370ನೇ ವಿಧಿಯ ರದ್ದತಿಯ ಬಳಿಕ ಕಾಶ್ಮೀರದಲ್ಲಿ ಸುಳ್ಳುಗಳ ಸುರಿಮಳೆ
ಒಂದೆಡೆ ಜಮ್ಮು ಮತ್ತು ಕಾಶ್ಮೀರದ ಜನರು ತಮ್ಮ ರಾಜ್ಯವನ್ನು ಒಂದು ಕೇಂದ್ರಾಡಳಿತ ಪ್ರದೇಶವಾಗಿ ಅದರ ಪ್ರತಿಷ್ಠೆಯನ್ನು ನಾಶ ಮಾಡಲಾಗಿದೆ ಎಂದು ಅವಮಾನಿತರಾಗಿದ್ದಾರೆ. ಇನ್ನೊಂದೆಡೆ ಇದು ಸರ್ದಾರ್ ಪಟೇಲರ ಕನಸಾಗಿತ್ತು ಎಂದು ಜಂಬ ಕೊಚ್ಚಿಕೊಳ್ಳಲಾಗುತ್ತಿದೆ!.
ಕಾಶ್ಮೀರದಲ್ಲಿ 370ನೇ ವಿಧಿ ರದ್ದಾಗಿ ಮೂರು ತಿಂಗಳುಗಳಿಗೂ ಹೆಚ್ಚು ಕಾಲ ಕಳೆದಿದೆ. ಹಲವು ಸುಳ್ಳುಗಳನ್ನು ಈಗಾಗಲೇ ಪ್ರವರ್ತಿಸಲಾಗಿದೆ. ಇತ್ತೀಚೆಗೆ ಇನ್ನೆರಡು ಸುಳ್ಳುಗಳು ಬಯಲಾಗಿವೆ. ಅಕ್ಟೋಬರ್ 20ರಂದು ಸರ್ದಾರ್ ಪಟೇಲರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಾ ಪ್ರಧಾನಿ ನರೇಂದ್ರ ಮೋದಿ 370ನೇ ವಿಧಿಯ ರದ್ದತಿಯನ್ನು ಪಟೇಲರಿಗೆ ಅರ್ಪಿಸಿದರು. ಕುತೂಹಲದ ವಿಷಯವೇನೆಂದರೆ 370ನೇ ವಿಧಿಯನ್ನು ಬರೆದ ಸಮಿತಿಯ ಮುಖ್ಯ ಭಾಗವಾಗಿದ್ದವರು ಸರ್ದಾರ್ ಪಟೇಲ್. ವಿದೇಶ ವ್ಯವಹಾರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅಂದಿನ ಪ್ರಧಾನಿ ನೆಹರೂರವರು ಆ ಸಮಯದಲ್ಲಿ ಅಮೆರಿಕಕ್ಕೆ ಹೋಗಿದ್ದರಿಂದ ಸಂವಿಧಾನ ಸಭೆಯಲ್ಲಿ 370ನೇ ವಿಧಿಯ ನಿಲುವಳಿಯನ್ನು ಮಂಡಿಸಿದ್ದವರು ಸರ್ದಾರ್ ಪಟೇಲ್.
ಕೋಮು ರಾಜಕಾರಣಕ್ಕೆ ಹೊಂದುವಂತಹ ಪ್ರಾಚೀನ ಹಾಗೂ ಮಧ್ಯಯುಗದ ಇತಿಹಾಸವನ್ನಷ್ಟೇ ಅಲ್ಲ, ದೇಶದ ಇತ್ತೀಚಿನ ಇತಿಹಾಸವನ್ನು ಕೂಡ ಬದಲಿಸಲಾಗುತ್ತಿದೆ. ಇನ್ನೊಂದು ಸುಳ್ಳೆಂದರೆ ಭಯೋತ್ಪಾದನೆಗೆ 370ನೇ ವಿಧಿಯಿಂದ ಪ್ರೋತ್ಸಾಹ ಸಿಗುತ್ತದೆಂದು ಪ್ರಧಾನಿ ಮೋದಿ ಹಾಗೂ ಇತರ ಉನ್ನತ ಅಧಿಕಾರಿಗಳು ಹೇಳುತ್ತಿರುವುದು. ಈ ವಿಧಿಯ ರದ್ದತಿಯಿಂದ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ನಿಯಂತ್ರಿಸಲಾಗುತ್ತದೆ ಎನ್ನುವುದು ಅವರ ವಾದ. ನೋಟು ರದ್ದತಿ ಮಾಡಿದಾಗಲೂ ಅವರು ಹೀಗೆಯೇ ವಾದಿಸಿದ್ದರು: ಖೋಟಾ ನೋಟು, ಕಳ್ಳಹಣ ಭಯೋತ್ಪಾದನೆಯನ್ನು ಹೆಚ್ಚಿಸುತ್ತಿದೆ. ನೋಟು ರದ್ದತಿ ಅದನ್ನು ಕಾಶ್ಮೀರದಿಂದ ನಿರ್ಮೂಲನೆ ಮಾಡಿ ಬಿಡುತ್ತದೆ ಎಂದು ಅವರು ವಾದಿಸಿದ್ದರು. ಆದರೆ ಈ ವಾದ ಸಂಪೂರ್ಣ ಟೊಳ್ಳು ಮತ್ತು ಸುಳ್ಳೆಂದು ಬಳಿಕ ನಡೆದ ಭಯೋತ್ಪಾದಕ ದಾಳಿಗಳಿಂದ ರುಜುವಾತಾಯಿತು.
