂತವಾಗಿ ಪೀಡಿಸಲಾಗುತ್ತಿತ್ತು. ಪೀಪಲ್ಸ್ ಷೋ ಎಂದೇ ಹೆಸರುವಾಸಿಯಾಗಿದ್ದ ಈ ಕ್ರೂರ ಕೃತ್ಯವನ್ನು ವೀಕ್ಷಿಸಲು ಸುಮಾರು ನಾಲ್ಕು ಲಕ್ಷ ಜನರು ಧಾವಿಸುತ್ತಿದ್ದರೆಂಬುದು ಅಂದಿನ ವರ್ಣಭೇದ ನೀತಿಯ ಕರಾಳತೆ ಹಾಗೂ ಆ ವಿದ್ಯಾವಂತ ಜನರ ಹೀನ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.

ಗಮನಿಸ ಬೇಕಾದ ಮತ್ತೊಂದು ಸಂಗತಿಯೆಂದರೆ, ಜರ್ಮನಿ ಯಲ್ಲಿ ಚಾಲ್ತಿಯಲ್ಲಿದ್ದ ಈ ಕ್ರೂರ ಆಚರಣೆಯನ್ನು, ಇಂದು ಈ ಜಗತ್ತು ಯಾರನ್ನು ಮಹಾನ್ ಕ್ರೂರಿ ಮತ್ತು ನಿರ್ದಯಿ ಸರ್ವಾಧಿಕಾರಿ ಎಂದು ಜರೆಯುತ್ತದೋ ಅದೇ ಅಡಾಲ್ಫ್ ಹಿಟ್ಲರ್ ಈ ಅತಿ ಕ್ರೂರ ಆಚರಣೆಯನ್ನು ನಿಷೇಧಿಸಿದ್ದು.

ಜರ್ಮನಿ ಮಾತ್ರವಲ್ಲದೆ, ಈ ಮಾನವ ಮೃಗಾಲಯಗಳು,ಇಂದು ಜಗತ್ತಿನ ಸರ್ವಶ್ರೇಷ್ಠ ರಾಷ್ಟ್ರಗಳೆನಿಸಿಕೊಂಡ ಅಮೆರಿಕ, ಫ್ರಾನ್ಸ್ ಮತ್ತು ಇತರೆ ಮುಂದುವರಿದ ರಾಷ್ಟ್ರಗಳಲ್ಲಿಯೂ ರೂಢಿಯಲ್ಲಿತ್ತೆಂಬುದು ವಿಷಾದನೀಯ.

ಮನುಷ್ಯರನ್ನು ಪ್ರಾಣಿಗಳಾಗಿ ಮಾಡಿ,ಅವರನ್ನು ಅಕ್ಷರಶಃ ಕಸಾಯಿಖಾನೆಗಳಂತಹ ಮೃಗಾಲಯಗಳಲ್ಲಿ ಕೆಡವಿದ್ದರು.ಇದಕ್ಕೆ ಸ್ಪಷ್ಟ ಹಾಗೂ ಪೂರಕ ನಿದರ್ಶನವೆಂದರೆ ನ್ಯೂಯಾರ್ಕಿನ ಮಾನವ ಮೃಗಾಲಯದಲ್ಲಿ ಪಿಗ್ಮಿ ಬುಡಕಟ್ಟಿಗೆ ಸೇರಿದ ಒಟ ಬೆಂಗಾ ಎಂಬ ಕರಿಯನನ್ನು ಪ್ರಾಣಿಗಳಿರುವ ದೊಡ್ಡ ಪಂಜರ ದೊಳಗೆ ಹಾಕಿ, ಚಿಂಪಾಂಜಿಗಳು ಮತ್ತು ಇತರ ಪ್ರಾಣಿಗಳನ್ನು ಎತ್ತಿಕೊಳ್ಳುವಂತೆ ಬಲವಂತಿಸಲಾಯಿತು. ಅಷ್ಟೇ ಅಲ್ಲದೆ ಮರಗಳಿಗೆ ಬಾಣಗಳನ್ನು ಗುರಿಯಿಟ್ಟು ಹೊಡೆಸುವುದು,ಗೊರಿಲ್ಲಾಗಳ ಜೊತೆ ಜಗಳವಾಡಿಸುವುದು ಹೀಗೆ ಹತ್ತು ಹಲವು ಬಲವಂತಗಳು ಒಂದು ನಿರಂತರ ಕಿರುಕುಳಕ್ಕೆ ಸಾಕ್ಷಿಯಾಗಿತ್ತು.

