53 ಅಭ್ಯರ್ಥಿಗಳಿಂದ ನಾಮಪತ್ರ ವಾಪಸ್, ಅಂತಿಮ ಕಣದಲ್ಲಿ 165 ಅಭ್ಯರ್ಥಿಗಳು: ಸಂಜೀವ್ ಕುಮಾರ್
ಬೆಂಗಳೂರು, ನ.21: ವಿಧಾನಸಭೆಯ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿದ್ದ 218 ಅಭ್ಯರ್ಥಿಗಳಲ್ಲಿ 53 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದು, ಒಟ್ಟು 165 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.
ಗುರುವಾರ ಚುನಾವಣಾ ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 15 ಕ್ಷೇತ್ರಗಳ ಉಪಚುನಾವಣೆಗೆ 13 ಮಹಿಳೆಯರು ಸೇರಿ ಒಟ್ಟು 218 ನಾಮಪತ್ರ ಸಲ್ಲಿಕೆಯಾಗಿದ್ದವು. ನಾಮಪತ್ರ ಹಿಂಪಡೆಯುವಿಕೆಗೆ ಅಂತಿಮ ದಿನವಾಗಿದ್ದ ಗುರುವಾರ(ನ.21) 53 ಮಂದಿ ವಾಪಸ್ ಪಡೆದಿದ್ದಾರೆ ಎಂದು ತಿಳಿಸಿದರು.
ಶಿವಾಜಿನಗರದಲ್ಲಿ 19 ಮತ್ತು ಹೊಸಕೋಟೆಯಲ್ಲಿ 17 ಅಭ್ಯರ್ಥಿಗಳು ಕಣದಲ್ಲಿದ್ದು, ಹೆಚ್ಚಿನ ಅಭ್ಯರ್ಥಿಗಳು ಕಣದಲ್ಲಿರುವ ಕ್ಷೇತ್ರಗಳಾಗಿವೆ. 15 ಹೆಸರುಗಳು ಮಾತ್ರ ಒಂದು ಯಂತ್ರದಲ್ಲಿ ಬರಲಿವೆ. ಹೀಗಾಗಿ ಶಿವಾಜಿನಗರ ಮತ್ತು ಹೊಸಕೋಟೆಯಲ್ಲಿ ಎರಡು ಬ್ಯಾಲೆಟ್ ಯುನಿಟ್ ಬಳಕೆ ಮಾಡಲಾಗುತ್ತದೆ. ಉಳಿದ ಕ್ಷೇತ್ರಗಳಲ್ಲಿ ಒಂದೇ ಬ್ಯಾಲೆಟ್ ಯೂನಿಟ್ ಬಳಕೆಯಾಗಲಿದೆ ಎಂದು ಅವರು ಮಾಹಿತಿ ನೀಡಿದರು.
ಕಲರ್ ವೋಟರ್ ಐಡಿ: ಹೊಸದಾಗಿ ಕಲರ್ ಮತದಾನದ ಗುರುತಿನ ಚೀಟಿ ವಿತರಣೆ ಮಾಡಲಾಗುತ್ತದೆ. ದೇಶದಲ್ಲಿ ಮೊದಲ ಬಾರಿಗೆ ಸ್ಮಾರ್ಟ್ ಕಾರ್ಡ್ ರೀತಿಯ ವೋಟರ್ ಐಡಿ ನೀಡಲು ಆರಂಭಿಸಿದ್ದೇವೆ. ಬಾರ್ ಕೋಡ್‌ನೊಂದಿಗೆ ಮತದಾರರ ವಿವರ ಇರಲಿದೆ. ಹೊಸ ಮತದಾರರಿಗೆ ಉಚಿತವಾಗಿ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ. ಈಗಾಗಲೇ ಗುರುತಿನ ಚೀಟಿ(ವೋಟರ್ ಐಡಿ) ಇದ್ದು, ಸ್ಮಾರ್ಟ್ ಕಾರ್ಡ್ ರೀತಿಯ ಗುರುತಿನ ಚೀಟಿ ಬೇಕಾದರೆ 30ರೂ.ಶುಲ್ಕ ನೀಡಿ ಪಡೆಯಬಹುದಾಗಿದೆ ಎಂದು ಅವರು ಹೇಳಿದರು.
ಕ್ರಿಮಿನಲ್ ಹಿನ್ನಲೆಯ ಅಭ್ಯರ್ಥಿಗಳು ತಮ್ಮ ಪ್ರಕರಣಗಳ ಬಗ್ಗೆ ಮೂರು ಪ್ರಮುಖ ದಿನಪತ್ರಿಕೆ ಹಾಗು ಸುದ್ದಿ ವಾಹಿನಿಗಳಲ್ಲಿ ಜಾಹೀರಾತು ನೀಡಬೇಕು. ಇದನ್ನು ಕಳೆದ ಚುನಾವಣೆಯಲ್ಲಿ ಪರಿಚಯಿಸಿದ್ದು, ಈ ಬಾರಿಯೂ ಅದನ್ನು ಮುಂದುವರಿಕೆ ಮಾಡಲಾಗುತ್ತದೆ. ಹೀಗಾಗಿ ಅಭ್ಯರ್ಥಿಗಳು ತಮ್ಮ ಪ್ರಕರಣಗಳ ಬಗ್ಗೆ ಜಾಹೀರಾತು ನೀಡುವುದು ಕಡ್ಡಾಯವೆಂದು ಅವರು ಸೂಚಿಸಿದರು.
ಅಕ್ರಮ ನಗದು ವಶ: ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿ ನಗದು, ಮದ್ಯ, ಸೀರೆ ಸೇರಿದಂತೆ ಅಕ್ರಮವಾಗಿ ಸರಬರಾಜು ಮಾಡುತ್ತಿದ್ದ ಸುಮಾರು 4 ಕೋಟಿ 35 ಲಕ್ಷ ರೂ.ಕ್ಕೂ ಹೆಚ್ಚು ಮೌಲ್ಯದ ವಿವಿಧ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.