ಕಾಶ್ಮೀರದಲ್ಲಿ ಜನಜೀವನ ಸ್ತಬ್ಧವಾಗಿದೆ. ಸ್ಥಳೀಯ ನಾಯಕರನ್ನು ಬಂಧಿಸಲಾಗಿದೆ. ರಾಷ್ಟ್ರೀಯ ನಾಯಕರಿಗೆ ಅಲ್ಲಿಗೆ ಭೇಟಿ ನೀಡಲು ಅನುಮತಿ ನಿರಾಕರಿಸಲಾಗಿದೆ. ಈ ನಡುವೆ ಒಂದು ಎನ್‌ಜಿಒ ಹೆಸರಿನಲ್ಲಿ ಯುರೋಪಿನ ಕೆಲವು ಮಂದಿ ಬಲಪಂಥೀಯ ಸಂಸದರ ನಿಯೋಗವೊಂದು ಅಲ್ಲಿಗೆ ಭೇಟಿ ನೀಡಿದ್ದು ತಾನು ಸ್ಥಳೀಯರನ್ನು ಭೇಟಿಯಾಗ ಬಯಸುವುದಾಗಿ ಹೇಳಿದ ಸಂಸದ ಕ್ರಿಸ್ ಡೇವಿಸ್‌ಗೆ ನೀಡಿದ ಆಹ್ವಾನವನ್ನು ಹಿಂದಕ್ಕೆ ಪಡೆಯಲಾಯಿತು. ಆ ಸಂಸದರು ಮೋದಿ ಸರಕಾರಕ್ಕೆ ಅಲ್ಲಿ ‘‘ಎಲ್ಲವೂ ಚೆನ್ನಾಗಿದೆ’’ ಎಂದು ಪ್ರಮಾಣ ಪತ್ರ ನೀಡಲು ಬಂದವರು. ಅವರು ಸರಕಾರ ಏರ್ಪಡಿಸಿದ್ದ ಪ್ರವಾಸವನ್ನು ಎಂಜಾಯ್ ಮಾಡಿ ವಾಪಸಾದರು.
ಕಳೆದ ಕೆಲವು ತಿಂಗಳುಗಳ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಹಲವು ಹತ್ಯೆಗಳು, ಹಿಂಸೆ ನಡೆದಿವೆ. ಅಂತಹ ಒಂದು ಘಟನೆಯಲ್ಲಿ ಪಶ್ಚಿಮ ಬಂಗಾಳದ ಐದು ಮಂದಿ ವಲಸೆ ಕಾರ್ಮಿಕರ ಕೊಲೆ ನಡೆದಿದೆ. ಅದಕ್ಕೂ ಮೊದಲು ಹಣ್ಣುಗಳ ವ್ಯಾಪಾರಕ್ಕೆ ಸಂಬಂಧಿಸಿದ ಜನರ ಮೇಲೆ ದಾಳಿ ನಡೆದಿತ್ತು. ಶ್ರೀನಗರದಲ್ಲಿ ನಡೆದ ಗ್ರೆನೇಡ್ ದಾಳಿಯೊಂದರಲ್ಲಿ ಓರ್ವ ಮೃತಪಟ್ಟು ಹದಿನೈದು ಮಂದಿ ಗಾಯಗೊಂಡರು.