ಈ ಅಮಾನವೀಯ ಆಚರಣೆಯ ವಿರುದ್ಧ ಕರಿಯ ಪುರೋಹಿತಶಾಹಿ ವರ್ಗ ದನಿಯೆತ್ತಿದರಾದರೂ,ಈ ಮಾನವ ಮೃಗಾಲಯಗಳನ್ನು ವೀಕ್ಷಿಸಲು ಬರುತ್ತಿದ್ದ ಲಕ್ಷಾಂತರ ಜನರ ವಿಕೃತ ಹುಮ್ಮಸ್ಸುಗಳ ಮುಂದೆ ಈ ಪಾದ್ರಿಗಳ ಸೊಲ್ಲಡಗಿ ಬಿಟ್ಟಿತು. ಈ ಮಾನವ ಮೃಗಾಲಯಗಳು ಯೂರೋಪಿನ ಅತ್ಯಂತ ಅವಮಾನಕಾರಿ ಇತಿಹಾಸದ ತುಣುಕುಗಳು.ವಿಪರ್ಯಾಸವೆಂದರೆ ಇಂದು ಯೂರೋಪಿನ ಇತಿಹಾಸವನ್ನು ಬಿಡುವಿಲ್ಲದೆ ಹೊಗಳುವ ಹೊಗಳು ಭಟ್ಟರು,ಅದರ ಈ ಕರಾಳತೆಯನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಿದ್ದಾರೆ.

ಏನೇ ಆಗಲಿ,ಈ ಮಾನವ ಮೃಗಾಲಯಗಳು ನಿಸ್ಸಂದೇಹವಾಗಿ ಮನುಕುಲದ ಅಕ್ಷಮ್ಯ ಅಪರಾಧವೂ ಹೌದು ಮತ್ತು ಅಲ್ಪ ಸಂಖ್ಯಾತರ ಮೇಲೆ ಹಿಂದೆಂದೂ ಕಾಣದ ಘೋರ ದೌರ್ಜನ್ಯವೂ ಹೌದು.

ಕ್ರಮೇಣ ಈ ಮಾನವ ಮೃಗಾಲಯಗಳು ನಿಷೇಧಗೊಂಡು, ಇಂದು ಭೌತಿಕವಾಗಿ ಇಲ್ಲವಾದರೂ,ಅದರ ಕಪ್ಪು ಛಾಯೆಗಳು ಇಂದಿಗೂ ಸಮಾಜದಲ್ಲಿ ಪ್ರಸ್ತುತವಾಗಿದೆ. ಸ್ಪಶ್ಯ-ಅಸ್ಪಶ್ಯ, ಮೇಲು-ಕೀಳು ಎಂಬ ಮನದ ಭಾವನೆಗಳೇ ಸಾಕಲ್ಲವೆ ಅಂದಿನ ಮಾನವ ಮೃಗಾಲಯಗಳನ್ನು ಇಂದಿಗೂ ಜೀವಂತವಾಗಿರಿಸಲು?

ಯೂರೋಪಿನಲ್ಲೇ ಅಲ್ಲ, ನಮ್ಮ ಭಾರತದಲ್ಲೂ, ನಮ್ಮ ರಾಜ್ಯದಲ್ಲೂ, ಇನ್ನೂ ಹತ್ತಿರವೆಂದರೆ ನಮ್ಮ ಮನೆ ಮನಗಳಲ್ಲಿ, ಎಲ್ಲಿಯವರೆಗೂ ನಾವೆಲ್ಲರೂ ಒಂದೇ. ಎಲ್ಲರೊಳಗೆಹರಿಯುತಿಹುದೊಂದೇ ನೆತ್ತರು ಎಂಬ ಭ್ರಾತೃತ್ವದ ಭಾವನೆಗಳು ಮೂಡುವುದಿಲ್ಲವೊ, ಅಲ್ಲಿಯವರೆಗೆ ನಾವೆಲ್ಲರೂ ವರ್ಣಭೇದ, ಅಸಮಾನತೆ ಮತ್ತು ಕೋಮುವಾದಗಳೆಂಬ ಪಂಜರದೊಳಗಿನ ಬಂದಿಗಳೇ. ಪ್ರಸಕ್ತ ಸಮಯದ ಅವಶ್ಯಕತೆ ಯೆಂದರೆ ಪ್ರಬುದ್ಧತೆ. ಈ ಎಲ್ಲಾ ಸಂಕೋಲೆಗಳಿಂದ ಬಿಡುಗಡೆಯಾಗ ಬೇಕಾದರೆ, ಪ್ರಬುದ್ಧತೆಯೆಂಬ ಶಾಂತಿದೂತನನ್ನು ನಮ್ಮ ಯುದ್ಧನಿರತ ಮನಸ್ಸುಗಳಿಗೆ ಆಹ್ವಾನಿಸಬೇಕು. ಹೀಗಾದಾಗ ಮಾತ್ರ ಮನಸ್ಸು ವಿಶ್ವಮಾನವತೆಯ ಸಂಕೇತವಾಗಿ, ಈ ನಿರಂತರ ದಾಸ್ಯದಿಂದ ಬಿಡುಗಡೆ ಹೊಂದಿ,ಸಮಾನತೆ ಎಂಬ ಸ್ವಚ್ಛಂದ ಆಕಾಶದಲ್ಲಿ ತೇಲಾಡಬಹುದು.

Writer - ಅಜಯ್ ರಾಜ್ ಅಬ್ರಹಾಂ

contributor

Editor - ಅಜಯ್ ರಾಜ್ ಅಬ್ರಹಾಂ

contributor

Similar News