ಒಂದೆಡೆ ಜಮ್ಮು ಮತ್ತು ಕಾಶ್ಮೀರದ ಜನರು ತಮ್ಮ ರಾಜ್ಯವನ್ನು ಒಂದು ಕೇಂದ್ರಾಡಳಿತ ಪ್ರದೇಶವಾಗಿ ಅದರ ಪ್ರತಿಷ್ಠೆಯನ್ನು ನಾಶ ಮಾಡಲಾಗಿದೆ ಎಂದು ಅವಮಾನಿತರಾಗಿದ್ದಾರೆ. ಇನ್ನೊಂದೆಡೆ ಇದು ಸರ್ದಾರ್ ಪಟೇಲರ ಕನಸಾಗಿತ್ತು ಎಂದು ಜಂಬ ಕೊಚ್ಚಿಕೊಳ್ಳಲಾಗುತ್ತಿದೆ!.
370ನೇ ವಿಧಿ ರದ್ದತಿ ಮೂಲಕ ಭಯೋತ್ಪಾದನೆ ಹಿಂದಿದ್ದ ಒಂದು ದೊಡ್ಡ ಕಾರಣವನ್ನು ನಿರ್ಮೂಲನೆ ಮಾಡಲಾಗಿದೆ ಎಂಬುದು ಸಂಪೂರ್ಣ ಸತ್ಯಕ್ಕೆ ದೂರವಾದ ಮಾತು. ಕಾಶ್ಮೀರದಲ್ಲಿನ ಹಿಂಸೆಗೆ, ಆತಂಕವಾದಕ್ಕೆ ಐತಿಹಾಸಿಕ ಕಾರಣಗಳಿವೆ. ಕಬಯಾಲಿಸ್ (ಬುಡಕಟ್ಟು ಜನರ) ರೂಪದಲ್ಲಿ ಪಾಕಿಸ್ತಾನ ಕಾಶ್ಮೀರದ ಮೇಲೆ ದಾಳಿ ನಡೆಸಿದಾಗ ಕೋಮುಶಕ್ತಿಗಳು ಪ್ರತಿಪಾದಿಸಿದ ದ್ವಿರಾಷ್ಟ್ರ ನೀತಿಯನ್ನು ಒಪ್ಪದ ಅಲ್ಲಿಯ ಜನರು ಪಾಕಿಸ್ತಾನದ ಆ ದಾಳಿಯನ್ನು ಹಿಮ್ಮೆಟ್ಟಿಸುವಂತೆ ಭಾರತ ಸರಕಾರವನ್ನು ವಿನಂತಿಸಿಕೊಂಡರು. ಬಳಿಕ ಶ್ಯಾಮ ಪ್ರಸಾದ್ ಮುಖರ್ಜಿಯಂತಹವರು ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸಬೇಕೆಂದು ಒತ್ತಡ ಹಾಕಿದಾಗ ಶೇಖ್ ಅಬ್ದುಲ್ಲಾ ಆ ವಿಲೀನಗೊಳಿಸುವ ಪ್ರಕ್ರಿಯೆಯನ್ನು ಒಪ್ಪಲಿಲ್ಲ ಆಗ ಅವರನ್ನು ಜೈಲಿಗೆ ತಳ್ಳಲಾಯಿತು. (ಆದರೆ ಕಾಶ್ಮೀರ ಭಾರತದೊಂದಿಗೆ ವಿಲೀನಗೊಳ್ಳುವುದರಲ್ಲಿ ಅವರು ಪ್ರಧಾನ ಪಾತ್ರ ವಹಿಸಿದ್ದರು) ಅವರನ್ನು ಜೈಲಿಗೆ ತಳ್ಳಿದಾಗ ಕಾಶ್ಮೀರದ ಜನತೆಯನ್ನು ಪರಕೀಯತೆಯ ಭಾವ ಕಾಡತೊಡಗಿತು. ಇದಕ್ಕೆ ಪಾಕಿಸ್ತಾನದ ಬೆಂಬಲ ದೊರೆತದ್ದೇ ಕಾಶ್ಮೀರದಲ್ಲಿ ಭಯೋತ್ಪಾದನೆ ಮೊಳೆಯಲು ಮೂಲ ಕಾರಣ. ಜಮ್ಮು ಮತ್ತು ಕಾಶ್ಮೀರಕ್ಕೆ ಸ್ವಾಯತ್ತತೆಯನ್ನು ನೀಡುವ ಮೂಲಕ 370ನೇ ವಿಧಿ ಆ ರಾಜ್ಯಕ್ಕೆ ಒಂದು ರಕ್ಷಣಾ ಕವಚದಂತೆ ಭಯೋತ್ಪಾದನೆ ವ್ಯಾಪಕವಾಗದಂತೆ ಒಂದು ದೊಡ್ಡ ತಡೆಯಾಗಿ ವರ್ತಿಸಿತು. ರಶ್ಯನ್ನರ ವಿರುದ್ಧ ಹೋರಾಡಲು ಅಮೆರಿಕ ಅಲ್‌ಖಾಯಿದವನ್ನು ಬಳಸಿಕೊಂಡ ಬಳಿಕ ಪರಿಸ್ಥಿತಿ ಬದಲಾಯಿತು. ರಶ್ಯನ್ ಸೇನೆಯನ್ನು ಸೋಲಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರವನ್ನು ಪ್ರವೇಶಿಸಿದ ಅಲ್‌ಖಾಯಿದ ಮತ್ತು ಅದರ ತದ್ರೂಪಿಗಳು ಆತಂಕವಾದವನ್ನು ಕೋಮುವಾದೀಕರಿಸಿದರು. ಆದರೆ ಮೂವತ್ತು ವರ್ಷಗಳ ಬಳಿಕ ಈಗ ಬೇರೆಯೇ ಚಿತ್ರವನ್ನು ಜನರ ಮುಂದಿಡಲಾಗುತ್ತಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಇನ್ನಷ್ಟು ಪ್ರಜಾಪ್ರಭುತ್ವವನ್ನು ತುಂಬಿ ಅಲ್ಲಿಯ ಅತೃಪ್ತ ಶಕ್ತಿಗಳನ್ನು ಸಂವಾದ ಪ್ರಕ್ರಿಯೆಯಲ್ಲಿ ತೊಡಗಿಸುವುದು ಆ ರಾಜ್ಯದ ಅವಶ್ಯಕತೆಯಾಗಿತ್ತು. ಆದರೆ ಅಮೆರಿಕದ ಬೆಂಬಲದಿಂದ ಪಾಕಿಸ್ತಾನ ವಹಿಸಿದ ಋಣಾತ್ಮಕ ಪಾತ್ರ ಪರಿಸ್ಥಿತಿಯನ್ನು ಹದಗೆಡಿಸಿತು. ಸಮಸ್ಯೆಯ ನಿಜವಾದ ಕಾರಣಗಳನ್ನು ವಿಶ್ಲೇಷಿಸಿದಲ್ಲಿ ಮಾತ್ರ ಅಲ್ಲಿಯ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಬಹುದೇ ಹೊರತು 370ನೇ ವಿಧಿಯ ಮೇಲೆ ಗೂಬೆ ಕೂರಿಸುವುದರಿಂದಲ್ಲ.
ಕಾಶ್ಮೀರದ ಬೆಳವಣಿಗೆಯ, ಅಭಿವೃದ್ಧಿಯ ಕೊರತೆಗೆ ಕೂಡ 370ನೇ ವಿಧಿಯನ್ನು ದೂರಲಾಗಿದೆ. ಸತ್ಯ ಹೇಳಬೇಕೆಂದರೆ ಕಾಶ್ಮೀರದ ಅಭಿವೃದ್ಧಿ ಸೂಚ್ಯಂಕಗಳು ಇತರ ಹಲವು ರಾಜ್ಯಗಳು ಹಾಗೂ ರಾಷ್ಟ್ರೀಯ ಸೂಚ್ಯಂಕ ಗಳಿಗಿಂತ ಮೇಲೆ ಇವೆ. ಅಲ್ಲಿಯ ಸಮಸ್ಯೆ ಪರಿಹರಿಸಲು ಎಲ್ಲ ರೀತಿಯ ಸಂಧಾನಗಳ ಜೊತೆಗೆ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಬಲಪಡಿಸುವುದೇ ಅಲ್ಲಿ ಶಾಂತಿಯನ್ನು ಮರಳಿ ಸ್ಥಾಪಿಸಲು ಇರುವ ಏಕೈಕ ದಾರಿ. ಅಲ್ಲಿ ಹಿಂಸೆಯನ್ನು ತಡೆಯಲು ಕೂಡ ಇದೊಂದೇ ದಾರಿ.